ಬಿಹಾರದ ಸಸಾರಾಂನಿಂದ ಹಿಂದೂಗಳು ಮನೆ ತೊರೆಯುತ್ತಿದ್ದಾರೆ ಎಂಬ ವರದಿಗಳನ್ನು ಅಲ್ಲಗಳೆದ ಪೊಲೀಸರು
ಪಾಟ್ನಾ: ರಾಮನವಮಿ ಹಬ್ಬದ ಸಂದರ್ಭದಲ್ಲಿ ಕೋಮುಗಲಭೆ ನಡೆದ ನಂತರ ಪರಿಸ್ಥಿತಿ ಉದ್ರಿಕ್ತವಾಗಿರುವುದರಿಂದ ಬಿಹಾರ ರಾಜ್ಯದ ರೊಹ್ತಾಸ್ ಜಿಲ್ಲೆಯ ಸಸಾರಾಂ ಪಟ್ಟಣದಿಂದ ಹಿಂದೂ ಕುಟುಂಬಗಳು ಮನೆ ತೊರೆಯುತ್ತಿವೆ ಎಂಬ ಮಾಧ್ಯಮ ವರದಿಗಳನ್ನು ಪೊಲೀಸರು ರವಿವಾರ ಅಲ್ಲಗಳೆದಿದ್ದಾರೆ. ಇಂತಹ ವರದಿಗಳನ್ಮು ಆಧಾರರಹಿತ ಹಾಗೂ ಅಸಂಬದ್ಧ ಎಂದು ಹೇಳಿರುವ ಪೊಲೀಸರು, ಇಂತಹ ವದಂತಿಗಳಿಗೆ ಗಮನ ನೀಡಬಾರದು ಎಂದು ಜನರಿಗೆ ಮನವಿ ಮಾಡಿದ್ದಾರೆ ಹಾಗೂ ಪರಿಸ್ಥಿತಿ ಶಾಂತಿಯುತ ಮತ್ತು ಸಹಜವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಸುದ್ದಿ ವರದಿಗಳ ವಿಡಿಯೊ ತುಣುಕೊಂದನ್ನು ಹಂಚಿಕೊಂಡಿದ್ದ ಟ್ವಿಟರ್ ಬಳಕೆದಾರರೊಬ್ಬರು, ಹಿಂಸಾಚಾರ ನಡೆಯುವ ಹೆದರಿಕೆಯಿಂದ ಮುಸ್ಲಿಮರ ಬಾಹುಳ್ಯವಿರುವ ಸಸಾರಾಂನ ಕದೀರ್‌ಗಂಜ್ ಹಾಗೂ ಶಹ್ಜಾಲಾಲ್ ಪ್ರದೇಶಗಳಿಂದ ಹಿಂದೂಗಳು ಮನೆ ತೊರೆಯುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, "ಈ ವದಂತಿ ಸಂಪೂರ್ಣವಾಗಿ ನಿರಾಧಾರ ಮತ್ತು ಅಸಂಬದ್ಧ. ಯಾವುದೇ ವ್ಯಕ್ತಿಯೂ ತನ್ನ ಪ್ರದೇಶವನ್ನು ತೊರೆದಿಲ್ಲ. ನೀವು ಯಾರದಾದರೂ ಹೆಸರು ಒದಗಿಸುವುದಿದ್ದರೆ ದಯವಿಟ್ಟು ಒದಗಿಸಿ. ಇಂತಹ ವದಂತಿಗಳಿಗೆ ಗಮನ ನೀಡದಂತೆ ನಾವು ಸಾಮಾನ್ಯ ನಾಗರಿಕರಿಗೆ ಮನವಿ ಮಾಡುತ್ತೇವೆ. ಸಸಾರಾಂನಲ್ಲಿ ಪರಿಸ್ಥಿತಿಯು ಶಾಂತಿಯುತ ಹಾಗೂ ಸಹಜವಾಗಿದೆ" ಎಂದು ತಿಳಿಸಿದ್ದಾರೆ.
ನಿಷೇಧಾಜ್ಞೆಯ ಹೊರತಾಗಿಯೂ ಕ್ರಮವಾಗಿ ರೊಹ್ತಾಸ್ ಹಾಗೂ ನಲಂದ ಜಿಲ್ಲೆಯ ಕೇಂದ್ರ ಪ್ರದೇಶವಾದ ಸಸಾರಾಂ ಹಾಗೂ ಬಿಹಾರ ಶರೀಫ್‌ನಲ್ಲಿ ಶನಿವಾರ ಸಂಜೆ ಬಾಂಬ್ ಸ್ಫೋಟಗೊಂಡು ಐವರು ಗಾಯಗೊಂಡಿದ್ದರಿಂದ ಮತ್ತೆ ಹಿಂಸಾಚಾರ ಭುಗಿಲೆದ್ದಿತು ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವು ಸ್ಥಳಕ್ಕೆ ದೌಡಾಯಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಸಾರಾಂ ಜಿಲ್ಲಾಧಿಕಾರಿ ಧರ್ಮೇಂದ್ರ ಕುಮಾರ್, "ಸಸಾರಾಂನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ಬಿಎಚ್‌ಯು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಕುರಿತು ನಾವು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.
"ಬಾಂಬ್ ಸ್ಫೋಟವು ಗುಡಿಸಲೊಂದರ ಬಳಿ ಸಂಭವಿಸಿದ್ದು, ಆ ಸ್ಥಳದಿಂದ ಸ್ಕೂಟಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಇದು ಕೋಮುಗಲಭೆ ಘಟನೆಯಂತೆ ತೋರುತ್ತಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ನಂತರ, ಖಾಸಗಿ ಸ್ವತ್ತಿನ ಬಳಿ ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಸಾಗಿಸುವಾಗ ಸ್ಫೋಟ ಸಂಭವಿಸಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ರೊಹ್ತಾಸ್ ಪೊಲೀಸರು ಹೇಳಿದ್ದಾರೆ.
ಸಸರಾಂನಲ್ಲಿ ಪೊಲೀಸ್ ತಂಡ, ವಿಶೇಷ ಕಾರ್ಯಪಡೆ ಹಾಗೂ ಅರೆ ಸೇನಾಪಡೆಗಳು ಶನಿವಾರ ಪಥ ಸಂಚಲನ ನಡೆಸಿದವು.