ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗಿಂತ ಹಿಂದೆ ಬಿದ್ದಿರುವ ಮುಸ್ಲಿಮರು: ವರದಿ
ಹೊಸ ದಿಲ್ಲಿ: ಶಿಕ್ಷಣ ಕಲಿಯುವುದರಲ್ಲಿ ಅಥವಾ ಬೋಧಿಸುವುದರಲ್ಲಿ - ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳೂ ಸೇರಿದಂತೆ ಉಳಿದೆಲ್ಲ ಸಮುದಾಯಗಳಿಗಿಂತ ಮುಸ್ಲಿಮರು ಉನ್ನತ ಶಿಕ್ಷಣದಲ್ಲಿ ಹಿಂದೆ ಬಿದ್ದಿದ್ದಾರೆ. ಇದು ಶಿಕ್ಷಣ ಸಚಿವಾಲಯದ ವತಿಯಿಂದ ನಡೆದಿದ್ದ ಇತ್ತೀಚಿನ ಅಖಿಲ ಭಾರತ ಶಿಕ್ಷಣ ಸಮೀಕ್ಷೆಯಲ್ಲಿ ಕಂಡು ಬಂದಿರುವ ಸಂಗತಿ ಎಂದು thehindu.com ವರದಿ ಮಾಡಿದೆ.
2020-21ರ ಅವಧಿಯ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯು ಮುಸ್ಲಿಂ ಸಮುದಾಯದ ಗಂಭೀರ ಚಿತ್ರಣವನ್ನು ಮುಂದಿಟ್ಟಿದೆ. ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಜಾತಿ ಹಾಗೂ ಇತರೆ ಹಿಂದುಳಿದ ವರ್ಗಗಳ ದಾಖಲಾತಿ ಕ್ರಮವಾಗಿ ಶೇ. 4.2, ಶೇ. 11.9 ಹಾಗೂ ಶೇ. 4ರಷ್ಟು ಸುಧಾರಿಸಿದ್ದರೆ, ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ದಾಖಲಾತಿ ಮಾತ್ರ ಶೇ. 8ರಷ್ಟು ಕುಸಿದಿದ್ದು, ಅವರ ದಾಖಲಾತಿಯ ಪ್ರಮಾಣ 1,79,000ದಷ್ಟು ಮಾತ್ರವಿದೆ.
ಈ ಅಭೂತಪೂರ್ವ ಇಳಿಕೆಗೆ ಭಾಗಶಃ ಕಾರಣವಾಗಿರುವುದು ಕೋವಿಡ್-19 ಸಾಂಕ್ರಾಮಿಕ. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿದ್ದು, ಇದರಿಂದ ತನ್ನ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಪದವಿ ತರಗತಿಗಳಿಗೆ ಸೇರ್ಪಡೆಯಾಗುವ ಮುನ್ನವೇ ದುಡಿಮೆಯ ಅವಕಾಶ ಹುಡುಕಿಕೊಳ್ಳುವಂತಹ ಸ್ಥಿತಿಗೆ ದೂಡಲ್ಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಅತಿ ಹೆಚ್ಚು ಇಳಿಕೆ ಕಂಡು ಬಂದಿರುವುದು ಉತ್ತರ ಪ್ರದೇಶದಲ್ಲಿ (ಶೇ. 36). ಇದರ ನಂತರ ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಕ್ರಮವಾಗಿ ಶೇ. 26, ಶೇ. 8.5 ಹಾಗೂ ಶೇ. 8.1 ಇಳಿಕೆ ಆಗಿದೆ. ದಿಲ್ಲಿಯಲ್ಲಿ ಪ್ರೌಢ ಶಾಲಾ ಪ್ರಮಾಣ ಪತ್ರ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿ ಐವರು ಮುಸ್ಲಿಂ ವಿದ್ಯಾರ್ಥಿಗಳ ಪೈಕಿ ಓರ್ವ ಮುಸ್ಲಿಂ ವಿದ್ಯಾರ್ಥಿ ಉನ್ನತ ಶಿಕ್ಷಣಕ್ಕೆ ದಾಖಲಾಗುವಲ್ಲಿ ವಿಫಲನಾಗಿದ್ದಾನೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ಶೈಕ್ಷಣಿಕ ಸುಧಾರಣೆ ಮಾಡಿರುವುದಾಗಿ ಬಿಂಬಿಸಿಕೊಳ್ಳುತ್ತಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಪ್ರತಿಷ್ಠೆ ಕೆಲ ಮಟ್ಟಿಗೆ ಮುಕ್ಕಾಗಿದೆ.
ಉತ್ತರ ಪ್ರದೇಶದಲ್ಲಿ ಶೇ. 20ರಷ್ಟು ಜನಸಂಖ್ಯೆ ಹೊಂದಿದ್ದರೂ, ಉನ್ನತ ಶಿಕ್ಷಣಕ್ಕೆ ದಾಖಲಾಗುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಪ್ರಮಾಣ ಕೇವಲ ಶೇ. 4.5ರಷ್ಟಿದೆ. ಈ ವರ್ಷದ ಅವಧಿಯಲ್ಲಿ ಕಾಲೇಜುಗಳ ಸ್ಥಾಪನೆ ಸಂಖ್ಯೆ ಏರಿಕೆಯಾಗಿದ್ದರೂ ಕೂಡಾ.
ಕೇರಳ ಮಾತ್ರ ಉನ್ನತ ಶಿಕ್ಷಣದಲ್ಲಿ ಮುಸ್ಲಿಂ ಸಮುದಾಯ ಹಿಂದುಳಿದಿರುವ ರಾಜ್ಯಗಳ ಪಟ್ಟಿಯಿಂದ ಹೊರಗಿದೆ. ಇಲ್ಲಿ ಶೇ. 43ರಷ್ಟು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ.