ನೂತನ ಸಂಸತ್ ಭವನ ಉದ್ಘಾಟನೆ: ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಂಕಿ ಹಚ್ಚಹೊರಟ ಸರ್ವಾಧಿಕಾರಿ ಮನಸ್ಥಿತಿ

Update: 2023-05-26 06:31 GMT

ರಾಷ್ಟ್ರಪತಿ ಸ್ಥಾನಕ್ಕೆ ಮುರ್ಮು ಅವರು ಬಂದಾಗ, ಆ ಸ್ಥಾನಕ್ಕೇರಿದ ಮೊದಲ ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ನಿಜಕ್ಕೂ ಸಂಭ್ರಮದ ಸಂಗತಿಯಾಗಿತ್ತು. ಆದರೆ ಆ ಸಂಭ್ರಮವನ್ನೇ ಅಡಗಿಸುವಂಥ ಧೋರಣೆಯನ್ನು ಈ ಸರಕಾರ ಈಗ ತೋರಿಸಿದೆ. ರಾಷ್ಟ್ರಪತಿ ಹುದ್ದೆಯಲ್ಲಿರುವ ಮೊದಲ ದಲಿತ ಮಹಿಳೆಯಾಗಿರುವ ದ್ರೌಪದಿ ಮುರ್ಮು ಅವರೇ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದ್ದರೆ ಅದು ಅತ್ಯಂತ ಮಹತ್ವಪೂರ್ಣ ಆಗುತ್ತಿತ್ತು.

ಆದರೆ ತಮ್ಮ ಹೆಸರಿನ ಫಲಕ ರಾರಾಜಿಸಬೇಕೆಂದು ಹಾತೊರೆಯುತ್ತಿರುವ ಪ್ರಧಾನಿ ಮಾಡಹೊರಟಿರುವುದು ಮಾತ್ರ ಹೊಸ ಭವನದಲ್ಲಿ ದೀಪ ಹಚ್ಚುವ ಕೆಲಸವಲ್ಲ; ಬದಲಿಗೆ ಪ್ರಜಾಪ್ರಭುತ್ವದ ಮೌಲ್ಯಗಳಿಗೇ ಉರಿ ಹಚ್ಚುವ ಕೆಲಸ.

ದೇಶದ ನೂತನ ಸಂಸತ್ ಭವನ ಉದ್ಘಾಟನೆ ಇಡೀ ದೇಶದ ಪಾಲಿಗೆ ಒಂದು ದೊಡ್ಡ ಸಂಭ್ರಮವಾಗಬೇಕಿತ್ತು. ದೇಶದ ಜನರ ತೆರಿಗೆ ದುಡ್ಡಿನಲ್ಲಿ ಕಟ್ಟಿರುವ, ಪ್ರಜಾಪ್ರಭುತ್ವದ ಆತ್ಮದಂತಿರುವ ಹೊಸ ಸಂಸತ್ ಭವನದ ಲೋಕಾರ್ಪಣೆ ಎಲ್ಲ ರಾಜಕೀಯಗಳಾಚೆಗಿನ ವಿದ್ಯಮಾನವಾಗಬೇಕಿತ್ತು. ಭಾರತ ಗಣರಾಜ್ಯದ ಮುಖ್ಯಸ್ಥೆ, ಸಂಸತ್ತಿನ ಮುಖ್ಯಸ್ಥೆ, ದೇಶದ ಸೇನಾ ಪಡೆಗಳ ಮುಖ್ಯಸ್ಥೆ, ಈ ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿ ಅವರ ನೇತೃತ್ವದಲ್ಲಿ, ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಸಚಿವರು, ಸಂಸದರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲ ಪಕ್ಷಗಳ ನಾಯಕರ ಉಪಸ್ಥಿತಿಯಲ್ಲಿ ಅದು ನಡೆಯಬೇಕಿತ್ತು.

ಆದರೆ ಈಗ ಹಾಗಾಗುತ್ತಿಲ್ಲ. ಏಕೆಂದರೆ ಈ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಪಕ್ಷ ಹಾಗೂ ಅದರ ನಾಯಕರಿಗೆ ಯಾಕೋ ಅದು ಬೇಡವಾಗಿದೆ. ಎಲ್ಲರೂ ಒಂದಾಗಿರುವುದೆಂದರೆ ಅವರಿಗೆ ಮೊದಲಿಂದಲೂ ಅಷ್ಟಕ್ಕಷ್ಟೇ. ಅವರಿಗೆ ಎಲ್ಲವೂ ಅವರ ಮೇಲೆಯೇ ಕೇಂದ್ರೀಕೃತವಾಗಿರಬೇಕು. ಫೋಟೊ, ವೀಡಿಯೊದಲ್ಲಿಯೂ ಅವರೊಬ್ಬರೇ ಕಾಣಿಸಬೇಕು. ಅದೇ ನಡೆ ಈಗ ತಾರಕ ಸ್ಥಿತಿಗೆ ಬಂದು ತಲುಪಿದೆ.

ದೇಶದ ಹೊಸ ಸಂಸತ್ ಭವನದ ಉದ್ಘಾಟನೆ ಈ ದೇಶದ ಮುಖ್ಯಸ್ಥರಾದ ರಾಷ್ಟ್ರಪತಿಗಳ ಕೈಯಿಂದ ಆಗಬೇಕಿತ್ತು. ಆದರೆ ಅವರು ಸಂಸತ್ ಭವನ ಉದ್ಘಾಟಿಸುವುದು ಹಾಗಿರಲಿ, ಆ ಕಾರ್ಯಕ್ರಮಕ್ಕೆ ಅವರಿಗೆ ಆಹ್ವಾನವನ್ನೂ ನರೇಂದ್ರ ಮೋದಿ ಸರಕಾರ ನೀಡಿಲ್ಲ.

ರಾಷ್ಟ್ರಪತಿಗಳಿಲ್ಲದೆ ಒಕ್ಕೂಟ ವ್ಯವಸ್ಥೆಯಿಲ್ಲ ಎಂಬುದನ್ನೇ ಪ್ರಧಾನಿ ಮತ್ತು ಕೇಂದ್ರ ಸರಕಾರ ಮರೆತಿರುವುದಕ್ಕೆ ಇದು ನಿದರ್ಶನ ಅಥವಾ ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡಹೊರಟಿರುವ ನಡೆ. ಸಂಸತ್ ಭವನದ ಉದ್ಘಾಟನೆಗೆ ಸಂವಿಧಾನದ ಆತ್ಮದಂತಿರುವ ರಾಷ್ಟ್ರಪತಿಗಳನ್ನೇ ಆಹ್ವಾನಿಸದೇ ಇರುವುದು ಪ್ರಜಾಪ್ರಭುತ್ವಕ್ಕೇ ಮಾಡುತ್ತಿರುವ ಅವಮಾನ.

ಎಲ್ಲವೂ ತನ್ನಿಂದ ಆಯಿತು ಎಂಬುದನ್ನು ತೋರಿಸಿಕೊಳ್ಳುವ ಅತ್ಯಂತ ಬಾಲಿಶತನದ ಭ್ರಮೆಯಲ್ಲಿ ಸಂವಿಧಾನವನ್ನೇ ಉಲ್ಲಂಘಿಸುವ ಪ್ರಧಾನಿಯ ಈ ನಡೆ, ದೇಶದ ಪಾಲಿನ ಮಹತ್ವಪೂರ್ಣ ಸಂದರ್ಭವೊಂದು ನಾಚಿಕೆಗೇಡಿನ ಸನ್ನಿವೇಶವಾಗಲು ಕಾರಣವಾಗುತ್ತಿದೆ.

ದೇಶವನ್ನಾಳುತ್ತಿರುವ ಸರಕಾರ, ರಾಷ್ಟ್ರಪತಿಯವರನ್ನೇ ಬದಿಗೆ ಸರಿಸಿರುವಾಗ, ಸಾಂವಿಧಾನಿಕ ಅರಾಜಕತೆಯನ್ನು ಸೃಷ್ಟಿಸುವ ವರ್ತನೆ ತೋರಿಸುತ್ತಿರುವಾಗ ಅದರ ವಿರುದ್ಧ ವಿಪಕ್ಷಗಳು ಒಗ್ಗಟ್ಟಿನಿಂದ ಧ್ವನಿಯೆತ್ತಿರುವುದು ಗಮನಾರ್ಹ.

ಇದು ಅಸಾಂವಿಧಾನಿಕ ನಡೆ, ಪ್ರಜಾಪ್ರಭುತ್ವ ವಿರೋಧಿ ಹೆಜ್ಜೆ ಎಂದು ಕಾಂಗ್ರೆಸ್ ಸಹಿತ ಇಪ್ಪತ್ತು ವಿಪಕ್ಷಗಳು ಈಗ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನ್ನೇ ಬಹಿಷ್ಕರಿಸುವ ತೀರ್ಮಾನ ಕೈಗೊಂಡಿವೆ.

ಮೇ 28ರಂದು ಪ್ರಧಾನಿ ಮೋದಿ ನೂತನ ಸಂಸತ್ ಭವನ ಉದ್ಘಾಟನೆಗೆ ಮುಂದಾಗಿದ್ದು, ರಾಷ್ಟ್ರಪತಿಗಳಿಂದ ಉದ್ಘಾಟನೆ ಮಾಡಿಸದೆ ಅವರನ್ನು ಅವಮಾನ ಮಾಡಲಾಗುತ್ತಿದೆ ಎಂದು ತಕರಾರೆತ್ತಿರುವ 20 ಪ್ರತಿಪಕ್ಷಗಳು ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ಕೇಂದ್ರ ಸರಕಾರದ ನಡೆ ಖಂಡಿಸಲು ಜತೆಗೂಡಿ ತೀರ್ಮಾನಿಸಿವೆ.

ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎಎಪಿ, ಶಿವಸೇನಾ (ಯುಬಿಟಿ), ಸಮಾಜವಾದಿ ಪಕ್ಷ (ಎಸ್ಪಿ), ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕೇರಳ ಕಾಂಗ್ರೆಸ್ (ಮಣಿ), ವಿಡುತ್ತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ರಾಷ್ಟ್ರೀಯ ಲೋಕ ದಳ (ಆರ್ಜೆಡಿ), ಜೆಡಿಯು, ಎನ್ಸಿಪಿ, ಸಿಪಿಎಂ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ನ್ಯಾಷನಲ್ ಕಾನ್ಫರೆನ್ಸ್, ರೆವೊಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಆರ್ಎಸ್ಪಿ) ಮತ್ತು ಎಂಡಿಎಂಕೆ ಕಾರ್ಯಕ್ರಮ ಬಹಿಷ್ಕರಿಸಿದ ಪ್ರತಿಪಕ್ಷಗಳಾಗಿವೆ.
ಬಹಿಷ್ಕಾರ ಸಂಬಂಧ ಪ್ರತಿಪಕ್ಷಗಳು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆ ಕೆಲವು ಮಹತ್ವದ ವಿಚಾರಗಳನ್ನು ಪ್ರತಿಪಾದಿಸಿದೆ.

‘‘ಹೊಸ ಸಂಸತ್ ಭವನದ ಉದ್ಘಾಟನೆ ಒಂದು ಮಹತ್ವದ ಸಂದರ್ಭ. ಆದರೆ ಸರಕಾರ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತಿದೆ. ನಾವು ಭಿನ್ನಾಭಿಪ್ರಾಯ ಬದಿಗಿಟ್ಟು ಈ ಸಂದರ್ಭವನ್ನು ಗುರುತಿಸಲು ಮುಕ್ತರಾಗಿದ್ದೇವೆ. ಆದರೂ, ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣವಾಗಿ ಹೊರಗಿಟ್ಟು ಹೊಸ ಸಂಸತ್ ಕಟ್ಟಡವನ್ನು ಸ್ವತಃ ಉದ್ಘಾಟಿಸುವ ಪ್ರಧಾನಿ ಮೋದಿ ನಿರ್ಧಾರ ಘೋರ ಅವಮಾನ ಮಾತ್ರವಲ್ಲ, ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ. ಇದು ತಕ್ಕ ಪ್ರತಿಕ್ರಿಯೆಯನ್ನು ಅಪೇಕ್ಷಿಸುತ್ತದೆ.’’

‘‘ರಾಷ್ಟ್ರಪತಿ ಮತ್ತು ರಾಜ್ಯಗಳ ಪ್ರತಿನಿಧಿಗಳ ಸಭೆಯಾದ ಮೇಲ್ಮನೆ, ಜನಪ್ರತಿನಿಧಿಗಳಿರುವ ಕೆಳಮನೆ ಎಂಬ ಎರಡು ಸಭೆಗಳನ್ನು ಹೊಂದಿರುವ ಕೇಂದ್ರ ಸರಕಾರಕ್ಕೆ ಒಂದು ಸಂಸತ್ತು ಇರಬೇಕು ಎಂದು ಭಾರತ ಸಂವಿಧಾನದ 79ನೇ ವಿಧಿ ಹೇಳುತ್ತದೆ. ರಾಷ್ಟ್ರಪತಿಗಳು ಭಾರತದಲ್ಲಿ ರಾಷ್ಟ್ರದ ಮುಖ್ಯಸ್ಥರು ಮಾತ್ರವಲ್ಲ, ಸಂಸತ್ತಿನ ಅವಿಭಾಜ್ಯ ಅಂಗವೂ ಹೌದು. ಅವರು ಸಂಸತ್ ಕಲಾಪ ನಡೆಸಲು ಆಹ್ವಾನಿಸಿ ಭಾಷಣ ಮಾಡುತ್ತಾರೆ. ಸಂಸತ್ತಿನ ಕಾಯ್ದೆ ಜಾರಿಗೆ ಬರಲು ಅವರು ಒಪ್ಪಿಗೆ ನೀಡಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ರಾಷ್ಟ್ರಪತಿ ಇಲ್ಲದೆ ಸಂಸತ್ತು ಕಾರ್ಯನಿರ್ವಹಿಸುವುದು ಸಾಧ್ಯವೇ ಇಲ್ಲ. ಇನ್ನು, ಅವರಿಲ್ಲದೆ ನೂತನ ಸಂಸತ್ ಭವನ ಉದ್ಘಾಟಿಸಲು ಪ್ರಧಾನಿ ನಿರ್ಧರಿಸಿದ್ದಾರೆ. ಇಂತಹ ನಡೆಯಿಂದ ರಾಷ್ಟ್ರಪತಿಗಳ ಉನ್ನತ ಹುದ್ದೆಯನ್ನು ಪ್ರಧಾನಿ ಅವಮಾನಿಸಿದ್ದಾರೆ.’’

‘‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪ್ರಧಾನಿ ಸ್ವತಃ ಸಂಸತ್ಭವನ ಉದ್ಘಾಟಿಸಲು ನಿರ್ಧರಿಸಿರುವುದರಿಂದ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳನ್ನು ಅವಮಾನಿಸಿರುವುದರ ಜೊತೆಗೆ ಸಂವಿಧಾನದ ಮೂಲ ಆಶಯವನ್ನೇ ಉಲ್ಲಂಘಿಸಲಾಗಿದೆ.’’

‘‘ಈ ಪ್ರಧಾನಿ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳದೇ ಇರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ದೇಶದ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗ ವಿಪಕ್ಷದ ಸಂಸದರನ್ನು ಅನರ್ಹಗೊಳಿಸಲಾಗಿದೆ, ಅಮಾನತು ಮಾಡಲಾಗಿದೆ ಮತ್ತು ಸದನದಲ್ಲಿ ಅವರ ಧ್ವನಿಯನ್ನು ಅಡಗಿಸಲಾಗಿದೆ. ರದ್ದಾಗಿರುವ ಮೂರು ಕೃಷಿ ಕಾನೂನುಗಳು ಸೇರಿದಂತೆ ಅನೇಕ ವಿವಾದಾತ್ಮಕ ಕಾಯ್ದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ. ಸಂಸದೀಯ ಸಮಿತಿಗಳನ್ನು ಕೂಡ ಹೆಚ್ಚುಕಡಿಮೆ ನಿಷ್ಕ್ರಿಯಗೊಳಿಸಲಾಗಿದೆ.’’

‘‘ಶತಮಾನದಲ್ಲಿಯೇ ಕಂಡು ಕೇಳರಿಯದ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಹೊಸ ಸಂಸತ್ ಕಟ್ಟಡವನ್ನು ದೇಶದ ಜನರು ಅಥವಾ ಸಂಸದರೊಂದಿಗೆ ಯಾವುದೇ ಸಮಾಲೋಚನೆಯಿಲ್ಲದೆ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಯಾರಿಗಾಗಿ ಇದನ್ನು ನಿರ್ಮಿಸಲಾಗಿದೆ?’’

‘‘ಸಂಸತ್ತಿನಿಂದ ಪ್ರಜಾಪ್ರಭುತ್ವದ ಆತ್ಮವನ್ನೇ ಹೊರಹಾಕಿದಾಗ ನಾವು ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯವನ್ನು ಕಾಣಲು ಸಾಧ್ಯವಿಲ್ಲ. ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವ ನಮ್ಮ ಸಾಮೂಹಿಕ ನಿರ್ಧಾರವನ್ನು ಘೋಷಿಸುತ್ತೇವೆ. ಈ ನಿರಂಕುಶ ಪ್ರಧಾನಿ ಮತ್ತು ಅವರ ಸರಕಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಸುತ್ತೇವೆ’’ ಎಂದು ವಿಪಕ್ಷಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತ್ಯೇಕವಾಗಿಯೂ ಪ್ರಧಾನಿಯ ಈ ನಡೆಗೆ ಕಿಡಿಕಾರಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ಘಾಟನೆಗೆ ಕರೆತರದಿರುವುದು ಅಥವಾ ಅವರಿಗೆ ಆಹ್ವಾನ ನೀಡದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡುವ ಅವಮಾನ ಎಂದಿರುವ ರಾಹುಲ್, ‘‘ಸಂಸತ್ ಭವನವನ್ನು ಸಾಂವಿಧಾನಿಕ ಮೌಲ್ಯಗಳಿಂದ ನಿರ್ಮಿಸಬೇಕೇ ಹೊರತು ಅಹಂಕಾರದ ಇಟ್ಟಿಗೆಗಳಿಂದಲ್ಲ’’ ಎಂದಿದ್ದಾರೆ.

‘‘ಹಳೆಯ ಸಂಸತ್ ಭವನಕ್ಕೂ ಆರೆಸ್ಸೆಸ್ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿರಲಿಲ್ಲ. ಹಾಗಾಗಿ ಈಗ ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ ಎಂದು ಫಲಕ ಹಾಕುವುದಕ್ಕೋಸ್ಕರ ಹೊಸ ಭವನ ನಿರ್ಮಾಣ ಮಾಡಲಾಗಿದೆ’’ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಸಂಜಯ್ ರಾವುತ್ ಹೇಳಿದ್ದಾರೆ.

ತನ್ನ ಹೆಸರು ಮಾತ್ರ ಇರಬೇಕು ಎಂಬುದು ಪ್ರಧಾನಿಗೆ ಮುಖ್ಯವಾಗಿದೆಯೇ ಹೊರತು ಈ ದೇಶದ ಚರಿತ್ರೆಯಾಗಲೀ, ಸಂವಿಧಾನವಾಗಲೀ ಅಲ್ಲ. ಇಂಥದೊಂದು ನಡೆ ಯಾವ ಬಗೆಯ ಮುನ್ನುಡಿಯನ್ನು ಹಾಕಬಲ್ಲುದು ಎಂಬುದನ್ನು ಊಹಿಸಿದರೇ ಆತಂಕವಾಗುತ್ತದೆ.

ಈಗಾಗಲೇ ಕಳೆದ ಒಂಭತ್ತು ವರ್ಷಗಳಿಂದ ದೇಶದಲ್ಲಿ ಎಲ್ಲ ಸಾಂವಿಧಾನಿಕ ಮೌಲ್ಯಗಳ ಮೇಲೆಯೂ ನಿರಂತರವಾಗಿ ದಾಳಿ ನಡೆಸಿಕೊಂಡೇ ಬರಲಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ತಮಗೆ ಬೇಕಾದಂತೆ ಆಡಿಸುತ್ತ ಬರಲಾಗಿದೆ. ಈ ದೇಶದ ಹೆಮ್ಮೆಯ ಸಂಗತಿಗಳೂ, ಶಕ್ತಿಗಳೂ ಆಗಿದ್ದ ಅವು ಇಂದು ಬರೀ ಇವರ ಸೂತ್ರಕ್ಕೆ ಕಟ್ಟುಬಿದ್ದ ಯಾಂತ್ರಿಕ ಭಾಗಗಳಾಗಿವೆ ಅಷ್ಟೆ. ಸಂಸತ್ತು ಕೂಡ ಈಗ ಜನಪರ ಚರ್ಚೆಗಳು ತೀರಾ ಇಲ್ಲವೇ ಎನ್ನುವಷ್ಟು ಕಡಿಮೆಯಾಗಿ ಬಹುಮತದ ಬಲದಲ್ಲಿ ಏಕಾಏಕಿ ಜನವಿರೋಧಿ ಕಾಯ್ದೆಗಳನ್ನು ದಿಢೀರನೇ ಜಾರಿ ಮಾಡಿಸಿಕೊಳ್ಳುವ ಸ್ಥಿತಿಗೆ ಸಾಕ್ಷಿಯಾಗುತ್ತಿದೆ.

ಆದರೆ ಈಗ ರಾಷ್ಟ್ರಪತಿಗಳನ್ನೇ ಸಂಪೂರ್ಣ ಮೂಲೆಗುಂಪು ಮಾಡಿರುವುದು ಸಾಂವಿಧಾನಿಕ ವ್ಯವಸ್ಥೆಯ ಮೇಲಿನ ಅತಿ ಘೋರ ಆಕ್ರಮಣದ ಹಾಗಿದೆ. ರಾಷ್ಟ್ರಪತಿಗಳನ್ನು ಕಡೆಗಣಿಸಲಾಗುತ್ತಿರುವ ಈ ನಡೆ ಅತ್ಯಂತ ಕೆಟ್ಟ ರಾಜಕೀಯದ ಭಾಗವಾಗಿಯೂ ಕಾಣಿಸುತ್ತಿದೆ. ರಾಷ್ಟ್ರಪತಿ ಸ್ಥಾನಕ್ಕೆ ಮುರ್ಮು ಅವರು ಬಂದಾಗ, ಆ ಸ್ಥಾನಕ್ಕೇರಿದ ಮೊದಲ ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ನಿಜಕ್ಕೂ ಸಂಭ್ರಮದ ಸಂಗತಿಯಾಗಿತ್ತು. ಆದರೆ ಆ ಸಂಭ್ರಮವನ್ನೇ ಅಡಗಿಸುವಂಥ ಧೋರಣೆಯನ್ನು ಈ ಸರಕಾರ ಈಗ ತೋರಿಸಿದೆ. ರಾಷ್ಟ್ರಪತಿ ಹುದ್ದೆಯಲ್ಲಿರುವ ಮೊದಲ ದಲಿತ ಮಹಿಳೆಯಾಗಿರುವ ದ್ರೌಪದಿ ಮುರ್ಮು ಅವರೇ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದ್ದರೆ ಅದು ಅತ್ಯಂತ ಮಹತ್ವಪೂರ್ಣ ಆಗುತ್ತಿತ್ತು.
ಆದರೆ ತಮ್ಮ ಹೆಸರಿನ ಫಲಕ ರಾರಾಜಿಸಬೇಕೆಂದು ಹಾತೊರೆಯುತ್ತಿರುವ ಪ್ರಧಾನಿ ಮಾಡಹೊರಟಿರುವುದು ಮಾತ್ರ ಹೊಸ ಭವನದಲ್ಲಿ ದೀಪ ಹಚ್ಚುವ ಕೆಲಸವಲ್ಲ; ಬದಲಿಗೆ ಪ್ರಜಾಪ್ರಭುತ್ವದ ಮೌಲ್ಯಗಳಿಗೇ ಉರಿ ಹಚ್ಚುವ ಕೆಲಸ.

ಸ್ತಬ್ಧವಾಗಲಿದೆಯೆ ಐತಿಹಾಸಿಕ ಕಟ್ಟಡ?

ಸ್ವತಂತ್ರ ಭಾರತದ ಮೊದಲ ಸಂಸತ್ ಕಟ್ಟಡ ಭಾರತದ ಸಂವಿಧಾನದ ಅಂಗೀಕಾರಕ್ಕೆ ಸಾಕ್ಷಿಯಾಯಿತು.
ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟೆನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ಈ ಸಂಸತ್ ಭವನದ ವಿನ್ಯಾಸ ರೂಪಿಸಿದ್ದಲ್ಲದೆ ಭವನ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಕಟ್ಟಡ ನಿರ್ಮಾಣಕ್ಕೆ ತೆಗೆದುಕೊಂಡ ಸಮಯ ಆರು ವರ್ಷಗಳು. ಆ ಕಾಲಕ್ಕೆ ಇದರ ನಿರ್ಮಾಣಕ್ಕೆ ಆದ ವೆಚ್ಚ 83 ಲಕ್ಷ ರೂ. 1921ರಲ್ಲಿ ಶುರುವಾದ ನಿರ್ಮಾಣ ಕಾರ್ಯ 1927ರಲ್ಲಿ ಪೂರ್ಣಗೊಂಡಿತು. 1956ರಲ್ಲಿ ಈ ಕಟ್ಟಡಕ್ಕೆ ಮತ್ತೆ ಎರಡು ಮಹಡಿಗಳನ್ನು ಸೇರಿಸಲಾಯಿತು. 2006ರಲ್ಲಿ ಭಾರತದ 2,500 ವರ್ಷಗಳ ಶ್ರೀಮಂತ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಪಾರ್ಲಿಮೆಂಟ್ ಮ್ಯೂಸಿಯಂ ನಿರ್ಮಿಸಲಾಯಿತು.

ಸಂಸತ್ ಕಟ್ಟಡ ಸಂಕೀರ್ಣ 6 ಎಕರೆ ಜಾಗದಲ್ಲಿ 560 ಅಡಿ ವ್ಯಾಸವುಳ್ಳ ವೃತ್ತಾಕಾರದಲ್ಲಿದೆ. ಭಾರತೀಯ ಪ್ರಾಚೀನ ಸಂಪ್ರದಾಯವನ್ನು ಪ್ರತಿಬಿಂಬಿಸುವ ವಾಸ್ತುಶಿಲ್ಪವನ್ನು ಇದು ಹೊಂದಿದೆ. ಕಟ್ಟಡವನ್ನು ದೇಶೀಯವಾಗಿ ದೊರೆಯುವ ವಸ್ತುಗಳಿಂದ ಹಾಗೂ ಇಲ್ಲಿನ ಕಾರ್ಮಿಕರನ್ನು ಬಳಸಿಕೊಂಡೇ ನಿರ್ಮಿಸಲಾಯಿತೆಂಬುದು ವಿಶೇಷ. ಪ್ರಾಚೀನ ಕಾಲದ ಸ್ಮಾರಕಗಳು ಮತ್ತು ಕಟ್ಟಡಗಳಲ್ಲಿರುವ ಕೆತ್ತನೆ ಕೆಲಸವನ್ನು ನೆನಪಿಸುವಂಥ ವಾಸ್ತುಶಿಲ್ಪವನ್ನು ಇಲ್ಲೂ ಕಾಣಬಹುದು.

ಈ ಕಟ್ಟಡದ ಪ್ರಮುಖ ಆಕರ್ಷಣೆ, ಸೆಂಟ್ರಲ್ ಹಾಲ್. ಲೋಕಸಭೆ ಸ್ಪೀಕರ್, ರಾಜ್ಯಸಭಾ ಅಧ್ಯಕ್ಷರ ಕಚೇರಿಗಳು ಹಾಗೂ ಲೈಬ್ರರಿ ಹಾಲ್ (ಈ ಹಿಂದೆ ಪ್ರಿನ್ಸಸ್ ಚೇಂಬರ್ ಎನ್ನಲಾಗುತ್ತಿತ್ತು) ಕೂಡ ಇಲ್ಲಿವೆ. ಈ ಮೂರು ಚೇಂಬರ್ಗಳ ಸುತ್ತ ನಾಲ್ಕು ಅಂತಸ್ತಿನ ವರ್ತುಲಾಕಾರದ ಕಟ್ಟಡದಲ್ಲಿ ಸಚಿವರು, ಅಧ್ಯಕ್ಷರು, ಸಂಸದೀಯ ಸಮಿತಿಗಳ ಮುಖ್ಯಸ್ಥರು, ಪಕ್ಷದ ಕಚೇರಿ, ಲೋಕಸಭೆ ಮತ್ತು ರಾಜ್ಯಸಭೆಯ ಪ್ರಮುಖ ಅಧಿಕಾರಿಗಳು ಹಾಗೂ ಸಂಸದೀಯ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ಕಚೇರಿಗಳಿವೆ.

ಸೆಂಟ್ರಲ್ ಹಾಲ್ ವರ್ತುಲಾಕಾರದಲ್ಲಿದೆ. ಇದರ ಗುಮ್ಮಟ 98 ಅಡಿ ವ್ಯಾಸದಲ್ಲಿದೆ. ಜಗತ್ತಿನ ಅತ್ಯಂತ ವೈಭವಯುತ ಗುಮ್ಮಟಗಳ ಪೈಕಿ ಈ ಗುಮ್ಮಟವೂ ಒಂದೆನ್ನಲಾಗುತ್ತದೆ. ಸೆಂಟ್ರಲ್ ಹಾಲ್ಗೆ ಐತಿಹಾಸಿಕ ಮನ್ನಣೆ ಇದೆ. ಸೆಂಟ್ರಲ್ ಹಾಲ್ನ್ನು ಮೊದಲು ಕೇಂದ್ರ ವಿಧಾನಸಭೆ ಮತ್ತು ರಾಜ್ಯಗಳ ಪರಿಷತ್ ಸಭೆಯ ಲೈಬ್ರರಿಯಾಗಿ ಬಳಸಲಾಗುತ್ತಿತ್ತು. 1946ರಲ್ಲಿ ಇದನ್ನು ಮರುಸಜ್ಜುಗೊಳಿಸಿ ಕಾನ್ಸ್ಟಿಟ್ಯುಂಟ್ ಅಸೆಂಬ್ಲಿ ಹಾಲ್ ಆಗಿ ಪರಿವರ್ತಿಸಲಾಯಿತು. 1950ರವರೆಗೂ ಹಾಗೆಯೇ ಮುಂದುವರಿಯಿತು. ಈಗ ಎರಡೂ ಸದನಗಳ ಜಂಟಿ ಅಧಿವೇಶನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದಲ್ಲದೆ ಬೇರೆ ದೇಶಗಳ ಪ್ರತಿನಿಧಿಗಳು ಸಂಸತ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಲು ಈ ಹಾಲ್ನ್ನು ಬಳಸಿಕೊಳ್ಳಲಾಗುತ್ತದೆ.

ಸಂಕೀರ್ಣದಲ್ಲಿರುವ ಇತರ ಸೌಲಭ್ಯಗಳೆಂದರೆ ಬೃಹತ್ ಲೈಬ್ರರಿ, ಸಂಶೋಧನೆ ಮತ್ತು ರೆಫರೆನ್ಸ್ ವಿಭಾಗ, ಪಾರ್ಲಿಮೆಂಟ್ ಮ್ಯೂಸಿಯಂ, ಆಡಿಟೋರಿಯಂ, ಬ್ಯಾಂಕ್ವೆಟ್ ಹಾಲ್ ಇತ್ಯಾದಿ.
ಮೂಲತಃ ಕೌನ್ಸಿಲ್ ಹೌಸ್ ಎಂದು ಕರೆಯಲ್ಪಡುವ ಹಳೆಯ ಸಂಸತ್ ಕಟ್ಟಡ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಅನ್ನು ಹೊಂದಿದ್ದು, ಕೇಂದ್ರ ವಿಸ್ಟಾದ ಹೃದಯಭಾಗದಲ್ಲಿದೆ.
ಈಗ ಹಳೆಯ ಸಂಸತ್ ಭವನ ಸ್ತಬ್ಧವಾಗಿ ಹೊಸ ಕಟ್ಟಡ ಝಗಮಗಿಸಲಿದೆ. ಆದರೆ, ಹಳೆಯ ಸಂಸತ್ ಕಟ್ಟಡದೊಂದಿಗೆ ಹಲವಾರು ಐತಿಹಾಸಿಕ ಹೆಚ್ಚುಗಾರಿಕೆಗಳಿವೆ. ಮರೆಯಲಾರದ ಭಾವನಾತ್ಮಕ ಬಾಂಧವ್ಯವಿದೆ.    

ತೀವ್ರವಾದ ಚರ್ಚೆಗಳಿಗೆ ಸಾಕ್ಷಿಯಾಗಿ, ದೇಶವನ್ನು ರೂಪಿಸಿದ ಸಂವಿಧಾನವನ್ನು ಅಂಗೀಕರಿಸಿದ ಕಟ್ಟಡವಾಗಿ ಹಳೆಯ ಸಂಸತ್ ಭವನದ ನೆನಪು ಉಳಿಯಲಿದೆ. ಪ್ರತಿಭಟನೆಯನ್ನು ಕಂಡ, ಪ್ರಬುದ್ಧ ಸಂಸದೀಯ ಪಟುಗಳ ಗಮನೀಯ ಭಾಷಣಗಳು ಮೊಳಗಿದ್ದ ಕಟ್ಟಡವಾಗಿ ಅದು ಎಲ್ಲರ ಮನಸ್ಸಿನಲ್ಲಿ ತುಂಬಿಕೊಳ್ಳಲಿದೆ.
ಅದು ಈ ದೇಶದ ಪ್ರಜಾಪ್ರಭುತ್ವದ ಹೆಮ್ಮೆಯನ್ನು ಮೊಳಗಿಸಿದ ಐತಿಹಾಸಿಕ ಹಿರಿಮೆ.

Similar News