ಮುಕ್ಕಾಲು ಪಾಲು ಆನೆ ನೆಲೆ ನುಂಗಿಹಾಕಿದ ಮನುಷ್ಯನ ಕಾರುಬಾರು

Update: 2023-05-16 03:16 GMT

ಹೆಚ್ಚಿನ ಪ್ರದೇಶಗಳಲ್ಲಿ, ಸೂಕ್ತವಾದ ಆನೆಗಳ ಆವಾಸಸ್ಥಾನಗಳು ಈ ಸಮಯದಲ್ಲಿ ದೊಡ್ಡ ಮಟ್ಟದಲ್ಲಿಯೇ ಧಕ್ಕೆಗೊಳಗಾಗಿವೆ. 1700ರಿಂದ 2015ರವರೆಗೆ ಸೂಕ್ತವಾದ ಆವಾಸಸ್ಥಾನದ ಒಟ್ಟು ಪ್ರಮಾಣ ಶೇ.64ರಷ್ಟು ಕಡಿಮೆಯಾಗಿದೆ ಎಂಬುದು ಅಧ್ಯಯನದಲ್ಲಿ ಗೊತ್ತಾಗಿದೆ. 

ಮನುಷ್ಯರೊಂದಿಗಿನ ದೀರ್ಘ ಒಡನಾಟದ ಹೊರತಾಗಿಯೂ, ಏಶ್ಯದಲ್ಲಿ ಆನೆಗಳು ಅತ್ಯಂತ ಅಳಿವಿನಂಚಿಗೆ ಬಂದು ನಿಂತಿವೆ. ಪ್ರಪಂಚದಾದ್ಯಂತ ಸುಮಾರು 45 ಸಾವಿರದಿಂದ 50 ಸಾವಿರ ಆನೆಗಳು ಇದ್ದಿರಬಹುದು ಎನ್ನಲಾಗುತ್ತದೆ. ಅರಣ್ಯನಾಶ, ಗಣಿಗಾರಿಕೆ, ಅಣೆಕಟ್ಟು ನಿರ್ಮಾಣ ಮತ್ತು ರಸ್ತೆ ನಿರ್ಮಾಣದಂತಹ ಮಾನವ ಚಟುವಟಿಕೆಗಳಿಂದ ಏಶ್ಯಾದ್ಯಂತ ಆನೆಗಳು ಅಪಾಯದಲ್ಲಿವೆ.

ಈಚೆಗೆ ಪ್ರಕಟವಾದ ನಮ್ಮ ಅಧ್ಯಯನ, ಏಶ್ಯದ ನೆಲದಲ್ಲಿನ ಶತಮಾನಗಳಷ್ಟು ಸುದೀರ್ಘ ಇತಿಹಾಸವನ್ನು ಪರಿಶೀಲಿಸಿದೆ. ಒಂದು ಕಾಲದಲ್ಲಿ ಸೂಕ್ತವಾದ ಆನೆಗಳ ಆವಾಸಸ್ಥಾನವಾಗಿದ್ದ ನೆಲವಿದು. ವಸಾಹತುಶಾಹಿ ಯುಗಕ್ಕೆ ಮುಂಚೆ ಸ್ಥಳೀಯ ಸಮುದಾಯಗಳು ನಿರ್ವಹಿಸುತ್ತಿದ್ದವು. ಈ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು, ಇಂದು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧ ಉತ್ತಮಗೊಳ್ಳುವುದಕ್ಕೆ ಬಹಳ ಅವಶ್ಯವಿದೆ.

ಏಶ್ಯದ ಬೃಹತ್ ಮತ್ತು ವೈವಿಧ್ಯಮಯ ಪ್ರದೇಶದಲ್ಲಿ ಮತ್ತು ಶತಮಾನಕ್ಕೂ ಹೆಚ್ಚು ಹಿಂದೆ ವನ್ಯಜೀವಿಗಳ ಮೇಲೆ ಮಾನವ ಪ್ರಭಾವ ಏನಿತ್ತು ಎಂಬುದನ್ನು ಗ್ರಹಿಸುವುದು ಸುಲಭವಲ್ಲ. ಅನೇಕ ಪ್ರಭೇದಗಳ ವಿಚಾರದಲ್ಲಿ ಐತಿಹಾಸಿಕ ವಿವರಗಳು ವಿರಳ. ಅನೇಕ ಪ್ರಾಣಿಗಳಿಗೆ ನಿರ್ದಿಷ್ಟ ಪರಿಸರವೇ ಆಗಬೇಕು. ಇಂಥ ವೈಶಿಷ್ಟ್ಯಗಳೇನು ಎಂಬುದರ ಬಗ್ಗೆ ಸಾಕಷ್ಟು ಮಾಹಿತಿ ಇರುವುದಿಲ್ಲ.

ಸುಮಾರು ಎರಡು ದಶಕಗಳಿಂದ ನಾನು ಏಶ್ಯನ್ ಆನೆಗಳನ್ನು ಅಧ್ಯಯನ ಮಾಡುತ್ತಿದ್ದೇನೆ. ಒಂದು ಜಾತಿಯಾಗಿ, ಈ ಪ್ರಾಣಿಗಳು ಉಸಿರುಕಟ್ಟುವ ರೀತಿಯಲ್ಲಿ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿವೆ. ಒಣ ಕಾಡುಗಳು, ಹುಲ್ಲುಗಾವಲುಗಳು ಅಥವಾ ದಟ್ಟವಾದ ಮಳೆಕಾಡುಗಳಲ್ಲಿ ವಾಸಿಸುತ್ತವೆ. ಕಾಲಾನಂತರದಲ್ಲಿ ಅವುಗಳ ಆವಾಸಸ್ಥಾನಗಳು ಹೇಗೆ ಬದಲಾಗಿವೆ ಮತ್ತು ಆನೆಗಳಿಗೆ ನಿಜವಾಗಿಯೂ ಇರಬೇಕಾದ ಆವಾಸ ಸ್ಥಾನ ಎಂಥದು ಎಂಬುದನ್ನು ಪರಿಶೀಲಿಸಿದರೆ, ಇಂದಿನ ಎಲ್ಲ ಬದಲಾವಣೆಗಳು ಆನೆಗಳು ಮತ್ತು ಇತರ ವನ್ಯಜೀವಿಗಳ ಮೇಲೆ ಹೇಗೆ ಪರಿಣಾಮ ಬೀರಿವೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಏಶ್ಯನ್ ಆನೆಗಳ ಆವಾಸದ ನೆಲೆ ಕೆಲವು ನೂರು ಚದರ ಮೈಲಿಗಳಿಂದ ಕೆಲವು ಸಾವಿರದವರೆಗೆ ಎಲ್ಲಿಯಾದರೂ ಬದಲಾಗಬಹುದು. ಆದರೆ ಶತಮಾನಗಳ ಹಿಂದೆ ಆನೆಗಳು ಎಲ್ಲಿದ್ದವು ಎಂಬುದು ನಮಗೆ ನಿಖರವಾಗಿ ತಿಳಿದಿಲ್ಲ. ಈಗ ಆನೆಗಳು ವಾಸಿಸುವ ಸ್ಥಳಗಳಿಗೆ ಅನುಗುಣವಾದ ಪರಿಸರದ ವೈಶಿಷ್ಟ್ಯಗಳನ್ನು ಗುರುತಿಸುವ ಮೂಲಕ, ಅವು ಹಿಂದೆ ವಾಸಿಸುತ್ತಿದ್ದ ಸ್ಥಳಗಳನ್ನು ಗುರುತಿಸಬಹುದು.

ಇಂದು ಅನೇಕ ವಿಜ್ಞಾನಿಗಳು ನಿರ್ದಿಷ್ಟ ಪ್ರಭೇದಗಳಿಗೆ ಬೇಕಿರುವ ಹವಾಮಾನ ಎಂಥದು ಎಂಬುದನ್ನು ಗುರುತಿಸಲು ಮತ್ತು ಭವಿಷ್ಯದಲ್ಲಿ ಹವಾಮಾನ ಬದಲಾವಣೆಯ ಸನ್ನಿವೇಶಗಳಲ್ಲಿ ಆ ಪ್ರಭೇದಗಳಿಗೆ ಸೂಕ್ತವಾದ ಪ್ರದೇಶಗಳು ಹೇಗೆ ಬದಲಾಗಬಹುದು ಎಂಬುದನ್ನು ಊಹಿಸಲು ಈ ರೀತಿಯ ಮಾದರಿಯನ್ನು ಬಳಸುತ್ತಿದ್ದಾರೆ. ಆದರೆ, ಭೂ ಬಳಕೆಯ ಕ್ರಮವನ್ನು ಪರಿಶೀಲಿಸುವುದೂ ಬಹಳ ಮುಖ್ಯ.

ನಾವು ಮುಖ್ಯವಾಗಿ ಅಧ್ಯಯನ ನಡೆಸಿರುವುದು ಇಂದಿಗೂ ಆನೆಗಳನ್ನು ಹೊಂದಿರುವ 13 ದೇಶಗಳಲ್ಲಿ. ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಶ್ಯ, ಲಾವೋಸ್, ಮಲೇಶ್ಯ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥಾಯ್ಲೆಂಡ್ ಮತ್ತು ವಿಯೆಟ್ನಾಂಗಳಿಗೆ ಈ ಅಧ್ಯಯನ ಸೀಮಿತವಾಗಿದೆ.

ಆನೆಗಳು ಮತ್ತು ಜನರ ನಡುವೆ ಸಂಘರ್ಷ ಸಂಭವಿಸುವ ಪ್ರದೇಶಗಳನ್ನು ಈ ಅಧ್ಯಯನದಿಂದ ಹೊರಗಿಡಲಾಗಿದೆ. ಎಲ್ಲಿ ಮನುಷ್ಯ ಪ್ರಭಾವ ಕಡಿಮೆಯಿದೆಯೋ ಅಂಥ ಪ್ರದೇಶಗಳನ್ನು ಸೇರಿಸಿದ್ದೇವೆ, ಉತ್ತಮ ಆನೆ ನೆಲೆ ಎಂದು ಸಾಮಾನ್ಯೀಕರಿಸುವುದನ್ನು ತಪ್ಪಿಸಲು ಈ ಕ್ರಮ ಅನುಸರಿಸಲಾಗಿದೆ.

ಉಳಿದ ಸ್ಥಳಗಳಲ್ಲಿ ಯಾವ ರೀತಿಯ ಭೂ ಬಳಕೆ ಅಸ್ತಿತ್ವದಲ್ಲಿದೆ, ಹೇಗೆ ಮನುಷ್ಯ ಅತಿಕ್ರಮಿಸಿದ್ದಾನೆ ಎಂಬುದನ್ನು ಪರಿಶೀಲಿಸಲಾಗಿದೆ. ಮುಂದೆ ಆನೆಗಳು ಎಲ್ಲಿ ಜೀವಿಸಬಲ್ಲವು ಎಂಬುದನ್ನು ಅಂದಾಜಿಸಲು ಇದು ನೆರವಾಗಿದೆ. ಈ ಮಾದರಿಯನ್ನು ಹಿಂದಿನ ಮತ್ತು ನಂತರದ ವರ್ಷಗಳಲ್ಲಿ ಅನ್ವಯಿಸುವ ಮೂಲಕ, ಆನೆಗಳಿಗೆ ಸೂಕ್ತವಾದ ಆವಾಸಸ್ಥಾನ ಹೊಂದಿರುವ ಪ್ರದೇಶಗಳ ನಕ್ಷೆಗಳನ್ನು ರಚಿಸಲು ಮತ್ತು ಆ ಪ್ರದೇಶಗಳು ಹೇಗೆ ಬದಲಾಗಿವೆ ಎಂಬುದನ್ನು ನೋಡಲು ಸಾಧ್ಯ.

1700ರ ಸುಮಾರಿನಲ್ಲಿ ಕೈಗಾರಿಕಾ ಕ್ರಾಂತಿಯಿಂದ ಶುರುವಾಗಿ 20ನೇ ಶತಮಾನದ ಮಧ್ಯಭಾಗದವರೆಗೆ ವಸಾಹತುಶಾಹಿ ಕಾಲದವರೆಗೆ ಪ್ರತಿಯೊಂದು ಖಂಡದಲ್ಲೂ ಭೂ ಬಳಕೆಯ ಮಾದರಿ ಗಮನಾರ್ಹವಾಗಿ ಬದಲಾಗಿದೆ. ಏಶ್ಯ ಕೂಡ ಇದಕ್ಕೆ ಹೊರತಾಗಿರಲಿಲ್ಲ.

ಹೆಚ್ಚಿನ ಪ್ರದೇಶಗಳಲ್ಲಿ, ಸೂಕ್ತವಾದ ಆನೆಗಳ ಆವಾಸಸ್ಥಾನಗಳು ಈ ಸಮಯದಲ್ಲಿ ದೊಡ್ಡ ಮಟ್ಟದಲ್ಲಿಯೇ ಧಕ್ಕೆಗೊಳಗಾಗಿವೆ. 1700ರಿಂದ 2015ರವರೆಗೆ ಸೂಕ್ತವಾದ ಆವಾಸಸ್ಥಾನದ ಒಟ್ಟು ಪ್ರಮಾಣ ಶೇ.64ರಷ್ಟು ಕಡಿಮೆಯಾಗಿದೆ ಎಂಬುದು ಅಧ್ಯಯನದಲ್ಲಿ ಗೊತ್ತಾಗಿದೆ. ಬಹುಪಾಲು ಭೂಮಿಯನ್ನು ತೋಟಗಳು, ಕೈಗಾರಿಕೆ ಮತ್ತು ನಗರಾಭಿವೃದ್ಧಿಗಾಗಿ ಪರಿವರ್ತಿಸಲಾಯಿತು. ಆನೆಗಳ ಆವಾಸಸ್ಥಾನಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ಬದಲಾವಣೆ ಭಾರತ ಮತ್ತು ಚೀನಾದಲ್ಲಿ ಸಂಭವಿಸಿದೆ, ಇಲ್ಲಿ ಅವುಗಳ ನೆಲೆಯ ಶೇ.80ಕ್ಕಿಂತ ಹೆಚ್ಚು ಭಾಗ ಪರಿವರ್ತನೆಗೆ ಒಳಗಾಗಿದೆ.

ಆಗ್ನೇಯ ಏಶ್ಯದ ಇತರ ಪ್ರದೇಶಗಳಲ್ಲಿ ಮಧ್ಯ ಥಾಯ್ಲೆಂಡ್ ಆನೆಗಳ ದೊಡ್ಡ ನೆಲೆ. ಅದು ವಸಾಹತುಶಾಹಿಗೆ ಒಳಪಡದೆ ಇದ್ದರೂ ಅಲ್ಲಿಯೂ 20ನೇ ಶತಮಾನದ ಮಧ್ಯಭಾಗದಿಂದ ಆನೆಗಳ ನೆಲೆಗೆ ಧಕ್ಕೆಯಾಗಿದೆ. 

ಶತಮಾನಗಳ ಭೂ ಬಳಕೆಯ ಬದಲಾವಣೆಯನ್ನು ಅವಲೋಕಿಸಿದಾಗ ಮಾನವ ಕ್ರಮಗಳು ಏಶ್ಯದ ಆನೆಗಳ ಆವಾಸಸ್ಥಾನವನ್ನು ಎಷ್ಟು ತೀವ್ರವಾಗಿ ಕಡಿಮೆ ಮಾಡಿವೆ ಎಂಬುದು ಸ್ಪಷ್ಟವಾಗುತ್ತದೆ. 1700ರ ಸಮಯದಲ್ಲಿ ಆನೆಗಳು ಏಶ್ಯದಲ್ಲಿ ಯಾವುದೇ ತೊಂದರೆಯಿಲ್ಲದೆ ಲಭ್ಯವಿರುವ ಆವಾಸಸ್ಥಾನದ ಬಹುಪಾಲು ವ್ಯಾಪ್ತಿಯಲ್ಲಿ ನಿರಾಳವಾಗಿ ಓಡಾಡಿಕೊಂಡಿರಲು ಸಾಧ್ಯವಿತ್ತು. ಆದರೆ 2015ರ ಹೊತ್ತಿಗೆ ಮಾನವ ಚಟುವಟಿಕೆಗಳು ಆನೆಗಳಿಗೆ ಅಗತ್ಯವಾದ ಒಟ್ಟು ಪ್ರದೇಶವನ್ನು ಭಾರೀ ಪ್ರಮಾಣದಲ್ಲಿ ವಿಭಜಿಸಿದವು.

ಲಭ್ಯವಿರುವ ಆನೆಗಳ ಆವಾಸಸ್ಥಾನಕ್ಕೆ ಹೋಲಿಸಿದರೆ ಶ್ರೀಲಂಕಾ ಮತ್ತು ಮಲೇಶ್ಯಗಳಲ್ಲಿ ಏಶ್ಯದ ಅತಿ ಹೆಚ್ಚು ಆನೆಗಳು ನೆಲೆಯಾಗಿವೆ. ಥಾಯ್ಲೆಂಡ್ ಮತ್ತು ಮ್ಯಾನ್ಮಾರ್‌ನಲ್ಲಿ ಕಡಿಮೆ ಆನೆಗಳಿವೆ. 

ಇಂದು ಆನೆಗಳು ಅವು ಇರುವ ನೆಲೆಯಲ್ಲಿನ ಅರ್ಧಕ್ಕಿಂತ ಕಡಿಮೆ ಪ್ರದೇಶಗಳಲ್ಲಿ ಬದುಕಬೇಕಾಗಿದೆ. ಅಷ್ಟರ ಮಟ್ಟಿಗೆ ಮನುಷ್ಯನ ಆಕ್ರಮಣ ಅವುಗಳ ನೆಲೆಯ ಮೇಲೆ ಆಗಿದೆ. ಆನೆಗಳ ನೆಲೆಯ ಮೇಲಿನ ಹೆಚ್ಚುತ್ತಿರುವ ಮಾನವ ಪ್ರಾಬಲ್ಯ ಆನೆಗಳು ಮತ್ತು ಮನುಷ್ಯರ ಮಧ್ಯೆ ಗಂಭೀರ ಸಂಘರ್ಷಕ್ಕೆ ಮತ್ತೆ ಮತ್ತೆ ಎಡೆಮಾಡಿಕೊಡುತ್ತಿದೆ.

ಇತಿಹಾಸವನ್ನು ಅವಲೋಕಿಸಿದ ಬಳಿಕ ಅನ್ನಿಸುವುದು, ಸಂರಕ್ಷಿತ ಪ್ರದೇಶಗಳು ಮಾತ್ರ ಈ ಸಮಸ್ಯೆಗೆ ಉತ್ತರವಲ್ಲ ಎಂಬ ವಿಚಾರ. ಏಕೆಂದರೆ ಸಂರಕ್ಷಿತ ಪ್ರದೇಶಗಳು ಆನೆಗಳ ಸಂಖ್ಯೆಗೆ ಹೋಲಿಸಿದರೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿಲ್ಲ.

ಇಂದು ವನ್ಯಜೀವಿಗಳ ಅಗತ್ಯ ಮತ್ತು ಮನುಷ್ಯನ ಜೀವನೋಪಾಯದ ಅಗತ್ಯಗಳ ನಡುವೆ ಸಮತೋಲನವನ್ನು ತರುವುದು ಒಂದು ದೊಡ್ಡ ಸವಾಲಾಗಿದೆ. ಭೂ ನಿರ್ವಹಣೆಯ ಸಾಂಪ್ರದಾಯಿಕ ಸ್ವರೂಪಗಳನ್ನು ಮರುಸ್ಥಾಪಿಸುವುದು ಭವಿಷ್ಯದಲ್ಲಿ ಜನರು ಮತ್ತು ವನ್ಯಜೀವಿಗಳೆರಡಕ್ಕೂ ಅನುಕೂಲವಾಗುವ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವುದು ಬಹಳ ಜರೂರಿನ ಕೆಲಸವಾಗಿದೆ.

(ಕೃಪೆ: thewire.in)

Similar News