ಹೈದರಾಬಾದ್ ರಾಮನವಮಿ ರ್ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆ: ಬಿಜೆಪಿಯ ರಾಜಾ ಸಿಂಗ್ ವಿರುದ್ಧ ಪ್ರಕರಣ
ಹೈದರಾಬಾದ್: ನಗರದಲ್ಲಿ ನಡೆದ ರಾಮನವಮಿ ರ್ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ, ಅಮಾನತುಗೊಂಡಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್(T.Raja sing) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153-A (ಧರ್ಮ, ಜನಾಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಾಗೂ 506 (ಅಪರಾಧ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಅಫ್ಜಲ್‌ಗುಂಜ್ ಪೊಲೀಸರು ಅಮಾನತುಗೊಂಡ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಫ್ಜಲ್‌ಗುಂಜ್ ಪೊಲೀಸ್ ಠಾಣೆಯಿಂದ ಎಸ್‌ಐ ಜೆ. ವೀರಬಾಬು ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದು, ಅಮಾನತುಗೊಂಡಿರುವ ಬಿಜೆಪಿ ಶಾಸಕ ರಾಜಾ ಸಿಂಗ್, ರಾಮ ನವಮಿ ರ್ಯಾಲಿ.ಭಾಷಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಸ್‌ಎ ಬಜಾರ್ ಪ್ರದೇಶಕ್ಕೆ ತನ್ನನ್ನು ನಿಯೋಜಿಸಲಾಗಿತ್ತು ಎಂದು ವೀರಬಾಬು ತಿಳಿಸಿದ್ದಾರೆ
ಶಂಕರ್ ಶೇರ್ ಹೋಟೆಲ್ ಬಳಿ ರ್ಯಾಲಿ ನಡೆಸುತ್ತಿದ್ದಾಗ ಕಾನ್‌ಸ್ಟೆಬಲ್ ಕೀರ್ತಿ ಕುಮಾರ್ ಎಂಬುವರು ಬಿಜೆಪಿ ಶಾಸಕನ ದ್ವೇಷದ ಭಾಷಣವನ್ನು ವೀಡಿಯೊ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದು ವೀರ ಬಾಬು ಹೇಳಿದರು. ಎಸ್‌ಎಚ್‌ಒ ಎಂ.ರವೀಂದರ್ ರೆಡ್ಡಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.
ಭಾರತ ಹಿಂದೂ ರಾಷ್ಟ್ರವಾದರೆ ‘ನಾವಿಬ್ಬರು, ನಮ್ಮಿಬ್ಬರು’ ನೀತಿಯನ್ನು ನಂಬುವವರಿಗೆ ಮಾತ್ರ ಮತದಾನದ ಹಕ್ಕು ಸಿಗುತ್ತದೆ ಎಂದು ರಾಜಾ ಹೇಳಿದ್ದರು.