ಜನಪದದಿಂದ ದೂರವಾಗಿರುವ ಅರಣ್ಯಾಡಳಿತದ ಭಾಷೆ

Update: 2023-05-29 19:30 GMT

ಅರಣ್ಯವೆಂಬುದು ಗಿಡಮರಗಳು ಮತ್ತವುಗಳ ಸಂಬಂಧಿತ ಜಾತಿಗಳು ಸಹಜವಾಗಿ ಬೆಳೆಯುವ ಪ್ರದೇಶವೆಂದು ಎಲ್ಲ ಜನಸಮಾಮಾನ್ಯರೂ ತಿಳಿದಿದ್ದಾರೆ. ಅರಣ್ಯ ಸಂಬಂಧಿ ಯಾವುದೇ ಕಾನೂನು ಸ್ಥಿತಿಯ ಗೊಡವೆಯೂ ಬೇಕಿರದ ತಿಳುವಳಿಕೆ ಇದು. ನಮ್ಮ ಸಂಸ್ಕೃತಿಯಲ್ಲಿ ಅರಣ್ಯಕ್ಕೆ ಹತ್ತಿರವಾಗಿ ಬದುಕುವ ಬುಡಕಟ್ಟು ಜನರಲ್ಲಿ ಅರಣ್ಯವನ್ನು ಗ್ರಹಿಸುವ ಅನನ್ಯವಾದ ಭಾಷೆ ಯೊಂದಿದೆ. ಆದರೆ ಅರಣ್ಯದ ಆಡಳಿತಾತ್ಮಕ ಭಾಷೆ ಪೂರ್ತಿ ಬೇರೆಯಾಗುತ್ತ, ಆ ಜನರಿಂದ ದೂರವಾಗಿಸುತ್ತಿರುವ ವಿದ್ಯಮಾನವನ್ನು ಕಾಣುತ್ತಿದ್ದೇವೆ. ಅರಣ್ಯ ಸಂರಕ್ಷಣಾ ಕಾಯ್ದೆ (ಎಫ್‌ಸಿಎ)-1980ರಲ್ಲಿ ಅಧಿಸೂಚಿತ ಅರಣ್ಯದ ಮಿತಿಗಳಿಲ್ಲದೆ ಹೆಚ್ಚು ವ್ಯಾಪಕವಾದ ಒಳಗೊಳ್ಳುವಿಕೆ ಇತ್ತು. ಅರಣ್ಯ ಎಂದು ಗುರುತಿಸಲ್ಪಟ್ಟ ಸರಕಾರಿ ದಾಖಲೆಗಳಲ್ಲಿನ ಪ್ರದೇಶಗಳು ಎಫ್‌ಸಿಎಯ ವ್ಯಾಪ್ತಿಗೆ ಬಂದವು. ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ-2023, ಅರಣ್ಯ ಕುರಿತ ಈ ಹಿಂದಿನ ದೃಷ್ಟಿಕೋನದಿಂದ ದೂರ. ಇಲ್ಲಿ ಅರಣ್ಯ ಎಂಬುದಕ್ಕೆ ನಿಘಂಟಿನ ಅರ್ಥ ಮಾತ್ರ. ಅಧಿಸೂಚಿತ ಅರಣ್ಯಗಳು ಅದರಲ್ಲೂ 25/10/1980ರ ನಂತರ ಅಧಿಸೂಚಿತ ಅರಣ್ಯಗಳು ಮಾತ್ರ ಎಫ್‌ಸಿಎ ಅಡಿಯಲ್ಲಿ ಬರುತ್ತವೆ.

ತಿದ್ದುಪಡಿಯ ನಂತರ ಎಫ್‌ಸಿಎಯಿಂದ ವಿನಾಯಿತಿ ನೀಡಲಾಗುವ ವಿವಿಧ ಅರಣ್ಯ ಪ್ರದೇಶಗಳಲ್ಲಿ ಭಾರತದ ಅಂತರ್‌ರಾಷ್ಟ್ರೀಯ ಗಡಿಯ 100 ಕಿ.ಮೀ. ದೂರದಲ್ಲಿರುವ ಕಾಡುಗಳು, ರಸ್ತೆಗಳು ಮತ್ತು ರೈಲ್ವೆ ಮಾರ್ಗಗಳ ಉದ್ದಕ್ಕೂ 0.1 ಹೆಕ್ಟೇರ್‌ವರೆಗಿನ ಕಾಡುಗಳು ಮತ್ತು ಭದ್ರತೆ ಸಂಬಂಧಿತ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಪ್ರದೇಶಗಳಲ್ಲಿ 10 ಹೆಕ್ಟೇರ್‌ವರೆಗಿನ ಕಾಡುಗಳು ಸೇರುತ್ತವೆ. ರಾಷ್ಟ್ರೀಯ ಮತ್ತು ಆಂತರಿಕ ಭದ್ರತೆ ಎಂಬ ಕಾರಣದಿಂದ ಇದು ನ್ಯಾಯಸಮ್ಮತ ಎನ್ನಿಸಿದರೂ, ಜೀವವೈವಿಧ್ಯತೆಗಾಗಿ ಇನ್ನೂ ವೌಲ್ಯಮಾಪನ ಮಾಡಬಹುದು. ಇದನ್ನು ಮಾಡದೆ ನಿಜವಾಗಿಯೂ ಆಗುವ ನಷ್ಟದ ಲೆಕ್ಕ ಸಿಗುವುದಿಲ್ಲ.

 ಅನೇಕ ಪರಿಸರವಾದಿಗಳು ಇದನ್ನು ಹಿನ್ನಡೆ ಎಂದೇ ಪರಿಗಣಿಸುತ್ತಾರೆ. ಸ್ಥಳೀಯ, ಅಪರೂಪದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯಕ್ಕೊಳ ಗಾಗಿರುವ ಪ್ರಭೇದಗಳನ್ನು ಒಳಗೊಂಡಿರುವ ರಾಜ್ಯಗಳು ಮತ್ತು ಅಧಿಸೂಚಿತ ವಲ್ಲದ ಅರಣ್ಯಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಎಫ್‌ಸಿಎ ನಿಬಂಧನೆಗಳು ಮಾತ್ರವೇ ಸುರಕ್ಷತೆ ಒದಗಿಸಲು ಸಾಧ್ಯ ಎಂಬ ಅಂಶವನ್ನು ಮಸೂದೆ ನಿರ್ಲಕ್ಷಿಸುತ್ತದೆ. ಎಫ್‌ಸಿಎ ವ್ಯಾಪ್ತಿಯಿಂದ ತೆಗೆದುಹಾಕಿದರೆ ಅಂತಹ ಭೂಮಿ ಯನ್ನು ಅನಾಯಾಸವಾಗಿ ಬೇರೆ ಉದ್ದೇಶಗಳಿಗಾಗಿ ರೂಪಾಂತರಿಸಲು ಅವಕಾಶವಿದೆ. ಭಾರತೀಯ ಭೂಪ್ರದೇಶದಾದ್ಯಂತ, ವಿಶಾಲವಾದ ಅರಣ್ಯ ಪ್ರದೇಶಗಳಿವೆ. ಅವು ಅರಣ್ಯಗಳೆಂದು ದಾಖಲಾಗಿವೆ, ಆದರೆ ಅಧಿಸೂಚಿತ ವಾಗಿಲ್ಲ. ಇವುಗಳಲ್ಲಿ ಹಿಮಾಲಯನ್ ಪ್ರದೇಶ, ಮಧ್ಯ ಭಾರತೀಯ ಪ್ರದೇಶ ಮತ್ತು ಪಶ್ಚಿಮ ಮತ್ತು ಪೂರ್ವ ಘಟ್ಟಗಳು ಸೇರಿವೆ. ಜೊತೆಗೆ ದೇಶಾದ್ಯಂತದ ಸಣ್ಣ ಅರಣ್ಯ ಪ್ರದೇಶಗಳನ್ನು ಸ್ಥಳೀಯ ಸಮುದಾಯಗಳು ತಮ್ಮ ಬುಡಕಟ್ಟು ಹಕ್ಕಿನಿಂದ ಬಳಸುತ್ತವೆ.

ಇತ್ತೀಚೆಗಿನ ಮಾಹಿತಿಯಂತೆ 7,13,789 ಚದರ ಕಿ.ಮೀ. ಅಥವಾ ದೇಶದ ಒಟ್ಟು ಭೌಗೋಳಿಕ ಪ್ರದೇಶದ ಸುಮಾರು ಶೇ.21.71 ಎಂದು ಗೊತ್ತಾಗುತ್ತದೆ. ಇದು ನಿಗದಿತ ರಾಷ್ಟ್ರೀಯ ನೀತಿ ಮತ್ತು ಶೇ.33ರ ಬದ್ಧತೆಗಿಂತ ಕಡಿಮೆಯಾಗಿದೆ. ಆದರೆ ಇದು 2019-21ರ ಅವಧಿಯಲ್ಲಿ 1,540 ಚದರ ಕಿ.ಮೀ. ಹೆಚ್ಚಳ ವಾಗಿದೆ.

ಅರಣ್ಯವಾಗಿರುವ ಭಾರತದ ಒಟ್ಟು ಭೌಗೋಳಿಕ ಪ್ರದೇಶದ ಶೇ. 21.71ರಲ್ಲಿ ಅತ್ಯಂತ ದಟ್ಟವಾದ ಕಾಡುಗಳು ಕೇವಲ ಶೇ. 3.04ರಷ್ಟು ಪ್ರದೇಶ ವನ್ನು ಮಾತ್ರ ಆವರಿಸುತ್ತವೆ. ಮಧ್ಯಮ ದಟ್ಟವಾದ ಕಾಡುಗಳು ಮತ್ತು ತೆರೆದ ಕಾಡುಗಳು ಕ್ರಮವಾಗಿ ಶೇ.9.33 ಮತ್ತು ಶೇ.9.34ರಷ್ಟು ಪ್ರದೇಶದಲ್ಲಿವೆ. 5 ಈಶಾನ್ಯ ರಾಜ್ಯಗಳಲ್ಲಿ ಕೇವಲ ಶೇ.10.95ರಷ್ಟು ಭೌಗೋಳಿಕ ಪ್ರದೇಶ ಅತ್ಯಂತ ದಟ್ಟ ಕಾಡಿನಿಂದ ಆವರಿಸಿದೆ. ಈಚಿನ ವರದಿಗಳ ಪ್ರಕಾರ ಈ ರಾಜ್ಯಗಳಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಇಳಿಕೆ ಕಂಡುಬಂದಿದೆ. ಈ ರಾಜ್ಯಗಳಲ್ಲಿ ಉಳಿದ ಕಾಡುಗಳು, ವಿಶೇಷವಾಗಿ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಈಗ ಹೊಸ ಎಫ್‌ಸಿಎ 2023 ತಿದ್ದುಪಡಿಯ ವ್ಯಾಪ್ತಿಗೆ ಬರುತ್ತವೆ. ಈ ಕಾಡುಗಳಲ್ಲಿ ಹೆಚ್ಚಿನವು ಅಂತರ್‌ರಾಷ್ಟ್ರೀಯ ಗಡಿಗಳ ಉದ್ದಕ್ಕೂ ನೂರು ಕಿ.ಮೀ. ದೂರದಲ್ಲಿವೆ.

ಒಂದು ರೀತಿಯ ತಪ್ಪು ವ್ಯಾಖ್ಯಾನವನ್ನು ತಡೆಯಲು ಪ್ರಯತ್ನಿಸುವ ಮೂಲಕ ತಿದ್ದುಪಡಿ ಇನ್ನೊಂದನ್ನು ಪ್ರೋತ್ಸಾಹಿಸುತ್ತದೆ. ಸಾರ್ವಜನಿಕ ಉಪಯುಕ್ತತೆ ಯಂತಹ ನಿಯಮಗಳು ಸಾಮಾನ್ಯ ಬಳಕೆಯಲ್ಲಿರುವಂತೆ ರಸ್ತೆಗಳು, ಅಣೆಕಟ್ಟುಗಳು, ಪವರ್‌ಲೈನ್‌ಗಳು ಇತ್ಯಾದಿಗಳಿಗೆ ಸಂಬಂಧಿಸಿದೆ. ಅವುಗಳಲ್ಲಿ ಯಾವುದೂ ಅರಣ್ಯ ಭೂಮಿಯನ್ನು ತೆರವುಗೊಳಿಸುವ ಅಗತ್ಯವಿದ್ದರೆ ತಕರಾರು ಇರುವುದಿಲ್ಲ.

ಪ್ರವಾಸೋದ್ಯಮ ಅನೇಕ ದುರ್ಬಲ ಭೂಪ್ರದೇಶಗಳಾದ ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಹೆಚ್ಚಿನ ಬೆಟ್ಟದ ಕೇಂದ್ರಗಳು ಮತ್ತು ಮಧ್ಯ ಭಾರತದಲ್ಲಿ ಹೆಚ್ಚಾಗಿದೆ. ವಾಸ್ತವವಾಗಿ, ವನ್ಯಜೀವಿಗಳೊಂದಿಗಿನ ಮಾನವ ಘರ್ಷಣೆಗಳು, ಕಸ ಸಂಗ್ರಹಣೆ, ಶಬ್ದ ಮಾಲಿನ್ಯ ಮತ್ತು ಸ್ಥಳೀಯ ನೀರಿನ ಮೂಲಗಳ ಮೇಲೆ ಒತ್ತಡಕ್ಕೆ ಒಂದು ಪ್ರಮುಖ ಕಾರಣವೆಂದರೆ ಪ್ರವಾಸೋದ್ಯ ಮದ ಬೆಳವಣಿಗೆ. ಕೆಲವು ಸಂರಕ್ಷಿತ (ಅರಣ್ಯ) ಪ್ರದೇಶಗಳನ್ನು ಹೊರತು ಪಡಿಸಿ, ಪ್ರಕೃತಿಯ ಅಂತಹ ವ್ಯಾಪಾರೀಕರಣ ಸಾಮಾನ್ಯವಾಗಿ ಪರಿಸರ ಮತ್ತು ನಿರ್ದಿಷ್ಟವಾಗಿ ವನ್ಯಜೀವಿಗಳಿಗೆ ಹಾನಿಕಾರಕ. ಮಸೂದೆಯಲ್ಲಿ ಹೇಳಿರುವ 'ಕಾಡುಗಳನ್ನು ಸಂರಕ್ಷಿಸುವ ದೇಶದ ಶ್ರೀಮಂತ ಪರಂಪರೆ' ವಾಣಿಜ್ಯಿಕ ಉದ್ದೇಶ ಮುಖ್ಯವಾದಾಗ ಕಣ್ಮರೆಯಾಗುತ್ತದೆ. ಅರಣ್ಯ ಪ್ರದೇಶಗಳಲ್ಲಿ ಖಾಸಗಿಯವರಿಗೆ ಈ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವು ದರಿಂದ ಭೂ ಒತ್ತುವರಿಯಿಂದ ಹಿಡಿದು ಮರಗಳ ಕಳ್ಳಸಾಗಣೆವರೆಗೆ ಎಲ್ಲದಕ್ಕೂ ಬಾಗಿಲು ತೆರೆದುಕೊಟ್ಟಂತಾಗಿದೆ. ಖಾಸಗಿಯವರಿಗೆ ಗುತ್ತಿಗೆ ಮೂಲಕ ಅರಣ್ಯ ಭೂಮಿಯನ್ನು ಒದಗಿಸುವಾಗ ಸ್ವಾಭಾವಿಕವಾಗಿ ಬೆಳೆದ ಮರಗಳನ್ನು ತೆರವುಗೊಳಿಸುವುದಕ್ಕೂ ಒಪ್ಪಿಗೆ ಕೊಡಲಾಗಿದೆ.

ಮರು ಅರಣ್ಯೀಕರಣ ಎಂಬುದು ಸ್ವಾಭಾವಿಕವಾಗಿ ಬೆಳೆದ ಮರಗಳು, ಸ್ಥಳೀಯ ಬೀಜಗಳ ಸಂಗ್ರಹ, ಅವುಗಳ ಮೊಳಕೆಯೊಡೆಯುವಿಕೆ ಮತ್ತು ಸಸಿಗಳ ನೆಡುವಿಕೆ ಇವಷ್ಟನ್ನೂ ಒಳಗೊಂಡಿರುತ್ತದೆ. ಇವೆಲ್ಲಕ್ಕೂ ಸಾಕಷ್ಟು ಪರಿಣತಿ ಮತ್ತು ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ನೈಸರ್ಗಿಕ ಅರಣ್ಯ ಪರಿಸರ ವ್ಯವಸ್ಥೆಗಳ ಸಂಕೀರ್ಣತೆಯನ್ನು ಮರುಸೃಷ್ಟಿಸುವುದು ನಮ್ಮ ಸಾಮರ್ಥ್ಯಕ್ಕೆ ಹೊರತಾಗಿದೆ. ಸಸ್ಯ ಸಂಪರ್ಕಗಳು, ಶಿಲೀಂಧ್ರಗಳು, ವಿವಿಧ ಪ್ರಾಣಿಗಳು ಮತ್ತು ನೆಲದಡಿಯ ಜೀವಿಗಳ ಪರಸ್ಪರ ಸಂಬಂಧಗಳು ಎಲ್ಲವೂ ತಮ್ಮ ನಿರ್ದಿಷ್ಟ ಪಾತ್ರಗಳನ್ನು ನಿರ್ವಹಿಸುತ್ತವೆ. ಸಾವಿರಾರು ವರ್ಷಗಳಿಂದ ವಿಕಸನಗೊಂಡಿರುವ ಈ ಪರಿಸರ ವ್ಯವಸ್ಥೆಗಳಲ್ಲಿ ಯಾವುದನ್ನೂ ಹಾಳುಮಾಡುವುದು ಒಳ್ಳೆಯದಂತೂ ಅಲ್ಲ.

ಕಳವಳದ ಮತ್ತೊಂದು ಅಂಶ ಭಾರತದ ಅನೇಕ ಪವಿತ್ರ ತೋಪುಗಳಿಗೆ ಸಂಬಂಧಿಸಿದ್ದು. ಇವೆಲ್ಲವೂ ಸ್ಥಳೀಯ ಸಮುದಾಯಗಳಿಂದ ನಿರ್ಮಿತ ವಾಗಿವೆ ಮತ್ತು ರಕ್ಷಿಸಲ್ಪಟ್ಟಿವೆ. ಈ ತೋಪುಗಳಲ್ಲಿ ಹೆಚ್ಚಿನವು ಸ್ಥಳೀಯ ಪ್ರಭೇದ ಗಳನ್ನು ಹೊಂದಿವೆ. ಇವು ವಿವಿಧ ಸಸ್ಯ ಮತ್ತು ಪ್ರಾಣಿಗಳಿಗೆ ಆಶ್ರಯ ನೀಡುವ ಸ್ಥಳಗಳಾಗಿವೆ. ಮಧ್ಯ ಭಾರತದ ಕೆಲವು ತೋಪುಗಳನ್ನು ಈಗಾಗಲೇ ಕೆಲ ಯೋಜನೆಗಳಿಗಾಗಿ ಅತಿಕ್ರಮಣ ಮಾಡಲಾಗಿದೆ ಮತ್ತು ಮಧ್ಯ ಪ್ರವೇಶಿಸಲಾಗಿದೆ. ಸ್ಥಳೀಯ ಸಮುದಾಯಗಳೊಂದಿಗೆ ಯಾವುದೇ ಸಮಾ ಲೋಚನೆ ನಡೆದಿಲ್ಲ. ಈ ಕ್ರಮ, ಅರಣ್ಯ ಅವಲಂಬಿತ ಸಮುದಾಯಗಳ ಜೀವ ನೋಪಾಯವನ್ನು ಸುಧಾರಿಸುವ ಮಸೂದೆಯ ಉದ್ದೇಶಕ್ಕೆ ವಿರುದ್ಧವಾಗಿದೆ.

ಸಮುದಾಯ ಅರಣ್ಯ ಹಕ್ಕುಗಳ (ಸಿಎಫ್‌ಆರ್) ಅನುಷ್ಠಾನದ ಕುರಿತು ಹಳ್ಳಿಯ ಸಮುದಾಯಗಳೊಂದಿಗೆ ಕೆಲಸ ಮಾಡುವವರು, ಹಳ್ಳಿಯ ಭೂದೃಶ್ಯಗಳ ಇಂತಹ ಅನೇಕ ಕ್ಷೇತ್ರಗಳನ್ನು, ಬುಗ್ಗೆಗಳು ಮತ್ತು ಗದ್ದೆ ಪ್ರದೇಶಗಳು, ಅಪರೂಪದ ಮರದ ಪ್ರಭೇದಗಳು ಮತ್ತು ಆಯಾ ಋತುವಿನಲ್ಲಿ ಬರುವ ಪ್ರಾಣಿಗಳಿಗೆ ಆತಿಥ್ಯ ವಹಿಸುವ ಅರಣ್ಯ ಪ್ರದೇಶಗಳು ಇವೆಲ್ಲವನ್ನೂ ಗಮನಿಸುತ್ತಾರೆ. ಕಾಡುಗಳ ಇಂತಹ ಪ್ರದೇಶಗಳಿಗೆ ಜನರಿಂದ ರಕ್ಷಣೆ ಸಿಗುತ್ತದೆ. ಇಂಥ ಜನರಿಂದಲೇ ಅರಣ್ಯವನ್ನು ದೂರ ಮಾಡುವಂತಹ ಕ್ರಮಗಳನ್ನು ಕೈಗೊಳ್ಳುವ ಮುನ್ನ ಯೋಚಿಸಬೇಕಿದೆ.

ಈ ತಿದ್ದುಪಡಿ ಮಸೂದೆ ನಮ್ಮ ಗ್ರಾಮ ಸಂಸ್ಥೆಗಳ ಅತ್ಯಂತ ಮೂಲಭೂತ ಮತ್ತು ಆಧಾರವಾಗಿರುವ ಗ್ರಾಮಸಭೆಯೊಂದಿಗೆ ಹೂಡಿಕೆ ಮಾಡಿದವರೂ ಸೇರಿದಂತೆ, ನಮ್ಮ ಪರಿಸರದ ಎಲ್ಲಾ ಸುರಕ್ಷತೆಗಳನ್ನು ದುರ್ಬಲಗೊಳಿಸುತ್ತದೆ ಎಂಬ ವಾದಗಳಿವೆ. ಅರಣ್ಯ ಸಂರಕ್ಷಣೆ, ಆದಿವಾಸಿಗಳ ಜೀವನ ಮತ್ತು ಗ್ರಾಮೀಣ ಭಾರತದ ಭಾಷೆಯೇ ಬದಲಾಗಿದೆ. ಅರಣ್ಯ ಎಂಬ ಪದ ನಿಘಂಟಿನ ಅರ್ಥದ ಹೊರತಾಗಿ, ಪ್ರಮುಖ ಬಯೋಮ್ ಆಗಿದೆ. ಕಾಡನ್ನು ಉಲ್ಲೇಖಿಸುವ ಪ್ರದೇಶವಾರು ಸ್ಥಳೀಯ ಪದಗಳು ಸಸ್ಯವರ್ಗ, ಅವುಗಳ ಸ್ಥಳಗಳು ಮತ್ತು ಅವುಗಳ ಗುಣಗಳಂತೆ ವೈವಿಧ್ಯಮಯವಾಗಿವೆ. ಇವೆಲ್ಲವೂ ಬಯೋಮ್‌ನ ಗ್ರಹಿಕೆ ಮತ್ತು ಅನುಭವದ ಸಮೃದ್ಧಿಯನ್ನು ಸೂಚಿಸುತ್ತವೆ. ಈ ವೈವಿಧ್ಯತೆ ಮತ್ತು ಬಹುತ್ವವನ್ನು ಕಡೆಗಣಿಸುವ ಹೊಸ ಪದಗಳು, ಪರಿಭಾಷೆಗಳು ಕಾಡುಗಳನ್ನು ಅವಲಂಬಿಸಿರುವ ಜನರಿಂದ ದೂರವಿವೆ.
(ಕೃಪೆ: the wire)

Similar News