ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದ ಚೆನ್ನೈ ಕೋಚ್ ಫ್ಲೆಮಿಂಗ್

Update: 2023-04-13 09:40 GMT

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಲ್ಲಿ ಬುಧವಾರ ನಡೆದ  ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್  ತಂಡ ರಾಜಸ್ಥಾನ ರಾಯಲ್ಸ್  ವಿರುದ್ಧ ವೀರೋಚಿತ ಜಯ ಸಾಧಿಸುವ ಹೊಸ್ತಿಲಲ್ಲಿತ್ತು. ನಾಯಕ ಎಂ.ಎಸ್. ಧೋನಿ ಕೊನೆಯವರೆಗೂ ಅಜೇಯರಾಗಿ ಉಳಿದಿದ್ದರು, ಆದರೆ ಚೆನ್ನೈಗೆ ಪಂದ್ಯವನ್ನು ಗೆಲ್ಲಲು ಅಂತಿಮ ಎಸೆತದಲ್ಲಿ 5 ರನ್‌ಗಳ ಅಗತ್ಯವಿತ್ತು, ಮ್ಯಾಚ್ ವಿನ್ನರ್ ಧೋನಿಗೆ ಚೆಂಡನ್ನು ಬೌಂಡರಿಗೆ ರವಾನಿಸಲು ಸಾಧ್ಯವಾಗಲಿಲ್ಲ. ಪರಿಣಾಮ ರಾಜಸ್ಥಾನ 3 ರನ್‌ಗಳ ಜಯ ಸಾಧಿಸಿತ್ತು. ಆದಾಗ್ಯೂ, ಪಂದ್ಯದ ನಂತರ, ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಆತಂಕಕಾರಿ ಸುದ್ದಿಯನ್ನು ತಿಳಿಸಿದರು. ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಅವರು  ಬಹಿರಂಗಪಡಿಸಿದ್ದಾರೆ.

ಧೋನಿ ಅವರು ತಮ್ಮ ಕೆಲವು ಟ್ರೇಡ್‌ಮಾರ್ಕ್ ಸಿಕ್ಸರ್‌ಗಳನ್ನು ವಿಶೇಷವಾಗಿ ಸ್ಪಿನ್ನರ್‌ಗಳ ವಿರುದ್ಧ ಸಿಡಿಸಿದಾಗ ಅಮೋಘ ಟಚ್ ನಲ್ಲಿದ್ದಂತೆ ಕಂಡುಬಂದರು. ಧೋನಿ ಕೇವಲ 17 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ  ಮೂರು ಸಿಕ್ಸರ್‌ಗಳ ಸಹಾಯದಿಂದ 32 ರನ್ ಗಳಿಸಿದರು, 15 ಎಸೆತಗಳಲ್ಲಿ 25 ರನ್ ಗಳಿಸಿದ ರವೀಂದ್ರ ಜಡೇಜ ಅವರೊಂದಿಗೆ ಅಮೂಲ್ಯ ಜೊತೆಯಾಟವನ್ನು ನಡೆಸಿದ್ದರು.

ಸಂದೀಪ್ ಶರ್ಮಾ ಎಸೆದ ಅಂತಿಮ ಓವರ್‌ನಲ್ಲಿ, ಚೆನ್ನೈಗೆ ಗೆಲ್ಲಲು  21 ರನ್‌ಗಳ ಅಗತ್ಯವಿತ್ತು, ಧೋನಿ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಹೊಡೆಯಲು ಶಕ್ತರಾದರು. ಆದರೆ ಸಂದೀಪ್ ತನ್ನ ತಂಡಕ್ಕೆ 3 ರನ್‌ಗಳ ಜಯವನ್ನು ತಂದುಕೊಡಲು ಯಶಸ್ವಿಯಾದರು.

ಧೋನಿ ಬಗ್ಗೆ ಮಾತನಾಡಿದ ಕೋಚ್ ಫ್ಲೆಮಿಂಗ್, ನಾಯಕ ಧೋನಿ ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದರು, ಆದಾಗ್ಯೂ ಅವರು ಕೊನೆಯ ತನಕ ಹೋರಾಟವನ್ನು ನೀಡಿದ್ದಾರೆ ಎಂದರು.

"ಧೋನಿ ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ, ಇದು ಅವರ ಕೆಲವು ಚಲನೆಗಳಲ್ಲಿ ನೀವು ನೋಡಬಹುದು. ಇದು ಅವರಿಗೆ ಸ್ವಲ್ಪಮಟ್ಟಿಗೆ ಅಡ್ಡಿಯಾಗುತ್ತಿದೆ. ಅವರ ಫಿಟ್ನೆಸ್ ಯಾವಾಗಲೂ ತುಂಬಾ ವೃತ್ತಿಪರವಾಗಿದೆ. ಅವರು ಪಂದ್ಯಾವಳಿ ಆರಂಭವಾಗುವ ಒಂದು ತಿಂಗಳ ಮೊದಲು ಬರುತ್ತಾರೆ. ಅವರು ಶ್ರೇಷ್ಠ ಆಟಗಾರನೆಂಬ ಬಗ್ಗೆ ನಮಗೆ ಸ್ವಲ್ಪವೂ  ಅನುಮಾನವಿಲ್ಲ" ಎಂದು ಫ್ಲೆಮಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಧೋನಿ ಗಾಯದಿಂದ ಬಳಲುತ್ತಿದ್ದಾರೆ ಎಂದು ದೃಢಪಟ್ಟಿದ್ದರೂ, ಮೊಣಕಾಲಿನ ಸಮಸ್ಯೆಯು ಧೋನಿಯನ್ನು ಸಿಎಸ್ ಕೆ ಗಾಗಿ ಮುಂಬರುವ ಪಂದ್ಯಗಳನ್ನು ಆಡದಂತೆ ತಡೆಯಬಹುದು ಎಂಬ ಕುರಿತು ಫ್ಲೆಮಿಂಗ್  ಏನೂ ಹೇಳಲಿಲ್ಲ.

Similar News