ಮರೆಯಲು ಹೇಗೆ ಸಾಧ್ಯ?

Update: 2023-04-25 18:20 GMT

ಮಾನ್ಯರೆ,

''ಹಲಾಲ್, ಹಿಜಾಬ್ ಚುನಾವಣಾ ವಿಷಯವೇ ಅಲ್ಲ. ಈಗ ಎಲ್ಲವೂ ಮುಗಿದು ಹೋಗಿದೆ. ರಾಜ್ಯದ ಜನರೇ ಅದನ್ನು ಮರೆತಿದ್ದಾರೆ. ಕರ್ನಾಟಕದಲ್ಲಿ ಎಲ್ಲ ಸಮುದಾಯಗಳು ಸೌಹಾರ್ದದಿಂದ ಇವೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಫರ್ಮಾನು ಹೊರಡಿಸಿರುವುದು (ವಾ.ಭಾ.,ಎ.24) ವಿಷಾದನೀಯ ಹಾಗೂ ವಿಚಿತ್ರವಾಗಿದೆ. ಸಮಸ್ಯೆಯೇ ಅಲ್ಲದ ಸಂಗತಿಯೊಂದನ್ನು ದೊಡ್ಡ ಅಪರಾಧ ಎಂಬಂತೆ ಬಿಂಬಿಸಿ, ಕೊನೆಗೆ ನ್ಯಾಯಾಲಯದ ಮೆಟ್ಟಿಲು ಹತ್ತಿಸಿ ಹಲವಾರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಗಾಲು ಹಾಕಿ, ಅವರ ಭವಿಷ್ಯವನ್ನು ಹಾಳು ಮಾಡಿ ಈಗ ''ಎಲ್ಲರೂ ಮರೆತು ಹೋಗಿದ್ದಾರೆ; ಆದ್ದರಿಂದ ಅದು ಚುನಾವಣಾ ವಿಷಯವೇ ಅಲ್ಲ'' ಎಂದು ಹೇಳಿಕೆ ಕೊಡುವುದು ಯಾವ ನೀತಿ ಶಾಸ್ತ್ರ ಅಥವಾ ಮನುಸ್ಮತಿಯಲ್ಲಿ ಹೇಳಲಾಗಿದೆ ಎಂಬುದನ್ನು ಮುಖ್ಯಮಂತ್ರಿಗಳೇ ತಿಳಿಸಬೇಕು. ಹಲಾಲ್ ಕಟ್, ಜಟ್ಕಾ ಕಟ್ ಅಂತ ಹುಯಿಲೆಬ್ಬಿಸಿ ಬಡ ಮುಸ್ಲಿಮ್ ವ್ಯಾಪಾರಿಗಳ ಹೊಟ್ಟೆಪಾಡಿಗೆ ಕಲ್ಲು ಹಾಕಿದ್ದಲ್ಲದೆ ಜಾತ್ರೆಗಳಲ್ಲಿ ಮುಸ್ಲಿಮರು ವ್ಯಾಪಾರವೇ ಮಾಡಬಾರದೆಂದು ತಮ್ಮದೇ ಅಂಗಸಂಸ್ಥೆಗಳು ಅಮಾನವೀಯವಾಗಿ ವರ್ತಿಸಿದಾಗ ಅವರನ್ನು ತಡೆದು ದಂಡಿಸದೆ ಅಥವಾ ಕೊನೆಯ ಪಕ್ಷ ಖಂಡಿಸಲೂ ಹೋಗದೆ ಪರೋಕ್ಷವಾಗಿ ಕುಮ್ಮಕ್ಕು ಕೊಟ್ಟಿದ್ದು; ಅಂತೆಯೇ ಮುಸ್ಲಿಮರ ಮಾವಿನ ಹಣ್ಣಿನ ವ್ಯಾಪಾರಕ್ಕೆ, ಮುಸ್ಲಿಮರ ಆಟೋಗಳ ಸಂಪಾದನೆಗೂ ಕ್ಷುಲ್ಲಕವಾದ ರೀತಿಯಲ್ಲಿ ತೊಂದರೆ ಕೊಟ್ಟದ್ದನ್ನು ಜನ ಮರೆತಿದ್ದಾರೆ; ಆದ್ದರಿಂದ ಅದು ಚುನಾವಣಾ ವಿಷಯವೇ ಅಲ್ಲ ಎನ್ನುವುದು ಯಾವ ಧರ್ಮಶಾಸ್ತ್ರದಲ್ಲಿ ಸೂಚಿಸಲಾಗಿದೆ ಎಂಬುದನ್ನು ಸಹ ಮುಖ್ಯಮಂತ್ರಿಗಳೇ ಸಾಬೀತುಪಡಿಸಬೇಕು. ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುವುದಷ್ಟೆ ಅಲ್ಲದೆ ಮುಸ್ಲಿಮರಿಗೆ ಆದ ನೋವು ಮತ್ತು ನಷ್ಟವನ್ನು ಸರಿಪಡಿಸುತ್ತೇವೆ ಎಂದು ಹೇಳುವಂತಹ ಸೌಜನ್ಯವಿಲ್ಲದೆ ಅದನ್ನು ಜನ ಮರೆತುಬಿಟ್ಟಿದ್ದಾರೆ. ಆದ್ದರಿಂದ ಅದನ್ನೆಲ್ಲ ಮರೆತುಬಿಡಬೇಕು, ಬಿಟ್ಟುಬಿಡಬೇಕು ಎಂದೆಲ್ಲ ಅಪರಾಧಕ್ಕೆ ಕಾರಣರಾದವರೇ ತಮ್ಮನ್ನು ತಾವೆ ನಿರ್ದೋಷಿಗಳು ಎಂಬಂತೆ ತೀರ್ಪು ಕೊಟ್ಟುಕೊಳ್ಳುವುದು ಯಾವ ಕಾನೂನು ಪಠ್ಯದಲ್ಲಿ ವಿಧಿಸಲಾಗಿದೆ ಎಂಬುದನ್ನು ತಾವೇ ತಿಳಿಸಬೇಕಾಗಿದೆ. ಒಂದಿನಿತೂ ಆತ್ಮಸಾಕ್ಷಿಯಿಲ್ಲದವರೇ ನಮ್ಮನ್ನು ಆಳುತ್ತಿದ್ದಾರೆ ಎಂಬುದೇ ನಮ್ಮ ದುರಂತ. ಎಲ್ಲದಕ್ಕೂ ತಲೆದೂಗುವ ಕೋಲೆಬಸವರಿರುವ ತನಕ ಯಾವ ಸಮಾಜವೂ ಸುಸಂಸ್ಕೃತವಾಗಲಾರದು!
 

Similar News