ಇಡಿ ಮುಖ್ಯಸ್ಥನ ಅಧಿಕಾರಾವಧಿ ನವೆಂಬರ್ ನಂತರ ಮುಂದುವರಿಯುವುದಿಲ್ಲ: ಕೇಂದ್ರ ಸರಕಾರ ಹೇಳಿಕೆ

Update: 2023-05-08 15:39 GMT

ಹೊಸದಿಲ್ಲಿ, ಮೇ 8: ಅನುಷ್ಠಾನ ನಿರ್ದೇಶನಾಲಯ (ಇಡಿ)ದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾರ ಅಧಿಕಾರಾವಧಿ ಈ ವರ್ಷದ ನವೆಂಬರ್ ನಂತರ ಮುಂದುವರಿಯುವುದಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಆರ್ಥಿಕ ಕ್ರಿಯಾ ಕಾರ್ಯಪಡೆ (FATF)ಯು ನಡೆಸುತ್ತಿರುವ ಮೌಲ್ಯಮಾಪನವು ಚಾಲ್ತಿಯಲ್ಲಿರುವ ಹಿನ್ನೆಲೆಯಲ್ಲಿ, ಮಿಶ್ರಾಗೆ ಮೂರನೇ ಬಾರಿಗೆ ಅಧಿಕಾರ ವಿಸ್ತರಣೆಯನ್ನು ನೀಡಲಾಗಿದೆ ಎಂದು ನ್ಯಾ. ಬಿ.ಆರ್. ಗವಾಯಿ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠದ ಎದುರು ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಅನುಷ್ಠಾನ ನಿರ್ದೇಶನಾಲಯಕ್ಕೆ ಮಿಶ್ರಾ ‘‘ಅಷ್ಟೊಂದು ಅನಿವಾರ್ಯವೇ’’ ಹಾಗೂ ಅವರ ಸ್ಥಾನವನ್ನು ತುಂಬಬಲ್ಲ ಅಧಿಕಾರಿ ಸರಕಾರಕ್ಕೆ ಸಿಕ್ಕಿಲ್ಲವೇ ಎಂಬುದಾಗಿ ಕಳೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕೇಳಿತ್ತು.

‘‘ಈ ಅಧಿಕಾರಿ (ಮಿಶ್ರಾ) 2023 ನವೆಂಬರ್ ಬಳಿಕ ಮುಂದುವರಿಯುವಂತಿಲ್ಲ. ಆದರೆ, ಈಗ ಎಫ್ಎಟಿಎಫ್ ನ ಮೌಲ್ಯಮಾಪನ ನಡೆಯುತ್ತಿದೆ. ಅದು 2019ರಲ್ಲಿ ನಡೆಯಬೇಕಾಗಿತ್ತು. ಆದರೆ ಕೋವಿಡ್ ನಿಂದಾಗಿ ನಡೆದಿಲ್ಲ. ಯಾರೂ ಅನಿವಾರ್ಯವಲ್ಲ. ಒಬ್ಬ ನಿರ್ದಿಷ್ಟ ಅಧಿಕಾರಿಯ ಅನುಪಸ್ಥಿತಿಯಲ್ಲಿ ಯಾವುದೇ ಸಂಘಟನೆಯು ನಿಷ್ಕ್ರಿಯವಾಗುವುದಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದ ವ್ಯಕ್ತಿಯ ಉಪಸ್ಥಿತಿಯು ಪರಿಣಾಮಕಾರಿಯಾಗಿರುತ್ತದೆ’’ ಎಂದು ತುಷಾರ್ ಮೆಹ್ತಾ ಹೇಳಿದರು.

2021ರಲ್ಲಿ, ಮಿಶ್ರಾಗೆ ಯಾವುದೇ ವಿಸ್ತರಣೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸರಕಾರಕ್ಕೆ ಸೂಚಿಸಿತ್ತು. ಆದರೆ, ನ್ಯಾಯಾಲಯದ ಆದೇಶ ಹೊರಬಿದ್ದ ಎರಡು ತಿಂಗಳುಗಳ ಬಳಿಕ, ಸರಕಾರವು ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಕಾಯ್ದೆಗೆ ತಿದ್ದುಪಡಿಗಳನ್ನು ತಂದಿತು. 2021ರ ನವೆಂಬರ್ ನಲ್ಲಿ ಅದು ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿತು. ಮಿಶ್ರಾರ ಅಧಿಕಾರಾವಧಿಯನ್ನು ಒಂದು ವರ್ಷ, ಅಂದರೆ 2022 ನವೆಂಬರ್ವರೆಗೆ ವಿಸ್ತರಿಸಲು ಈ ತಿದ್ದುಪಡಿಗಳು ಸರಕಾರಕ್ಕೆ ಅವಕಾಶ ನೀಡಿದವು. ಇವೇ ತಿದ್ದುಪಡಿಗಳ ಆಧಾರದಲ್ಲಿ, ಸರಕಾರವು ಅದೇ ಅಧಿಕಾರಿಯ ಅಧಿಕಾರಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಿತು. ಈಗ ಅವರು 2023 ನವೆಂಬರ್ 18ರವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರಿಯಬಹುದಾಗಿದೆ.

ಮೌಲ್ಯಮಾಪನದ ವಿಷಯ 2021ರಲ್ಲಿ ಯಾಕೆ ಹೇಳಿಲ್ಲ ಸುಪ್ರೀಂ ಕೋರ್ಟ್ ಪ್ರಶ್ನೆ

‘‘ಎಫ್ಎಟಿಎಫ್ ಮಾಲ್ಯಮಾಪನವು 2019ರಲ್ಲಿ ನಡೆಯಬೇಕಾಗಿತ್ತು ಎನ್ನುವುದು ನಿಮಗೆ ಗೊತ್ತಿದ್ದರೆ, ಅದನ್ನು ನೀವು 2021ರ ತೀರ್ಪಿನ ಮೊದಲು ನ್ಯಾಯಾಲಯದ ಗಮನಕ್ಕೆ ತಂದಿದ್ದೀರಾ? ಕೆಲವು ಅತ್ಯಂತ ಗಂಭೀರ ತನಿಖೆಗಳು ನಡೆಯುತ್ತಿವೆ, ಹಾಗಾಗಿ ಅಧಿಕಾರದಲ್ಲಿ ಅವರು ಮುಂದುವರಿಯುವುದು ಅಗತ್ಯ ಎಂದಷ್ಟೇ ನೀವು ಆಗ ಹೇಳಿದ್ದಿರಿ. ನಿಮ್ಮ ಆ ವಾದದ ಆಧಾರದಲ್ಲಿ, ಅವರಿಗೆ 2022 ನವೆಂಬರ್ವರೆಗೆ ಅಧಿಕಾರದಲ್ಲಿ ಮುಂದುವರಿಯಲು ನ್ಯಾಯಾಲಯವು ಅವಕಾಶ ನೀಡಿತು. ಹಾಗಾದರೆ, ಈಗ ನೀವು ನಮ್ಮ ಎದುರು ಹೇಳುತ್ತಿರುವ ಎಫ್ಎಟಿಎಫ್ ಮೌಲ್ಯಮಾಪನ ನಂತರ ಯೋಚಿಸಿದ ವಿಷಯವೇ?’’ ಎಂದು ನ್ಯಾ. ಗವಾಯಿ ಸರಕಾರವನ್ನು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೋಯಿತ್ರಾ, ಸಾಮಾಜಿಕ ಹೋರಾಟಗಾರ ಹಾಗೂ ಮಧ್ಯಪ್ರದೇಶ ಕಾಂಗ್ರೆಸ್ ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಾ ಠಾಕೂರ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

Similar News