ಮತದಾನದ ಪಾವಿತ್ರ್ಯ ಹಾಗೂ ಹೊಣೆಗಾರಿಕೆಯ ಬಗ್ಗೆ ಅರಿವಿರಲಿ

Update: 2023-04-28 07:14 GMT

ಕರ್ನಾಟಕದಾದ್ಯಂತ ಒಂದೆಡೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದರೆ ಮತ್ತೊಂದೆಡೆ ಚುನಾವಣೆ ಕಾವು ಕೂಡ ರಂಗೇರುತ್ತಿದೆ. ಜನಸಾಮಾನ್ಯರಿಂದ ಹಿಡಿದು ಮಾಧ್ಯಮಗಳವರೆಗೂ, ಹಳ್ಳಿಯಿಂದ ನಗರದವರೆಗೂ ಚುನಾವಣೆಯದೇ ಮಾತು. ಚುನಾವಣೆ ಸಮೀಪಿಸುತ್ತಿರುವಂತೆ ಮತದಾರನನ್ನು ಓಲೈಸಿಕೊಳ್ಳಲು ಮತ್ತು ಪ್ರಭುತ್ವವನ್ನು ಪಡೆಯಲಿಕ್ಕಾಗಿ ಅಭ್ಯರ್ಥಿಗಳು, ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೊಸ ಹುರುಪಿನಿಂದ ಓಡಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಮತದಾರ ಸಹ ಮತದಾನದ ಮಹತ್ವವನ್ನು ಅರಿತುಕೊಂಡು ಮತದಾನ ಮಾಡಬೇಕಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿನ ದೃಷ್ಟಿಯಿಂದ ಇದು ಅತ್ಯವಶ್ಯಕ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸಹಭಾಗಿಯಾಗಬೇಕು ಎಂಬ ಉದ್ದೇಶದಿಂದ ಪ್ರತಿಯೊಬ್ಬ ವಯಸ್ಕರಿಗೂ ಮತದಾನ ಎಂಬ ಅಮೂಲ್ಯವಾದ ಹಕ್ಕನ್ನು ನೀಡಲಾಗಿದೆ. ಮತದಾನವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ತಮಗಾಗಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಮೂಲಕ ತಮ್ಮದೇ ಆದ ಸರಕಾರವನ್ನು ರಚಿಸಿಕೊಳ್ಳಲು ಇರುವ ಒಂದು ಪವಿತ್ರವಾದ ವ್ಯವಸ್ಥೆಯಾಗಿದೆ. ಪ್ರತಿಯೊಬ್ಬ ವಯಸ್ಕ ಮತದಾರರು ಮತದಾನ ಮಾಡುವ ಮೂಲಕ ರಾಜ್ಯ ಮತ್ತು ಜನರ ಕಲ್ಯಾಣದಲ್ಲಿ ಸಹಭಾಗಿಗಳಾದಾಗ ಮತದಾನದ ಮೌಲ್ಯ ವೃದ್ಧಿಯಾಗುತ್ತದೆ. ಚುನಾವಣೆಯ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಬೇಕೆಂದು ವಿಶ್ವಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಆಶಿಸಿದ್ದರು. ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡುವ ಮೂಲಕ ಅಂಬೇಡ್ಕರ್ ಅವರ ಈ ಆಶಯವನ್ನು ಈಡೇರಿಸಬೇಕಾಗಿದೆ. ಮತದಾನ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯದ್ಭುತ ಶಕ್ತಿ. 18 ವರ್ಷ ಮೇಲ್ಪಟ್ಟ ಎಲ್ಲರೂ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕು. ಭಾರತೀಯ ಸಂವಿಧಾನ ಪ್ರತಿಯೊಬ್ಬ ವಯಸ್ಕ ಮತದಾರರಿಗೂ ಮತ ಚಲಾಯಿಸುವ ಹಕ್ಕನ್ನು ನೀಡಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದುದು ಎಲ್ಲರ ಕರ್ತವ್ಯವಾಗಿದೆ.

ಈ ಬಾರಿ ರಾಜ್ಯದಲ್ಲಿ ಒಟ್ಟಾರೆ 5,30,85,566 ಮತದಾರರಿದ್ದು ಈ ಪೈಕಿ ಪುರುಷ ಮತದಾರರ ಸಂಖ್ಯೆ 2,66,82,156 ಹಾಗೂ ಮಹಿಳಾ ಮತದಾರರ ಸಂಖ್ಯೆ 2,63,98,483 ಆಗಿದೆ. ಈ ಬಾರಿ 16,04,285 ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಪೈಕಿ 11,71,558 ಮತದಾರರು 18-19 ವಯೋಮಾನದ ಯುವ ಮತದಾರರಾಗಿದ್ದಾರೆ. ಪ್ರಜಾಪ್ರಭುತ್ವದ ಭದ್ರ ಬುನಾದಿ ಮತ್ತು ದೇಶದ ಸಮಗ್ರ ಅಭಿವೃದ್ಧಿ ವಿಷಯದಲ್ಲಿ ಮತದಾನ ಮಹತ್ವಪೂರ್ಣವಾದ ಪಾತ್ರವನ್ನು ವಹಿಸುತ್ತದೆ. ನಾವು ಚಲಾಯಿಸುವ ಒಂದು ಮತ ಕೂಡ ಎಷ್ಟು ಅಮೂಲ್ಯವಾಗಿರುತ್ತದೆ ಮತ್ತು ಮತದಾನದ ಅವಕಾಶ ನಮಗೆ ಹೇಗೆ ದೊರೆಯಿತು ಎಂಬುದು ಅರಿವಿಗೆ ಬಂದಾಗ ಮತದಾನದ ಮಹತ್ವ ನಮಗೆ ತಿಳಿಯುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಜೆಗಳು ಮತದಾನದ ಹಕ್ಕಿನಿಂದ ವಂಚಿತರಾಗಿದ್ದು ಈಗ ಇತಿಹಾಸ. ಭಾರತದಲ್ಲಿ ಚುನಾವಣೆ, ಮತದಾನ, ಮತದ ಹಕ್ಕು, ಚುನಾವಣಾ ಕ್ಷೇತ್ರಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಹಾಗೂ ಭಾರತದ ಆಡಳಿತದಲ್ಲಿ ಸುಧಾರಣೆ ತರಲು ಅಂದಿನ ಬ್ರಿಟಿಷ್ ಸರಕಾರ ಕೈಗೊಂಡ ಹಲವಾರು ಕ್ರಮಗಳಲ್ಲಿ ಲಾರ್ಡ್ ಸೌತ್ ಬರೋ ಸಮಿತಿಯನ್ನು ನೇಮಕ ಮಾಡಿದ್ದು ಮಹತ್ವದ ಸಂಗತಿಯಾಗಿದೆ. ಡಾ. ಬಿ.ಆರ್. ಅಂಬೇಡ್ಕರ್‌ರವರು ಸಮಿತಿಯ ಮುಂದೆ ಹಾಜರಾಗಿ ಅಸ್ಪಶ್ಯರು ಸೇರಿದಂತೆ ದಲಿತ ಸಮುದಾಯಗಳ ಹಕ್ಕುಗಳ ಕುರಿತು ವಿದ್ವತ್‌ಪೂರ್ಣವಾದ ಮನವಿಯನ್ನು ಸಲ್ಲಿಸಿದರು. ನಂತರ 1927ರಲ್ಲಿ ಬ್ರಿಟಿಷ್ ಸರಕಾರ ನೇಮಿಸಿದ ಸರ್ ಜಾನ್ ಸೈಮನ್ ನೇತೃತ್ವದ ರಾಯಲ್ ಕಮಿಷನ್ ಮುಂದೆ ಪ್ರಥಮ ಬಾರಿಗೆ ಅಸ್ಪಶ್ಯರಿಗೆ ಸಮಾನ ರಾಜಕೀಯ ಹಕ್ಕನ್ನು ದೊರಕಿಸಿಕೊಡಬೇಕೆಂದು ಅವರು ಒತ್ತಾಯಿಸಿದರು. ತೆರಿಗೆ ಪಾವತಿಸುವವರು, ಶಿಕ್ಷಣ ಪಡೆದವರು, ಒಂದು ಸಾವಿರ ಎಕರೆ ಜಮೀನು ಹೊಂದಿದ್ದವರಿಗೆ ಮಾತ್ರ ಮತದಾನದಲ್ಲಿ ಪಾಲ್ಗೊಳ್ಳುವ ಹಕ್ಕನ್ನು ನೀಡಬೇಕು ಎಂಬ ಚರ್ಚೆಗಳು ಆಗ ನಡೆದಿದ್ದವು. ಮತದಾನದ ಹಕ್ಕನ್ನು ನೀಡುವ ಕುರಿತು ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿಯವರ ನಡುವೆ ನಡೆದ ಚರ್ಚೆಗಳ ಕುರಿತು ಸೂಕ್ಷ್ಮವಾಗಿ ಅವಲೋಕಿಸಿದಾಗ ಅಂದು ಡಾ. ಬಿ.ಆರ್. ಅಂಬೇಡ್ಕರ್‌ರವರು ಸೈಮನ್ ಆಯೋಗದ ಮುಂದೆ ಹಾಜರಾಗಿ ವಯಸ್ಕ ಮತದಾನದ ಹಕ್ಕು ಇರಬೇಕು, ಅಂದರೆ ಆಸ್ತಿ, ಸ್ಥಾನಮಾನ ಮತ್ತು ಶಿಕ್ಷಣ ಇವಾವುಗಳನ್ನು ಪರಿಗಣಿಸದೆ, ವಯಸ್ಸಿನ ಆಧಾರದ ಮೇಲೆ ಮತದಾನದ ಹಕ್ಕುಗಳನ್ನು ನಿರ್ಧರಿಸಬೇಕು ಎಂದು ಪ್ರಸ್ತಾಪಿಸಿದ್ದರು. ಅಂಬೇಡ್ಕರ್‌ರವರ ಈ ಪ್ರಸ್ತಾಪವನ್ನು ವಿವಿಧ ಕಾರಣಗಳನ್ನು ನೀಡಿ ಗಾಂಧೀಜಿ ವಿರೋಧಿಸುತ್ತಾರೆ. ಆದರೆ ಡಾ. ಬಿ.ಆರ್. ಅಂಬೇಡ್ಕರ್‌ರವರ ಒತ್ತಾಯಕ್ಕೆ ಮಣಿದ ಅಂದಿನ ಬ್ರಿಟನ್ ಪ್ರಧಾನಿ ರಾಮ್ಸೇ ಮ್ಯಾಕ್‌ಡೊನಾಲ್ಡ್ ಅಂಬೇಡ್ಕರ್ ಅವರ ಒತ್ತಾಯವು ನ್ಯಾಯ ಸಮ್ಮತವಾಗಿದೆ ಎಂದು ಒಪ್ಪಿಕೊಂಡು ಎಲ್ಲಾ ವಯಸ್ಕರಿಗೂ ಮತದಾನದ ಹಕ್ಕನ್ನು ನೀಡಲು ಒಪ್ಪಿಕೊಂಡರು. ಭಾರತದ ಸಂವಿಧಾನದ 326ನೇ ವಿಧಿಯ ಅಡಿಯಲ್ಲಿ 1951-52 ರಲ್ಲಿ ನಡೆದ ಮೊತ್ತಮೊದಲ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ 21 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ವಯಸ್ಕ ನಾಗರಿಕರಿಗೆ ಸಾರ್ವತ್ರಿಕ ಮತದಾನದ ಹಕ್ಕು ದೊರೆಯಿತು. ಸಂವಿಧಾನದ ಈ ವಿಧೇಯಕಕ್ಕೆ 61ನೇ ತಿದ್ದುಪಡಿಯನ್ನು ತರುವ ಮೂಲಕ ಮಾರ್ಚ್ 28, 1989ರಿಂದ ಕನಿಷ್ಠ ಮತದಾನದ ವಯಸ್ಸನ್ನು 18 ವರ್ಷಗಳಿಗೆ ಇಳಿಸಲಾಯಿತು. ಮತದಾನದ ಹಕ್ಕು ಸುಲಭವಾಗಿ ದೊರೆತ ಹಕ್ಕಲ್ಲ. ವಿಶ್ವದಾದ್ಯಂತ ಮತದಾನದ ಹಕ್ಕಿಗಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ನಮ್ಮ ಸಂವಿಧಾನವು ಅರ್ಹತೆ, ಧರ್ಮ, ಜನಾಂಗ, ಜಾತಿ ಸೇರಿದಂತೆ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ನಾಗರಿಕರಿಗೂ ಸಮಾನ ಮತದಾನದ ಹಕ್ಕನ್ನು ನೀಡಿದೆ. ಇದಕ್ಕಾಗಿ ನಾವು ನಮ್ಮ ಸಂವಿಧಾನವನ್ನು ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್‌ರವರಿಗೆ ಋಣಿಗಳಾಗಿರಬೇಕಾಗುತ್ತದೆ.

ಭಾರತ ಅನೇಕ ಭಾಷೆ, ಧರ್ಮ ಮತ್ತು ಸಂಸ್ಕೃತಿಗಳಿಂದ ಕೂಡಿರುವ ವಿಶಿಷ್ಟ ರಾಷ್ಟ್ರವಾಗಿದೆ. ಈ ವೈವಿಧ್ಯತೆಗಳ ನಡುವೆಯೂ ಜನರು ಪ್ರತಿನಿಧಿಗಳನ್ನು ಚುನಾಯಿಸಿ ತಮ್ಮ ಆಶಯದಂತೆ ಕಾರ್ಯನಿರ್ವಹಿಸುವಂತೆ ಕೆಲಸ ಮಾಡುವ ಹಕ್ಕು ಮತ್ತು ದೇಶದ ಬೆಳವಣಿಗೆಗೆ ಪಾತ್ರರಾಗುವಂತೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಇಂದಿನ ಯುವ ಜನತೆಗೆ ಇದೆ. ಮತ ಚಲಾಯಸುವ ಹಕ್ಕು ಪವಿತ್ರವಾದ ಹಕ್ಕಾಗಿದ್ದು ಯಾವುದೇ ಕಾರಣಕ್ಕೂ ಯುವಜನರು ನಿರ್ಲಕ್ಷ್ಯ ಮಾಡದೆ ಮತದಾನ ಮಾಡಬೇಕು. ಈ ಬಾರಿ ರಾಜ್ಯದಲ್ಲಿ ಒಟ್ಟು 58,000ಕ್ಕೂ ಹೆಚ್ಚು ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ. ಈ ಪೈಕಿ ಸುಮಾರು 24,063 ಮತಗಟ್ಟೆಗಳು ನಗರ ಪ್ರದೇಶಗಳಲ್ಲಿಯೇ ಇರಲಿವೆ. ಕಳೆದ ಚುನಾವಣೆಗಳಲ್ಲಿ ಮತದಾನದ ಪ್ರಮಾಣದಲ್ಲಿ ಪ್ರಗತಿ ಕಂಡು ಬಂದಿದ್ದರೂ ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆಯೇ ಇದೆ. ಕಳೆದ ಚುನಾವಣೆಗಳಲ್ಲಿ ರಾಜ್ಯದ ಒಟ್ಟು ಮತದಾನದ ಪ್ರಮಾಣ ಶೇ.70ರಷ್ಟು ಇದ್ದರೂ ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಶೇ.50ರಷ್ಟಿದೆ.
ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ತೆಗೆದಕೊಂಡಿರುವುದು ಸ್ವಾಗತಾರ್ಹ. ಈ ಕ್ರಮಗಳ ಜೊತೆಗೆ ಮತದಾನದ ದಿನ ಎಲ್ಲರೂ ಮತದಾನ ಮಾಡಲು ಅನುವು ಮಾಡಿಕೊಡುವ ದೃಷ್ಟಿಯಿಂದ ಸರಕಾರ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಸರಕಾರ ನೀಡಿರುವ ಸುದುದ್ದೇಶದ ರಜೆಯನ್ನು ನಗರ ಪ್ರದೇಶಗಳ ಹೆಚ್ಚಿನ ಜನರು ಚುನಾವಣೆಯಲ್ಲಿ ಮತದಾನ ಮಾಡುವ ಬದಲು ಮೋಜು-ಮಸ್ತಿ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಇದು ವಿಷಾದನೀಯ. ಇದನ್ನು ತಡೆಗಟ್ಟಲು ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗಳು ಮೆ, 10ರಂದು ಒಂದೇ ಹಂತದಲ್ಲಿ ನಡೆಯುತ್ತಿದ್ದು ಅಂದು ರಾಜ್ಯದ ಎಲ್ಲಾ ಪ್ರವಾಸಿ ಕೇಂದ್ರಗಳು ಮತ್ತು ಪ್ರಮುಖ ದೇವಾಲಯಗಳಲ್ಲಿ ಒಂದು ದಿನದ ಮಟ್ಟಿಗೆ ಜನರನ್ನು ನಿರ್ಬಂಧಿಸಬೇಕಾಗಿದೆ. ಈ ರೀತಿ ಮಾಡುವುದರಿಂದಲೂ ಮತದಾನದ ಪ್ರಮಾಣವನ್ನು ಹೆಚ್ಚು ಮಾಡಬಹುದು. ಇದರ ಜೊತೆಗೆ ಖಾಸಗಿ ಕಂಪೆನಿಗಳು ತಮ್ಮ ನೌಕರರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ತಾಕೀತು ಮಾಡಬೇಕು. ಬಂದೂಕಿನಿಂದ ಸಿಡಿಯುವ ಗುಂಡಿಗಿಂತಲೂ ಪ್ರಜಾಪ್ರಭುತ್ವದಲ್ಲಿ ಮತದಾರರು ನೀಡುವ ಮತ ಬಹಳ ಶಕ್ತಿಶಾಲಿಯಾದುದು. ನಾವೆಲ್ಲ ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮತದಾನ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.

Similar News