ತಾರಿಣಿ, ಡಿ.ಎ.ಶಂಕರ್ ಕೃತಿಗಳಿಗೆ ವಿ.ಎಂ.ಇನಾಂದಾರ್ ಪ್ರಶಸ್ತಿ
ಉಡುಪಿ: ಮೈಸೂರಿನ ಲೇಖಕಿ ಹಾಗೂ ವಿಮರ್ಶಕಿ ಆರ್. ತಾರಿಣಿ ಶುಭದಾಯಿನಿ ಮತ್ತು ಹಿರಿಯ ಲೇಖಕ, ಸಾಹಿತಿ, ಕಾದಂಬರಿಕಾರ ಡಿ.ಎ.ಶಂಕರ್ ಇವರನ್ನು ನಾಡಿನ ಖ್ಯಾತ ವಿಮರ್ಶಕ ಪ್ರೊ.ವಿ.ಎಂ. ಇನಾಂದಾರ್ ನೆನಪಿನಲ್ಲಿ ನೀಡುವ 2011 ಮತ್ತು 2022ನೇ ಸಾಲಿನ ‘ಇನಾಂದಾರ್ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಆರ್.ತಾರಿಣಿ ಶುಭದಾಯಿನಿ ಅವರ ‘ಅಂಗುಲ ಹುಳುವಿನ ಇಂಚು ಪಟ್ಟಿ’ ವಿಮರ್ಶಾ ಕೃತಿಯನ್ನು 2021ನೇ ವರ್ಷದ ಹಾಗೂ ಡಿ.ಎ.ಶಂಕರ್ ಅವರ ವಿಮರ್ಶಾ ಕೃತಿ ‘ವಾಗರ್ಥ’ ಕೃತಿಯನ್ನು 2022ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಡಾ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಬ್ಬರು ವಿಜೇತರಿಗೂ ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಇನಾಂದಾರ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಡಾ.ಶೆಟ್ಟಿ ತಿಳಿಸಿದ್ದಾರೆ.
ತಾರಿಣಿ ಶುಭದಾಯಿನಿ ಮೈಸೂರಿನವರಾಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಅಧ್ಯಯನ ಮಾಡಿದ್ದಾರೆ. ತೋಡಿ ರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ ಇವರ ಕವನಸಂಕಲನಗಳು. ಗಳಿಗೆ ಬಟ್ಟಲು, ಹೆಡೆಯಂತಾಡುವ ಸೊಡರು ಇವರ ವಿಮರ್ಶಾಕೃತಿ. ನಿರ್ವಸಾಹತೀಕರಣ, ಸ್ತ್ರೀ ಶಿಕ್ಷಣ-ಚರಿತ್ರೆಯ ಹೆಜ್ಜೆಗಳು ಮುಂತಾದವು ಇವರ ಪ್ರಕಟಿತ ಇತರ ಕೃತಿಗಳು. ಇವರಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಪ್ರೊ.ಡಿ.ಸಿ ಅನಂತಸ್ವಾಮಿ ಸಂಸ್ಮರಣ ದತ್ತಿನಿಧಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಡಿ.ಎ.ಶಂಕರ್ ಇವರು ಮೈಸೂರು ವಿಶ್ವದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ, ಮಂಗಳೂರು ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಬಳಿಕ ಮೈಸೂರು ವಿವಿಯ ಮೊದಲ ಎಮಿರಿಟಸ್ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದಾರೆ. ಕಾವ್ಯ, ನಾಟಕ, ಅನುವಾದ, ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಅಸಕ್ತಿ ಹಾಗೂ ಪರಿಶ್ರಮವುಳ್ಳವರು.
ಬೆಳಕಿನ ಮರ, ನಿಮ್ಮಲ್ಲೊಬ್ಬ, ಪವಾಡ ಶಂಕರ್ ಅವರ ಕವನ ಸಂಕಲನಗಳು. ನಿರ್ವಹಣೆ, ವಸ್ತುವಿನ್ಯಾಸ, ಅನುಕ್ರಮ ಅವರ ವಿಮರ್ಶಾ ಸಂಕಲನಗಳು. ಶಿವಗಣಪ್ರಸಾದಿ ಮಹಾದೇವಯ್ಯಗಳ ಶೂನ್ಯಸಂಪಾದನೆ ಯನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ಇವರು ಅನಂತಮೂರ್ತಿ, ವೈದೇಹಿ, ತೇಜಸ್ವಿ ಮುಂತಾದವರ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
ಡಿ.ಎ.ಶಂಕರ್ ಅವರ ‘ಕೂಲಿ’ ಹಾಗೂ ಕನಕದಾಸರ ಆಯ್ದ ಕೃತಿಗಳ ಗೋಲ್ಡನ್ ಫ್ಲಾಕ್ ಅನುವಾದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಲಭಿಸಿದೆ. ಕರೀಭಂಟ, ಮುದ್ದುರಾಜರುಗಳ ಪ್ರಸಂಗ ಇವರ ನಾಟಕ ಗಳು, ಅಮೃತ ಇವರ ಕಾದಂಬರಿ. ಇಂಗ್ಲಿಷ್‌ನಲ್ಲೂ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ.