ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ರಕ್ಷಣೆ ಸಿಗಲಿ

Update: 2023-05-17 19:30 GMT

ಮಾನ್ಯರೇ,

1994ರಲ್ಲಿ ನಾನು ಹೈಸ್ಕೂಲ್‌ನಲ್ಲಿ ಇರುವಾಗ ಉಳ್ಳಾಲ ಕೋಮುಗಲಭೆಗೆ ಹೆಸರುವಾಸಿ. ಗಲಭೆಯ ಸಂದರ್ಭ ಒಂದು ಕೋಮಿನ ಯುವಕರು ಆ ಕಡೆ ಕಲ್ಲೆಸೆಯುವುದು, ಇನ್ನೊಂದು ಕೋಮಿನ ಯುವಕರು ಈ ಕಡೆಗೆ ಕಲ್ಲೆಸೆಯುವುದು, ಕಲ್ಲೆಸೆಯುವ ಹುಡುಗರು ಓಡುವ ದಿಕ್ಕಿಗೆ ಯಾವ ಮನೆಗಳಿರುತ್ತವೆಯೋ ಆ ಮನೆಗಳಿಗೆ ಪೊಲೀಸರು ನುಗ್ಗಿ ಮಹಿಳೆಯರೊಂದಿಗೆ ಅಸಭ್ಯವಾಗಿ, ಅನ್ಯಾಯದಿಂದ ವರ್ತಿಸುವ ಕಣ್ಣಾರೆ ಕಂಡ ಕೆಲವು ದೃಶ್ಯಗಳನ್ನು ಮರೆಯಲಾಗದು. ಗಲಭೆಯ ಕಾರಣ ಶಿಕ್ಷಣಕ್ಕೆ ಅಡ್ಡಿ. ಅದರಲ್ಲೂ ಹೆಣ್ಣುಮಕ್ಕಳ ಬಗ್ಗೆ ತಂದೆತಾಯಂದಿರಿಗೆ ಹೆಚ್ಚು ಭಯ. ಈಗ ಪರಿಸ್ಥಿತಿ ಬದಲಾಗಿದೆ. ಜನ ವಿದ್ಯಾವಂತರಾಗಿ ಪ್ರಬುದ್ಧತೆಯಿಂದ ವರ್ತಿಸುತ್ತಿದ್ದಾರೆ. ಇನ್ನು ಮುಂದೆಯೂ ಯುವ ಸಮುದಾಯ ದುಡಿದು ಮನೆಮಂದಿಯನ್ನು ನೋಡಿಕೊಂಡು ನೆಮ್ಮದಿಯಾಗಿ ಬದುಕುವ ವಾತಾವರಣ ಸೃಷ್ಟಿಯಾಗಲಿ. ಅದರಿಂದಲೇ ಮನೆಯ, ದೇಶದ ಅಭಿವೃದ್ಧಿ ಸಾಧ್ಯ.

ಎಲ್ಲ ಧರ್ಮದ ಮಹಿಳೆಯರೂ ಗೌರವಾರ್ಹರು. ಮಹಿಳೆಯರನ್ನು ಗೌರವಿಸುವಂತಹ ವಾತಾವರಣ ನಿರ್ಮಾಣವಾಗಲಿ. ಗಲಭೆಗಳು ನಡೆಯದಂತೆ ನೋಡಿಕೊಳ್ಳುವುದು ಮಹಿಳೆಯರಿಗೆ ಮಾಡುವ ದೊಡ್ಡ ಉಪಕಾರ. ನಾರಿಯರನ್ನು ಗೌರವಿಸಿ. ಮಕ್ಕಳು, ವೃದ್ಧರ ಮೇಲೆ ಅನುಕಂಪ ಇರಲಿ.
 

Similar News