ಬುದ್ಧನ ಬೆಳಕಿನಲ್ಲಿ...
ಇಂದು ಬುದ್ಧ ಜಯಂತಿ
ಹಾಗೆ ನೋಡಿದರೆ ಸಾಂಸ್ಥಿಕ ರೂಪವನ್ನು ಪಡೆದಮೇಲೆ ಬೌದ್ಧ ಧರ್ಮವು ರಾಜಕೀಯದಿಂದ ದೂರವಿದ್ದಿಲ್ಲ. ಸ್ವತಃ ಬುದ್ಧನ ಬಹುಮುಖ್ಯ ಸಂವಾದಗಳು ಪ್ರಭುತ್ವಗಳ ಪ್ರತಿನಿಧಿಗಳೊಂದಿಗೆ ಇದ್ದವು. ಹೀಗಾಗಿ ಯಾವ ಧರ್ಮವನ್ನೂ ರಾಜಕೀಯ ಸೋಂಕೇ ಇಲ್ಲದ ನಿರ್ವಾತದಲ್ಲಿ ನೋಡುವುದು ಚರಿತ್ರೆಗೆ ವಿರುದ್ಧವಾಗುತ್ತದೆ. ಎಷ್ಟೇ ಉದಾತ್ತವಾದ ಅಮೂರ್ತವಾದ ಚಿಂತನೆಗಳಿದ್ದರೂ ಧರ್ಮವು ‘‘ಲೌಕಿಕ’’ವೂ ಹೌದು. ಜಗತ್ತನ್ನು ಮಿಥ್ಯೆ ಎನ್ನುವ ಧಾರ್ಮಿಕರು ಮಠಗಳನ್ನು ಕಟ್ಟಿದರು. ಪ್ರಭುತ್ವಗಳ ಸಲಹೆಗಾರರಾದರು. ಭಾರತದ ಚರಿತ್ರೆಯಲ್ಲಿ ಧರ್ಮ ಹಾಗೂ ರಾಜಕೀಯಗಳು ಸಂಪೂರ್ಣವಾಗಿ ಸಂಬಂಧವೇ ಇಲ್ಲದಿದ್ದ ಒಂದೇ ಉದಾಹರಣೆಯೂ ಇಲ್ಲ. engaged Buddhism ಎನ್ನುವುದು ಈ ದೃಷ್ಟಿಯಲ್ಲಿ ಬೌದ್ಧ ಧರ್ಮದ ಒಂದು ರೂಪವೇ ಆಗಿದೆ.
ಬುದ್ಧನು ವಿಶ್ವದ ಪ್ರಜ್ಞೆಯ ಒಂದು ಬಹುಮುಖ್ಯ ಪ್ರತಿಮೆಯಾಗಿದ್ದಾನೆ. ಭಾರತದಿಂದ ನಿಷ್ಕ್ರಮಿಸಿದರೂ ಜಗತ್ತಿನ ಅನೇಕ ಭೂಖಂಡಗಳಲ್ಲಿ, ದೇಶಗಳಲ್ಲಿ ಬೌದ್ಧ ಮತವು ಹರಡಿ ವಿಶಿಷ್ಟವಾದ ಸಾಂಸ್ಕೃತಿಕ, ಚಾರಿತ್ರಿಕ ಸಂದರ್ಭಗಳಲ್ಲಿ ವೈವಿಧ್ಯಮಯ ರೂಪವನ್ನು ಪಡೆದುಕೊಂಡಿದ್ದು ಇದಕ್ಕೆ ಒಂದು ಕಾರಣವಾಗಿದೆ. ಬೌದ್ಧ ಮತದ ಚರಿತ್ರೆಕಾರರು ಅದರ ಬೆಳವಣಿಗೆಯ ಏರಿಳಿತಗಳನ್ನು ವಿವರಿಸಿದ್ದಾರೆ. ಅನೇಕ ಬುಡಕಟ್ಟು ಸಮುದಾಯಗಳು, ವಿಶಾಲವಾದ ವ್ಯಾಪಾರಿ ವರ್ಗ, ಅಶೋಕನು ಸೇರಿದಂತೆ ಅನೇಕ ದೊರೆಗಳ ಬೆಂಬಲ ಮತ್ತು ವಿವಿಧ ಸಮಾಜಗಳ ಜನಸಾಮಾನ್ಯರಿಂದ ಸಿಕ್ಕ ಮನ್ನಣೆ ಇವುಗಳಿಂದಾಗಿ ಈ ಧರ್ಮವು ವಿಸ್ತಾರವಾಗಿ ಹರಡಿ ಪ್ರಾಬಲ್ಯವನ್ನು ಪಡೆದಿತ್ತು. ಆದರೆ ಬುದ್ಧನ ನಿರ್ವಾಣದ ನಂತರ ಕ್ರಮೇಣವಾಗಿ ಹಲವಾರು ಕವಲುಗಳಲ್ಲಿ, ಧಾರೆಗಳಲ್ಲಿ ವಿಭಜನೆ ಹೊಂದಿತು. ಯಾವುದು ನಿಜವಾದ ಮೂಲ ಬೌದ್ಧ ಧರ್ಮವೆನ್ನುವ ಜಿಜ್ಞಾಸೆಯು ಇಂದಿಗೂ ಕೊನೆಗೊಂಡಿಲ್ಲ. ಅಲ್ಲದೆ ಸಂಘದ ಪರಿಕಲ್ಪನೆಯೇ ಬೇರೆಯಾಗಿ ಬೌದ್ಧ ಧರ್ಮವು ಸಾಂಸ್ಥಿಕ ಸ್ವರೂಪವನ್ನು ಪಡೆದುಕೊಂಡಿತು. ಅದರೊಳಗೆ ಅಧಿಕಾರದ ಶ್ರೇಣೀಕರಣ, ಸಂಪ್ರದಾಯಶೀಲತೆ, ಮೂರ್ತಿ ಪೂಜೆ, ಅನೇಕ ಜನಪದೀಯವಾದ ಪ್ರತೀಕಗಳ ಪ್ರವೇಶ ಇವೆಲ್ಲವೂ ನಡೆದವು. ವಿಶೇಷವೆಂದರೆ ಆಧುನಿಕ ಕಾಲದಲ್ಲಿ ಸಾಂಸ್ಥಿಕ ಧರ್ಮಗಳಲ್ಲಿ ನಂಬಿಕೆ ಕಳೆದುಕೊಂಡ ಅಪಾರ ಸಂಖ್ಯೆಯ ವ್ಯಕ್ತಿಗಳು ಬೌದ್ಧ ಧರ್ಮದ ಕೆಲವು ಅಂಶಗಳನ್ನು ಒಪ್ಪಿಕೊಂಡು ಪಾಲಿಸುತ್ತಿದ್ದಾರೆ. ವೈಜ್ಞಾನಿಕ ಚಿಂತನೆ, ತರ್ಕಕೇಂದ್ರಿತ ಮನೋಭಾವ, ನಿರೀಶ್ವರ ನಂಬಿಕೆ ಇವುಗಳು ಆಧುನಿಕ ಪ್ರಜ್ಞೆಯ ಲಕ್ಷಣಗಳಾಗಿದ್ದರಿಂದ ಅವುಗಳಿಗೆ ಒಪ್ಪಿತವಾಗುವ ಏಕಮಾತ್ರ ಧರ್ಮವೆಂದರೆ ಬೌದ್ಧ ಧರ್ಮವೆಂದು ಹೇಳಲಾಗುತ್ತದೆ. ವರ್ಣವ್ಯವಸ್ಥೆ, ಜಾತಿವ್ಯವಸ್ಥೆಯಂಥ ಕ್ರೂರ ಅಮಾನವೀಯ ವ್ಯವಸ್ಥೆಗಳನ್ನು ಒಪ್ಪಿಕೊಳ್ಳುವ ಧರ್ಮಗಳನ್ನು ತ್ಯಜಿಸಿ ಸಮಾನತೆ, ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟತೆ, ಸ್ವಾನುಭವ, ಇತರರ ಜೊತೆಗೆ ನೈತಿಕವಾದ ನಡವಳಿಕೆ ಇವುಗಳನ್ನು ನೆಚ್ಚಿಕೊಳ್ಳುವ ಬೌದ್ಧ ಧರ್ಮವು ಈ ಯುಗದ ಪ್ರಜ್ಞಾವಂತರಿಗೆ ಪ್ರಿಯವಾಗಿದೆ. ಮಾರುಕಟ್ಟೆ, ಜಾಗತೀಕರಣಗಳ ಕಾಲದಲ್ಲಿ ಯಾವಾಗಲೂ ಆಗುವಂತೆ ಈ ಧರ್ಮವನ್ನು ಮಾರುಕಟ್ಟೆಗೆ ಒಗ್ಗುವ ವಸ್ತುವನ್ನಾಗಿಯೂ ಮಾಡಲಾಗಿದೆ. ಉದಾಹರಣೆಗೆ ಬಹುಮುಖ್ಯ ಪರಿಕಲ್ಪನೆಯಾದ mindfulness ಅನ್ನು ಈಗ ವಿವಿಧ appಗಳ ಮೂಲಕ ಡಿಜಿಟಲ್ ವೇದಿಕೆಗಳ ಮೂಲಕ ಹೇಳಿಕೊಡಲಾಗುತ್ತಿದೆ. ವಿಪಸ್ಸನವನ್ನು ಕೂಡ ಕೇವಲ ಒಂದು ಮಾನಸಿಕ ಚಟುವಟಿಕೆಯನ್ನಾಗಿ ಪರಿವರ್ತಿಸಲಾಗಿದೆ. ಇದು ಜಾಗತಿಕ ವ್ಯವಸ್ಥೆಯ ಅನಿವಾರ್ಯಗಳಲ್ಲಿ ಒಂದು. (ಉದಾಹರಣೆಗೆ mindfulness ತರಬೇತಿಯ ವ್ಯವಹಾರವು ಅಮೆರಿಕದಲ್ಲಿ ೧ ಬಿಲಿಯನ್ ಡಾಲರ್‌ಗಳ ವ್ಯವಹಾರವೆಂದು ಹೇಳಲಾಗುತ್ತಿದೆ).
ಇದು ಒಂದು ಮುಖವಾದರೆ ಬಾಬಾ ಸಾಹೇಬ ಅಂಬೇಡ್ಕರ್ ಅವರು ಮಹಾರ್ ಜನಾಂಗದ ಅಂದಾಜು ಐದು ಲಕ್ಷ ಸಂಖ್ಯೆಯ ಜನರೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದರ ಬಗ್ಗೆ ಜಾಗತಿಕ ವಲಯಗಳಲ್ಲಿ ಚರ್ಚೆ ಹಾಗೂ ಸಂಶೋಧನೆಗಳು ನಿರಂತರವಾಗಿ ನಡೆದಿವೆ. ಪ್ರಸಿದ್ಧ ವಿದ್ವಾಂಸ ಆಕಾಶ್ ರಾಠೋರ್‌ರವರ ಪ್ರಕಾರ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನಾ ಸಂಸ್ಥೆಗಳಲ್ಲಿ ಮಾತ್ರ ಇದು ಆಗುತ್ತಿಲ್ಲ, ಅನೇಕರು ಬಾಬಾಸಾಹೇಬರು ಬೌದ್ಧ ಧರ್ಮವನ್ನು liberation theoloy ಆಗಿ ಪರಿವರ್ತಿಸಿಬಿಟ್ಟರು ಎಂದು ವಾದಿಸಿದ್ದಾರೆ. ಅಂದರೆ ತಮ್ಮ ‘The Buddha and his Dhamma’ ಕೃತಿಯಲ್ಲಿ ಅವರು ಆಯ್ಕೆ ಮಾಡಿಕೊಂಡ ಅಂಶಗಳು, ಪ್ರಸ್ತಾಪಿಸಿದ ಮರು ವ್ಯಾಖ್ಯಾನಗಳ ಮೂಲಕ ಬೌದ್ಧ ಧರ್ಮವನ್ನು ವರ್ಣ, ಜಾತಿ, ಅಸ್ಪಶ್ಯತೆ, ಅಸಮಾನತೆಗಳಿಂದ ಬಿಡುಗಡೆ ನೀಡುವ ಧರ್ಮ/ ಮತವನ್ನಾಗಿ ಪರಿವರ್ತಿಸಿದ್ದಾರೆ. ಈ ಪ್ರಯತ್ನದಲ್ಲಿ ಬೌದ್ಧ ಧರ್ಮದ ಮೂಲ ಅಂಶಗಳನ್ನು ತಿರಸ್ಕರಿಸಿದ್ದಾರೆ. ಉದಾಹರಣೆಗೆ ನಾಲ್ಕು ಆರ್ಯ ಸತ್ಯಗಳನ್ನು ಬಾಬಾ ಸಾಹೇಬರು ಒಪ್ಪುವುದಿಲ್ಲ. ದುಃಖದ ಬಗೆಗಿನ ವ್ಯಾಖ್ಯಾನವನ್ನು ಒಪ್ಪುವುದಿಲ್ಲ. ಸಿದ್ಧಾರ್ಥನು ತನ್ನ ಕುಟುಂಬವನ್ನು ತ್ಯಜಿಸಿ ಹೊರಟಿದ್ದಕ್ಕೆ ಕೊಡಲಾಗಿರುವ ವ್ಯಾಖ್ಯಾನಗಳನ್ನು ಒಪ್ಪುವುದಿಲ್ಲ. ಯಾವುದೇ ದೈವಿಕಾಂಶವನ್ನು ಒಪ್ಪದೆ ಬೌದ್ಧ ಧರ್ಮವನ್ನು ಒಂದು ನೈತಿಕ-ಸಂಹಿತೆ ಅಥವಾ ನಡವಳಿಕೆಯ ಕಟ್ಟಳೆಗಳ ಸಂಗ್ರಹವನ್ನಾಗಿ ಮಾಡಿದ್ದಾರೆ ಎನ್ನುವುದು ಈ ವಾದ. ಪ್ರಮುಖ ವಿದ್ವಾಂಸರ ಅಭಿಪ್ರಾಯವೆಂದರೆ ಸ್ವತಃ ಬುದ್ಧನೇ ಒಂದು ಧರ್ಮವನ್ನು ಕಟ್ಟಲಿಲ್ಲ. ತನ್ನ ಬೋಧನೆಯನ್ನು ಅಂತಿಮ ಸತ್ಯವೆಂದು ಒಪ್ಪಲಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವಿವೇಕವನ್ನು (reason, rationality) ಬಳಸಿಕೊಂಡು ತಾನೇ ಪರೀಕ್ಷಿಸಿ ಪ್ರಮಾಣಿಸಿ ನೋಡಿ ಸತ್ಯವನ್ನು ಒಪ್ಪಿಕೊಳ್ಳಬೇಕು. ಯಾವುದೇ ಧರ್ಮಗ್ರಂಥ, ಧಾರ್ಮಿಕ ಗುರು, ಇವರ ಅಧಿಕಾರವನ್ನು ಒಪ್ಪಬಾರದು. ನಿರ್ವಾಣದ ಮೊದಲು ಶಿಷ್ಯರು ಅವನ ಮಾರ್ಗದರ್ಶನವನ್ನು ಕೇಳಿದಾಗ ‘ನಿಮಗೆ ನೀವೇ ದೀಪವಾಗಿ’ ಎಂದು ಮಾತ್ರ ಹೇಳಿದೆ. ಹೀಗಾಗಿ ಒಂದುಕಡೆಗೆ ಸಾಂಪ್ರದಾಯಿಕ ನಂಬಿಕೆಗಳು, ಗ್ರಂಥ, ಶಾಸ್ತ್ರ, ಶೃತಿ, ಸ್ಮತಿಗಳ ಅಧಿಕಾರ ಇವುಗಳನ್ನು ಆಧರಿಸಿದ ಧರ್ಮಗಳನ್ನು ತಿರಸ್ಕರಿಸುವಂತಾಯಿತು. ಪ್ರತಿ ವ್ಯಕ್ತಿಯ ಚಿಂತನೆ ಹಾಗೂ ಆಯ್ಕೆಗಳೇ ಅಂತಿಮ ಮಾನದಂಡಗಳಾದವು. ಸಂಘವನ್ನು ಕಟ್ಟಿದಾಗಲೂ ಬುದ್ಧ ಅದನ್ನು ತನ್ನ ಬುಡಕಟ್ಟಿನ ಸಂಪೂರ್ಣ ಪ್ರಜಾಪ್ರಭುತ್ವ ಮಾದರಿಯಲ್ಲಿ ಕಟ್ಟಿದ. ಅದು ಸಮಾನರಾದ, ಸ್ವಾಯತ್ತತೆವುಳ್ಳ ವ್ಯಕ್ತಿಗಳ ಸಂಘವಾಗಿತ್ತು. ಎಲ್ಲಾ ತೀರ್ಮಾನಗಳು ಚರ್ಚೆ, ನಿಷ್ಕರ್ಷೆಗೆ ಒಳಪಟ್ಟಿದ್ದವು. ಅವನ ಧರ್ಮದಲ್ಲಿ ದೇವರಿಗೆ ಅಸ್ತಿತ್ವವಿರಲಿಲ್ಲ. ಆತ್ಮವೆನ್ನುವುದು ಇರಲಿಲ್ಲ. ಗತವೂ ಕಣ್ಣಿಗೆ ಕಾಣದ ಭವಿಷ್ಯವೂ ಸತ್ಯಗಳಲ್ಲ. ಬದುಕೆಂಬ ಪ್ರವಾಹದ ಪ್ರತಿಕ್ಷಣಕ್ಕೂ ಸಂಪೂರ್ಣ mindfulnessನಿಂದ ತೆರೆದುಕೊಂಡು ಇರುವುದೇ ಮೌಲ್ಯವಾಗಿತ್ತು. ಇಂಥ radical ಸ್ವಭಾವದ ಧರ್ಮವು ಅದೇ ಸ್ವರೂಪದಲ್ಲಿ ಉಳಿಯುವುದು ಬಹು ಕಷ್ಟ. ಹೀಗಾಗಿ ಕ್ರಮೇಣ ಅದು ಸಾಂಸ್ಥಿಕ, ಶ್ರೇಣೀಕೃತ ಸ್ವರೂಪವನ್ನು ಪಡೆದುಕೊಂಡಿತು. ಬೌದ್ಧ ಧರ್ಮದ ಮೂಲ ಸ್ವರೂಪವೇನು ಎನ್ನುವುದಕ್ಕೆ ಉತ್ತರವೇ ಇಲ್ಲ. ಜಗತ್ತಿನ ಹಲವಾರು ಭಾಷೆಗಳಲ್ಲಿ ಇರುವ ಅಸಂಖ್ಯಾತ ಕೃತಿಗಳನ್ನು, ದಾಖಲೆಗಳನ್ನು ಒಬ್ಬ ವ್ಯಕ್ತಿಯು ಪರಿಶೀಲಿಸುವುದು ಅಸಾಧ್ಯ. ಅಲ್ಲದೆ ಸ್ವತಃ ಬುದ್ಧನೇ ‘‘ಮೂಲ’’ ಸ್ವರೂಪದ ಬಗ್ಗೆ ಅನಾಸಕ್ತನಾಗಿದ್ದ, ಬದುಕೆನ್ನುವ ಪ್ರವಾಹಕ್ಕೆ ಸ್ಪಂದಿಸುವ ಪ್ರಜ್ಞೆಯು ಅನೇಕಾನೇಕ ಸತ್ಯಗಳನ್ನು ಕಂಡುಕೊಳ್ಳುವುದು ಸಹಜ. ಹೀಗಾಗಿ ಆಯ್ಕೆ ಮತ್ತು ಜವಾಬ್ದಾರಿಗಳೆರಡೂ ನಮ್ಮದೇ.
ಆದ್ದರಿಂದಲೇ ಬಾಬಾ ಸಾಹೇಬರ ಮಹಾರ್ ಅನುಯಾಯಿಗಳು ಅವರು ಬೋಧಿಸಿದ ನಿಯಮಗಳನ್ನು ಒಪ್ಪಿಕೊಂಡು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಸಾಂಪ್ರದಾಯಿಕ ಬೌದ್ಧ ಸಂಸ್ಥೆಗಳು ಬಾಬಾ ಸಾಹೇಬರ ಮತಾಂತರವನ್ನು ವಿರೋಧಿಸಿದವು. ಅವರ ಕೃತಿಯನ್ನು ಕಟುವಾಗಿ ವಿಮರ್ಶಿಸಿದವು. ಆದರೆ ಸಾವಿರಾರು ದಲಿತರಿಗೆ ಬಾಬಾ ಸಾಹೇಬರ ಬೌದ್ಧ ಧರ್ಮವು ಬಿಡುಗಡೆ ಹಾಗೂ ಘನತೆಯನ್ನು ತಂದಿತು. ಇದು ಅವರ ದಿನನಿತ್ಯದ ಜೀವನದಲ್ಲಿ ಎಷ್ಟು ಬದಲಾವಣೆ ತಂದಿತು ಎನ್ನುವುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಆದರೆ ದಲಿತ ಸಮುದಾಯಗಳಿಗೆ ಬೌದ್ಧ ಧರ್ಮವೇ ಸೂಕ್ತವಾದ ಆಯ್ಕೆ. ಇನ್ನಾವ ಧರ್ಮವೂ ಅವರಿಗೆ ಬಿಡುಗಡೆ ತರಲಾರದು. ಆದರೆ ಇದು ಬಾಬಾ ಸಾಹೇಬರು ಪುನರಾವಿಷ್ಕಾರ ಮಾಡಿದ ಬೌದ್ಧ ಧರ್ಮ. ಬೌದ್ಧ ಧರ್ಮದ ಸಾಂಪ್ರದಾಯಿಕ ಸಂಸ್ಥೆಗಳು ಹೇಳುವ ಧರ್ಮವಲ್ಲ.
ಜಗತ್ತಿನ ಹಲವಾರು ದೇಶಗಳಲ್ಲಿ ಬೌದ್ಧ ಧರ್ಮವು ರಾಜಕೀಯ ಕ್ರಿಯೆಗಳಲ್ಲಿ ಹೋರಾಟಗಳಲ್ಲಿ ಭಾಗಿಯಾಗಿವೆ. ಈ ಕುರಿತು ‘engaged Buddhism’ ಎನ್ನುವ ಪರಿಕಲ್ಪನೆಯನ್ನು ಬಳಸಲಾಗುತ್ತಿದೆ. ಸ್ಥೂಲವಾಗಿ ಹೇಳುವುದಾದರೆ ಬೌದ್ಧ ಧರ್ಮವನ್ನು ಕೇವಲ ಧ್ಯಾನ, ವಿಪಸ್ಸನ ಮುಂತಾದ ವ್ಯಕ್ತಿಕೇಂದ್ರಿತ ನೆಲೆಗೆ ಇಳಿಸಲಾಗದು. ಸಂಘವೆನ್ನುವುದು ಬಹುಮುಖ್ಯವಾದುದು. ಹೀಗಾಗಿ ಸಮುದಾಯದ ಸಂಕಷ್ಟಗಳು ಬೌದ್ಧ ಧರ್ಮದ ಕಾಳಜಿಗಳಾಗುವುದು ಅನಿವಾರ್ಯ. ಇವುಗಳಿಗೆ ಬದ್ಧತೆಯಿಂದ ಮಿಡಿಯುವುದನ್ನು engaged Buddhism ಎಂದು ಕರೆಯಬಹುದು. ಹಾಗೆ ನೋಡಿದರೆ ಸಾಂಸ್ಥಿಕ ರೂಪವನ್ನು ಪಡೆದಮೇಲೆ ಬೌದ್ಧ ಧರ್ಮವು ರಾಜಕೀಯದಿಂದ ದೂರವಿದ್ದಿಲ್ಲ. ಸ್ವತಃ ಬುದ್ಧನ ಬಹುಮುಖ್ಯ ಸಂವಾದಗಳು ಪ್ರಭುತ್ವಗಳ ಪ್ರತಿನಿಧಿಗಳೊಂದಿಗೆ ಇದ್ದವು. ಹೀಗಾಗಿ ಯಾವ ಧರ್ಮವನ್ನೂ ರಾಜಕೀಯ ಸೋಂಕೇ ಇಲ್ಲದ ನಿರ್ವಾತದಲ್ಲಿ ನೋಡುವುದು ಚರಿತ್ರೆಗೆ ವಿರುದ್ಧವಾಗುತ್ತದೆ. ಎಷ್ಟೇ ಉದಾತ್ತವಾದ ಅಮೂರ್ತವಾದ ಚಿಂತನೆಗಳಿದ್ದರೂ ಧರ್ಮವು ‘‘ಲೌಕಿಕ’’ವೂ ಹೌದು. ಜಗತ್ತನ್ನು ಮಿಥ್ಯೆ ಎನ್ನುವ ಧಾರ್ಮಿಕರು ಮಠಗಳನ್ನು ಕಟ್ಟಿದರು. ಪ್ರಭುತ್ವಗಳ ಸಲಹೆಗಾರರಾದರು. ಭಾರತದ ಚರಿತ್ರೆಯಲ್ಲಿ ಧರ್ಮ ಹಾಗೂ ರಾಜಕೀಯಗಳು ಸಂಪೂರ್ಣವಾಗಿ ಸಂಬಂಧವೇ ಇಲ್ಲದಿದ್ದ ಒಂದೇ ಉದಾಹರಣೆಯೂ ಇಲ್ಲ. engaged Buddhism ಎನ್ನುವುದು ಈ ದೃಷ್ಟಿಯಲ್ಲಿ ಬೌದ್ಧ ಧರ್ಮದ ಒಂದು ರೂಪವೇ ಆಗಿದೆ.
ಈ ಕಾರಣದಿಂದಾಗಿಯೇ ಬುದ್ಧನನ್ನು ಒಂದು ಅವತಾರವನ್ನಾಗಿಸುವ ಸಾಂಸ್ಕೃತಿಕ ಧಾರ್ಮಿಕ ರಾಜಕೀಯವು ನಡೆಯಿತು. ಬೋಧಿಸತ್ವನ ಕುರಿತ ಪುರಾಣಗಳನ್ನು ಕತೆಗಳನ್ನು ಹೇರಳವಾಗಿ ಕಟ್ಟಲಾಯಿತು. ಅವನನ್ನು ಒಬ್ಬ ದೇವರನ್ನಾಗಿ ಕೂರಿಸಲಾಯಿತು. ಆದರೆ ಅವನ ಕಾಲದ ಅವನ ಹತ್ತಿರದ ಕಾಲದಲ್ಲಿ ಅವನ ಮಾತುಗಳನ್ನು ಸಂಗ್ರಹಿಸಲಾಗಿದೆಯೆನ್ನುವ ಕೃತಿಗಳಲ್ಲಿ ಒಂದು ಖಚಿತವಾದ, ಅದ್ಭುತವಾದ ಬುದ್ಧನ ಸ್ವಂತದ ದನಿ ಕೇಳಿಬರುತ್ತದೆ. ಇದು ನನ್ನ ಕಲ್ಪನೆಯಾಗಿದ್ದರೆ ಪರವಾ ಇಲ್ಲ, ಆ ಹಕ್ಕನ್ನು ಬುದ್ಧನು ಯಾರಿಗೂ ನಿರಾಕರಿಸಿರಲಿಲ್ಲ. ಈ ದನಿ ಆಳವಾದ, rational ಆದ, ಆದರೆ ಎಂದಿಗೂ ತಾನೇ ಸರಿ ಎನ್ನುವ ಅಹಂಕಾರವಿಲ್ಲದ ಮನವೊಲಿಸುವ ದನಿಯಿದು. ಯಾವುದೇ ಅಧಿಕಾರ ಕೇಂದ್ರವನ್ನು ಒಪ್ಪಿದ ದನಿಯಿದು. ಉದಾಹರಣೆಗಳ ಮೂಲಕ ಕತೆಗಳ ಮೂಲಕ ಹೇಳಿದ್ದನ್ನು ಅನುಭವವಾಗಿಸುವ ದನಿಯಿದು. ಈ ಕತೆಗಳೇ ಲೋಕದ ಬಗೆಗಿನ ತಿಳುವಳಿಕೆಯ ಮಾರ್ಗಗಳಾಗಿವೆ. ಕವಿ ಬ್ರೆಕ್ಟ್ ಇಂಥ ಕತೆಗಳಲ್ಲಿ ಆಯ್ದುಕೊಂಡದ್ದು ‘Buddha's Parable of the Burning House’ ಉರಿಯುವ ಮನೆಯ ವೃತ್ತಾಂತವು. ಬೆಂಕಿಬಿದ್ದ ಮನೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಜನ ಹೊರಗೆ ಬರಲು ಪ್ರಯತ್ನಿಸುತ್ತಿದ್ದರೆ ಕೆಲವರು ಕಿಟಕಿಯ ಬಳಿ ಬಂದು ನಾವು ಹೊರಗೆ ಬಂದರೆ ಹೊರಗಿನ ಜಗತ್ತು ಹೇಗಿದೆ ಎಂದು ಪ್ರಶ್ನಿಸುತ್ತಾರೆ. ಮರಣದ ನಂತರ ಪರಲೋಕವಿದೆಯೇ, ಮರುಜನ್ಮವಿದೆಯೇ ಎಂದವರಿಗೆ ಬುದ್ಧನ ಉತ್ತರವು ಈ ಕತೆಯಲ್ಲಿದೆ. ಈ ಬುದ್ಧನಂತೆ ಏಸು, ಬಸವಣ್ಣ, ಸೂಫಿಗಳು ಎಲ್ಲರೂ ಉದಾಹರಣೆ, ಐತಿಹ್ಯ ಕತೆಗಳ ಮೂಲಕವೇ ತಮ್ಮ ತಿಳುವಳಿಕೆಯನ್ನು ನಮಗೆ ನೀಡಿದರು. ಹೀಗೆ ಕತೆ ಹೇಳುವ, ಪ್ರಶ್ನಿಸುವ ಬುದ್ಧನನ್ನು ಈ ಜಗತ್ತು ಇನ್ನಿಲ್ಲದಂತೆ ಪ್ರೀತಿಸಿದೆ.