'ಉಚಿತ' ನೀಡುವುದನ್ನು ನಿಲ್ಲಿಸೋಣವೆ?

Update: 2023-05-24 05:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ರಾಜ್ಯ ವಿಧಾನಸಭಾ ಫಲಿತಾಂಶ ಪ್ರಕಟವಾಗುವ ಹಿಂದಿನ ದಿನವೇ ಬಿಜೆಪಿಯ ಹಿರಿಯ ಮುಖಂಡರೊಬ್ಬರು ''ನಮ್ಮಲ್ಲಿ ಬಿ ಪ್ಲಾನ್ ಸಿದ್ಧವಿದೆ'' ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆಯನ್ನು ಗುಡಿಸಿ ಹಾಕುವಂತೆ ಜನಾದೇಶ ಹೊರ ಬಿತ್ತು. ಕಾಂಗ್ರೆಸ್‌ಗೆ ರಾಜ್ಯದ ಜನತೆ ಯಾವ ಮಟ್ಟಿನ ಬೆಂಬಲ ನೀಡಿದ್ದರು ಎಂದರೆ, ಬಿ ಪ್ಲಾನ್‌ನ ಬಗ್ಗೆ ಮತ್ತೊಮ್ಮೆ ಯೋಚಿಸುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿಗೆ ಸಿಲುಕಿ ಬಿಟ್ಟರು. ಇದೇ ಸಂದರ್ಭದಲ್ಲಿ ತಮಿಳುನಾಡಿನ ಬಿಜೆಪಿ ಮುಖಂಡನೆಂದು ಕರೆಸಿಕೊಂಡ ಅಣ್ಣಾಮಲೈ ಎನ್ನುವ ಮಾಜಿ ಪೊಲೀಸ್ ಅಧಿಕಾರಿ ಮಾತ್ರ ''ಇನ್ನೊಂದು ವರ್ಷದಲ್ಲಿ ಸರಕಾರ ಉರುಳುತ್ತದೆ'' ಎಂಬ ಹೇಳಿಕೆಯನ್ನು ನೀಡಿದ್ದಾರೆ.

ರಾಜಕೀಯಕ್ಕೆ ಸೇರಿದ ಬಳಿಕ ಇವರು ಆಡುತ್ತಿರುವ ಮಾತುಗಳಿಗಾಗಿ ಹಾಲಿ ಪೊಲೀಸ್ ಅಧಿಕಾರಿಗಳೆಲ್ಲರೂ ಮುಜುಗರದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಕಲಿತ ಶಿಕ್ಷಣ, ಈ ಹಿಂದೆ ಧರಿಸಿದ್ದ ಖಾಕಿ ಬಟ್ಟೆಯ ಹಿರಿಮೆಯನ್ನು ಅವರು ರಾಜಕೀಯದಲ್ಲಿ ಪ್ರದರ್ಶಿಸುತ್ತಾರೆ ಎಂದು ಭಾವಿಸಿದ್ದರೆ, ಯಾವುದೋ ಮೂರನೇ ದರ್ಜೆಯ ರಾಜಕೀಯ ನಾಯಕನಂತೆ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡುತ್ತಾ ಹಿರಿಯ ಪೊಲೀಸ್ ಅಧಿಕಾರಿಗಳ ಮಾನ ಕಳೆಯುತ್ತಿದ್ದಾರೆ. ಬಿಜೆಪಿಯ ನಾಯಕರೇ ಅವರ ಹೇಳಿಕೆಗಳಿಗೆ ತಲೆತಗ್ಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈಗ ಇರುವ ಸರಕಾರ ಮೈತ್ರಿಯ ಸರಕಾರವಾಗಿದ್ದರೆ ಅಥವಾ ಸಣ್ಣ ಬಹುಮತದೊಂದಿಗೆ ಸರಕಾರ ರಚನೆಯಾಗಿದ್ದರೆ, 'ಸರಕಾರ ಉರುಳುತ್ತದೆ' ಎಂಬ ಹೇಳಿಕೆಗೆ ಅರ್ಥವಿರುತ್ತಿತ್ತು. ಆದರೆ ಭಾರೀ ಬಹುಮತದೊಂದಿಗೆ ರಚನೆಯಾಗಿರುವ ಸರಕಾರ 'ಒಂದು ವರ್ಷದಲ್ಲಿ ಉರುಳುತ್ತದೆ' ಎನ್ನುವುದು, ಪ್ರಜಾಸತ್ತೆಗೆ ಹಾಕುವ ಸವಾಲು ಎನ್ನುವ ಪ್ರಾಥಮಿಕ ಅರಿವೂ ಈ ಮಾಜಿ ಪೊಲೀಸ್ ವರಿಷ್ಠರಿಗೆ ಇಲ್ಲದಿರುವುದು ಖೇದಕರ. ಇದೇ ಸಂದರ್ಭದಲ್ಲಿ, ನೂತನ ಸರಕಾರ ಜಾರಿಗೊಳಿಸಲು ಹೊರಟಿರುವ ಐದು ಗ್ಯಾರಂಟಿಗಳಿಗೆ ಹಣದ ಮೂಲ ಯಾವುದು ಎಂದೂ ಕೇಳಿದ್ದಾರೆ.

'ಮುಖ್ಯಮಂತ್ರಿ ಯಾರಾಗುತ್ತಾರೆ?' ಎನ್ನುವ ಪ್ರಶ್ನೆಯ ಬಳಿಕ ಅತಿ ಹೆಚ್ಚು ಚರ್ಚೆಯಲ್ಲಿ ರುವ ವಿಷಯ 'ನೂತನ ಸರಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಿದೆಯೆ? ಇಲ್ಲವೆ?' ಎನ್ನುವುದು. ಈ ಬಗ್ಗೆ ಕಾಂಗ್ರೆಸ್‌ಗಿಂತ ಬಿಜೆಪಿಯೇ ಹೆಚ್ಚು ಚಿಂತೆಯಲ್ಲಿದ್ದಂತಿದೆ. ಅಣ್ಣಾ ಮಲೈ ಅವರಷ್ಟೇ ಅಲ್ಲ, ಬಿಜೆಪಿಯ ಹಲವು ನಾಯಕರು ಈ ಗ್ಯಾರಂಟಿಗಳ ಅನುಷ್ಠಾನಗಳ ಬಗ್ಗೆ ವ್ಯಂಗ್ಯ, ಟೀಕೆ, ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಸಂಸದ ಪ್ರತಾಪ ಸಿಂಹ ಕೂಡ 'ಹಣವನ್ನು ಎಲ್ಲಿಂದ ಹೊಂದಿಸುತ್ತೀರಿ?' ಎಂಬ ಪ್ರಶ್ನೆಯನ್ನು ಹಾಕಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲರಂತು 'ಯಾರೂ ಕರೆಂಟ್ ಬಿಲ್ ಕಟ್ಟಬೇಡಿ' ಎಂದು ಹೇಳಿಕೆ ನೀಡಿ ಬೇಜವಾಬ್ದಾರಿ ಮೆರೆದಿದ್ದಾರೆ. ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಕೂಡಾ 'ಯಾರೂ ಬಸ್‌ನಲ್ಲಿ ಟಿಕೆಟ್ ಪಡೆಯಬೇಡಿ, ಕರೆಂಟ್ ಬಿಲ್ ಕಟ್ಟಬೇಡಿ' ಎನ್ನುವ ಕರೆ ನೀಡಿದ್ದಾರೆ. ಇಂತಹ ಕರೆಗಳು ನಿಜಕ್ಕೂ ಆತಂಕಕಾರಿಯಾದುದು. ಇದರಲ್ಲಿ ಜನಪರ ಕಾಳಜಿಯಂತೂ ಇಲ್ಲ, ಜೊತೆಗೆ ಇಂತಹ ಕರೆಗಳ ಮೂಲಕ ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ದುರುದ್ದೇಶವನ್ನೂ ಇವರು ಹೊಂದಿದ್ದಾರೆ. ಮೊತ್ತ ಮೊದಲಾಗಿ, ಜನರಿಗೆ ನೀಡುವ 'ಉಚಿತ'ಗಳ ಬಗ್ಗೆಯೇ ಬಿಜೆಪಿಗೆ ಭಿನ್ನಾಭಿಪ್ರಾಯವಿದೆ. ಉಚಿತವಾಗಿ ನೀಡಿದರೆ ಜನರು ಸೋಮಾರಿಗಳಾಗುತ್ತಾರೆ, ರಾಜ್ಯದ ಮೇಲೆ ಹೊರೆ ಬೀಳುತ್ತದೆ, ಜನರು ಮದ್ಯದ ದಾಸರಾಗುತ್ತಾರೆ ಎನ್ನುವ ಹೇಳಿಕೆಗಳನ್ನು ಬಿಜೆಪಿ ನಾಯಕರು ಈ ಹಿಂದೆಯೂ ನೀಡುತ್ತಾ ಬಂದಿದ್ದಾರೆ. ಹೀಗೆ ಹೇಳುತ್ತಲೇ ತಮ್ಮ ಅಧಿಕಾರಾವಧಿಯಲ್ಲಿ ಕೋಟ್ಯಂತರ ಬೆಲೆಬಾಳುವ ಭೂಮಿಯನ್ನು ಆರೆಸ್ಸೆಸ್‌ನ ಅಂಗಸಂಸ್ಥೆಗಳಿಗೆ ಉಚಿತವಾಗಿ ಹಂಚಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್ ಸಾವಿರಾರು ಎಕರೆ ಭೂಮಿಯನ್ನು ಸಬ್ಸಿಡಿ ಬೆಲೆಯಲ್ಲಿ ತನ್ನದಾಗಿಸಿಕೊಂಡಿದೆ. ಆದರೆ ಬಡವರಿಗೆ ಹತ್ತು ಕೆಜಿ ಅಕ್ಕಿ ಉಚಿತವಾಗಿ ಕೊಟ್ಟರೆ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಗದ್ದಲ ಎಬ್ಬಿಸುತ್ತಾರೆ. ಇದೇ ಸಂದರ್ಭದಲ್ಲಿ, ಶೇ. 40 ಕಮಿಷನ್ ಭ್ರಷ್ಟಾಚಾರದಿಂದ ಈ ರಾಜ್ಯದ ಬೊಕ್ಕಸಕ್ಕೆ ಆದ ಹೊರೆಯನ್ನು ಮುಚ್ಚಿಡುತ್ತಾರೆ.

ಮುಖ್ಯವಾಗಿ, ಈ ನಾಡಿನ ಯಾವ ಪ್ರಜೆಗಳಿಗೂ ಸರಕಾರ ಏನನ್ನೂ ಉಚಿತವಾಗಿ ನೀಡುವುದಿಲ್ಲ ಎನ್ನುವ ಅರಿವು ರಾಜಕಾರಣಿಗಳಿಗೆ ಇರಬೇಕು. ಇಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ಸರಕಾರಕ್ಕೆ ತೆರಿಗೆಯನ್ನು ಪಾವತಿಸಿರುತ್ತಾನೆ. ಅದು ನೇರ ತೆರಿಗೆಯಾಗಿರಬಹುದು, ಪರೋಕ್ಷ ತೆರಿಗೆಯಾಗಿರಬಹುದು. ಹಾಗೆ ತೆರಿಗೆಯನ್ನು ಪಾವತಿ ಮಾಡಿದ ದೇಶದ ಎಲ್ಲ ಪ್ರಜೆಗಳು ಹಸಿವಿನಿಂದ ಇರದಂತೆ ನೋಡಿಕೊಳ್ಳುವುದು, ಅವರಿಗೆ ಶಿಕ್ಷಣ ದಕ್ಕುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಯಾರಾದರೊಬ್ಬ ಉದ್ಯೋಗವಿಲ್ಲದೆ ಒಂದು ಹೊತ್ತಿನ ಆಹಾರಕ್ಕೆ ಆಕಾಶ ನೋಡುತ್ತಿದ್ದಾನೆ ಎಂದರೆ, ಕೈಯಲ್ಲಿ ದುಡ್ಡಿಲ್ಲದೆ ಆಸ್ಪತ್ರೆಗೆ ಹೋಗುವುದಕ್ಕೆ ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿದ್ದಾನೆ ಎಂದಾದರೆ ಅದಕ್ಕೆ ಹೊಣೆ ನಮ್ಮನ್ನಾಳುವ ಸರಕಾರ. ತನ್ನ ವೈಫಲ್ಯವನ್ನು ಸರಿಪಡಿಸುವ ಭಾಗವಾಗಿ ಬಡವರಿಗೆ ಉಚಿತಗಳನ್ನು ನೀಡಬೇಕಾಗುತ್ತದೆ. ಸರಕಾರ ನೀಡುವ ನೆರವಿನಿಂದಾಗಿ ಉಳಿತಾಯವಾದ ಹಣದಲ್ಲಿ ತಮ್ಮ ಮಕ್ಕಳ ಶಿಕ್ಷಣ, ಆರೋಗ್ಯಕ್ಕೂ ಒಂದಿಷ್ಟು ವ್ಯಯ ಮಾಡಲು ಕುಟುಂಬಕ್ಕೆ ಸಾಧ್ಯವಾಗುತ್ತದೆ. ಈ ದೇಶದಲ್ಲಿ ಎಲ್ಲ ವರ್ಗಗಳೂ ಸರಕಾರದಿಂದ ಬೇರೆ ಬೇರೆ ರೂಪದಲ್ಲಿ ಉಚಿತಗಳನ್ನು ಪಡೆಯುತ್ತಿವೆ. ಬೃಹತ್ ಕೈಗಾರಿಕೋದ್ಯಮಗಳು, ಕಾರ್ಪೊರೇಟ್ ಸಂಸ್ಥೆಗಳು ಕೋಟ್ಯಂತರ ಬೆಲೆಬಾಳುವ ಭೂಮಿಗಳನ್ನು ಸರಕಾರದಿಂದ ಸಬ್ಸಿಡಿ ರೂಪದಲ್ಲಿ ಪಡೆದುಕೊಳ್ಳುತ್ತವೆ. ನೀರು, ಪರಿಸರ ಎಲ್ಲದರಲ್ಲೂ ಅವುಗಳಿಗೆ ಸಬ್ಸಿಡಿಗಳು ಸಿಗುತ್ತವೆ. ಅವರು ಮಾಡಿದ ಕೋಟ್ಯಂತರ ರೂ. ಸಾಲಗಳು 'ರೈಟ್‌ಆಫ್' ಹೆಸರಿನಲ್ಲಿ ಮನ್ನಾ ಆಗಿ ಬಿಡುತ್ತವೆ. ದೇಶದ ಬ್ಯಾಂಕುಗಳು ಮುಳುಗುವ ಸ್ಥಿತಿಯಲ್ಲಿರುವುದು ಬಡವರಿಗೆ ನೀಡಿದ ಉಚಿತಗಳಿಂದಲ್ಲ, ಶ್ರೀಮಂತರಿಗೆ ನೀಡಿದ ಉಚಿತಗಳಿಂದ.

ವಿಪರ್ಯಾಸವೆಂದರೆ, ಉಚಿತಗಳ ಬಗ್ಗೆ ಅತಿ ಹೆಚ್ಚು ಟೀಕೆ, ವ್ಯಂಗ್ಯಗಳು ಕೇಳಿ ಬರುತ್ತಿರುವುದು ಮಧ್ಯಮವರ್ಗದಿಂದ. ಇವರು ಕೂಡ ತಾವು ಸರಕಾರದಿಂದ ಹತ್ತು ಹಲವು ಉಚಿತಗಳನ್ನು ಪಡೆಯುತ್ತಿರುವುದನ್ನು ಮರೆಯುತ್ತಾರೆ. ಈ ದೇಶದ ಕೋಟ್ಯಂತರ ಸರಕಾರಿ ನೌಕರರು ನಿವೃತ್ತಿಯ ಬಳಿಕ ಪಿಂಚಣಿಯನ್ನು ಪಡೆಯುತ್ತಾರೆ. ಯಾವುದೇ ಕೆಲಸ ಮಾಡದಿದ್ದರೂ ಸರಕಾರ ನೀಡುವ ಪಿಂಚಣಿಯನ್ನು ಜೇಬಿಗಿಳಿಸುತ್ತಾ ಬಿಪಿಎಲ್ ಕಾರ್ಡ್‌ನ ಬಡವರಿಗೆ ನೀಡುವ ಸಬ್ಸಿಡಿಯ 10 ಕೆಜಿ ಅಕ್ಕಿಯನ್ನು ಟೀಕಿಸುತ್ತಾರೆ. ಒಬ್ಬ ದಿನಗೂಲಿ ನೌಕರನಿಗೆ ವಾರದ ರಜೆಯಿರುವುದಿಲ್ಲ. ಸಿಎಲ್‌ಗಳಿರುವುದಿಲ್ಲ. ವಾರ್ಷಿಕ ರಜೆಗಳಿರುವುದಿಲ್ಲ. ಪಿಂಚಣಿಯಂತೂ ಇಲ್ಲವೇ ಇಲ್ಲ. ಆದರೆ ಮಾಸಿಕ 50,000 ರೂ.ಗೂ ಅಧಿಕ ವೇತನ ಪಡೆಯುವಾತ ಮೇಲಿನ ಎಲ್ಲ ಉಚಿತಗಳನ್ನು ಪಡೆಯುತ್ತಿರುತ್ತಾನೆ.

ನಿವೃತ್ತಿಯ ಬಳಿಕ ಯಾವ ಕೆಲಸವನ್ನೂ ಮಾಡದೆ ಉಚಿತವಾಗಿ ಸರ್ವ ಸವಲತ್ತುಗಳನ್ನು ತನ್ನದಾಗಿಸಿಕೊಳ್ಳುತ್ತಾ ದಿನಗೂಲಿ ಕಾರ್ಮಿಕರಿಗೆ ಸರಕಾರ ನೀಡುವ ಉಚಿತಗಳಿಗಾಗಿ ಅಸೂಯೆ ಪಡುತ್ತಾನೆ. ಬಡವರ ಜೀವನ ಮಟ್ಟ ಸುಧಾರಿಸುವುದು, ಅವರು ಆರೋಗ್ಯ, ಶಿಕ್ಷಣವನ್ನು ತನ್ನದಾಗಿಸಿಕೊಳ್ಳುವುದು ನಾಡಿನ ಅಭಿವೃದ್ಧಿಯ ಭಾಗ ಎನ್ನುವ ಅರಿವು, ವಿವೇಕ ಈತನಿಗಿರುವುದಿಲ್ಲ. ಸರಕಾರ ಗ್ಯಾರಂಟಿಗಳನ್ನು ಒಂದು ಪ್ರಯೋಗದ ರೂಪದಲ್ಲಿ ಅನುಷ್ಠಾನಕ್ಕಿಳಿಸಲು ಹೊರಟಾಗ, ಅದಕ್ಕೆ ಕೈ ಜೋಡಿಸುವುದು ಜನರಿಂದ ಆಯ್ಕೆಯಾದ ಎಲ್ಲ ಪಕ್ಷಗಳಿಗೆ ಸೇರಿದ ಜನಪ್ರತಿನಿಧಿಗಳ ಹೊಣೆಗಾರಿಕೆಯಾಗಿದೆ. ರಾಜ್ಯದಿಂದ ಲಕ್ಷಾಂತರ ಕೋಟಿ ರೂ. ತೆರಿಗೆ ಕೇಂದ್ರದ ಬೊಕ್ಕಸ ಸೇರುತ್ತಿದೆ. ಆದರೆ ಬರಬೇಕಾದ ಅನುದಾನ, ಜಿಎಸ್‌ಟಿ ಪರಿಹಾರ ನಿಧಿಗಳು ಬರುತ್ತಿಲ್ಲ. ಬಿಜೆಪಿ ಸಂಸದರು ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ''ನಾವು ಕೇಂದ್ರದಿಂದ ಪರಿಹಾರವನ್ನು, ಅನುದಾನಗಳನ್ನು ತರಿಸಿಕೊಡುತ್ತಿದ್ದೇವೆ. ನೀವೇಕೆ ಅದನ್ನು ಸದ್ಬಳಕೆ ಮಾಡುತ್ತಿಲ್ಲ?'' ಎನ್ನುವ ಪ್ರಶ್ನೆಯನ್ನು ವಿರೋಧ ಪಕ್ಷಗಳ ನಾಯಕರು ರಾಜ್ಯ ಸರಕಾರವನ್ನು ಕೇಳಬೇಕು. 'ಹಣ ಹೇಗೆ ಹೊಂದಿಸುತ್ತೀರಿ?' ಎನ್ನುವ ಪ್ರಶ್ನೆಯನ್ನು ಕೇಳುತ್ತಿರುವವರು 'ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಹಣ ಬರುವುದಕ್ಕೆ ಬಾಕಿಯಿದೆ? ಯಾಕೆ ಅಷ್ಟೊಂದು ಬಾಕಿ ಉಳಿಸಿಕೊಂಡಿದೆ?' ಎನ್ನುವ ಪ್ರಶ್ನೆಗೆ ಮೊದಲು ಉತ್ತರಿಸಬೇಕು.

Similar News