ಡಾ. ಅಂಬೇಡ್ಕರ್‌ರಿಂದ ಲಾಭ ಪಡೆದು ಅವರನ್ನೇ ಮರೆತರು...

Update: 2023-05-03 18:46 GMT

ದೇಶದ ಅಭಿವೃದ್ಧಿಗೆ ಜೀವನವಿಡೀ ದುಡಿದ ಅಂಬೇಡ್ಕರ್ ಅವರಿಗೆ ಇಡೀ ದೇಶದ ಜನರೆಲ್ಲ ಸೇರಿಕೊಂಡು ದ್ರೋಹ ಬಗೆದಿದ್ದಾರೆ, ಬಗೆಯುತ್ತಿದ್ದಾರೆ. ಜಗತ್ತಿನ ದೈತ್ಯ ಪ್ರತಿಭೆ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಅವರಿಗೆ ಅಪಮಾನ ಮಾಡಲಾಗಿದೆ, ಮಾಡಲಾಗುತ್ತಿದೆ. ಬ್ರಾಹ್ಮಣ, ಹಿಂದೂ ಸವರ್ಣೀಯರಿಂದ ಹಿಡಿದು ದಲಿತ/ಅಸ್ಪಶ್ಯರವರೆಗೂ ಎಲ್ಲರೂ ಬಾಬಾಸಾಹೇಬರಿಗೆ ದ್ರೋಹ ಬಗೆದವರೇ ಆಗಿದ್ದಾರೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಅವರಿಗೆ ಅನ್ಯಾಯ ನಡೆದಿದೆ. ಬಾಬಾಸಾಹೇಬ್ ಒಬ್ಬರಿಗಲ್ಲ, ಕಪ್ಪುಚರ್ಮದ ಗಾಂಧೀಜಿಗೂ ನೊಬೆಲ್ ಪ್ರಶಸ್ತಿ ದೊರಕಲಿಲ್ಲ. ಗಾಂಧೀಜಿ ಅವರ ಹೆಸರು ಮೂರು ಸಲ ಪ್ರಶಸ್ತಿಗೆ ಆಯ್ಕೆಯಾದರೆ, ಅಂಬೇಡ್ಕರ್ ಅವರ ಹೆಸರು ಒಂದು ಸಲವೂ ಆಯ್ಕೆಯಾಗಲಿಲ್ಲ. ಒಂಭತ್ತು ಜನ ಭಾರತೀಯರಲ್ಲಿ 8 ಜನ ಬ್ರಾಹ್ಮಣರು ಮತ್ತು ಮದರ್ ತೆರೇಸಾಗೆ ಮಾತ್ರ ನೋಬೆಲ್ ಪ್ರಶಸ್ತಿ ದೊರಕಿದೆ. ಬಾಬಾಸಾಹೇಬರ ದಿಟ್ಟ/ನೇರ ಮಾತು ಮತ್ತು ನಡವಳಿಕೆಗಳು ಕೆಲವೊಮ್ಮೆ ಮುಜುಗರ ಹುಟ್ಟಿಸಿದರೂ ಅವರು ಎಂದೂ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡವರಲ್ಲ. ತಮಗೆ ಅನಿಸಿದ್ದನ್ನು ಎಲ್ಲಿಯೇ ಆಗಲಿ, ಯಾರ ಮುಂದೆಯೇ ಆಗಲಿ ನೇರವಾಗಿಯೇ ಹೇಳಿಬಿಡುತ್ತಿದ್ದರು. ಅದು ಗಾಂಧೀಜಿ ಆಗಿರಬಹುದು, ಇಲ್ಲ ಬ್ರಿಟಷ್ ಲಾರ್ಡ್‌ಗಳಾಗಿರಬಹುದು. ತಮ್ಮ ಕುಟುಂಬ ತೀವ್ರ ಬಡತನ ಎದುರಿಸುತ್ತಿದ್ದಾಗಲೂ ಅವರು ಯಾರಿಂದಲೂ ಸಹಾಯಕ್ಕಾಗಿ ಹಸ್ತ ಚಾಚಲಿಲ್ಲ. ಪತ್ನಿಯ ಆರೋಗ್ಯ ಕೆಟ್ಟಾಗ, ನಾಲ್ಕು ಮಕ್ಕಳು ಒಬ್ಬೊಬ್ಬರೇ ಸಾವನ್ನಪ್ಪಿದಾಗಲೂ ಅವರು ಯಾರಿಂದಲೂ ಸಹಾಯ ಪಡೆದುಕೊಳ್ಳಲಿಲ್ಲ. ರಮಾಬಾಯಿ ಕೂಡ ಹಾಗೆ ನಡೆದುಕೊಂಡರು. ಅಂಬೇಡ್ಕರ್, ವಿದ್ಯಾನಿಲಯಗಳು, ಹಾಸ್ಟೆಲುಗಳನ್ನು ಸ್ಥಾಪಿಸುವುದಕ್ಕೆ ಮತ್ತು ಸಾವಿರಾರು ಪುಸ್ತಕಗಳನ್ನು ಕೊಂಡುಕೊಳ್ಳಲು ಜನರಿಂದ ಸಾಲ ಮಾಡಿಕೊಂಡರೇ ವಿನಃ ತಮ್ಮ ಪ್ರಾಮಾಣಿಕತೆಯನ್ನು ಮಾರಿಕೊಳ್ಳಲಿಲ್ಲ.

ಇನ್ನೂ ವಿಪರ್ಯಾಸವೆಂದರೆ ಅವರು ಮೂರು ಸಲ ಚುನಾವಣೆಗೆ ನಿಂತಾಗಲೂ ದಲಿತರೇ ಅವರ ಬೆನ್ನಿಗೆ ಚೂರಿ ಹಾಕಿದರು. ನೆಹರೂ ಮತ್ತು ಕಾಂಗ್ರೆಸ್ ಅವರ ವಿರುದ್ಧ ದಲಿತರನ್ನೇ ನಿಲ್ಲಿಸಿ ಸೋಲಿಸಿತು. ನಾಗಪುರದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಾಗ ಮಹಾರಾಷ್ಟ್ರದ ಮಹಾರರು ಮಾತ್ರ ಅವರೊಂದಿಗೆ ಕೈಜೋಡಿಸಿದರು. ಮೀಸಲಾತಿಯ ಲಾಭ ಪಡೆದುಕೊಂಡ ದೇಶದ ಯಾವುದೇ ಮೂಲೆಯ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳ ಜನರು ಅವರ ಜೊತೆಗೆ ಕೈಜೋಡಿಸಲಿಲ್ಲ. ಇದರ ಜೊತೆಗೆ ಎಡ ಬಲ ಎಂಬ ದಿಕ್ಕೆಟ್ಟ ಬಿರುಕಿನ ಗೋಡೆ ಅಂದಿನಿಂದ ಇಂದಿನವರೆಗೂ ಚಾಲ್ತಿಯಲ್ಲಿದೆ. ಇನ್ನು ಸವರ್ಣೀಯ ಜಾತಿಗಳ ಹಿಂದೂಗಳನ್ನು ದೂಷಿಸುವುದಕ್ಕೆ ಕಾರಣವೇ ಇಲ್ಲ. ಮೀಸಲಾತಿಯಿಂದ ಕೊಬ್ಬಿರುವ ದಲಿತ ರಾಜಕಾರಣಿಗಳು, ದಲಿತ ನಾಯಕರು ಮತ್ತು ದಲಿತ ಅಧಿಕಾರಿಗಳು ಅಂಬೇಡ್ಕರ್ ಅವರ ಮೌಲ್ಯಗಳನ್ನೇ ಮಣ್ಣು ಮಾಡುತ್ತಿದ್ದಾರೆ. ಅವರೆಲ್ಲ ಮೇಲ್ಜಾತಿ ಜನರ ಜೊತೆಗೆ ಸೇರಿಕೊಂಡು ನವಬ್ರಾಹ್ಮಣರಾಗಿ ಮಾರುಹೋಗಿದ್ದಾರೆ. ಈಗೀಗ ದಲಿತ ರಾಜಕಾರಣಿಗಳಂತೂ ತಮ್ಮ ಲಾಭಕ್ಕಾಗಿ ನಾಚಿಕೆಬಿಟ್ಟು ಅಂಬೇಡ್ಕರ್ ವಿರುದ್ಧವಾಗಿಯೇ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮೇಲಿನ ಮೂರು ರೀತಿಯ ದಲಿತರನ್ನು ಬಿಟ್ಟು ಇನ್ನೊಂದು ಅಂಬೇಡ್ಕರ್ ಅನುಯಾಯಿಗಳ ಪಡೆ ಇದೆ. ಅದು ನಗರ ಮತ್ತು ಹಳ್ಳಿಗಳಲ್ಲಿರುವ ಯುವಪಡೆ, ಇವರ ಜೊತೆಗೆ ಯುವ ಮಹಿಳೆಯರ ಪಡೆಯೂ ಇದೆ. ಇವರು ಕಟ್ಟಾ ಅಂಬೇಡ್ಕರ್ ಅನುಯಾಯಿಗಳಾಗಿ ಯಾವುದೇ ಅನ್ಯಾಯ ನಡೆದರೂ ಶೋಷಿತರ ಪರವಾಗಿ ನಿಂತು ವಿರೋಧಿಸುತ್ತಿದ್ದಾರೆ. ಆದರೆ ಇವರ ಸಂಖ್ಯೆ ಅತಿ ಸಣ್ಣದು.

ಹೆಚ್ಚುಕಡಿಮೆ ದೇಶದ ಎಲ್ಲಾ ಕಡೆ (ಈಶಾನ್ಯ ಭಾರತ ಬಿಟ್ಟು) ಹಳ್ಳಿ, ಪಟ್ಟಣ, ಬಡಾವಣೆಗಳಲ್ಲಿ ಅಪಾರ ಸಂಖ್ಯೆಯ ಅಂಬೇಡ್ಕರ್ ಹೆಸರಿನ ದಲಿತ ಕಾಲನಿಗಳು, ಅಂಬೇಡ್ಕರ್ ಪ್ರತಿಮೆಗಳು ಮತ್ತು ರಸ್ತೆಗಳು ಹರಡಿಕೊಂಡಿವೆ. ಬಹುಶಃ ಜಗತ್ತಿನ ಯಾವ ನಾಯಕನ ಹೆಸರಿನಲ್ಲೂ ಇಷ್ಟೊಂದು ಕಾಲನಿಗಳು, ಪ್ರತಿಮೆಗಳು, ರಸ್ತೆಗಳು ಇಲ್ಲ. ದೇಶದ ಒಟ್ಟು ಜನಸಂಖ್ಯೆಯ ಶೇ. 20ರಷ್ಟು ಜನರು ಅಂಬೇಡ್ಕರ್ ಅವರನ್ನು ನೆಚ್ಚಿಕೊಂಡಿದ್ದು, ಅಂಬೇಡ್ಕರ್ ಅವರ ಚಿಂತನೆಗಳನ್ನು ಮತ್ತು ಅವರು ಹಾಕಿಕೊಟ್ಟಿರುವ ಸಾಮಾಜಿಕ ನ್ಯಾಯದ ಬುನಾದಿಯನ್ನು ಯಾರೂ, ಯಾವ ಕಾಲಕ್ಕೂ ಅಲ್ಲಾಡಿಸಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ಹೆಸರೇ ಕೋಟ್ಯಂತರ ಜನರಿಗೆ ಶಕ್ತಿ ಮತ್ತು ಸುರಕ್ಷತೆಯನ್ನು ಒದಗಿಸಿದೆ. ಆದರೆ ಇದು ಒಂದಷ್ಟು ದುರುಪಯೋಗವೂ ಆಗುತ್ತಿದೆ. ಅಂಬೇಡ್ಕರ್ ಅವರ ದೂರದೃಷ್ಟಿ ಚಿಂತನೆಗಳು, ಅವರು ಹಾಕಿಕೊಟ್ಟಿರುವ ಗಟ್ಟಿಯಾದ ಸಾಂವಿಧಾನಿಕ ಬುನಾದಿ ಈಗಲೂ ಪಟ್ಟಭದ್ರ ಹಿತಾಸಕ್ತಿಗಳನ್ನು ತಡೆಹಿಡಿಯುವಷ್ಟು ಶಕ್ತಿಯಿಂದ ಕೂಡಿದೆ. ಆದರೆ, ಅವನ್ನೆಲ್ಲ ಅಲ್ಲಾಡಿಸಿ ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಿ ಹಿಂದಿನ ಸನಾತನ ಭಾರತವನ್ನು ಸ್ಥಾಪಿಸಲು ಪಟ್ಟಭದ್ರ ಹಿತಾಸಕ್ತಿಗಳು ಒಳಗೊಳಗೆ ಮಸಲತ್ತುಗಳನ್ನು ನಡೆಸುತ್ತಲೇ ಬರುತ್ತಿವೆ. ಒಡೆದಾಳುವ ಶ್ರೇಣೀಕೃತ ಜಾತಿಗಳು ಹಿಂದೂ ಸಮಾಜದ ಶೂದ್ರರು/ದಲಿತರನ್ನು ಅವಮಾನ, ಅವಹೇಳನ ಮಾಡುತ್ತಲೇ ಬರುತ್ತಿವೆ.

ಇದೆಲ್ಲವನ್ನೂ ಮೀರಿ ಎಲ್ಲಾ ಜಾತಿ ಜನಾಂಗಗಳಲ್ಲೂ ಅಪಾರ ಜನಸಂಖ್ಯೆಯ ಆರೋಗ್ಯಕರ ಸಮಾಜವೊಂದು ನಮ್ಮ ನಡುವೆ ಎಚ್ಚರಿಕೆಯಿಂದ ಇರುವುದು ದಲಿತ, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳಿಗೆ ಆಶಾದಾಯಕ ಸೂಚನೆಯಾಗಿದೆ. ಬಾಬಾಸಾಹೇಬರ ಒಡನಾಡಿ ಎನ್. ಶಿವರಾಜ್, ಬಾಬಾಸಾಹೇಬರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ‘ಜೀವಂತ ಅಂಬೇಡ್ಕರ್‌ಗಿಂತ ಪರಿನಿರ್ವಾಣ ಹೊಂದಿದ ಅಂಬೇಡ್ಕರ್ ಮಹಾಭಯಂಕರ’ ಎಂದು ಹೇಳಿದ್ದರು. ದೇಶಕ್ಕೆ ಒಳಿತನ್ನೇ ಬಯಸಿದ, ದೇಶವನ್ನು ಸದೃಢವಾಗಿ ಕಟ್ಟಿದ, ದೇಶವನ್ನು ಒಗ್ಗಟ್ಟಾಗಿಸಲು ಹೋರಾಟ ನಡೆಸಿದ ಅಂಬೇಡ್ಕರ್ ಅವರು ಬದುಕಿದ್ದರೆ ಇಂದಿನ ರಾಜಕೀಯ, ರಾಜಕಾರಣಿಗಳು, ಮತಾಂಧರು ಮತ್ತು ಯುವಕರನ್ನು ಕುರಿತು ಏನು ಹೇಳುತ್ತಿದ್ದರು? ದೇಶದಲ್ಲಿ ನಡೆಯುತ್ತಿರುವ ಇಂದಿನ ವಿದ್ಯಮಾನಗಳನ್ನು ನೋಡಿ ಬೆಂಕಿಯಾಗಿ ಉರಿದು ಹೋಗುತ್ತಿದ್ದರೋ ಇಲ್ಲ ಮಮ್ಮಲ ಮರುಗಿ ಅಳುತ್ತಿದ್ದರೊ?

Similar News