ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದ ನಮೀಬಿಯಾದಿಂದ ತರಲಾಗಿದ್ದ ಸಾಶಾ ಚೀತಾ ಸಾವು
Update: 2023-03-27 16:39 GMT
ಭೋಪಾಲ,ಮಾ.27: ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ನ್ಯಾಷನಲ್ ಪಾರ್ಕ್ ಗೆ ತರಲಾಗಿದ್ದ ಎಂಟು ಚೀತಾಗಳ ಪೈಕಿ ‘ಸಾಶಾ ’ ಜನವರಿಯಲ್ಲಿ ಮೂತ್ರಪಿಂಡ ಸೋಂಕಿಗೆ ತುತ್ತಾಗಿದ್ದು,ಸೋಮವಾರ ಕೊನೆಯುಸಿರೆಳೆದಿದೆ. ಪಾರ್ಕ್ ನಲ್ಲಿಯ ಇತರ ಚೀತಾಗಳು ಆರೋಗ್ಯವಾಗಿವೆ ಎಂದು ಹೇಳಿಕೆಯು ತಿಳಿಸಿದೆ.
ಭಾರತದಲ್ಲಿ 70 ವರ್ಷಗಳ ಹಿಂದೆಯೇ ಅಸ್ತಿತ್ವವನ್ನು ಕಳೆದುಕೊಂಡಿದ್ದ ಚೀತಾಗಳನ್ನು ಮರುಪರಿಚಯಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಭಾಗವಾಗಿ ಕಳೆದ ವರ್ಷ ತರಲಾಗಿದ್ದ ಮೊದಲ ತಂಡದಲ್ಲಿದ್ದ ಸಾಶಾ ಐದು ಹೆಣ್ಣು ಚೀತಾಗಳ ಪೈಕಿ ಒಂದಾಗಿತ್ತು.
ಕಳೆದ ವರ್ಷದ ಸೆಪ್ಟಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರು ಸಾಶಾ ಸೇರಿದಂತೆ ಐದು ವರ್ಷ ಪ್ರಾಯದ ಎರಡು ಚೀತಾಗಳನ್ನು ಕುನೊದಲ್ಲಿ ಬಿಡುಗಡೆಗೊಳಿಸಿದ್ದರು.
ಈ ವರ್ಷದ ಫೆ.17ರಂದು ದಕ್ಷಿಣ ಆಫ್ರಿಕಾದಿಂದ ಏಳು ಗಂಡು ಮತ್ತು ಐದು ಹೆಣ್ಣು ಸೇರಿದಂತೆ ಇನ್ನೂ ಒಂದು ಡಝನ್ ಚೀತಾಗಳನ್ನು ಕುನೊ ಪಾರ್ಕ್ ಗೆ ತರಲಾಗಿದ್ದು,ಅದು ಈಗ ಒಟ್ಟು 20 ಚೀತಾಗಳ ಆವಾಸಸ್ಥಾನವಾಗಿದೆ.