ಅಸಮರ್ಪಕ ಕಾಮಗಾರಿ: ಕೆರೆಯಂತಾದ ಪರ್ಕಳ ಬಸ್ ನಿಲ್ದಾಣ!
ಉಡುಪಿ, ಮೇ 15: ಪರ್ಕಳದ ಹೃದಯ ಭಾಗದ ಅಶ್ವಥಕಟ್ಟೆಯ ಬಳಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡ ಪರಿಣಾಮ ಬಸ್ ನಿಲ್ದಾಣವು ಮಳೆಯ ನೀರು ನಿಂತು ಕೆರೆಯಂತಾಗಿದೆ.
ಇಲ್ಲಿ ಪೂರ್ಣ ಪ್ರಮಾಣದ ಕಾಮಗಾರಿ ನಡೆಸದಿರುವುದರಿಂದ ಕೃತಕ ನೀರು ನಿಲ್ಲುವಂತೆ ಮಾಡಲಾಗಿದೆ. ಇದರ ಪರಿಣಾಮ ಪರ್ಕಳ ಬಸ್ ನಿಲ್ದಾಣವು ಮೊದಲ ಮಳೆಯಲ್ಲಿ ಕೆಸರಿನಿಂದ ಕೂಡಿದ ಕೆರೆಯಂತಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಸ್ಥಳೀಯರು ಮುತುವರ್ಜಿ ವಹಿಸಿ ತಾತ್ಕಾಲಿಕವಾಗಿ ನೀರು ಹರಿದು ಹೋಗುವಂತೆ ಮಾಡಿದ್ದಾರೆ. ಈ ಭಾಗದಲ್ಲಿ ಪೂರ್ಣ ಪ್ರಮಾಣದ ಕಾಮಗಾರಿ ಮಳೆಗಾಲದ ಒಳಗೆ ಪೂರ್ಣಗೊಳಿಸಬೇಕು ಮತ್ತು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅರ್ಧಕ್ಕೆ ನಿಂತ ಕಾಮಗಾರಿಯಿಂದ ಸಾರ್ವಜನಿಕರ ಆಗುವ ತೊಂದರೆ ಯನ್ನು ಪರಿಶೀಲಿಸಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಯಾರೂ ಕೂಡ ನ್ಯಾಯಾಲಯಕ್ಕೆ ಹೋಗಿಲ್ಲ. ಕೆಲವರಿಗೆ ಮೊದಲ ಹಂತದ ಪರಿಹಾರವೂ ಸಿಕ್ಕಿದೆ. ಆದುದರಿಂದ ಇಲ್ಲಿ ಏಕೆ ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಕೂಡಲೇ ಡ್ರೈನೇಜ್ ಕಾಮಗಾರಿ ಮತ್ತು ಸಾರ್ವಜನಿಕರು ನಡೆದಾಡುವ ಫುಟ್‌ಪಾತಿಗೆ ಹೋಲೊ ಬ್ರಿಕ್ಸ್ ಅಳವಡಿಸಬೇಕು. ರಾಷ್ಟ್ರೀಯ ಹೆದ್ದಾರಿಗೆ ತಡೆ ಗೋಡೆ ಮತ್ತು ಬಣ್ಣ ಹಾಗೂ ಬಾಕಿ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.