ತನಿಖಾ ಸಂಸ್ಥೆಗಳ ರಾಜಕೀಯ; ಸುಪ್ರೀಂ ಕೋರ್ಟ್ ಆತಂಕ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಮತ್ತು ಅವರ ಬಾಯಿ ಮುಚ್ಚಿಸಲು ಸಿಬಿಐ, ಎನ್‌ಐಎಹಾಗೂ ಜಾರಿ ನಿರ್ದೇಶನಾಲಯ ದಂತಹ ತನಿಖಾ ಸಂಸ್ಥೆಗಳು ದುರ್ಬಳಕೆ ಆಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ತನಿಖೆಯ ಹೆಸರಿನಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿರುವ ಜಾರಿ ನಿರ್ದೇಶನಾಲಯಕ್ಕೆ ಕಿವಿ ಮಾತು ಹೇಳಿದೆ. ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಅದರಲ್ಲೂ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳ ದುರ್ಬಳಕೆ ವ್ಯಾಪಕವಾಗಿದೆ.
ಛತ್ತೀಸ್‌ಗಡ ಸರಕಾರವು ಸಲ್ಲಿಸಿದ ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯಕ್ಕೆ(ಈ.ಡಿ.) ಸುಪ್ರಿಂ ಕೋರ್ಟ್ ಬುದ್ಧಿಮಾತು ಹೇಳಿದೆ. ಛತ್ತೀಸ್‌ಗಡ ರಾಜ್ಯದಲ್ಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ನಡೆದಿದೆಯೆನ್ನಲಾದ ಎರಡು ಸಾವಿರ ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅವರನ್ನು ಸಿಲುಕಿಸಲು ಜಾರಿ ನಿರ್ದೇಶನಾಲಯ ಯತ್ನಿಸುತ್ತಿದೆ ಹಾಗೂ ತನಿಖೆ ಪೂರ್ವಾಗ್ರಹ ಪೀಡಿತವಾಗಿದೆ ಎಂದೂ, ರಾಜ್ಯದಲ್ಲಿ ಅರಾಜಕತೆ ಉಂಟು ಮಾಡುವುದು ಜಾರಿ ನಿರ್ದೇಶನಾಲಯದ ತನಿಖೆಯ ಉದ್ದೇಶವೆಂದೂ ಛತ್ತೀಸ್‌ಗಡದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದ ಆರೋಪವಾಗಿದೆ.
ಜಾರಿ ನಿರ್ದೇಶನಾಲಯದ ಈ ವರೆಗಿನ ಕಾರ್ಯ ವೈಖರಿಯನ್ನು ಗಮನಿಸಿದರೆ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಆತಂಕ ಸರಿಯಾಗಿದೆ.
ಭಾರತದಲ್ಲಿ ಇರುವುದು ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷವೇ ರಾಜ್ಯದಲ್ಲಿ ಇರಬೇಕೆಂದು ಬಯಸುವುದು ಸರಿಯಲ್ಲ.
ಆದರೆ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಚುನಾಯಿತ ಸರಕಾರಗಳನ್ನು ಉರುಳಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗಳಂಥ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದೆ. ಛತ್ತೀಸ್‌ಗಡ ಮಾತ್ರವಲ್ಲ ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಹಾಗೂ ಕೇರಳದ ಎಡರಂಗ ಸರಕಾರಗಳು ಮೋದಿ ಸರಕಾರದ ವಿರುದ್ಧ ಈ ಬಗ್ಗೆ ಆರೋಪ ಮಾಡುತ್ತಲೇ ಬಂದಿವೆ. ಇದೀಗ ಸಂವಿಧಾನದ 131ನೇ ವಿಧಿಯನ್ನು ಬಳಸಿಕೊಂಡು ಛತ್ತೀಸ್‌ಗಡ ಸರಕಾರವು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ನಡುವೆ ವಿವಾದ ಉಂಟಾದಾಗ ಸಂವಿಧಾನದ 131ನೇ ವಿಧಿಯ ಪ್ರಕಾರ ನೇರವಾಗಿ ನ್ಯಾಯಾಲಯಕ್ಕೆ ಹೋಗಬಹುದಾಗಿದೆ. ಇದನ್ನು ಬಳಸಿಕೊಂಡು ಛತ್ತೀಸ್‌ಗಡ ಸರಕಾರ ನ್ಯಾಯಾಲಯಕ್ಕೆ ಹೋಗಿರುವುದು ಸಹಜ ಪ್ರಕ್ರಿಯೆ ಯಾಗಿದೆ.
ಬಿಜೆಪಿಯೇತರ ರಾಜ್ಯ ಸರಕಾರಗಳ ಬಗ್ಗೆ ತೀವ್ರ ಅಸಹನೆಯನ್ನು ಬಳಸಿಕೊಂಡಿರುವ ಮೋದಿ ನೇತೃತ್ವದ ಕೇಂದ್ರ ಸರಕಾರ ಅಕ್ರಮ ಹಣ ವರ್ಗಾವಣೆ ತಡೆ(ಪಿಎಂಎಲ್‌ಎ) ಕಾಯ್ದೆಯನ್ನು ಬಳಸಿಕೊಂಡು ಜಾರಿ ನಿರ್ದೇಶನಾಲಯದ ಮೂಲಕ ಪ್ರತಿಪಕ್ಷ ಸರಕಾರಗಳಿಗೆ ಕಿರುಕುಳ ನೀಡುತ್ತಾ ಬಂದಿದೆ. ಮೋದಿ ಸರಕಾರದ ಕೈಗೊಂಬೆಯಂತೆ ವರ್ತಿಸುವ ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರಿಗೆ ಮೂರನೇ ಬಾರಿ ಸೇವಾವಧಿ ವಿಸ್ತರಣೆ ಮಾಡಿರುವುದು ಕೂಡ ವ್ಯಾಪಕ ಖಂಡನೆಗೆ ಗುರಿಯಾಗಿತ್ತಲ್ಲದೆ ಈ ಕುರಿತು ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಯಾವ ಕಾರಣದಿಂದಾಗಿ ಸಂಜಯ್ ಕುಮಾರ್ ಮಿಶ್ರಾ ಕೇಂದ್ರ ಸರಕಾರಕ್ಕೆ ಅನಿವಾರ್ಯವಾಗಿದ್ದಾರೆ? ಎಂದು ಸುಪ್ರೀಂ ಕೋರ್ಟ್ ಸರಕಾರವನ್ನು ಪ್ರಶ್ನಿಸಿತ್ತು. ಆಗ ಕೇಂದ್ರ ಸರಕಾರ ನವೆಂಬರ್ ನಂತರ ಮಿಶ್ರಾ ಅಧಿಕಾರಾವಧಿಯನ್ನು ವಿಸ್ತರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿತ್ತು.
ಜಾರಿ ನಿರ್ದೇಶನಾಲಯ ನಡೆಸುವ ತನಿಖೆಗಳು ರಾಜಕೀಯ ಪ್ರೇರಿತ ಎಂಬ ಸಂದೇಹ ಒಮ್ಮೆ ಬಂದರೆ ಸಾಕು ಈ ಸಂಸ್ಥೆ ನ್ಯಾಯ ಸಮ್ಮತವಾಗಿ ನಡೆಸುವ ತನಿಖೆಯನ್ನೂ ಜನರು ನಂಬುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಗಮನಾರ್ಹ ಅಂಶವಾಗಿದೆ. ಒಮ್ಮೆ ತನಿಖಾ ಸಂಸ್ಥೆಗಳ ಮೇಲೆ ಜನತೆ ನಂಬಿಕೆ ಕಳೆದುಕೊಂಡರೆ ಅದು ಕೆಟ್ಟ ಪರಿಣಾಮ ಬೀರುತ್ತದೆ. ನಿಜವಾಗಿ ಅಪರಾಧ ಎಸಗಿದ ದುಷ್ಕರ್ಮಿಗಳು ಜಾರಿ ನಿರ್ದೇಶನಾಲಯ ತಮಗೆ ಕಿರುಕುಳ ನೀಡುತ್ತಿದೆ ಎಂದು ಬಿಂಬಿಸಿ ತಾವು ಮಹಾ ಸಂಪನ್ನರೆಂದು ತೋರಿಸಿಕೊಳ್ಳುವ ಅಪಾಯವೂ ಇದೆ.
ಸಿಬಿಐ, ಎನ್‌ಐಎ ಮತ್ತು ಜಾರಿ ನಿರ್ದೇಶನಾಲಯದಂಥ ತನಿಖಾ ಸಂಸ್ಥೆಗಳು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಕೆಲಸ ಮಾಡಬೇಕೇ ಹೊರತು ಒಂದು ಪಕ್ಷದ ಹಿತಾಸಕ್ತಿಗಳನ್ನು ಕಾಪಾಡಲು ಕಾರ್ಯ ನಿರ್ವಹಿಸಬಾರದು.ಒಮ್ಮೆ ಈ ತನಿಖಾ ಸಂಸ್ಥೆಗಳು ಪಕ್ಷಪಾತದಿಂದ ತನಿಖೆ ನಡೆಸುತ್ತವೆ ಎಂಬ ಭಾವನೆ ಬಂದು ಬಿಟ್ಟರೆ ಕಳೆದುಕೊಂಡ ನಂಬಿಕೆಯನ್ನು ಪುನಃ ವಾಪಸ್ ಪಡೆಯುವುದು ಸುಲಭವಲ್ಲ.
ಪ್ರತಿಪಕ್ಷ ನಾಯಕರನ್ನು ಗುರಿಯಾಗಿರಿಸಿಕೊಂಡು ಸದರಿ ತನಿಖಾ ಸಂಸ್ಥೆಗಳು ನಡೆಸುವ ದಾಳಿಗಳು ಎಷ್ಟು ಪಕ್ಷಪಾತದಿಂದ ಕೂಡಿವೆ ಎಂದರೆ ಸುಪ್ರೀಂ ಕೋರ್ಟ್ ನೇರವಾಗಿ ಮಧ್ಯಪ್ರವೇಶ ಮಾಡಿ ಕಿವಿಯನ್ನು ಹಿಂಡಬೇಕಾಗಿ ಬಂದಿದೆ. ರಾಜಕೀಯ ವಿರೋಧಿಗಳನ್ನು ಮಾತ್ರವಲ್ಲ ಆರೆಸ್ಸೆಸ್‌ನ ಸೈದ್ಧಾಂತಿಕ ವಿರೋಧಿಗಳಾದ ಪ್ರಗತಿಪರ ಚಿಂತಕರನ್ನು ಹತ್ತಿಕ್ಕಲು ಮೋದಿ ಸರಕಾರ ರಾಷ್ಟ್ರೀಯ ತನಿಖಾ ಏಜನ್ಸಿ(ಎನ್‌ಐಎ)ಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ದೂರುಗಳು ಈಗಾಗಲೇ ಸುಪ್ರೀಂ ಕೋರ್ಟ್‌ವರೆಗೆ ಹೋಗಿವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು. ಭಿನ್ನಧ್ವನಿಯನ್ನು ಹತ್ತಿಕ್ಕಲು ತನಿಖಾ ಸಂಸ್ಥೆಗಳ ಮೂಲಕ ಭೀತಿಯ ವಾತಾವರಣ ಸಷ್ಟಿಸಲು ಯತ್ನಿಸುವುದು ನಿರಂಕುಶ ಸರ್ವಾಧಿಕಾರಕ್ಕೆ ದಾರಿ ಮಾಡಿ ಕೊಡುತ್ತದೆ. ಒಮ್ಮೆ ಹಿಟ್ಲರ್ ಮಾದರಿ ಸರ್ವಾಧಿಕಾರ ದೇಶದ ಮೇಲೆ ಹೇರಲ್ಪಟ್ಟರೆ ಬಹುತ್ವ ಭಾರತ ನಾಶವಾಗಿ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಿತವಚನ ಸಕಾಲಿಕವಾಗಿದೆ.