ಇಂಜಿನಿಯರುಗಳು ಕಟ್ಟಿದ ‘ಅಸಂಗತಗಳು’

Update: 2023-06-30 10:48 GMT

ಅದು ಇಂಜಿನಿಯರುಗಳು ಆಡಿದ ನಾಟಕ.

ರಾಜ್ಯದ ವಿವಿಧೆಡೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಇಂಜಿನಿಯರುಗಳೇ ಪ್ರದರ್ಶಿಸಿದ ನಾಟಕವದು. ರಂಗಾಸಕ್ತರು ಕಲೆಯೊಂದಿಗೆ ಜೀವಿಸುವ ಆಶಯದೊಂದಿಗೆ ೨೦೧೮ರಲ್ಲಿ ಕಟ್ಟಿಕೊಂಡಿದ್ದೇ ‘ಕಲಾವಿಲಾಸಿ’ ತಂಡ. ಕನ್ನಡ ಕಲಾ ರಂಗದ ಶ್ರೀಮಂತಿಕೆಗೆ ಪೂರಕವಾಗುವಂತೆ ಕನ್ನಡತನವನ್ನು ಬಿಂಬಿಸುವ ಕೆಲಸ ಮಾಡುವ ಗುರಿ ಕಲಾವಿಲಾಸಿ ತಂಡದ್ದು. ಈಗಾಗಲೇ ‘ಮಾನಸಪುತ್ರ’ ಹಾಗೂ ‘ಚಿಗರಿಗಂಗಳ ಚೆಲುವೆ’ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿರುವ ಈ ತಂಡದ ಹೊಸ ನಾಟಕ ಚಂಪಾ (ಚಂದ್ರಶೇಖರ ಪಾಟೀಲ) ಅವರ ಮೂರು ನಾಟಕಗಳನ್ನು ಸೇರಿಸಿ ‘ಅಸಂಗತಗಳು’ ಎಂಬ ಶೀರ್ಷಿಕೆಯೊಂದಿಗೆ ರಂಗಕ್ಕೆ ತಂದಿದ್ದು ಗಮನಾರ್ಹ. ಜೊತೆಗೆ ಚಂಪಾ ಅವರ ಅಸಂಗತ ನಾಟಕಗಳನ್ನು ಮತ್ತೆ ಪ್ರದರ್ಶಿಸಿದ್ದು ಅಭಿನಂದನೀಯ (ಈ ನಾಟಕ ಬೆಂಗಳೂರಿನ ಹನುಮಂತನಗರದ ಕೆ.ಎಚ್.ಕಲಾಸೌಧದಲ್ಲಿ ಎಪ್ರಿಲ್ ೨೩ರಂದು ಪ್ರದರ್ಶನ ಕಂಡಿತು).

೧೯೬೭-೬೮ರಲ್ಲಿ ಚಂಪಾ ಅವರು ರಚಿಸಿದ ಈ ನಾಟಕಗಳ ಕುರಿತು ಅವರು ಹೇಳಿದ್ದು ಹೀಗೆ- ‘‘ಯಾವುದೋ ಒಂದು ಸಾಹಿತ್ಯದ ಪ್ರಕಾರ ಎಂದೂ ‘ಮುಗಿದುಹೋದ ಅಧ್ಯಾಯ’ವಾಗುವುದಿಲ್ಲ. ನವೋದಯ, ನವ್ಯ, ಪ್ರಗತಿಶೀಲ, ಅಸಂಗತ, ಬಂಡಾಯ ಇವುಗಳೆಲ್ಲವೂ ಮತ್ತೆ ಮತ್ತೆ ಪುನರಾವರ್ತನೆಗೊಳ್ಳುವ ಸಾಧ್ಯತೆಯುಳ್ಳ ಪ್ರವೃತ್ತಿಗಳು’’. ಅವರ ಮತ್ತೊಂದು ಮಾತೂ ಗಮನಾರ್ಹ- ‘‘ನನ್ನ ನಾಟಕಗಳೆಲ್ಲ ನನ್ನನ್ನು ಕಾಡುವ, ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ-(ಪರಿಹಾರವನ್ನಲ್ಲ) ಒಂದು ರೂಪು ಕೊಡಲು ಮಾಡಿದ ಪ್ರಯತ್ನಗಳೇ’’.

ಈ ಹಿನ್ನೆಲೆಯಲ್ಲಿ ಚಂಪಾ ಅವರ ಕೊಡೆಗಳು, ಕುಂಟಾ ಕುಂಟಾ ಕುರವತ್ತಿ ಹಾಗೂ ಅಪ್ಪ ನಾಟಕಗಳನ್ನು ಬೆಸೆದು ‘ಅಸಂಗತಗಳು’ ನಾಟಕ ಪ್ರದರ್ಶಿಸಲಾಯಿತು. ನಾಟಕ ಆರಂಭವಾಗುವುದು ಈ ಕೆಳಗಿನ ಹಾಡಿನಿಂದ.

ಬಾಳ ಜಿಗದ್ಯಾಡಿ ಕಾಲ ಮುರಕೊಂಡು ಕುಂತ್ಯಲ್ಲೋ ಮೂಲೀಗಿ

ಬಾಳ ಜಿಗದ್ಯಾಡಿ ಕಾಲ ಮುರಕೊಂಡು ಕುಂತ್ಯಲ್ಲೋ ಮೂಲೀಗಿ

ಮಳ್ಳ ಕುಂತ್ಯಲ್ಲೋ ಮೂಲೀಗಿ..

ಎಂದು ಶುರುವಾಗುವ ಭಜನೆಪದವನ್ನು ಯಳವಾರ ಬಾಬಣ್ಣ ರಚಿಸಿದ್ದು, ಸತ್ಯ ರಾಧಾಕೃಷ್ಣ, ಅಭಿನವ್, ಶ್ರೀನಿಧಿ, ಬಸವರಾಜ ಎಮ್ಮಿಯವರ, ಸಿದ್ಧರಾಮು ಕಲಾವಿಲಾಸಿ, ಶಾಂತೇಶ್ ವಿಜಯ್ ಹಾಗೂ ಶಿವಶರಣ ಅಸ್ಕಿಹಾಳ ಹಾಡಿ ಗಮನ ಸೆಳೆದರು. ಬಳಿಕ ‘ಕೊಡೆಗಳು’ ನಾಟಕ ಶುರುವಾಯಿತು. ‘ಕ್ಷ’ ಪಾತ್ರಧಾರಿ ಮಧು ಕರ್ನಾಟಕ ಅವರು ಪ್ರೇಕ್ಷಕರಿದ್ದಲ್ಲಿಂದಲೇ ಆರಾಮ ಅದೀರಿ ಎಂದು ಕೇಳುತ್ತಲೇ ರಂಗಕ್ಕೇರಿದರು. ಇವರೊಂದಿಗೆ ‘ಯ’ ಪಾತ್ರಧಾರಿ ಬಸವರಾಜ ಎಮ್ಮಿಯವರ ಅವರು ಸೊಗಸಾಗಿ ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡರು. ಈ ನಾಟಕದಲ್ಲಿ ‘ಕ್ಷ’ ಪಾತ್ರಧಾರಿ ‘‘ಟೈಮ್ ಎಷ್ಟು?’’ ಎಂದು ಕೇಳಿದಾಗ ‘ಯ’ ಪಾತ್ರಧಾರಿ ‘‘ಒಂಭತ್ತು, ಒಂಭತ್ತೂವರೆ, ಹತ್ತು, ಹತ್ತೂವರೆ ಆಗಿರಬಹುದು’’ ಎಂದು ವಾಚಿದ್ದರೂ ಮುಗಿಲ ಕಡೆ ನೋಡಿ ಹೇಳುತ್ತಾನೆ. ಇದಕ್ಕೆ ‘ಕ್ಷ’ ಪಾತ್ರಧಾರಿ ‘‘ಅಸಂಗತ ನಾಟಕದಲ್ಲಿ ಪಾತ್ರ ಮಾಡ್ತಿದ್ರಿ?’’’ ಎಂದು ಕೇಳುತ್ತಾನೆ.

ಆಮೇಲೆ ‘ಕುಂಟಾ ಕುಂಟಾ ಕುರವತ್ತಿ’ ನಾಟಕದಲ್ಲಿ ಕುಂಟನಾಗಿ ಸಿದ್ಧರಾಮು ಕಲಾವಿಲಾಸಿ, ಕುರುಡನಾಗಿ ಶಾಂತೇಶ್ ವಿಜಯ್ ಹಾಗೂ ಕೆಪ್ಪನಾಗಿ ಶ್ರೀನಿಧಿ ಗಮನ ಸೆಳೆದರು. ಅದರಲ್ಲೂ ಕುಂಟನಾಗಿ ಸಿದ್ಧರಾಮು ಅವರು ಬೂಟು ಪಾಲಿಷ್ ಮಾಡುವ ಜೊತೆಗೆ ಕುಂಟರೇನೋ ಎನ್ನುವ ಹಾಗೆ ಪಾತ್ರವೇ ತಾವಾಗಿ ಅಭಿನಯಿಸಿದರು. ಇದರಲ್ಲಿ ಕುಂಟನ ಮಾತುಗಳು ಗಮನ ಸೆಳೆಯುತ್ತವೆ- ‘‘ಕಾಲ ಬರೊಬ್ಬರಿ ಇಲ್ಲ. ಯಾಕಂದರ ಕಾಲ ಕೆಟ್ಟೈತಿ ಅದಕ್ಕ ಅದು ಬರೊಬ್ಬರಿ ಇಲ್ಲ. ಬರೊಬ್ಬರಿ ಇದ್ದಿದ್ರ ಅದ್ಯಾಕ ಕೆಡತಿತ್ತು. ಅದು ಕಾಲದ ಮಹಿಮೆ’’

ಕುರುಡನಿಗೆ ಕುಂಟ ಹೇಳುವ ಮಾತಿದು-

‘‘ನೀ ನನ್ನ ಹೆಗಲ ಮ್ಯಾಲ ಹೊತ್ತುಗೊ

ನಾ ನಿನ್ನ ಜೋಲಿ ಹಿಡಿತೀನಿ

ನಾ ನಿನಗ ದಿಕ್ಕು ತೋರಸ್ತೀನಿ

ನಿನಗ ದೇಶ ತೋರಸ್ತೀನಿ’’

ಕೆಪ್ಪ: ನಿಮ್ಮಪ್ಪನಂತ ಕಿವಿ ಅದಾವು ನನಗ, ಕಾಣದಿಲ್ಲೇನು ಕಿವ್ಯಾಗಿನ ಹೂವು

ಕುರುಡ: ಕಾಣಸ್ತಾವ. ಕಾಣದ ಏನು ಮಾಡ್ಯಾವು ನನಗ

ಕೆಪ್ಪ: ನಾನಂದರ ಏನಂದುಕೊಂಡಿದ್ದೀರಿ. ನೀವು ಬಾಯಿ ತಗದು ಅತ್ತಾಗಿತ್ತಾಗ ಹೊರಳಾಡಿಸಿದ್ರ ಸಾಕು, ನಿಮ್ಮ ಮನಸಿನ್ಯಾಗ ಎಂತಾ ರಾಗ ಐತಿ ಅಂತ ಪತ್ತೆ ಹಿಡಿತೀನಿ.

ಇದರ ನಂತರ ‘ಅಪ್ಪ’ ನಾಟಕದಲ್ಲಿ ಮಧು ಕರ್ನಾಟಕ ಹಾಗೂ ಅವ್ವಳಾಗಿ ನಾಗಲಕ್ಷ್ಮೀ ಪಾತ್ರಗಳಿಗೆ ಜೀವ ತುಂಬಿದರು. ತನ್ನ ಅಪ್ಪನ ಹುಡುಕಾಟದಲ್ಲಿ ಬಸವ, ತನ್ನ ಅವ್ವಳನ್ನು ಕೇಳುವ ಮಾತು ಮಾರ್ಮಿಕ. ಚಂಪಾ ಅವರು ಈ ನಾಟಕ ಕುರಿತು ಹೇಳಿದ ಮಾತು ಉಲ್ಲೇಖಾರ್ಹ. ‘‘ಬಸವಣ್ಣನವರ ವಚನವೊಂದು ನಾಲ್ಕೈದು ವರ್ಷಗಳಿಂದ ನನ್ನನ್ನು ಎಡೆಬಿಡದೆ ಕಾಡುತ್ತಿತ್ತು. ನಾನು ನಿನ್ನನ್ನು ಅರಸುವುದೆಂದರೆ ಸೂಳೆಯ ಮಗ ತನ್ನ ತಂದೆಗಾಗಿ ಅರಸಿದಂತೆ ಎಂಬ ಸಿಡಿಮದ್ದಿನಂಥ ಪ್ರತೀಕ ಈ ವಚನದಲ್ಲಿದೆ. ಕಾಣದ, ಬಹುಶಃ ಇರದ ಯಾವುದೋ ಒಂದಕ್ಕಾಗಿ ನಾವು ಸದಾ ಹುಡುಕಾಟ ನಡೆಸುತ್ತೇವೆ, ಅಲ್ಲವೆ? ಈ ನಿರಂತರ ಹುಡುಕಾಟ, ನಿರಂತರ ಅತೃಪ್ತಿ ಇಂದಿಗೂ ನನ್ನ ಬದುಕಿನ ಒಂದು ಅನಿವಾರ್ಯತೆಯೇ ಆಗಿರುವುದರಿಂದ, ಈ ಹುಡುಕಾಟ ಕೂಡ ಒಂದು ಭ್ರಮೆಯೇ ಆಗಿರಬಹುದೇ ಎಂಬ ಅನುಮಾನವೂ ಇರುವುದರಿಂದ (ಅವ್ವಾ ಅವ್ವಾ... ಇದು ಬರೇ ಕತಿ ಏನ ಮತ್ತ? ಇದು ಅಪ್ಪ ನಾಟಕದ ಬಸವನ ಕೊನೆಯ ಪ್ರಶ್ನೆ). ಇದರಿಂದ ಅಪ್ಪ ನಂಬಿಕೆ, ತಾಯಿ ಸತ್ಯ ಎನ್ನುವ ಮಾತು ಮತ್ತೆ ಸಾಬೀತಾಯಿತು.’’

ಚಂಪಾ ಅವರ ಅಸಂಗತ ನಾಟಕಗಳನ್ನು ಮತ್ತೆ ಆಡಿದ ಕಲಾವಿಲಾಸಿ ತಂಡಕ್ಕೂ ನಿರ್ದೇಶಿಸಿದ ಬಸವರಾಜ ಎಮ್ಮಿಯವರ ಅವರನ್ನೂ ಅಭಿನಂದಿಸುವೆ. ಏಕೆಂದರೆ ಬೆಂಗಳೂರಿನಂಥ ನಗರದಲ್ಲಿ ನಾಟಕ ನೋಡಲು ಕಷ್ಟಸಾಧ್ಯವಾಗುವಾಗ ನಾಟಕ ಆಯ್ದುಕೊಂಡು, ತಾಲೀಮು ನಡೆಸಿ ಪ್ರಯೋಗಗೊಳಿಸುವುದು ಸಾಹಸದ ಕೆಲಸವೇ ಎನ್ನುವ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಉದ್ಯೋಗದ ಜೊತೆಗೆ ರಂಗಭೂಮಿಯ ಬದ್ಧತೆ ಉಳಿಸಿಕೊಂಡು, ಬೆಳೆಸಿಕೊಂಡು ತಮ್ಮ ಹಾಗೆ ಆಸಕ್ತಿ ಇರುವವರನ್ನು ತಂಡಕ್ಕೆ ಸೇರಿಸಿಕೊಂಡು ನಾಟಕ ಆಡುವ ಈ ತಂಡಕ್ಕೆ ಶರಣು.

ನಾಟಕ: ಅಸಂಗತಗಳು

ರಚನೆ: ಚಂದ್ರಶೇಖರ ಪಾಟೀಲ

ನಿರ್ದೇಶನ: ಬಸವರಾಜ ಎಮ್ಮಿಯವರ

ಸಂಗೀತ: ಸತ್ಯ ರಾಧಾಕೃಷ್ಣ

ರಂಗ ಪರಿಕರ, ವಸ್ತ್ರ ವಿನ್ಯಾಸ: ಶಾಂತೇಶ್ ವಿಜಯ್

Similar News