ರಾಜಸ್ಥಾನದ ಕತೆಯಾಗಿ ಹೊರ ಬಂದ ‘ದಿ ಮಂಗಳೂರು ಸ್ಟೋರಿ!’

ಸಯನೈಡ್ ಮೋಹನನ ‘ಲವ್ ಜಿಹಾದ್ ಕ್ರೌರ್ಯ’ಕ್ಕೆ ಬಲಿಯಾದ 27 ತರುಣಿಯರ ಹೃದಯವಿದ್ರಾವಕ ಬದುಕನ್ನು ತೆರೆದಿಡುವ ‘ದಹಾಡ್!’

Update: 2023-05-21 05:00 GMT

ಲವ್ ಜಿಹಾದ್ ಗೆ ಬಲಿಯಾದ ಕೇರಳದ 32 ಸಾವಿರ ಹೆಣ್ಣು ಮಕ್ಕಳ ಕತೆ ಎಂದು ಪ್ರಚಾರ ಪಡೆಯುತ್ತಾ ಜನರ ಮುಂದೆ ಬಂದ ‘ದಿ ಕೇರಳ ಸ್ಟೋರಿ’ ಎನ್ನುವ ಚಿತ್ರದ ಸತ್ಯಾಸತ್ಯತೆಯನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರರು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿದ್ದಂತೆಯೇ, ನಿರ್ದೇಶಕರು32,000 ಹೆಣ್ಣು ಮಕ್ಕಳು ಅಲ್ಲ, ಕೇವಲ 3 ಹೆಣ್ಣು ಮಕ್ಕಳು ಎಂದು ತಿದ್ದಿಕೊಂಡರು. ಶಿಕ್ಷಣ, ಆರೋಗ್ಯ, ಅಭಿವೃದ್ಧಿ, ಸಮಾನತೆಯಲ್ಲಿ ದೇಶಕ್ಕೆ ಮಾದರಿ ರಾಜ್ಯವಾಗಿರುವ ಕೇರಳ ವರ್ಚಸ್ಸಿಗೆ ಧಕ್ಕೆ ತರುವ ಏಕೈಕ ಉದ್ದೇಶದಿಂದ ಹೊರ ಬಂದ ಈ ಸಿನೆಮಾದ ಸುಳ್ಳುಗಳು ಬಯಲಾಗುತ್ತಿರುವ ಹೊತ್ತಿಗೇ, ಮಂಗಳೂರನ್ನು ನಡುಗಿಸಿದ ‘ಸಯನೈಡ್ ಮೋಹನ’ನ ‘ದಿ ಮಂಗಳೂರು ಸ್ಟೋರಿ’ ರಾಜಸ್ಥಾನವೆಂಬ ಜಾತಿಯ ಕ್ರೌರ್ಯದಿಂದ ನರಳುತ್ತಿರುವ ನೆಲದಲ್ಲಿ ಮರು ರೂಪ ಪಡೆದಿದೆ.

ಪ್ರೇಮ, ಮದುವೆಯ ಹೆಸರಿನಲ್ಲಿ ಮೋಸ ಹೋಗಿ, ಮೋಹನ ಎಂಬ ಕಿರಾತಕನಿಗೆ ಬಲಿಯಾದ 27 ಹೆಣ್ಣು ಮಕ್ಕಳ ದಾರುಣ ಬದುಕಿನ ಕತೆ ಅಮೆಝಾನ್ ಪ್ರೈಮ್ನಲ್ಲಿ ‘ದಹಾಡ್’ ಹೆಸರಿನಲ್ಲಿ ಸುದ್ದಿ ಮಾಡುತ್ತಿದೆ. ಸುಮಾರು ಎಂಟು ಎಪಿಸೋಡ್ಗಳಲ್ಲಿ ಮೂಡಿ ಬಂದಿರುವ ಈ ಸರಣಿ, ಬರೇ ಒಂದು ಕ್ರೈಂ ಥ್ರಿಲ್ಲರ್ ಮಾತ್ರ ಅಲ್ಲ. ಆ ಸೈಕೋಪಾತ್ನನ್ನು ಸಿದ್ಧಗೊಳಿಸಿದ ರಾಜಸ್ಥಾನದ ಜಾತಿ ಕ್ರೌರ್ಯ, ಮೇಲ್ಜಾತಿಯ ಮೇಲರಿಮೆಗಳು, ಭ್ರಷ್ಟ ರಾಜಕೀಯ, ಮಹಿಳಾ ವಿರೋಧಿ ಮನಸ್ಥಿತಿ, ಬಡತನ ಇವೆಲ್ಲವನ್ನೂ ಸರಣಿ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ರಾಜಸ್ಥಾನದ ಪುರುಷ ಮನಸ್ಥಿತಿಯ ಮೇಲರಿಮೆಗೆ ಮುಟ್ಟಿ ನೋಡುವಂತೆ ಈ ಸರಣಿ ಒದೆಯುತ್ತದೆ.

2003ರಿಂದ 2009ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ನಡುಗಿಸಿದವನು ಸಯನೈಡ್ ಮೋಹನ. 20 ರಿಂದ 30 ವರ್ಷದ ಬಡ ತರುಣಿಯರನ್ನು ಪ್ರೇಮದ ಬಲೆಯಲ್ಲಿ ಕೆಡವಿ, ಮದುವೆಯಾಗುವ ಆಮಿಷವೊಡ್ಡಿ ದೂರದೂರಿಗೆ ಕರೆದೊಯ್ದು ಅವರ ಹಣ, ಚಿನ್ನವನ್ನು ದೋಚಿ, ಸಯನೈಡ್ ಮೂಲಕ ಸಾಲು ಸಾಲಾಗಿ ಕೊಂದು ಹಾಕಿದ ಕ್ರೌರ್ಯ ಕಥಾನಕದ ನಿಜ ಖಳನಾಯಕನೀತ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ರೂಪದಲ್ಲಿ ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದಂತೆಯೇ ಅದಕ್ಕೆ ‘ಲವ್ಜಿಹಾದ್’ನ ರೆಕ್ಕೆ ಪುಕ್ಕಗಳು ಬಂದವು. ಕಾಣೆಯಾದ ಈ ಹೆಣ್ಣು ಮಕ್ಕಳೆಲ್ಲ ಲವ್ ಜಿಹಾದ್ಗೆ ಬಲಿಯಾಗಿದ್ದಾರೆ ಎಂದು ಸಂಘಪರಿವಾರ ಮತ್ತು ಬಿಜೆಪಿ ಬೀದಿ ರಂಪ ಮಾಡಿದ್ದವು. ಕೆಲವು ಪ್ರತಿಭಟನೆಗಳಲ್ಲಿ ಸ್ವತಃ ಕೊಲೆಗಾರನೂ ಭಾಗವಹಿಸಿರುವುದು ಬಳಿಕ ಬೆಳಕಿಗೆ ಬಂತು. ಆದರೆ ತನಿಖೆಯಲ್ಲಿ ‘ಲವ್ ಜಿಹಾದ್’ ಇನ್ನೊಂದು ಮುಖ ಬೆಳಕಿಗೆ ಬಂತು.

ಮೋಹನ್ ಎನ್ನುವ ಸೈಕೋಪಾತ್ 20ಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ಬಲಿ ತೆಗೆದುಕೊಂಡಿರುವುದು ಗೊತ್ತಾಗುತ್ತಿದ್ದಂತೆಯೇ ಪ್ರತಿಭಟಿಸುತ್ತಿದ್ದ ಸಂಘಪರಿವಾರ ತೆಪ್ಪಗಾಯಿತು. ಇದೀಗ ಆ ಪ್ರಕರಣವನ್ನೇ ವಸ್ತುವಾಗಿಸಿ, ರೀಮಾ ಕಗ್ತಿ ಅವರ ನಿರ್ದೇಶನದಲ್ಲಿ ‘ದಹಾಡ್’ ಸರಣಿ ಹೊರ ಬಂದಿದೆ. ರೀಮಾ ಕಗ್ತಿ, ರೆಯಾ ಅಖ್ತರ್ , ಅಂಗದ್ ದೇವ್ ಸಿಂಗ್, ಫರ್ಹಾನ್ ಅಖ್ತರ್ ಜೊತೆಯಾಗಿ ಸರಣಿಯನ್ನು ನಿರ್ಮಿಸಿದ್ದಾರೆ.

ಸತ್ಯ ಘಟನೆಗಳನ್ನು ಆಧರಿಸಿ ನಿರ್ಮಿಸಿದ ಸರಣಿ ಇದಾದರೂ, ಇದು ಸಾಕ್ಷ್ಯಚಿತ್ರವಲ್ಲ. ಇದೊಂದು ಅಪ್ಪಟ ಕ್ರೈಂ ಥ್ರಿಲ್ಲರ್. ಮೊದಲ ಎಪಿಸೋಡ್ನಲ್ಲೇ ಕೊಲೆಗಾರ ಯಾರು ಎನ್ನುವುದು ವೀಕ್ಷಕರ ಅರಿವಿಗೆ ಬರುತ್ತವೆಯಾದರೂ, ಕಥೆಯ ಕುತೂಹಲ ಎಳ್ಳಷ್ಟು ಕೆಡುವುದಿಲ್ಲ. ಕೊಲೆಗಾರ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಅಂಜಲಿ ಭಾಟಿ ನಡುವಿನ ಕಣ್ಣು ಮುಚ್ಚಾಲೆಯನ್ನು ಬಿಗಿಯಾಗಿ ನಿರೂಪಿಸುವ ಮಹತ್ತರ ಹೊಣೆಗಾರಿಕೆಯನ್ನು ಚಿತ್ರಕತೆಗಾರರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಾಜಸ್ಥಾನವೆನ್ನುವ ಬಿರುಬಿಸಿಲ ಉರಿಗೆ ನೊಂದು ಹೋದ ಮಣ್ಣಿನ ಕಣ ಕಣಗಳನ್ನು ಬಸಿದು ಸಂಭಾಷಣೆಗಳನ್ನು ಹೊರತೆಗೆಯಲಾಗಿದೆ.

ಹೆಣ್ಣಿನ ಒಳಗಿನ ಆಕ್ರಂದನ, ಆಕ್ರೋಶಗಳನ್ನು ಹೃದ್ಯವಾಗಿ, ಮರ್ಮಛೇದಕವಾಗಿ ಸಂಗೀತ ಕಟ್ಟಿಕೊಡುತ್ತದೆ. ಹಸಿರೇ ಇಲ್ಲದೆ ಸುಟ್ಟು ಹೋದ ಗುಡ್ಡಗಳನ್ನು, ಮರೂಭೂಮಿಯನ್ನು ಸರಣಿಯುದ್ದಕ್ಕೂ ಬೇರೆ ಬೇರೆ ಆಯಾಮಗಳಲ್ಲಿ ರೂಪಕಗಳಂತೆ ಹಿಡಿದಿಡುವ ಛಾಯಾಗ್ರಹಣ ರಾಜಸ್ಥಾನದ ಜೀವ ದ್ರವ್ಯ ಬತ್ತಿ ಹೋದ ಪುರುಷ ಮನಸ್ಥಿತಿಗೆ ಸಂಕೇತವಾಗುತ್ತಾ ಹೋಗುತ್ತದೆ. ಸಯನೈಡ್ ಮೋಹನ್ ಇಲ್ಲಿ ಆನಂದ್ ಸ್ವರ್ಣಾಕರ್(ವಿಜಯನ್ ವರ್ಮಾ) ಆಗಿದ್ದಾನೆ. ಇಲ್ಲಿ ಹಿಂದಿ ಸಾಹಿತ್ಯವನ್ನು ಕಲಿಸುವ ಮೇಷ್ಟ್ರು ಈತ.

ಒಂದು ಮಾಮೂಲಿ ಕ್ರೈಂ ಥ್ರಿಲ್ಲರ್ ಆಗಿ ಬಿಡಬಹುದಾದ ಸರಣಿಗೆ ನಿರ್ದೇಶಕರು ಮತ್ತು ಚಿತ್ರಕತೆಗಾರರು ಸಾಮಾಜಿಕ ಆಯಾಮವನ್ನು ಕೊಟ್ಟಿದ್ದಾರೆ. ಆನಂದ್ ಸ್ವರ್ಣಾಕರ್ನ ಸೈಕೋಪಾತ್ ಮನಸ್ಥಿತಿ ರಾಜಸ್ಥಾನದ ಮೇಲ್ ಜಾತಿಯ ಪುರುಷರ ಗುಣ ಸ್ವಭಾವದಲ್ಲಿ , ವ್ಯಕ್ತಿತ್ವದಲ್ಲಿ ಹಂಚಿಹೋಗಿರುವುದನ್ನು ಸರಣಿ ಗುರುತಿಸುತ್ತದೆ. ಕತೆ ತೆರೆದುಕೊಳ್ಳುವುದೇ ಲವ್ಜಿಹಾದ್ ಆರೋಪಗಳ ಮೂಲಕ. ಮುಸ್ಲಿಮ್ ಹುಡುಗನೊಬ್ಬನ ಜೊತೆಗೆ ಪರಾರಿಯಾದ ಮೇಲ್ಜಾತಿಯ ಹುಡುಗಿಯ ಬಗೆಗಿನ ತನಿಖೆಯೊಂದಿಗೆ ಸರಣಿ ಆರಂಭವಾಗುತ್ತದೆ.

ಇದೇ ಸಂದರ್ಭದಲ್ಲಿ ಕೆಳಜಾತಿಯ ವ್ಯಕ್ತಿಯೊಬ್ಬ ಕಾಣೆಯಾದ ತನ್ನ ತಂಗಿಯ ಬಗ್ಗೆ ಮಾಹಿತಿಗಾಗಿ ಹಲವು ತಿಂಗಳಿಂದ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದರೂ ಅದನ್ನು ಸಮಾಜದಲ್ಲಿ ಗಮನಿಸುವವರಿಲ್ಲ. ಲವ್ ಜಿಹಾದ್ ಗದ್ದಲಗಳು ಶುರುವಾದಾಗ ಈತ ‘ತಂಗಿ ಮುಸ್ಲಿಮ್ ಹುಡುಗನ ಜೊತೆಗೆ ಓಡಿ ಹೋಗಿದ್ದಾಳೆ’ ಎಂದು ಸುಳ್ಳು ಹೇಳಿ ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಾನೆ. ಆತ ಆ ಹೇಳಿಕೆ ನೀಡುತ್ತಿದ್ದಂತೆಯೇ ಅವನ ತಂಗಿಯ ನಾಪತ್ತೆ ಪ್ರಕರಣ ಮಹತ್ವವನ್ನು ಪಡೆದುಕೊಳ್ಳುತ್ತದೆ. ಈ ಪ್ರಕರಣದ ತನಿಖೆಯನ್ನು ನಡೆಸುತ್ತಾ ಹೋದಂತೆ ಸಾಲು ಸಾಲು ತರುಣಿಯರ ಕೊಲೆಗಳು ಬಹಿರಂಗವಾಗುತ್ತವೆ.

ತನಿಖೆಯ ನೇತೃತ್ವವನ್ನು ವಹಿಸುವ ಪೊಲೀಸ್ ಇನ್ಸ್ಪೆಕ್ಟರ್ ಅಂಜಲಿ ಭಾಟಿಯ ಪಾತ್ರವನ್ನು ಸೋನಾಕ್ಷಿ ಸಿನ್ಹಾ ನಿರ್ವಹಿಸಿದ್ದಾರೆ. ಪೊಲೀಸ್ಇನ್ಸ್ಪೆಕ್ಟರ್ ಆಗಿದ್ದರೂ, ಆಕೆ ತನ್ನ ಕರ್ತವ್ಯದ ಸಂದರ್ಭದಲ್ಲಿ ಎದುರಿಸುವ ಜಾತಿ ಅಸಮಾನತೆಯನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ. ಇನ್ಸ್ಪೆಕ್ಟರ್ ಭಾಟಿ ಪಾತ್ರ ಹೆಣ್ಣು ಮತ್ತು ಕೆಳಜಾತಿ ಎರಡರ ಪ್ರತಿನಿಧಿಯಾಗಿ ಸರಣಿಯುದ್ದಕ್ಕೂ ಬೆಳೆಯುತ್ತಾ ಹೋಗುತ್ತದೆ.

ಹೆಣ್ಣಿನ ಬದುಕು ‘ಮದುವೆ’ಯೊಂದರಿಂದಲೂ ಪರಿಪೂರ್ಣವಾಗುವುದಿಲ್ಲ. ಅದರಾಚೆಗೂ ಆಕೆಗೊಂದು ಬದುಕಿದೆ ಎನ್ನುವುದನ್ನು ಚಿತ್ರ ಪ್ರತಿಪಾದಿಸುತ್ತದೆ. ಲವ್ ಜಿಹಾದ್  ಆರೋಪದಿಂದ ತೆರೆದುಕೊಳ್ಳುವ ಕತೆ, ಅದೇ ಹಿಂದೂ-ಮುಸ್ಲಿಮ್ ಜೋಡಿಯ ವಿವಾಹದೊಂದಿಗೆ ಮುಕ್ತಾಯಗೊಳಿಸುವ ಮೂಲಕ ಸಂಘಪರಿವಾರದ ಲವ್ಜಿಹಾದ್ ರಾಜಕಾರಣಕ್ಕೂ ಸಣ್ಣದೊಂದು ಬರೆಯನ್ನು ಎಳೆಯುತ್ತದೆ. ‘ದಿ ಕೇರಳ ಸ್ಟೋರಿ’ಯ ಮೂಲಕ ಸರಕಾರ ಹಂಚಲು ಹೊರಟ ಸುಳ್ಳುಗಳನ್ನು ‘ದಹಾಡ್’ ಸರಣಿಯ ಸ್ತ್ರೀ ಪಾತ್ರಗಳು ಹರಿದು ಚಿಂದಿ ಮಾಡುತ್ತವೆ.

- ಮುಸಾಫಿರ್

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News