ಹುದ್ದೆಯ ಘನತೆ ಮರೆತರೆ ಹೇಗೆ?

Update: 2023-05-03 18:48 GMT

ಮಾನ್ಯರೇ,

ಈ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿ, ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ಮಾತನಾಡುವಾಗ ಯಥಾಪ್ರಕಾರ ಅವೇ ಹಳಸಲು ಬ್ರಹ್ಮಾಸ್ತ್ರಗಳನ್ನು ಪ್ರಯೋಗ ಮಾಡಿದ್ದಾರೆ. ''ಕಾಂಗ್ರೆಸ್‌ನವರು ನನ್ನನ್ನು ನಿಂದಿಸಿದರು, ಲಿಂಗಾಯತರನ್ನು ಕಳ್ಳರು ಎಂದರು, ಅಂಬೇಡ್ಕರ್‌ರವರನ್ನು ರಾಕ್ಷಸ, ದೇಶದ್ರೋಹಿ, ವಂಚಕ ಎಂದಿದ್ದರು'' ಇತ್ಯಾದಿಯಾಗಿ ಮತದಾರರ ಬಳಿ ಅಲವತ್ತುಕೊಂಡಿದ್ದಾರೆ. ಹಾಗೆಯೇ 'ವಿಷದ ಹಾವನ್ನೂ' ಬಳಸಿಕೊಳ್ಳದೆ ಬಿಡಲಿಲ್ಲ. ''ಕಾಂಗ್ರೆಸ್‌ನವರು ನನ್ನನ್ನು ನಿಂದಿಸುತ್ತಲೇ ಇರಲಿ, ನಾನು ಕರ್ನಾಟಕದ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ'' ಎಂಬ ಮಹದುಪಕಾರದ ಮಾತನ್ನೂ ಹೇಳಿದ್ದಾರೆ. ಕೆಲಸ ಮಾಡುವುದು ಎಂದರೆ ಚುನಾವಣೆ ಸಮಯದಲ್ಲಿ ಪದೇ ಪದೇ ಕರ್ನಾಟಕಕ್ಕೆ ಬಂದು 'ಚಾಡಿ' ಚುಚ್ಚುವುದೇ? ಬರ, ಪ್ರವಾಹಗಳಿಂದ ರಾಜ್ಯ ತತ್ತರಿಸಿದಾಗ ಮಾನ್ಯ ಪ್ರಧಾನಮಂತ್ರಿಗಳವರು ಕರ್ನಾಟಕದ ಕಡೆ ತಲೆ ಹಾಕಿರಲಿಲ್ಲ. ತುಂಬಾ ಸತಾಯಿಸಿ ಪುಡಿಗಾಸಿನ ಅನುದಾನ ನೀಡಿದ್ದನ್ನು ರಾಜ್ಯದ ಜನ ಮರೆತಿಲ್ಲ. ರಾಜ್ಯದ ತೆರಿಗೆಯ ಪಾಲು ನ್ಯಾಯಯುತವಾಗಿ ಕರ್ನಾಟಕಕ್ಕೆ ಕೊಡುತ್ತಿಲ್ಲವೆಂಬ ಆರೋಪವೂ ಅವರ ಮೇಲಿದೆ. 25 ಸಂಸತ್ ಸದಸ್ಯರ ಬಲ ನೀಡಿದ ಕರ್ನಾಟಕ ಮತದಾರರ ಉಪಕಾರ ಸ್ಮರಣೆಗೆ ನಿದರ್ಶನವೂ ಸಿಗುವುದಿಲ್ಲ. ಹಿಜಾಬ್, ಹಲಾಲ್, ಆಝಾನ್, ವ್ಯಾಪಾರ ನಿರ್ಬಂಧ ಇತ್ಯಾದಿ ಹೀನ ಸಂಸ್ಕೃತಿ ಕರ್ನಾಟಕದಲ್ಲಿ ತಾಂಡವ ವಾಡಿದಾಗ, ಅಂತಹ ಸಮಾಜಘಾತುಕತನಕ್ಕೆ ಕನಿಷ್ಠ ಎಚ್ಚರಿಕೆಯ ರವಾನೆ ಅತ್ತಕಡೆಯಿಂದ ಬರಲಿಲ್ಲ. ರಾಜ್ಯ ಸರಕಾರದ 40 ಶೇ.ಲಂಚದ ಆರೋಪದ ದೂರಿಗೆ ಸ್ಪಂದಿಸಲೇ ಇಲ್ಲ. ಅದಕ್ಕೆ ಸ್ಪಷ್ಟ ಪುರಾವೆ ಗಳು ಸಿಕ್ಕರೂ ಅಂತಹವರ ಮೇಲೆ ಕ್ರಮ ಕೈಗೊಳ್ಳುವ ಕಿಂಚಿತ್ ಪ್ರಯತ್ನವೂ ಆಗಲಿಲ್ಲ. ಅಂಬೇಡ್ಕರ್‌ರವರನ್ನು ಆವತ್ತು ಯಾರೋ ಬೈದಿರಬಹುದು ಆದರೆ, ಪ್ರತಿನಿತ್ಯ ಸಂವಿಧಾನವನ್ನು ಅಧಿಗಮಿಸುವ ಪ್ರಯತ್ನ, ಬದಲಾಯಿಸುತ್ತೇವೆ ಎಂದು ಬೆದರಿಕೆ ಹಾಕುವ ಕೆಲಸ ಮಾಡುತ್ತಿರುವುದು ಯಾರು? ಇದು ಯಾವ ಬೈಗುಳಕ್ಕಿಂತ ಕಡಿಮೆ? ದೇಶದ ಪ್ರಧಾನಮಂತ್ರಿ ಒಮ್ಮೆ ಆಗಮಿಸುವುದು ಎಂದರೆ ಅದಕ್ಕೆ ಹತ್ತಾರು ಕೋಟಿ ರೂ. ವ್ಯಯವಾಗುತ್ತದೆ, ಇದು ಜನರ ತೆರಿಗೆ ಹಣವೇ ಹೊರತು ಬೇರಾವುದೂ ಅಲ್ಲ. ಉನ್ನತ ಹುದ್ದೆಯಲ್ಲಿರುವವರು ತಮ್ಮ ಹುದ್ದೆಯ ಘನತೆ, ಸಮಯದ ಮಹತ್ವ, ಖರ್ಚಾಗುವ ಸಂಪನ್ಮೂಲ, ಇತ್ಯಾದಿಗಳನ್ನೆಲ್ಲಾ ಅರಿತು ಮಾತನಾಡಬೇಕಾಗುತ್ತದೆ. 

Similar News