ನುಡಿ‘ಕಟ್ಟು’

ಜಗದಗಲ

Update: 2023-06-30 10:49 GMT

ದಕ್ಷಿಣ ಈಜಿಪ್ಟ್‌ನ ನುಬಿಯಾದಲ್ಲಿ ಈಗ ನುಬಿಯನ್ ಭಾಷೆಯೇ ಇಲ್ಲವಾಗಿದೆ. ಅದನ್ನು ಉಳಿಸಬೇಕೆಂಬ ಹಂಬಲದಿಂದ ಹೊಸ ತಲೆಮಾರಿನ ಕೆಲವರು ಶ್ರಮಿಸುತ್ತಿದ್ದಾರೆ. ಜಿಹಾದ್ ಅಶ್ರಫ್ ತನ್ನ ಕುಟುಂಬದಲ್ಲಿ ನುಬಿಯನ್ ಭಾಷೆಯನ್ನು ಅರ್ಥಮಾಡಿಕೊಳ್ಳದೆ ಬೆಳೆದವರು. ತಮ್ಮ ಕುಟುಂಬದವರಲ್ಲಿ ಯಾರೂ ನನ್ನೊಂದಿಗೆ ಮನೆಯಲ್ಲಿ ನುಬಿಯನ್ ಮಾತನಾಡಲೇ ಇಲ್ಲ ಎನ್ನುತ್ತಾರೆ ಅವರು.

ಕೇವಲ ಎರಡು ತಲೆಮಾರುಗಳಲ್ಲಿ ಈ ಪ್ರದೇಶದ ಎಲ್ಲೆಡೆ ನುಬಿಯನ್ ಭಾಷೆ ಬಹುತೇಕ ಕಣ್ಮರೆಯಾಯಿತು. ಹಳ್ಳಿಯಲ್ಲಿ ನೈಲ್ ನದಿಯ ದಡದಲ್ಲಿರುವ ಖರ್ಜೂರ ಬೆಳೆವ ರೈತಸಮುದಾಯದ ಸುಮಾರು ೬೧ ಅಥವಾ ೬೨ ವರ್ಷ ವಯಸ್ಸಿನವರೇ ಈ ಭಾಷೆ ಮಾತನಾಡುವ ಅತಿ ಕಿರಿಯರು. ಭಾಷೆ ಅಳಿವಿನಂಚಿನಲ್ಲಿದೆ ಎನ್ನುತ್ತಾರೆ ಜಿಹಾದ್.

ಈಜಿಪ್ಟ್‌ನಾದ್ಯಂತ ಇದೇ ಸ್ಥಿತಿಯಿದ್ದು, ಇದನ್ನು ಬದಲಿಸಬೇಕೆಂಬುದು ಆಕೆಯ ಆಸೆ. ಕಳೆದ ವರ್ಷ, ಅವರು ಭಾಷೆ ಕಲಿಯಲು ಯುವಜನರನ್ನು ಉತ್ತೇಜಿಸುವುದಕ್ಕಾಗಿ ಆನ್‌ಲೈನ್ ಸೇವೆ ‘ನೋಬಿಗ್ ಕೊರೊ’ (ನುಬಿಯನ್ ಕಲಿಯಿರಿ) ಪ್ರಾರಂಭಿಸಲು ನೆರವಾದರು. ಇತ್ತೀಚಿನ ವರ್ಷಗಳಲ್ಲಿ ದೇಶ ಮತ್ತು ವಿದೇಶದಲ್ಲಿರುವ ಯುವ ನುಬಿಯನ್ನರನ್ನು ತಲುಪಲು ಮತ್ತು ಭಾಷೆ, ಸಂಸ್ಕೃತಿ ಅಳಿಯದಂತೆ ನೋಡಿಕೊಳ್ಳಲು ಇದು ಹಲವಾರು ನೆಲೆಯಲ್ಲಿ ನೆರವಾಗುತ್ತಿದೆ.

ಕಾನೂನು ಅನುವಾದ ಅಧ್ಯಯನಿಸಲು ಕೈರೋಗೆ ಹೋಗಿದ್ದ ಜಿಹಾದ್, ಅಲ್ಲಿ ನುಬಿಯನ್ ತರಗತಿಗಳನ್ನು ತೆಗೆದುಕೊಳ್ಳತೊಡಗಿದರು. ಚಿಕ್ಕ ವಯಸ್ಸಿನಿಂದಲೂ ಭಾಷೆಯತ್ತ ಆಕರ್ಷಿತರಾಗಿರುವ ಅವರಿಗೆ ಈ ಕೋರ್ಸ್ ವೇಳೆ, ನುಬಿಯನ್ ಪೋಷಕರಿಗೆ ಜನಿಸಿದ್ದರೂ ಆ ಭಾಷೆಯನ್ನು ಕಲಿಯದ ಮತ್ತಿಬ್ಬರು ಸ್ನೇಹಿತರಾದರು. ಮೂವರೂ ತರಗತಿಯಲ್ಲಿ ಕಲಿತದ್ದನ್ನು ಅಧ್ಯಯನ ಮಾಡಲು ವಾರದ ಸ್ಟಡಿ ಗ್ರೂಪ್ ಶುರುಮಾಡಿದರು. ನುಬಿಯನ್ ಹಾಡುಗಳನ್ನು ಹಾಡಲು ಅಭ್ಯಾಸ ಮಾಡುವುದು, ತಿಳಿದಿಲ್ಲದ ಪದಗಳನ್ನು ಚರ್ಚಿಸುವುದು, ಅದನ್ನೆಲ್ಲ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದು ನಡೆಯಿತು. ಕಲಿತ ಮತ್ತು ಇಷ್ಟಪಡುವ ವಿಷಯಗಳನ್ನು ಇತರ ಯುವ ನುಬಿಯನ್ನರೊಂದಿಗೆ ಹಂಚಿಕೊಳ್ಳಲು ಅದೊಂದು ಮಾರ್ಗ ಎನ್ನುತ್ತಾರೆ ಜಿಹಾದ್. ನುಬಿಯನ್ ಪರಂಪರೆಯಿಂದ ದೂರವಾಗಿರುವ ಅನೇಕರು ಇದ್ದಾರೆ ಎಂಬುದು ಬಹುಬೇಗ ಅವರ ಅರಿವಿಗೆ ಬಂತು.

ಈಜಿಪ್ಟ್‌ನಲ್ಲಿ ಎಷ್ಟು ನುಬಿಯನ್ನರು ವಾಸಿಸುತ್ತಿದ್ದಾರೆ ಎಂಬುದರ ಕುರಿತು ಯಾವುದೇ ಅಂಕಿಅಂಶಗಳಿಲ್ಲ. ಆದರೆ ಸುಮಾರು ೩ರಿಂದ ೫೦ ಲಕ್ಷದವರೆಗೆ ಇರಬಹುದು ಎಂಬುದು ಒಂದು ಅಂದಾಜು. ದೇಶಾದ್ಯಂತ ನುಬಿಯನ್ನರು ಹರಡಿದ್ದಾರೆ. ೧೯೬೦ರ ದಶಕದಲ್ಲಿ ಅಣೆಕಟ್ಟಿನ ನಿರ್ಮಾಣದಿಂದ ಹಳೇ ನುಬಿಯಾದ ಹೆಚ್ಚಿನ ಭಾಗ ನಾಶವಾಯಿತು. ಅಣೆಕಟ್ಟಿನಿಂದ ಮುಳುಗಡೆಯಾದ ಪ್ರದೇಶದಿಂದ ಅಂದು ಸ್ಥಳಾಂತರಗೊಂಡವರು ಸುಮಾರು ಒಂದೂವರೆ ಲಕ್ಷ ಮಂದಿ. ಎಲ್ಲರೂ ಹೆಚ್ಚಾಗಿ ಕೈರೋ, ಅಲೆಕ್ಸಾಂಡ್ರಿಯಾ ಅಥವಾ ಮರುಭೂಮಿಯಲ್ಲಿನ ಉದ್ದೇಶಿತ ವಸತಿ ಸೌಕರ್ಯಗಳಿಗೆ ಹೋಗಬೇಕಾಯಿತು. ಹಾಗೆ ಜನ ಊರುಬಿಡಬೇಕಾದ ಅಂದಿನ ಸ್ಥಿತಿಯನ್ನು ಕಣ್ಣಾರೆ ಕಂಡಿರುವ ೭೩ ವರ್ಷದ ಶಿಕ್ಷಕ ಸೋಭಿ, ನೀರಿನಲ್ಲಿ ಸಕ್ಕರೆ ಕರಗಿದ ಹಾಗೆ ನುಬಿಯನ್ನರು ಕರಗಿಹೋದರು ಎಂದು ಹೇಳುತ್ತಾರೆ.

೧೯೬೦ ಮತ್ತು ೧೯೭೦ರ ದಶಕದಲ್ಲಿ ಹೆಚ್ಚಿನ ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ, ನುಬಿಯನ್ ಭಾಷೆ ಮರೆಯಾಗುತ್ತಿರುವುದು ಸೋಭಿ ಗಮನಕ್ಕೆ ಬಂತು. ಯಾವುದೇ ಈಜಿಪ್ಟಿನ ಶಾಲೆ ಅಥವಾ ವಿಶ್ವವಿದ್ಯಾನಿಲಯ ಇಂದು ನುಬಿಯನ್ ಭಾಷೆಯನ್ನು ಕಲಿಸುತ್ತಿಲ್ಲ. ನಾವು ಬಡ ದೇಶದಲ್ಲಿದ್ದೇವೆ ಎನ್ನುವ ಅವರು, ಕೆಲಸ ಸಿಗುತ್ತದೆ ಎಂದರೆ ಮಾತ್ರವೇ ಜನರು ನುಬಿಯನ್ ಕಲಿಯಬಲ್ಲರು ಎನ್ನುತ್ತಾರೆ. ನುಬಿಯನ್ ಹಾಡುಗಳನ್ನು ಅನುವಾದಿಸುವ, ಜಾನಪದ ಕಥೆಗಳು ಮತ್ತು ನುಡಿಗಟ್ಟುಗಳನ್ನು ಸಂಯೋಜಿಸುವ ಅವರು, ಎಂದಾದರೊಂದು ದಿನ ಅದು ಯಾರ ಉಪಯೋಗಕ್ಕಾ ದರೂ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹಾಡುಗಳ ಮೂಲಕ ನುಬಿಯನ್ ಕಲಿಸಲು ಬಯಸುವವರಲ್ಲಿ ಸೋಭಿ ಕೂಡ ಒಬ್ಬರು. ಜನರಿಗೆ ಹಾಡುಗಳು ತಿಳಿದಿವೆ, ಆದರೆ ಅರ್ಥ ಗೊತ್ತಿಲ್ಲ ಎನ್ನುತ್ತಾರೆ ಅವರು. ದಿನನಿತ್ಯದ ಸಂಭಾಷಣೆಯಿಂದ ಭಾಷೆ ಹೋಗಿದ್ದರೂ, ಅದು ನುಬಿಯನ್ ಸಂಗೀತದ ಮೂಲಕ ಉಳಿದುಕೊಂಡಿದೆ. ಶಾಸ್ತ್ರೀಯ ಮತ್ತು ಸಮಕಾಲೀನ ನುಬಿಯನ್ ಕಲಾವಿದರು ದಕ್ಷಿಣ ಈಜಿಪ್ಟ್ ನಲ್ಲಿ ಜನಪ್ರಿಯರಾಗಿದ್ದಾರೆ. ಅದರ ಸಾಂಪ್ರದಾಯಿಕ ವಾದ್ಯಗಳು ಮತ್ತು ಲಯಗಳ ಕಾರಣದಿಂದಾಗಿ ಅದಕ್ಕೊಂದು ವಿಭಿನ್ನತೆಯಿದೆ ಎನ್ನಲಾಗುತ್ತದೆ.

ಮಕ್ಕಳಿಗೆ ಭಾಷೆ ಕಲಿಸುವ ಮತ್ತೊಂದು ಬಗೆಯೆಂದರೆ ನುಬಿ ಅಪ್ಲಿಕೇಶನ್. ಇದನ್ನು ಕಂಪ್ಯೂಟರ್ ಪ್ರೋಗ್ರಾಮರ್ ಮೊಮೆನ್ ತಲೋಶ್ ಸ್ಥಾಪಿಸಿದ್ದಾರೆ. ಬಾಲ್ಯದಲ್ಲಿ ಅಲೆಕ್ಸಾಂಡ್ರಿಯಾಕ್ಕೆ ತೆರಳಿದ ನಂತರ ತಲೋಶ್ ಪೋಷಕರು ಭಾಷೆಯನ್ನು ಮರೆತಿದ್ದರು. ತಲೋಶ್ ನುಬಿಯನ್ ಕಲಿಸಲು ತೊಡಗಿಸಿಕೊಂಡರು. ನುಬಿಯನ್ ಅಸ್ಮಿತೆ ನುಬಿಯನ್ ಸಂಪ್ರದಾಯಗಳ ಬಗ್ಗೆ ಚಿಂತಿಸುವಾಗ ಭಾಷೆಯೂ ಅಗತ್ಯ ಎನ್ನುತ್ತಾರೆ ಅವರು. ೨೦೧೭ರಲ್ಲಿ ಅಪ್ಲಿಕೇಶನ್ ಪ್ರಾರಂಭಿಸಿದ ಅವರು, ನುಬಿಯನ್ ಮಾತನಾಡುವವರನ್ನು ಹುಡುಕಿಕೊಂಡು ಟುನೀಶಿಯಾ, ಸುಡಾನ್ ಮತ್ತು ಕೀನ್ಯಾ ಸೇರಿದಂತೆ ಹಲವಾರು ದೇಶಗಳಿಗೆ ಪ್ರಯಾಣಿಸಿದ್ದಾರೆ.

ಅಳಿಯುತ್ತಿರುವ ಭಾಷೆಯೊಂದನ್ನು ಉಳಿಸುವ ಇಂಥದೊಂದು ಹೋರಾಟದಲ್ಲಿ ಯುವ ಪೀಳಿಗೆ ಹೀಗೆ ಶ್ರದ್ಧೆ ತೋರುತ್ತಿದೆ ಎಂಬುದೇ ಬೆರಗುಗೊಳಿಸುವ ಸಂಗತಿ.

Similar News