ವಿಷಯಗಳನ್ನು ತೆಗೆದುಹಾಕಲು ಕೋರುವ ಅಗ್ರ ದೇಶಗಳಲ್ಲಿ ಭಾರತ ಸೇರಿದೆ: ಟ್ವಿಟರ್

Update: 2023-04-26 17:54 GMT

ಹೊಸದಿಲ್ಲಿ,ಎ.26: ಕಳೆದ ವರ್ಷದ ಜನವರಿ ಮತ್ತು ಜೂನ್ ನಡುವಿನ ಅವಧಿಯಲ್ಲಿ ಟ್ವಿಟರ್ ನಿಂದ ವಿಷಯಗಳನ್ನು ತೆಗೆದುಹಾಕಲು ಕಾನೂನು ಮನವಿಗಳನ್ನು ಸಲ್ಲಿಸಿದ್ದ ಅಗ್ರ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ ಎಂದು ಕಂಪನಿಯು ತಿಳಿಸಿದೆ.

ಈ ಅವಧಿಯಲ್ಲಿ ವಿಷಯವನ್ನು ತೆಗೆದುಹಾಕಲು ವಿಶ್ವಾದ್ಯಂತ ಸರಕಾರಗಳಿಂದ ಕಂಪನಿಯು 53,000 ಕಾನೂನು ಮನವಿಗಳನ್ನು ಸ್ವೀಕರಿಸಿತ್ತು. ಈ ವಿನಂತಿಗಳಿಗಾಗಿ ಟ್ವಿಟರ್ ನ ಅನುಸರಣೆ ದರವು ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಜಪಾನ,ದ.ಕೊರಿಯಾ,ಟರ್ಕಿ ಮತ್ತು ಭಾರತ ಇಂತಹ ಮನವಿಗಳನ್ನು ಸಲ್ಲಿಸಿದ್ದ ಅಗ್ರರಾಷ್ಟ್ರಗಳಾಗಿವೆ ಎಂದು ಟ್ವಿಟರ್ ಬ್ಲಾಗ್‌ ಪೋಸ್ಟ್‌ ಒಂದರಲ್ಲಿ ತಿಳಿಸಿದೆ.

ಕಳೆದ ವರ್ಷ ಬಳಕೆದಾರ ಡೇಟಾ ಮಾಹಿತಿ ಕೋರಿದ್ದ ಅಗ್ರರಾಷ್ಟ್ರಗಳಲ್ಲಿಯೂ ಭಾರತವು ಒಂದಾಗಿದೆ. ಭಾರತ,ಅಮೆರಿಕ,ಫ್ರಾನ್ಸ್,ಜಪಾನ ಮತ್ತು ಜರ್ಮನಿ 2022ರ ಪೂರ್ವಾರ್ಧದಲ್ಲಿ ಖಾತೆ ಮಾಹಿತಿಯನ್ನು ಕೋರಿದ್ದ ಅಗ್ರ ಐದು ದೇಶಗಳಾಗಿವೆ ಎಂದು ಟ್ವಟರ್ ಹೇಳಿದೆ.

ಕಳೆದ ವರ್ಷ ಟ್ವಿಟರ್ ಹಂಚಿಕೊಂಡಿದ್ದ 20ನೇ ಪಾರದರ್ಶಕತೆ ವರದಿಯು 2021 ಜುಲೈ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ ಭಾರತವು ಪತ್ರಕರ್ತರು ಮತ್ತು ಸುದ್ದಿಸಂಸ್ಥೆಗಳ ದೃಢೀಕೃತ ಟ್ವಿಟರ್ ಹ್ಯಾಂಡಲ್ ಗಳಿಂದ ಪೋಸ್ಟ್ ಮಾಡಲಾಗಿದ್ದ ಟ್ವೀಟ್ ಗಳನ್ನು ತೆಗೆಯುವಂತೆ ಅತ್ಯಂತ ಹೆಚ್ಚಿನ ಬೇಡಿಕೆ (3,992)ಗಳನ್ನು ಸಲ್ಲಿಸಿತ್ತು ಎನ್ನುವುದನ್ನು ಬಹಿರಂಗಗೊಳಿಸಿತ್ತು.

Similar News