'ದೂರುದಾರರಿಗೆ ಭದ್ರತೆ ಒದಗಿಸಲಾಗಿದೆ': ಮಹಿಳಾ ಕುಸ್ತಿಪಟುಗಳ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಹಾಗೂ ಏಳು ದೂರುದಾರರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂಬುದನ್ನು ಗಮನಿಸಿದ ನಂತರ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳನ್ನು ಹೊರಿಸಿ ಮೂವರು ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್(Supreme Court ) ಗುರುವಾರ ಮುಕ್ತಾಯಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಕುಸ್ತಿಪಟುಗಳನ್ನು ಪ್ರತಿನಿಧಿಸುವ ವಕೀಲರ ಮೌಖಿಕ ಮನವಿಯನ್ನು ಸ್ವೀಕರಿಸಲು ನಿರಾಕರಿಸಿತು,
"ನೀವು ಎಫ್‌ಐಆರ್ ನೋಂದಣಿ ಹಾಗೂ ದೂರುದಾರರಿಗೆ ಭದ್ರತೆಗಾಗಿ ನಿರ್ದಿಷ್ಟ ಮನವಿಯೊಂದಿಗೆ ಇಲ್ಲಿಗೆ ಬಂದಿದ್ದೀರಿ. ಈಗ ನಿಮ್ಮ ಎರಡೂ ಮನವಿಗಳನ್ನು ಪರಿಹರಿಸಲಾಗಿದೆ. ನಿಮಗೆ ಯಾವುದೇ ಹೆಚ್ಚಿನ ಸಮಸ್ಯೆಗಳಿದ್ದರೆ, ನೀವು ಹೈಕೋರ್ಟ್ ಅಥವಾ ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಅನ್ನು ಸಂಪರ್ಕಿಸಬಹುದು" ಎಂದು ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡಿರುವ ಪೀಠವು, ಸದ್ಯಕ್ಕೆ ವಿಚಾರಣೆಯನ್ನು ಮುಕ್ತಾಯಗೊಳಿಸುತ್ತಿದೆ ಎಂದು ಹೇಳಿದೆ.
ಹೆಚ್ಚಿನ ಪರಿಹಾರಕ್ಕಾಗಿ ಹೈಕೋರ್ಟ್ ಅಥವಾ ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ಗೆ ತೆರಳಲು ಅರ್ಜಿದಾರರಿಗೆ ಸುಪ್ರೀಂಕೋರ್ಟ್ ಸ್ವಾತಂತ್ರ್ಯವನ್ನು ನೀಡಿತು.