ಭಯದ ವಾತಾವರಣ ಸೃಷ್ಟಿಸದಿರಿ: ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂಕೋರ್ಟ್ ತಾಕೀತು
ಹೊಸದಿಲ್ಲಿ: ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಮದ್ಯ ಮಾರಾಟ ಅಕ್ರಮ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹಲವಾರು ರಾಜ್ಯ ಅಬಕಾರಿ ಅಧಿಕಾರಿಗಳು ದೂರುತ್ತಿದ್ದಾರೆ ಎಂದು ಪ್ರತಿಪಾದಿಸಿರುವ ಛತ್ತೀಸ್‌ಗಢ ಸರ್ಕಾರದ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್, "ಭಯದ ವಾತಾವರಣ ಸೃಷ್ಟಿಸದಿರಿ" ಎಂದು ಜಾರಿ ನಿರ್ದೇಶನಾಲಯಕ್ಕೆ ತಾಕೀತು ಮಾಡಿದೆ ಎಂದು ndtv.com ವರದಿ ಮಾಡಿದೆ.
ವಿಚಾರಣೆ ಪ್ರಗತಿಯಲ್ಲಿರುವ ಪ್ರಕರಣಗಳಲ್ಲಿ ತನ್ನನ್ನೂ ಪ್ರತಿವಾದಿ ಎಂದು ಪರಿಗಣಿಸಬೇಕು ಎಂದು ಛತ್ತೀಸ್‌ಗಢ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಎಸ್.ಕೆ.ಕೌಲ್ ಹಾಗೂ ಎ.ಅಮಾನುಲ್ಲಾ ಅವರನನ್ನೊಳಗೊಂಡ ದ್ವಿಸದಸ್ಯ ಪೀಠವು ಮೇಲಿನಂತೆ ಸೂಚಿಸಿತು.
ವಿಎಂಝೆಡ್ ಚೇಂಬರ್ಸ್ ಮೂಲಕ ತನ್ನನ್ನೂ ಪ್ರತಿವಾದಿಯನ್ನಾಗಿಸುವಂತೆ ಅರ್ಜಿ ಸಲ್ಲಿಸಿರುವ ಛತ್ತೀಸ್‌ಗಢ ಸರ್ಕಾರ, ತನ್ನನ್ನೂ ಪ್ರತಿವಾದಿಯಾಗಿ ಪರಿಗಣಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜ್ಯ ಅಬಕಾರಿ ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರನ್ನು ಬಂಧಿಸುವ, ಮುಖ್ಯಮಂತ್ರಿಯನ್ನು ಹಗರಣದಲ್ಲಿ ಸಿಲುಕಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಛತ್ತೀಸ್‌ಗಢ ಸರ್ಕಾರ ಆರೋಪಿಸಿದೆ.
ಛತ್ತೀಸ್‌ಗಢ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, "ಜಾರಿ ನಿರ್ದೇಶನಾಲಯವು ಉನ್ಮಾದದಿಂದ ವರ್ತಿಸುತ್ತಿದ್ದು, ಅಬಕಾರಿ ಅಧಿಕಾರಿಗಳಿಗೆ ಬೆದರಿಕೆ ಒಡ್ಡುತ್ತಿದೆ" ಎಂದು ಆರೋಪಿಸಿದರು. ಅಲ್ಲದೆ ಇದು ಆಘಾತಕಾರಿ ಸ್ಥಿತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆಯಲ್ಲಿನ ಕೆಲವು ಅವಕಾಶಗಳ ಊರ್ಜಿತತೆಯನ್ನು ಪ್ರಶ್ನಿಸಿ ಕಳೆದ ತಿಂಗಳು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಛತ್ತೀಸ್‌ಗಢ ಸರ್ಕಾರ, ಬಿಜೆಪಿಯೇತರ ಸರ್ಕಾರಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿತ್ತು.