ನೀವು ಯಾವಾಗಲೂ ನನ್ನೊಂದಿಗಿದ್ದೀರಿ: ತಂದೆಗೆ ರಾಹುಲ್ ಗಾಂಧಿ ಭಾವಪೂರ್ಣ ಶ್ರದ್ಧಾಂಜಲಿ
ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿಯಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ರವಿವಾರ ಅವರ ಅಗಲಿದ ತಂದೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
"ಅಪ್ಪಾ, ನೀವು ಯಾವಾಗಲೂ ಪ್ರೇರಣೆಯ ರೂಪದಲ್ಲಿ, ನೆನಪಿನಲ್ಲಿ ನನ್ನೊಂದಿಗಿದ್ದೀರಿ!"ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ ರಾಜೀವ್ ಗಾಂಧಿ ಅವರ ವಿವಿಧ ಕ್ಷಣಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು, ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ರಾಷ್ಟ್ರ ರಾಜಧಾನಿಯ ವೀರ ಭೂಮಿಯಲ್ಲಿ ಮಾಜಿ ಪ್ರಧಾನಿ ಅವರ 32 ನೇ ಪುಣ್ಯತಿಥಿಯಂದು ಪುಷ್ಪ ನಮನ ಸಲ್ಲಿಸಿದರು.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
1984 ರಲ್ಲಿ ತಮ್ಮ ತಾಯಿ ಹಾಗೂ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ರಾಜೀವ್ ಗಾಂಧಿ ಅವರು ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡರು. ಅವರು ಅಕ್ಟೋಬರ್ 1984 ರಲ್ಲಿ40 ನೇ ವಯಸ್ಸಿನಲ್ಲಿ ಪ್ರಧಾನಿ ಹುದ್ದೆ ವಹಿಸಿಕೊಂಡರು. ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.
ರಾಜೀವ್ ಗಾಂಧಿ ಅವರು ಡಿಸೆಂಬರ್ 2, 1989 ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
1944 ರ ಆಗಸ್ಟ್ 20 ರಂದು ಜನಿಸಿದ್ದ ರಾಜೀವ್ ಗಾಂಧಿ ಅವರು ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್ಟಿಟಿಇ) ಆತ್ಮಾಹುತಿ ಬಾಂಬ್ ದಾಳಿಯಿಂದ ಹತ್ಯೆಗೀಡಾದರು.
पापा, आप मेरे साथ ही हैं, एक प्रेरणा के रूप में, यादों में, सदा! pic.twitter.com/WioVkdPZcr
— Rahul Gandhi (@RahulGandhi) May 21, 2023