ಉಡುಪಿ ಜಿಲ್ಲಾ ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

Update: 2023-05-02 14:14 GMT

ಉಡುಪಿ : ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಬಿಜೆಪಿಯ ಮಾಧ್ಯಮದ ಕೇಂದ್ರದಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಸಚಿವರು, ಜಿಲ್ಲಾ ಪ್ರಾಣಾಳಿಕೆಯಲ್ಲಿ ಉಡುಪಿಗೊಂದು ಸರಕಾರಿ ಮೆಡಿಕಲ್ ಕಾಲೇಜು, ಪರಿಸರ ಸ್ನೇಹಿ ಕೈಗಾರಿಕಾ ವಲಯ ನಿರ್ಮಾಣ, ನಾಡದೋಣಿ ಮೀನುಗಾರರ ದೋಣಿಗಳು ತಂಗಲು ಕಿರು ಬಂದರು ನಿರ್ಮಾಣ ಪ್ರತಿ ತಾಲೂಕಿನಲ್ಲಿ ಕನಿಷ್ಠ ೫೦ ಹಾಸಿಗೆ ಸರಕಾರಿ ಆಸ್ಪತ್ರೆ ನಿರ್ಮಾಣ, ಮಲ್ಪೆ, ಗಂಗೊಳ್ಳಿ, ಹೆಜಮಾಡಿ ಬಂದರುಗಳ ವಿಶೇಷ ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸುವುದಾಗಿ ಘೋಷಿಸಲಾಗಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆಗೆ ವಿಮಾನ ನಿಲ್ದಾಣ, ಜಿಲ್ಲೆಯಲ್ಲಿ ಕೆಎಂಎಫ್/ ಪ್ರತ್ಯೇಕ ಹಾಲು ಡೈರಿ ಘಟಕ, ವಾಟರ್ ಮೆಟ್ರೋ ನಿರ್ಮಾಣ, ದ್ವೀಪಗಳನ್ನು ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿ, ಯುವ ಉದ್ಯಮಿಗಳಿಗೆ ಬೆಂಬಲ, ನದಿ ದಂಡೆಗಳ ಸಂರಕ್ಷಣೆ, ಪ್ರತಿ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ದ್ವಿಪಥ ಸಂಪರ್ಕ ರಸ್ತೆ, ನದಿ ದಂಡೆಗಳ ಸಂರಕ್ಷಣೆ ಮಾಡಲಾಗುವುದು ಎಂದು ಅವರು ಹೇಳಿದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ವಿಧಾನ ಪರಿಷತ್ ಸದಸ್ಯೆ ಹಾಗೂ ನಟಿ ತಾರಾ, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಚುನಾವಣಾ ನಿರ್ವಹಣಾ ಸಮಿತಿಯ ಜಿಲ್ಲಾ ಸಂಚಾಲಕ ಮನೋಹರ್ ಎಸ್.ಕಲ್ಮಾಡಿ, ಪ್ರಣಾಳಿಕೆ ಸಮಿತಿಯ ಜಿಲ್ಲಾ ಸಂಚಾಲಕ ಅಂಡಾರು ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಪ್ರಣಾಳಿಕೆ ಸಮಿತಿಯ ಸದಸ್ಯರಾದ ರತ್ನಾಕರ ಇಂದ್ರಾಳಿ, ನೀತಾ ಪ್ರಭು, ಮುಖಂಡರಾದ ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ, ರಶ್ಮಿತಾ ಬಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

‘ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪಿಎಫ್‌ಐ ಹಾಗೂ ಬಜರಂಗದಳದ ಭರವಸೆ ನೀಡಿದೆ. ಈಗಾಗಲೇ ಬಿಜೆಪಿ ಸರಕಾರ ನಿಷೇಧಿಸಿರುವ ಪಿಎಫ್‌ಐ ಯನ್ನು ಕಾಂಗ್ರೆಸ್ ನಿಷೇಧ ಮಾಡಬೇಕಾದ ಅಗತ್ಯ ಇಲ್ಲ. ಇವರ ಮೂಲ ಗುರಿ ಇರು ವುದು ಬಜರಂಗದಳವನ್ನು ನಿಷೇಧ ಮಾಡುವುದು. ಇವರ ಕಣ್ಣು ಇದೀಗ ಬಜರಂಗದಳ ಮೇಲೆ ಬಿದ್ದಿದೆ. ಬಜರಂಗದಳ ರಾಷ್ಟ್ರ ಭಕ್ತ ಸಂಘಟನೆ ಹೊರತು ರಾಷ್ಟ್ರವಿರೋಧಿ ಸಂಘಟನೆ ಅಲ್ಲ. ಬಜರಂಗದಳವನ್ನು ನಿಷೇಧ ಮಾಡಲು ಹೊರಟರೆ ಇಡೀ ಹಿಂದು ಧರ್ಮಕ್ಕೆ ಮಾಡಿರುವ ಸೆಡ್ಡು ಆಗುತ್ತದೆ’
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು

Similar News