‘ಪ್ರಣಾಳಿಕೆ’ ಎಂಬ ರಾಜಕೀಯ ಫಲ ಜ್ಯೋತಿಷ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಅಡಿಯಲ್ಲೇ ನಡೆಯುವ ಚುನಾವಣೆಗಳ ಸಂದರ್ಭದಲ್ಲಿ ಸಂಭಾವ್ಯ ಆಡಳಿತ ಪಕ್ಷಗಳು ಸಿದ್ಧಪಡಿಸುವ ಚುನಾವಣಾ ಪ್ರಣಾಳಿಕೆಗೆ ಸಾಂವಿಧಾನಿಕ ಮೌಲ್ಯ ಮತ್ತು ಮಹತ್ವ ಇರುವಂತೆಯೇ ವಿಶ್ವಾಸಾರ್ಹತೆಯೂ, ಉತ್ತರದಾಯಿತ್ವವೂ ಇರಬೇಕಾಗುತ್ತದೆ.
ಮೂಲತಃ ಚುನಾವಣೆಗಳಿಗೂ ಮುನ್ನ ರಾಜಕೀಯ ಪಕ್ಷಗಳು ಜನತೆಯ ಮುಂದಿಡುವ ಪ್ರಣಾಳಿಕೆಗೆ ಒಂದು ಮೌಲ್ಯಯುತ ಸ್ಥಾನಮಾನವನ್ನು ಪ್ರಜಾತಂತ್ರ ವ್ಯವಸ್ಥೆ ನೀಡಿದೆ. ಮತದಾರರು ಮುಂದಿನ ಐದು ವರ್ಷಗಳ ಅವಧಿಗೆ ಚುನಾಯಿಸುವ ಸರಕಾರವು ಈ ಐದು ವರ್ಷಗಳಲ್ಲಿ ಇಡೀ ಸಮಾಜಕ್ಕೆ ಅನ್ವಯಿಸುವಂತಹ ಯಾವ ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ, ಅವಕಾಶವಂಚಿತ ಜನಸಮುದಾಯಗಳಿಗೆ ಯಾವ ಶಾಶ್ವತ ಅವಕಾಶಗಳನ್ನು ಕಲ್ಪಿಸಲಿದೆ, ಬಡತನ ನಿರುದ್ಯೋಗ ಹಸಿವು ಅಪೌಷ್ಟಿಕತೆ ಮುಂತಾದ ಸಾಮಾಜಿಕ ಪಿಡುಗುಗಳನ್ನು ಅಂತ್ಯಗೊಳಿಸಲು ಯಾವ ಆಡಳಿತ ನೀತಿಗಳನ್ನು ಅನುಸರಿಸಲಾಗುತ್ತದೆ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಮಾಜದ ಕಾನೂನು ಸುವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಏನು ಮಾಡುತ್ತದೆ, ವರ್ತಮಾನದ ಸನ್ನಿವೇಶದಲ್ಲಿರುವ ಅಸಮಾನತೆ, ತಾರತಮ್ಯ, ದೌರ್ಜನ್ಯ ಮತ್ತು ಅನ್ಯಾಯಗಳನ್ನು ಸರಿಪಡಿಸುವ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಈ ಎಲ್ಲಾ ಆಶಯಗಳ ಬಗ್ಗೆ ಮತದಾರರಲ್ಲಿ ನಂಬಿಕೆ ಮೂಡಿಸುವಂತೆ ಒಂದು ನೀಲನಕ್ಷೆಯಾಗಿ ಚುನಾವಣಾ ಪ್ರಣಾಳಿಕೆ ಇರಬೇಕಾಗುತ್ತದೆ.
ಚುನಾವಣಾ ಪ್ರಣಾಳಿಕೆಗೆ ಕೆಲವು ಮೂಲ ಲಕ್ಷಣಗಳಿರಬೇಕಾಗುತ್ತದೆ. ತಕ್ಷಣದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ತಾತ್ಕಾಲಿಕವಾಗಿ ಅನುಸರಿಸಬೇಕಾದ ಪರಿಹಾರೋಪಾಯಗಳು, ಶಾಶ್ವತವಾಗಿ ರೂಪಿಸಬೇಕಾದ ಕಾಯ್ದೆ, ಕಾನೂನುಗಳು ಹಾಗೂ ಜನಸಾಮಾನ್ಯರ ಜೀವನ, ಜೀವನೋಪಾಯ ಮತ್ತು ಜೀವನಾಂಶ ಗಳನ್ನು ಉತ್ತಮಗೊಳಿಸಬಹುದಾದ ದೀರ್ಘಾವಧಿಯ ಆಡಳಿತ ನೀತಿಗಳ ಒಂದು ಛಾಯೆ ಚುನಾವಣಾ ಪ್ರಣಾಳಿಕೆಗಳಲ್ಲಿ ಇರಬೇಕಾಗುತ್ತದೆ. ಈ ಅಮೂಲ್ಯ ದಸ್ತಾವೇಜು ಕೇವಲ ಕೆಲವು ಪುಟಗಳ ಹೊತ್ತಿಗೆಯಲ್ಲ ಅಥವಾ ಮತದಾರರ ಮನೆಗಳ ಮುಂದೆ ಎಸೆದು ಹೋಗುವಂತಹ ಕರಪತ್ರಗಳೂ ಅಲ್ಲ. ಪ್ರಣಾಳಿಕೆಯ ಹಿಂದೆ ಸಂವಿಧಾನ ಬಯಸುವಂತಹ ಒಂದು ಆರೋಗ್ಯಕರ ಸಮಾಜದ ಆಶಯಗಳಿರಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಅಡಿಯಲ್ಲೇ ನಡೆಯುವ ಚುನಾವಣೆಗಳ ಸಂದರ್ಭದಲ್ಲಿ ಸಂಭಾವ್ಯ ಆಡಳಿತ ಪಕ್ಷಗಳು ಸಿದ್ಧಪಡಿಸುವ ಚುನಾವಣಾ ಪ್ರಣಾಳಿಕೆಗೆ ಸಾಂವಿಧಾನಿಕ ಮೌಲ್ಯ ಮತ್ತು ಮಹತ್ವ ಇರುವಂತೆಯೇ ವಿಶ್ವಾಸಾರ್ಹತೆಯೂ, ಉತ್ತರದಾಯಿತ್ವವೂ ಇರಬೇಕಾಗುತ್ತದೆ. ಅಧಿಕಾರಕ್ಕೆ ಬರಲು ಬಯಸುವ ಒಂದು ರಾಜಕೀಯ ಪಕ್ಷ ತನ್ನ ಸಂಭಾವ್ಯ ಅಧಿಕಾರಾವಧಿಯ ಐದು ವರ್ಷಗಳ ಕಾಲವೂ ಈ ದಸ್ತಾವೇಜನ್ನು ಗಮನಿಸುತ್ತಲೇ ತನ್ನ ಆಡಳಿತ ನೀತಿಗಳನ್ನು, ಕಾರ್ಯನೀತಿಗಳನ್ನು ಸಿದ್ಧಪಡಿಸುವುದರ ಮೂಲಕ ಮತದಾರರ ಹಾಗೂ ಇಡೀ ಸಮಾಜದ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗುತ್ತದೆ.
ಪ್ರಣಾಳಿಕೆಗಳ ಪ್ರಸಕ್ತ ರೂಪ
ಆದರೆ ಇತ್ತೀಚಿನ ಕೆಲವು ದಶಕಗಳಿಂದೀಚೆಗೆ ಚುನಾವಣಾ ಪ್ರಣಾಳಿಕೆಗಳು ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ಕೇವಲ ಮತದಾರರನ್ನು ಆಕರ್ಷಿಸುವ ಭರವಸೆಗಳ ಹೊತ್ತಿಗೆಗಳಾಗಿವೆ. ಸಾಮಾನ್ಯ ಮತದಾರರೂ ಪ್ರಣಾಳಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ, ರಾಜಕೀಯ ನಾಯಕರು ತಮ್ಮ ಪ್ರಚಾರ ಭಾಷಣಗಳಲ್ಲಿ ನೀಡುವ ಆಶ್ವಾಸನೆಗಳನ್ನೇ ನಂಬಿ ಮತಗಟ್ಟೆಗೆ ಹೋಗುತ್ತಾರೆ. ಚುನಾವಣೆಗಳು ಘೋಷಣೆಯಾದ ಕೂಡಲೇ ಜನತೆಯ ಮುಂದಿರಬೇಕಾದ ಪ್ರಣಾಳಿಕೆಗಳು ಪ್ರಚಾರದ ಸಮಯ ಮುಗಿಯುವ ವೇಳೆಗೆ ಪ್ರಕಟವಾಗುವುದೇ ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ಮತ್ತು ಪ್ರಣಾಳಿಕೆಗಳ ಬಗ್ಗೆ ಇರುವ ವಿಶ್ವಾಸಾರ್ಹತೆಯ ಕೊರತೆಯ ಕುರುಹಾಗಿ ಕಾಣುತ್ತದೆ. ಅಧಿಕಾರದಲ್ಲಿರುವ ಸರಕಾರವೊಂದು ಮತ್ತೊಂದು ಅವಕಾಶಕ್ಕಾಗಿ ಮತದಾರರ ಬಳಿ ಹೋಗುವಾಗ ಅಂತಹ ಪ್ರಣಾಳಿಕೆಗಳಲ್ಲಿ ಆತ್ಮಾವಲೋಕನದ ಛಾಯೆಯಾದರೂ ಇರಬೇಕಲ್ಲವೇ? ಹಿಂದಿನ ಚುನಾವಣೆಗಳಲ್ಲಿ ತಾವು ನೀಡಿದ್ದ ಭರವಸೆಯನ್ನು ಎಷ್ಟರ ಮಟ್ಟಿಗೆ ಈಡೇರಿಸಿದ್ದೇವೆ ಎಂಬ ರಿಪೋರ್ಟ್ ಕಾರ್ಡ್ ಮತದಾರರ ಮುಂದಿರಿಸಿ, ಮತ್ತೆ ಹೊಸ ಭರವಸೆಗಳನ್ನು ನೀಡುವುದು ನ್ಯಾಯಯುತ ಅಲ್ಲವೇ?
ಮೇ ೧೦ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಮೂರೂ ಪ್ರಧಾನ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಪ್ರಕಟಿಸಿವೆ. ಮೂರೂ ಪ್ರಣಾಳಿಕೆಗಳಲ್ಲಿ ಪ್ರಧಾನವಾಗಿ ಕಾಣುವ ಅಂಶಗಳೆಂದರೆ ಜನಸಾಮಾನ್ಯರಿಗೆ ನೀಡಲಾಗುವ ‘ಉಚಿತ’ಗಳ ಭರವಸೆ. ಪ್ರಧಾನಿ ನರೇಂದ್ರ ಮೋದಿ ಈ ಉಚಿತಗಳನ್ನು ನೀಡುವುದರ ವಿರುದ್ಧ ಸತತವಾಗಿ ದನಿ ಎತ್ತುತ್ತಲೇ ಇದ್ದಾರೆ. ಸಹಜವಾಗಿಯೇ ಕಾರ್ಪೊರೇಟ್ ಮಾರುಕಟ್ಟೆ ವ್ಯವಸ್ಥೆಯು ತಳಮಟ್ಟದ ಜನತೆಯ ಜೀವನಾಂಶ ಮತ್ತು ಜೀವನೋಪಾಯದ ಮಾರ್ಗಗಳತ್ತ ಗಮನಹರಿಸುವುದಿಲ್ಲ. ಕೇಂದ್ರ ಸರಕಾರವೂ ಇದೇ ಮಾರುಕಟ್ಟೆಯ ಅವಶ್ಯಕತೆಗಳಿಗೆ ಅನುಸಾರವಾಗಿ ಆಡಳಿತ ನೀತಿಗಳನ್ನು ರೂಪಿಸುತ್ತಿರುವುದರಿಂದ, ಉಚಿತಗಳಿಗೆ ಪ್ರತಿರೋಧ ಕಂಡುಬರುತ್ತದೆ. ಆದರೂ ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರಚಾರ ಮಾಡುತ್ತಿರುವಾಗಲೇ ಬಿಜೆಪಿ ಉಚಿತಗಳ ಮಹಾಪೂರವನ್ನೇ ಹರಿಸಿದೆ. ರಾಜಕೀಯ ಅನಿವಾರ್ಯತೆಗಳನ್ನು ಬದಿಗಿಟ್ಟು ನೋಡಿದಾಗ, ಆಳುವ ವರ್ಗಗಳ ಮಟ್ಟಿಗೆ ಈ ಉಚಿತಗಳು ದೀರ್ಘಾವಧಿ ಆಡಳಿತ ವೈಫಲ್ಯಗಳನ್ನು ಮರೆಮಾಚುವ ಮಂಜಿನ ಪರದೆಗಳಾಗಿರುತ್ತವೆ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ಐದು ಕಿಲೋ ಅಕ್ಕಿ, ಐದು ಕಿಲೋ ಸಿರಿಧಾನ್ಯ, ಪ್ರತಿದಿನ ಅರ್ಧ ಲೀಟರ್ ಹಾಲು, ವರ್ಷದಲ್ಲಿ ಮೂರು ಹಬ್ಬಕ್ಕೆ ಉಚಿತ ಅನಿಲ ಸಿಲಿಂಡರ್, ೧೦ ಲಕ್ಷ ವಸತಿ ನಿವೇಶನ ಮುಂತಾದ ಭರವಸೆಗಳನ್ನು ನೀಡಿದೆ. ಮತ್ತೊಂದೆಡೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಾಸಿಕ ೨೦೦ ಯೂನಿಟ್ ಉಚಿತ ವಿದ್ಯುತ್, ಪ್ರತಿ ವ್ಯಕ್ತಿಗೆ ೧೦ ಕಿಲೋ ಉಚಿತ ಅಕ್ಕಿ, ಮನೆಯ ಒಡತಿಗೆ ೨ ಸಾವಿರ ರೂ., ನಿರುದ್ಯೋಗಿ ಪದವೀಧರರಿಗೆ ೩ ಸಾವಿರ ರೂ, ಡಿಪ್ಲೊಮಾ ಪದವೀಧರರಿಗೆ ೧,೫೦೦ ರೂ. ಮತ್ತು ಮಹಿಳೆಯರಿಗೆ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಇನ್ನೂ ಹಲವಾರು ಭರವಸೆಗಳನ್ನು ನೀಡಿದೆ. ಖಂಡಿತವಾಗಿಯೂ ಈ ಭರವಸೆಗಳು ಮತದಾರರನ್ನು ಆಕರ್ಷಿ ಸುತ್ತವೆ. ರಾಜ್ಯದ ಹಾಗೂ ದೇಶದ ಆರ್ಥಿಕ ಪ್ರಗತಿ ಮುನ್ನಡೆ ಸಾಧಿಸುತ್ತಿದ್ದರೂ, ನಿತ್ಯ ಬದುಕಿಗೆ ಅವಶ್ಯವಾದ ಆದಾಯ, ಜೀವನಾಂಶ ಇಲ್ಲದೆ ಸೊರಗುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಈ ಉಚಿತಗಳು ಆಶಾದಾಯಕವಾಗಿ ಕಾಣುತ್ತದೆ.
ಆದರೆ ರಾಜ್ಯದಲ್ಲಿ ಎಷ್ಟು ಬಿಪಿಎಲ್ ಕುಟುಂಬಗಳಿವೆ, ಎಷ್ಟು ಬಿಪಿಎಲ್ ಕುಟುಂಬಗಳಲ್ಲಿ ಅಡುಗೆ ಅನಿಲದ ಒಲೆ ಇದೆ ಅಥವಾ ಇಲ್ಲ, ಇನ್ನು ಐದು ವರ್ಷಗಳಲ್ಲಿ ಎಷ್ಟು ಪದವೀಧರರು/ಡಿಪ್ಲೊಮಾ ಹೊಂದಿರುವವರು ವ್ಯಾಸಂಗದಿಂದ ಹೊರಬರುತ್ತಾರೆ ಮತ್ತು ಸಂಭವನೀಯ ನಿರುದ್ಯೋಗಿಗಳಾಗುತ್ತಾರೆ, ರಾಜ್ಯದಲ್ಲಿ ಎಷ್ಟು ವಸತಿ/ನಿವೇಶನ ರಹಿತ ಜನರಿದ್ದಾರೆ, ಎಷ್ಟು ಮನೆಗಳು ವಿದ್ಯುತ್ ಸೌಕರ್ಯದಿಂದ ವಂಚಿತವಾಗಿವೆ, ಎಷ್ಟು ಮಂದಿ ಮನೆಯೊಡತಿಯರು ೨ ಸಾವಿರ ರೂ.ಗಳಿಗೆ ಅರ್ಹರಾಗಿರುತ್ತಾರೆ, ಉದ್ಯೋಗಿಗಳಿಗೂ ಇದು ಲಭ್ಯವಾಗುವುದೇ, ಸರಾಸರಿ ಎಷ್ಟು ಮಂದಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ನಿತ್ಯ ಪ್ರಯಾಣಿಸುತ್ತಾರೆ ಈ ಎಲ್ಲ ಅಂಕಿ ಅಂಶಗಳು ಯಾವುದಾದರೂ ಪಕ್ಷಗಳ ಬಳಿ, ಕನಿಷ್ಠ ಸರಕಾರದ ಬಳಿಯಾದರೂ ಇದೆಯೇ? ಇದೆ ಎಂದಾದಲ್ಲಿ ಐದು ವರ್ಷಗಳ ಕಾಲ ಈ ಉಚಿತಗಳನ್ನು ನೀಡಲು ಸರಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾಗುತ್ತದೆ? ಇದಕ್ಕೆ ಬೇಕಾದ ಹೆಚ್ಚುವರಿ ಆದಾಯವನ್ನು ಸರಕಾರ ಹೇಗೆ ಪಡೆಯುತ್ತದೆ? ಈ ಅಂಶಗಳನ್ನೂ ಜನತೆಯ-ಮತದಾರರ ಮುಂದಿಡುವುದು ರಾಜಕೀಯ ಪಕ್ಷಗಳ ನೈತಿಕ ಜವಾಬ್ದಾರಿ ಅಲ್ಲವೇ?
ಪೆಪ್ಪರಮಿಂಟಿನಿಂದ ಚಿನ್ನದೊಡವೆಯವರೆಗೆ ಕಡುಬಡವರೂ ಸೇರಿದಂತೆ, ಜನಸಾಮಾನ್ಯರು ಪ್ರತಿಯೊಂದು ವಸ್ತುವಿನ ಮೇಲೂ ಪಾವತಿಸುವ ಜಿಎಸ್‌ಟಿ ಸಂಗ್ರಹವನ್ನೇ ಬಳಸಿ ಉಚಿತಗಳನ್ನು ನೀಡುವುದಾದರೆ, ‘ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ’ ಎಂಬ ಗಾದೆಯನ್ನು ಸಾಕಾರಗೊಳಿಸಿದಂತೆಯೇ ಸರಿ. ಈ ಯಾವುದೇ ಉಚಿತಗಳೂ ಸಾಮಾನ್ಯ ಜನತೆಯ ಆಗ್ರಹಗಳಲ್ಲ. ಹಕ್ಕೊತ್ತಾಯಗಳೂ ಅಲ್ಲ. ಕರ್ನಾಟಕದ ಮಹಿಳೆಯರು ಆಗ್ರಹಿಸುತ್ತಿರುವುದು ತಮ್ಮ ಹೆಣ್ತನದ ಘನತೆ ಗೌರವದ ರಕ್ಷಣೆಯನ್ನು. ಕಡುಬಡವರು ಕೇಳುತ್ತಿರುವುದು ಶಾಶ್ವತ ಸೂರು, ಆರೋಗ್ಯ, ಶಿಕ್ಷಣ ಮತ್ತು ಮೂಲ ಸೌಕರ್ಯಗಳನ್ನು. ನಿರುದ್ಯೋಗಿ ಪದವೀಧರರು ಕೇಳುತ್ತಿರುವುದು ಖಾಯಂ ನೌಕರಿ, ಸುಭದ್ರ ಬದುಕನ್ನು, ಪ್ರತಿಯೊಂದು ಬಿಪಿಎಲ್ ಕುಟುಂಬವೂ ತಾನು ಬಡತನ ರೇಖೆಯಿಂದ ಮೇಲೆ ಬಂದು ಎಪಿಎಲ್ ಆಗಲು ಬಯಸುತ್ತಿರುತ್ತದೆ. ಪ್ರತಿಯೊಂದು ಬಡಕುಟುಂಬವೂ ಸಾಲಸೋಲ ಮಾಡದೆ ಹಬ್ಬಗಳನ್ನು ಆಚರಿಸಲು ಹಪಹಪಿಸುತ್ತದೆ. ಪ್ರತಿಯೊಬ್ಬ ಬಡ ಪೋಷಕರೂ ಮಕ್ಕಳಿಗೆ ಪೌಷ್ಟಿಕ ಆಹಾರ, ಉಚಿತ ಶಿಕ್ಷಣ, ಉಚಿತ ಮೂಲ/ಪ್ರಾಥಮಿಕ ಆರೋಗ್ಯ ಸೌಕರ್ಯ ಮತ್ತು ನಿರಾತಂಕ ಜೀವನಕ್ಕಾಗಿ ಹಂಬಲಿಸುತ್ತಿರುತ್ತಾರೆ.
ಎಲ್ಲಕ್ಕಿಂತಲೂ ಹೆಚ್ಚಾಗಿ ಕರ್ನಾಟಕದಲ್ಲಷ್ಟೇ ಅಲ್ಲ ಇಡೀ ಭಾರತದಲ್ಲಿ ಪ್ರತಿಯೊಂದು ಬಡ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬವೂ ಜಾತಿದ್ವೇಷ, ಮತದ್ವೇಷ, ಕೋಮುಹಿಂಸೆ, ದೌರ್ಜನ್ಯ-ಅತ್ಯಾಚಾರ-ಕಿರುಕುಳ, ತಾರತಮ್ಯ ಹಾಗೂ ಜಾತಿಮತ ಭೇದಗಳಿಲ್ಲದ ಜೀವನ ಬಯಸುತ್ತವೆ. ಈ ಜನಸಮೂಹಗಳ ಜೀವನ ಮತ್ತು ಜೀವನೋಪಾಯ ಮಾರ್ಗಗಳನ್ನು ಸುಗಮಗೊಳಿಸುವುದು, ಜೀವನಾಂಶವನ್ನು ಹೆಚ್ಚಿಸಿ ಸುಸ್ಥಿರಗೊಳಿಸುವುದು, ಸ್ವಾಯತ್ತತೆಯೊಂದಿಗೆ ಸ್ವಂತ ದುಡಿಮೆಯನ್ನು ಅವಲಂಬಿಸಿ ಬದುಕುವ ಅವಕಾಶಗಳನ್ನು ಕಲ್ಪಿಸುವುದು ಹಾಗೂ ಮುಂದಿನ ತಲೆಮಾರಿಗೆ ಸುಭದ್ರವಾದ ಆರ್ಥಿಕತೆ-ಆರೋಗ್ಯಕರ ಸಮಾಜವನ್ನು ನಿರ್ಮಿಸುವುದು ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುವ ಯಾವುದೇ ರಾಜಕೀಯ ಪಕ್ಷದ ಆದ್ಯತೆಯಾಗಬೇಕಲ್ಲವೇ?