ಗೋಡಂಬಿ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕೇರಳದ ಶೀಬಾ ಈಗ ಅತ್ಯುತ್ತಮ ಅತ್ಲೀಟ್

ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾಯೋಜಕರಿಗಾಗಿ ಹುಡುಕಾಟ

Update: 2023-05-19 17:59 GMT

 ಕೊಲ್ಲಂ, ಮೇ 19: ಮೂವತ್ತನೇ ವಯಸ್ಸಿನಲ್ಲಿ ನೀವು ಅತ್ಲೆಟಿಕ್ಸ್‌ನಲ್ಲಿ ಹೇಗೆ ತೊಡಗಿಸಿಕೊಂಡಿದ್ದೀರಿ ಎಂದು ಯಾರಾದರೂ ಈ ತೆಳ್ಳಗಿನ ಮಹಿಳೆಯನ್ನು ಕೇಳಿದರೆ, ಅವರು ಮೊದಲು ಮುಗ್ಧ್ದ ನಗೆ ಬೀರುತ್ತಾರೆ. ಜೀವನ ನನ್ನನ್ನು ಕ್ರೀಡಾಪಟುವನ್ನಾಗಿಸಿದೆ ಎಂದು ಉತ್ತರಿಸುತ್ತಾರೆ. ವಿವಿಧ ವಿಶ್ವ ಮಾಸ್ಟರ್ಸ್ ಅತ್ಲೆಟಿಕ್ಸ್ ಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳು ಹಾಗೂ ಪುರಸ್ಕಾರಗಳನ್ನು ಪಡೆದು ಅತ್ಲೀಟ್ ಆಗಿ ಬದಲಾಗಿರುವ ಗೋಡಂಬಿ ಕಾರ್ಖಾನೆಯಲ್ಲಿ ದುಡಿಯುತ್ತಿರುವ, ಮನೆ ಕೆಲಸಗಾರ್ತಿಯೂ ಕೆಲಸ ಮಾಡುತ್ತಿರುವ ಕೇರಳದ ಶೀಬಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಇದೀಗ ಪ್ರಾಯೋಜಕರನ್ನು ಹುಡುಕಾಡುತ್ತಿದ್ದಾರೆ. ಚಿಕ್ಕಿಂದಿನಿಂದಲೂ ಸಮಯಕ್ಕೆ ಸರಿಯಾಗಿ ಕೆಲಸದ ಸ್ಥಳಗಳನ್ನು ತಲುಪಲು ಬಿರುಸಿನ ಹೆಜ್ಜೆ ಇಡುತ್ತಿದ್ದಾಗ ಹಾಗೂ ಓಡುತ್ತಿದ್ದಾಗ ಶೀಬಾ ಮುಂದೊಂದು ದಿನ ತಾನು ಕ್ರೀಡಾಪಟುವಾಗುತ್ತೇನೆ. ದೇಶವಿದೇಶಗಳಲ್ಲಿ ಮುಕ್ತ ಕ್ರೀಡಾಕೂಟಗಳಲ್ಲಿ ಹಿರಿಯರ ವಿಭಾಗದಲ್ಲಿ ಪದಕಗಳನ್ನು ಗೆಲ್ಲುತ್ತೇನೆ ಎಂದು ಎಂದಿಗೂ ಯೋಚಿಸಿದವರಲ್ಲ.

ಕೊಲ್ಲಂ ಜಿಲ್ಲೆಯ ಮಯ್ಯನಾಡ್‌ನ 38ರ ಹರೆಯದ ಶೀಬಾ ಈ ವರ್ಷದ ನವೆಂಬರ್‌ನಲ್ಲಿ ಫಿಲಿಪ್ಪೈನ್ಸ್‌ನಲ್ಲಿ ನಡೆಯಲಿರುವ ಮುಂಬರುವ ಏಶ್ಯನ್ ಮಾಸ್ಟರ್ಸ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಪ್ರಾಯೋಜಕರನ್ನು ಹುಡುಕುತ್ತಾ ಜೀವನದ ಮತ್ತೊಂದು ಓಟದಲ್ಲಿದ್ದಾರೆ.

ಚಾಂಪಿಯನ್‌ಶಿಪ್‌ಗೆ ಕೆಲವು ತಿಂಗಳುಗಳು ಬಾಕಿ ಇದ್ದು, ಅಂತರ್‌ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸಲು ಶೀಬಾಗೆ ಇನ್ನೂ 1.5 ಲಕ್ಷ ರೂ. ಅಗತ್ಯವಿದೆ.

ಸರಕಾರವು ಮಾಸ್ಟರ್ಸ್ ವಿಭಾಗದಲ್ಲಿ ಅತ್ಲೆಟಿಕ್ಸ್ ಅನ್ನು ಗುರುತಿಸದ ಕಾರಣ ಭಾಗವಹಿಸಲು ನಾವು ಸ್ವಂತ ಹಣ ಹೊಂದಿಸಬೇಕಾಗುತ್ತದೆ. ಈ ಹಿಂದೆ 4 ದೇಶಗಳಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಇದೇ ರೀತಿಯ ಕ್ರೀಡಾಕೂಟಗಳಲ್ಲಿ ಉದಾತ್ತ ಮನಸ್ಸಿನ ಜನರ ಬೆಂಬಲದೊಂದಿಗೆ ಭಾಗವಹಿಸಿದ್ದೆ ಎಂದು ಪಿಟಿಐಗೆ ಶೀಬಾ ತಿಳಿಸಿದರು.

 ಮಹಿಳಾ ಅತ್ಲೀಟ್ ಶೀಬಾ ಕಳೆದ ವರ್ಷ ಪಶ್ಚಿಮಬಂಗಾಳದಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅತ್ಲೆಟಿಕ್ಸ್ ಈವೆಂಟ್‌ಗಳಲ್ಲಿ 400 ಮೀಟರ್ ರಿಲೇ ಓಟ ಹಾಗೂ 3,000 ಮೀಟರ್ ನಡಿಗೆಯಲ್ಲಿ ಪದಕಗಳನ್ನು ಜಯಿಸಿ ಏಶ್ಯನ್ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರು.
 
ಎರಡು ಮಕ್ಕಳ ತಾಯಿಯಾಗಿರುವ ಶೀಬಾ ಅವರು ಗೋಡಂಬಿ ಕಾರ್ಖಾನೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಜೀವನ ನಿರ್ವಹಣೆಗೆ ಕೆಲವು ಮನೆಗಳಲ್ಲಿ ಮನೆಗೆಲಸವನ್ನೂ ಮಾಡುತ್ತಿದ್ದಾರೆ. ಮನೆಯ ಕೆಲಸ ಮುಗಿಸಿ ಫ್ಯಾಕ್ಟರಿಗೆ ಹೋಗುತ್ತಿದ್ದೆ. ನಂತರ ಅಲ್ಲಿಯ ಯಜಮಾನನ ಅನುಮತಿ ಪಡೆದು ಸಂಜೆ ಬೇಗೆ ಹೊರಟು ಅಕ್ಕಪಕ್ಕದ ಕೆಲವು ಮನೆಗಳಲ್ಲಿ ಮನೆಗೆಲಸ ಮಾಡುತ್ತಿದೇನೆೆ. ಹಾಗಾಗಿ ನನ್ನ ಜೀವನವೇ ಓಟ ಎಂದು ನಗುತ್ತಾ ಹೇಳಿದರು.

ಈ ಬಿಡುವಿಲ್ಲದ ಕೆಲಸದ ನಡುವೆಯೂ ದೈನಂದಿನ ಅಭ್ಯಾಸಕ್ಕೆ ಸಮಯವನ್ನು ಹೊಂದಿಸಿಕೊಳ್ಳುವೆ. ಟ್ರಾಕ್‌ಸೂಟ್ ಧರಿಸಿ ನಾನು ಅಭ್ಯಾಸ ಮಾಡುವಾಗ, ನೆರೆಹೊರೆಯ ಜನರು ನನ್ನನ್ನು ತಮಾಷೆ ಮಾಡುತ್ತಿದ್ದರು. ಈ ವಯಸ್ಸಿನಲ್ಲಿ ನಿನಗೆ ಬೇರೆ ಕೆಲಸವಿಲ್ಲವೇ ಎಂದು ಕೇಳುತ್ತಿದ್ದರು. ಆದರೆ ನಾನು ಈ ನಕಾರಾತ್ಮಕ ಮಾತನ್ನು ನನ್ನ ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ ಎಂದು ಶೀಬಾ ಹೇಳಿದರು.

ತನ್ನ ಕನಸುಗಳನ್ನು ಬೆನ್ನಟ್ಟಲು ಕುಟುಂಬದಿಂದ ಯಾವುದೇ ಅಪೇಕ್ಷಿತ ಬೆಂಬಲ ಪಡೆಯುತ್ತಿಲ್ಲ. ತನ್ನ ಶಾಲಾ ದಿನಗಳಲ್ಲಿ ಯಾವುದೇ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಲಿಲ್ಲ. ಆದರೆ ಶ್ರಮಪಟ್ಟು ಅತ್ಲೆಟಿಕ್ಸ್ ಜಗತ್ತಿಗೆ ಕಾಲಿಟ್ಟ ನಂತರ ಅದು ತನ್ನ ಉತ್ಸಾಹ ಹಾಗೂ ಕನಸನ್ನು ಹೆಚ್ಚಿಸಿದೆ ಎಂದರು. ಕಷ್ಟಗಳು, ಸವಾಲುಗಳು ಹಾಗು ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ಫಿಲಿಪ್ಪೈನ್ಸ್‌ನಲ್ಲಿ ಮುಂಬರುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಕುರಿತಂತೆ ಶೀಬಾ ಆಶಾವಾದಿಯಾಗಿದ್ದಾರೆ.

ಈ ಪದಕಗಳು ಹಾಗೂ ಪ್ರಮಾಣಪತ್ರಗಳನ್ನು ನೋಡಿ... ಇವೆಲ್ಲವನ್ನೂ ಕಷ್ಟ ಹಾಗೂ ಸವಾಲುಗಳ ವಿರುದ್ಧ್ದ ಹೋರಾಡಿ ಗೆದ್ದಿದ್ದೇನೆ ಎಂದು ಗೋಣಿಚೀಲಗಳಲ್ಲಿ ಜೋಡಿಸಿಟ್ಟಿರುವ ಪದಕಗಳು, ಟ್ರೋಫಿಗಳು ಹಾಗೂ ಪ್ರಮಾಣಪತ್ರಗಳ ರಾಶಿಗಳನ್ನು ಶೀಬಾ ತೋರಿಸಿದರು.

ಈ ಬಾರಿಯೂ ನನ್ನ ಮುಂದೆ ಬಾಗಿಲು ತೆರೆಯುತ್ತದೆ ಎಂದು ನನಗೆ ಖಾತ್ರಿ ಇದೆ. ನಾನು ಭಾರತೀಯ ಜೆರ್ಸಿಯನ್ನು ಧರಿಸುತ್ತೇನೆ ಹಾಗೂ ಅಂತರ್‌ರಾಷ್ಟ್ರೀಯ ಸ್ಪರ್ಧೆಯಲ್ಲಿ ದೇಶಕ್ಕಾಗಿ ಪದಕಗಳನ್ನು ಗೆಲ್ಲುತ್ತೇನೆ ಎಂದು ಶೀಬಾ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
 

Similar News