ಚುನಾವಣಾ ವೆಚ್ಚದ ಖಾತೆ ಸಲ್ಲಿಸಲು ವಿಫಲ: ರಾಹುಲ್ ಗಾಂಧಿ ಹೆಸರಿನ ವ್ಯಕ್ತಿಯನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗ
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಅನರ್ಹಗೊಳಿಸಲಾದ ಕೆಲವೇ ದಿನಗಳಲ್ಲಿ ರಾಹುಲ್ ಗಾಂಧಿ ಹೆಸರಿನ ಇನ್ನೊಬ್ಬ ವ್ಯಕ್ತಿಯನ್ನು ಅನರ್ಹ ಗೊಳಿಸಲಾಗಿದೆ. ಚುನಾವಣಾ ವೆಚ್ಚದ ಖಾತೆಯನ್ನು ಸಲ್ಲಿಸಲು ವಿಫಲವಾದ ಕಾರಣಕ್ಕಾಗಿ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಂಡ ವ್ಯಕ್ತಿಗಳ ಪಟ್ಟಿಯಲ್ಲಿ "ರಾಹುಲ್ ಗಾಂಧಿ ಕೆ.ಇ. ಸನ್ ಆಫ್ ವಲ್ಸಮ್ಮ" ಅವರ ಹೆಸರಿದೆ.
ರಾಹುಲ್ ಗಾಂಧಿ ಕೆ.ಇ. 2019 ರ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2,196 ಮತಗಳನ್ನು ಪಡೆದಿದ್ದರು, ಅಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 7 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು 4 ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದರು.
ಪ್ರಮುಖ ನಾಯಕರ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸುವುದು ಸಾಮಾನ್ಯವಾಗಿದೆ. ಆದರೆ ಅವರೆಲ್ಲರೂ ಚುನಾವಣಾ ಆಯೋಗದ ನಿಯಮಗಳು ಮತ್ತು ಪ್ರಜಾಪ್ರತಿನಿಧಿ ಕಾಯಿದೆಯ ಅಡಿಯಲ್ಲಿ ಇತರ ಕಡ್ಡಾಯ ಅವಶ್ಯಕತೆಗಳ ಜೊತೆಗೆ ಚುನಾವಣಾ ವೆಚ್ಚಗಳ ಖಾತೆಯನ್ನು ಸಲ್ಲಿಸಬೇಕಾಗುತ್ತದೆ.
ಮಾರ್ಚ್ 29 ರಂದು ಚುನಾವಣಾ ಸಮಿತಿಯು ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 10 ಎ ಅಡಿಯಲ್ಲಿ ಅನರ್ಹಗೊಂಡ ವ್ಯಕ್ತಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿತು.
ರಾಹುಲ್ ಗಾಂಧಿ KE S/o ವಲ್ಸಮ್ಮ ಅವರನ್ನು ಸೆಪ್ಟೆಂಬರ್ 13, 2021 ರಿಂದ ಸೆಪ್ಟೆಂಬರ್ 13, 2024 ರವರೆಗೆ ಅನರ್ಹಗೊಳಿಸಲಾಗಿದೆ.