ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲುವಿನ ಕೇಕೆ

ಪ್ರಭ್‌ಸಿಮ್ರನ್ ಸಿಂಗ್ ಶತಕ

Update: 2023-05-13 17:45 GMT

    ಹೊಸದಿಲ್ಲಿ, ಮೇ 13: ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅರ್ಧಶತದ(54 ರನ್, 27 ಎಸೆತ, 10 ಬೌಂಡರಿ, 1 ಸಿಕ್ಸರ್) ಹೊರತಾಗಿಯೂ ಐಪಿಎಲ್‌ನ 59ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 31 ರನ್ ಅಂತರದಿಂದ ಸೋಲುಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ 168 ರನ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 136 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಹರ್‌ಪ್ರೀತ್ ಬ್ರಾರ್(4-30) ಯಶಸ್ವಿ ಬೌಲರ್ ಎನಿಸಿಕೊಂಡರೆ, ರಾಹುಲ್ ಚಹಾರ್(2-16) ಹಾಗೂ ನಥಾನ್ ಎಲ್ಲಿಸ್(2-26) ತಲಾ ಎರಡು ವಿಕೆಟ್ ಪಡೆದರು. ಡೆಲ್ಲಿ ಪರ ಫಿಲ್ ಸಾಲ್ಟ್(21 ರನ್, 17 ಎಸೆತ), ಅಮನ್ ಹಕಿಂ(16ರನ್)ಹಾಗೂ ಪ್ರವೀಣ್ ದುಬೆ(16) ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಆರಂಭಿಕ ಬ್ಯಾಟರ್ ಪ್ರಭ್‌ಸಿಮ್ರನ್ ಸಿಂಗ್ ಶತಕ(103 ರನ್, 65 ಎಸೆತ, 10 ಬೌಂಡರಿ, 6 ಸಿಕ್ಸರ್)ಶತಕದ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತು.

ಪಂಜಾಬ್ ಪರ ಪ್ರಭ್‌ಸಿಮ್ರನ್ ಸಿಂಗ್ ಹೊರತುಪಡಿಸಿ ಬೇರ್ಯಾವ ಆಟಗಾರನು ಕ್ರೀಸ್‌ಗೆ ಅಂಟಿಕೊಂಡು ಬ್ಯಾಟಿಂಗ್ ಮಾಡಲಿಲ್ಲ. ಸ್ಯಾಮ್ ಕರನ್(20 ರನ್) ಹಾಗೂ ಸಿಕಂದರ್ ರಝಾ(ಔಟಾಗದೆ 11) ಎರಡಂಕೆಯ ಸ್ಕೋರ್ ಗಳಿಸಿದರು.

ಡೆಲ್ಲಿ ಬೌಲಿಂಗ್ ವಿಭಾಗದಲ್ಲಿ ಇಶಾಂತ್ ಶರ್ಮಾ(2-27)ಯಶಸ್ವಿ ಬೌಲರ್ ಎನಿಸಿಕೊಂಡರು. ಮುಕೇಶ್ ಕುಮಾರ್(1-3), ಪ್ರವೀಣ್ ದುಬೆ(1-19), ಅಕ್ಷರ್ ಪಟೇಲ್(1-27) ಹಾಗೂ ಕುಲದೀಪ್ ಯಾದವ್(1-32)ತಲಾ ಒಂದು ವಿಕೆಟ್‌ಗಳನ್ನು ಪಡೆದರು.

ಲಿವಿಂಗ್‌ಸ್ಟೋನ್(4 ರನ್) ಜೊತೆ 2ನೇ ವಿಕೆಟ್‌ಗೆ 22 ರನ್ ಸೇರಿಸಿದ ಸಿಂಗ್ ಅವರು ಸ್ಯಾಮ್ ಕರನ್ ಜೊತೆ 4ನೇ ವಿಕೆಟ್‌ಗೆ 72 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಸಿಂಗ್ ಅವರು ಶಾರೂಕ್ ಖಾನ್(2 ರನ್) ಜೊತೆಗೆ 6ನೇ ವಿಕೆಟ್‌ಗೆ 25 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
 

Similar News