ವಿಧಾನಸೌಧದ ಕೊಠಡಿಗಳು ಅಲಂಕಾರದ ವಸ್ತುಗಳಾಗದಿರಲಿ

Update: 2023-05-18 18:28 GMT

ಮಾನ್ಯರೇ,

ಕಳೆದ ಹತ್ತಾರು ವರ್ಷಗಳಿಂದ ಯಾವುದೇ ಸರಕಾರವಿದ್ದರೂ ವಿಧಾನಸೌಧದ ಮೂರನೇ ಮಹಡಿ, ವಿಕಾಸ ಸೌಧದ ಮಂತ್ರಿಗಳ ಕೊಠಡಿಗಳು ಬಾಗಿಲುಗಳನ್ನು ತೆಗೆಯುವುದು ಅಪರೂಪಕ್ಕೊಮ್ಮೆ. ಇನ್ನು ಮಂತ್ರಿಗಳು ಬರುವುದು ವರ್ಷದಲ್ಲಿ ಕೆಲವೊಮ್ಮೆ ಮಾತ್ರ ಎಂಬ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿದೆ.
ದಶಕಗಳ ಹಿಂದೆ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಪ್ರವಾಸ ಇಲ್ಲದಿದ್ದ ಸಂದರ್ಭದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಅಥವಾ ಇನ್ನೂ ಹೆಚ್ಚಿನ ಸಮಯದವರೆಗೆ ತಮ್ಮ ಕೊಠಡಿಗಳಲ್ಲಿ ಕುಳಿತು ಕಡತಗಳನ್ನು ವಿಲೇವಾರಿ ಮಾಡುತ್ತಾ, ಮಧ್ಯಾಹ್ನ 3ರಿಂದ 5 ಗಂಟೆಯ ಅವಧಿಯಲ್ಲಿ ಸಾರ್ವಜನಿಕರ ಭೇಟಿಗೆ ಸಿಗುತ್ತಿದ್ದರು. ಅಂತಹ ಜನಪರವಾದಂತಹ ಆಡಳಿತವನ್ನು ನೀಡಿದ ಕಾರಣದಿಂದ ಹಲವಾರು ಮಂತ್ರಿಗಳನ್ನು ಮತ್ತು ಮುಖ್ಯಮಂತ್ರಿಗಳನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಆದರೆ ಕಾಲ ಬದಲಾಗಿ ಹೋಯಿತು. ಭದ್ರತೆಯ ನೆಪದಲ್ಲಿ ವಿಧಾನಸೌಧ, ವಿಕಾಸಸೌಧಗಳಿಗೆ ಜನಸಾಮಾನ್ಯರು ಬರುವುದು ದುಸ್ತರವಾಗಿದೆ. ಮಧ್ಯಾಹ್ನದ ವೇಳೆಯಲ್ಲಿ 3 ಗಂಟೆಯಿಂದ 5 ಗಂಟೆ ಸಾರ್ವಜನಿಕರ ಭೇಟಿಯ ಸಮಯದಲ್ಲಿ ಯಾವ ಮಂತ್ರಿಯೂ ಸಿಗುವುದಿಲ್ಲ, ಅಧಿಕಾರಿಗಳು ದೊರೆಯುವುದಿಲ್ಲ. ಅನೇಕ ಮಂತ್ರಿಗಳು ತಮ್ಮ ಮನೆಗಳನ್ನೇ ಕಚೇರಿಗಳನ್ನಾಗಿಸಿಕೊಂಡು ಅಲ್ಲಿಯೇ ಉಳಿದುಬಿಡುತ್ತಾರೆ. ಇಲ್ಲವೇ ಗೆಸ್ಟ್‌ಹೌಸ್‌ಗಳಲ್ಲಿ ಸದಾ ಕಾಲ ಇದ್ದು ತಮ್ಮ ವೈಯಕ್ತಿಕ ಅಥವಾ ಹಿಂಬಾಲಕರ ಉದ್ಧಾರಕ್ಕಾಗಿ ಬೆವರು ಸುರಿಸುತ್ತಿದ್ದಾರೆ.
ಹೊಸ ಸರಕಾರ ಬಂದಿದೆ. ಈ ಸರಕಾರದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಬೇರೆ ಬೇರೆ ಜಿಲ್ಲೆಗಳ ಪ್ರವಾಸ ಇಲ್ಲದ ಅವಧಿಯಲ್ಲಿ ಕನಿಷ್ಠ ವಾರಕ್ಕೆ ಒಂದೆರಡು ಬಾರಿಯಾದರೂ ವಿಧಾನಸೌಧದ ತಮ್ಮ ಕಚೇರಿಗಳಲ್ಲಿ ಕುಳಿತು ಸಾರ್ವಜನಿಕರನ್ನು ಭೇಟಿ ಮಾಡಿ ಪ್ರಜಾಪ್ರಭುತ್ವವನ್ನು ಮೆರೆಸಲಿ.
ಹಾಗೆಯೇ ಎಲ್ಲಾ ಇಲಾಖೆಗಳಲ್ಲೂ ಕಡ್ಡಾಯವಾಗಿ ಮಧ್ಯಾಹ್ನ 3ರಿಂದ 5ಗಂಟೆಯ ಸಾರ್ವಜನಿಕರ ಭೇಟಿಯ ಸಮಯದಲ್ಲಿ ಅಧಿಕಾರಿಗಳು ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಸಂದರ್ಭದಲ್ಲೂ ತಮ್ಮ ಕಚೇರಿಗಳಲ್ಲಿ ಹಾಜರಿದ್ದು, ಜನರನ್ನು ಭೇಟಿ ಮಾಡಬೇಕೆಂಬ ಕಠಿಣವಾದ ಸುತ್ತೋಲೆಯನ್ನು ಹೊರಡಿಸಬೇಕು. ಜನರಿಗೆ ಯಾರೂ ದೊರೆಯದಿದ್ದರೆ ಜನರು ತಮ್ಮ ಗೋಳನ್ನು ಯಾರೊಂದಿಗೆ ಹಂಚಿಕೊಳ್ಳಬೇಕು?.
 

Similar News