ಮಲ್ಪೆಯ ಮೀನುಗಾರಿಕಾ ಬೋಟ್ ಭಟ್ಕಳದಲ್ಲಿ ಮುಳುಗಡೆ: 7 ಮಂದಿ ಮೀನುಗಾರರ ರಕ್ಷಣೆ

Update: 2023-05-22 15:03 GMT

ಮಲ್ಪೆ, ಮೇ 22: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟು ಸೋಮವಾರ ಬೆಳಗ್ಗೆ 6 ಗಂಟೆಗೆ ಸುಮಾರಿಗೆ ಭಟ್ಕಳ ನೇತ್ರಾಣಿ ಸಮೀಪದ ಬಂಡೆಗೆ ಢಿಕ್ಕಿ ಹೊಡೆದು ಮುಳುಗಡೆಗೊಂಡಿದ್ದು, ಇದರಲ್ಲಿದ್ದ ಏಳು ಮಂದಿ ಮೀನು ಗಾರರನ್ನು ರಕ್ಷಿಸಿರುವ ಬಗ್ಗೆ ವರದಿಯಾಗಿದೆ.

ಉದ್ಯಾವರ ಸಂಪಿಗೆನಗರದ ರಾಹಿಲ್ ಎಂಬವರಿಗೆ ಸೇರಿದ ಸೀ ಬರ್ಡ್ ಬೋಟು ಮೇ 21ರಂದು ರಾತ್ರಿ 7 ಮಂದಿ ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೇ 22ರಂದು ಬೆಳಗ್ಗೆ ಭಟ್ಕಳ ನೇತ್ರಾಣಿ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರೀ ಮಳೆ ಗಾಳಿ ಸುರಿಯಿತ್ತೆನ್ನಲಾಗಿದೆ. ಇದರ ಪರಿಣಾಮ ಬೋಟು ನಿಯಂತ್ರಣ ತಪ್ಪಿ ಅಲ್ಲೇ ಸಮೀಪದಲ್ಲಿದ್ದ ಕಲ್ಲು ಬಂಡೆಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೋಟು ಹೊಡೆದು, ಸಮುದ್ರದ ನೀರು ಬೋಟಿನ ಒಳಗೆ ಬರ ತೊಡಗಿತು.

ಇದರ ಪರಿಣಾಮ ಬೋಟು ಸಮುದ್ರ ಮಧ್ಯದಲ್ಲಿಯೇ ಮುಳುಗಲಾರಂಭಿಸಿತ್ತು. ಕೂಡಲೇ ಮಾಹಿತಿ ತಿಳಿದ ಸಮೀಪದಲ್ಲಿದ್ದ ಬೋಟಿನವರು ಧಾವಿಸಿ ಬಂದು, ಮುಳುಗುತ್ತಿದ್ದ ಬೋಟನ್ನು ಹಗ್ಗದ ಸಹಾಯದಿಂದ ಎಳೆದು ತರಲು ಪ್ರಯತ್ನ ಪಟ್ಟರು. ಆದರೆ ಈ ವೇಳೆ ಹಗ್ಗ ತುಂಡಾಗಿ ಬೋಟು ಸಂಪೂರ್ಣ ಮುಳುಗಿತು. ಈ ಮಧ್ಯೆ ಬೋಟಿನಲ್ಲಿದ್ದ ಏಳೂ ಮಂದಿಯನ್ನು ರಕ್ಷಣೆ ಮಾಡಿ ಮಲ್ಪೆ ಬಂದರಿಗೆ ಕರೆ ತರಲಾಗಿದೆ. ಇದರಿಂದ ಸುಮಾರು 45 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Similar News