ಗಂಗಾನದಿಯಲ್ಲಿ ತೇಲದಿರಲಿ ದೇಶದ ಮಾನ, ಪ್ರಾಣ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
''ಈ ಪದಕಗಳು ನಮ್ಮ ಜೀವ ಹಾಗೂ ಆತ್ಮವಾಗಿವೆ. ಅವುಗಳನ್ನು ನಾವು ಗಂಗಾನದಿಗೆ ಎಸೆಯಲಿದ್ದೇವೆ. ಅದಾದ ಬಳಿಕ ಬದುಕುವ ಪ್ರಶ್ನೆಯೇ ಇಲ್ಲ. ಸಾಯುವವರೆಗೂ ಇಂಡಿಯಾ ಗೇಟ್ ಬಳಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ'' ಅಂತರ್‌ರಾಷ್ಟ್ರೀಯ ಮಟ್ಟದ ಮಹಿಳಾ ಕುಸ್ತಿ ಪಟುಗಳು ಇಂತಹದೊಂದು ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದೇ ಅವರಿಗಾಗಿರುವ ಅನ್ಯಾಯದ ಪರಮಾವಧಿಯನ್ನು ಹೇಳುತ್ತದೆ. ಅವರು ಗಳಿಸಿದ ಪದಕಗಳು ಈ ದೇಶದ ಪಾಲಿಗೆ ಹೆಮ್ಮೆ, ಗೌರವಗಳಾಗಿವೆ. ಅವುಗಳ ಮೂಲಕ ಈ ದೇಶ ವಿಶ್ವದ ಮುಂದೆ ಗುರುತಿಸಿಕೊಂಡಿದೆ. ಇದೀಗ ನಮಗೆ ನ್ಯಾಯ ಸಿಗದೇ ಇದ್ದರೆ ಆ ಗೌರವಗಳನ್ನು ಗಂಗಾನದಿಗೆ ಎಸೆಯುತ್ತೇವೆ ಎಂದು ಮಹಿಳಾ ಕ್ರೀಡಾಳುಗಳು ಘೋಷಿಸಿದ್ದಾರೆ. ಆ ಪದಕಗಳ ಜೊತೆಜೊತೆಗೇ ಈ ದೇಶದ ಮಾನವೂ ಗಂಗಾನದಿಯ ಪಾಲಾಗಲಿದೆ ಎನ್ನುವ ಅರಿವು ನಮ್ಮನ್ನಾಳುವವರಿಗೆ ಇನ್ನಾದರೂ ಮೂಡಿ ಬರಬೇಕಾಗಿದೆ. ಕ್ರೀಡಾಳುಗಳು ನ್ಯಾಯಕ್ಕಾಗಿ ಆಗ್ರಹಿಸಿ ಪದಕಗಳನ್ನು ಮಂಗಳವಾರ ಸಂಜೆ ಗಂಗಾನದಿಗೆ ಎಸೆಯಲು ಮುಂದಾಗಿದ್ದರು. ಆದರೆ ರೈತ ನಾಯಕರ ಮಧ್ಯಸ್ಥಿತಿಕೆಯಿಂದಾಗಿ ಇದನ್ನು ಐದು ದಿನಗಳ ಕಾಲ ಮುಂದೂಡಿದ್ದಾರೆ. ಕುಸ್ತಿ ಪಟುಗಳ ಹೋರಾಟ ನಿಧಾನಕ್ಕೆ ರಾಷ್ಟ್ರಾದ್ಯಂತ ವಿಸ್ತರಿಸಿಕೊಳ್ಳುತ್ತಿದೆ. ರೈತ ಸಂಘಟನೆಗಳು ಈ ಪ್ರತಿಭಟನೆಗೆ ಆಂದೋಲನದ ರೂಪ ನೀಡುತ್ತಿದ್ದಾರೆ. ನಾಡಿನ ಬೇರೆ ಬೇರೆ ಸಂಘಟನೆಗಳು ಅವರ ಪ್ರತಿಭಟನೆಗೆ ಕೈ ಜೋಡಿಸುತ್ತಿದ್ದಾರೆ. ಸರಕಾರ ಮಾತ್ರ ಯಾವ ಲಜ್ಜೆಯೂ ಇಲ್ಲದೆ ಈ ದೇಶದ ಹೆಣ್ಣು ಮಕ್ಕಳ ಅಳಲಿಗೆ ಕಿವುಡಾಗಿದೆ.
ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ಹಲವು ಆಯಾಮಗಳಿವೆ. ಇದು ಈ ದೇಶದ ಮಹಿಳೆಯರು ತಮ್ಮ ಮೇಲೆ ದೌರ್ಜನ್ಯವೆಸಗಿದ ರಾಜಕಾರಣಿಯ ವಿರುದ್ಧ ನಡೆಸುತ್ತಿರುವ ಕುಸ್ತಿ. ಕ್ರೀಡಾ ವ್ಯವಸ್ಥೆಯ ಮೇಲೆ ರಾಜಕೀಯ ಶಕ್ತಿಗಳ ಶೋಷಣೆಯ ವಿರುದ್ಧ ಈ ದೇಶದ ಕ್ರೀಡಾಳುಗಳು ಸಂಘಟಿತವಾಗಿ ನಡೆಸುತ್ತಿರುವ ಕುಸ್ತಿ. ಇದು ಯಾವನೋ ಒಬ್ಬ ಕ್ರೀಡಾಪಡುವಿನ ವೈಯಕ್ತಿಕ ಹೋರಾಟವಲ್ಲ. ಇಡೀ ಮಹಿಳಾ ಸಮೂಹ ಮತ್ತು ಕ್ರೀಡಾಳುಗಳು ಜಂಟಿಯಾಗಿ ನಡೆಸುತ್ತಿರುವ ಹೋರಾಟ. ಇಲ್ಲಿ ಈ ಹೋರಾಟಗಾರರ ಗೆಲುವು ಅಂತಿಮವಾಗಿ ಕ್ರೀಡೆಯ, ಮಹಿಳೆಯರ ಮತ್ತು ಈ ದೇಶದ ಗೆಲುವಾಗಿದೆ. ಇದು ದೇಶ ಮತ್ತು ಈ ದೇಶವನ್ನಾಳುವ ಸರಕಾರದ ನಡುವೆ ನಡೆಯುತ್ತಿರುವ ಕುಸ್ತಿಯಾದುದರಿಂದ, ಸರಕಾರ ಸೋಲಬೇಕು, ದೇಶ ಗೆಲ್ಲಲೇಬೇಕಾಗಿದೆ.
ನಿರ್ಭಯಾ ಪ್ರಕರಣದ ಬಳಿಕ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರಕಾರ ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿತು. ನಿರ್ಭಯಾ ಯೋಜನೆಗಳಿಗಾಗಿ ವಿಶೇಷ ಅನುದಾನಗಳನ್ನೂ ಮೀಸಲಿರಿಸಿತ್ತು. 'ಮೀ ಟೂ' ಆಂದೋಲನವೂ ಈ ದೇಶದಲ್ಲಿ ವಿದ್ಯಾವಂತ ಮಹಿಳೆಯರೇ ಹೇಗೆ ವಿವಿಧ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿದ್ದವು. ಇದೀಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸುತ್ತಿರುವುದು ಯಾವುದೋ ಸಾಮಾನ್ಯ ಮಹಿಳೆಯರಲ್ಲ. ಕ್ರೀಡೆಯಲ್ಲಿ ಈ ದೇಶಕ್ಕೆ ಪದಕಗಳನ್ನು ತಂದುಕೊಟ್ಟ, ಇನ್ನಷ್ಟು ಗೌರವಗಳನ್ನು ತಂದುಕೊಡಲಿರುವ ತರುಣಿಯರು. ಇದೇ ಸಂದರ್ಭದಲ್ಲಿ ಆರೋಪಿಯಾಗಿ ನಿಂತಿರುವುದು ಸಾಮಾನ್ಯ ವ್ಯಕ್ತಿಯಲ್ಲ. ಈತ ಸರಕಾರದ ಭಾಗವಾಗಿದ್ದಾನೆ ಮಾತ್ರವಲ್ಲ, ಕುಸ್ತಿ ಫೆಡರೇಷನ್‌ನ ಚುಕ್ಕಾಣಿಯನ್ನು ಈತನ ಕೈಗೆ ನೀಡಲಾಗಿದೆ. ತನ್ನ ಮಾನವನ್ನು ಉಳಿಸಿಕೊಳ್ಳುವ ಭಾಗವಾಗಿ ಸರಕಾರ, ಆರೋಪ ಕೇಳಿ ಬಂದಾಕ್ಷಣವೇ ಆತನನ್ನು ಫೆಡರೇಷನ್‌ನಿಂದ ವಜಾಗೊಳಿಸಿ ತನಿಖೆಗೆ ಆದೇಶ ನೀಡಬೇಕಾಗಿತ್ತು.
ಆದರೆ ಈ ದೇಶದ ಮಹಿಳೆಯರ ಬೆನ್ನಿಗೆ, ಈ ದೇಶದ ಕ್ರೀಡಾಳುಗಳ ಬೆನ್ನಿಗೆ ನಿಲ್ಲಬೇಕಾದ ಸರಕಾರ, ಲೈಂಗಿಕ ದೌರ್ಜನ್ಯ ಆರೋಪಗಳನ್ನು ಹೊತ್ತಿರುವ ಸಂಸದನ ಬೆನ್ನಿಗೆ ನಿಂತಿದೆ. ಈ ದೇಶಕ್ಕೆ ಪದಕಗಳ ಮೂಲಕ ಗೌರವಗಳನ್ನು ತಂದುಕೊಟ್ಟ ಹೆಣ್ಣು ಮಕ್ಕಳ ಅಳಲಿಗೆ ಕಿವಿಯಾಗಬೇಕಾಗಿದ್ದ ಸರಕಾರ, ಹತ್ತು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿರುವ ಆರೋಪಗಳನ್ನು ಹೊತ್ತ ಸಂಸದನನ್ನು ರಕ್ಷಿಸಲು ಮುಂದಾಗಿದೆ. ಪೊಲೀಸರನ್ನು ಬಳಸಿಕೊಂಡು ಕ್ರೀಡಾಳುಗಳನ್ನು ದಮನಿಸಲು ಮುಂದಾಗಿದೆ. ಇಂತಹ ಸರಕಾರ ಆಳುತ್ತಿರಬೇಕಾದರೆ ಈ ದೇಶದಲ್ಲಿ ಹೆಣ್ಣಿನ ಮಾನ, ಪ್ರಾಣ ಅಪಾಯದಲ್ಲಿರದೆ ಇನ್ನೇನಾಗಲು ಸಾಧ್ಯ? ಇಂತಹ ಸರಕಾರ ಇರುವವರೆಗೆ ಈ ದೇಶದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆಗಳನ್ನು ಮಾಡಬೇಕೆಂದು ನಿರೀಕ್ಷಿಸುವುದಾದರೂ ಹೇಗೆ? ಭಾರತ ಒಲಿಂಪಿಕ್‌ನಲ್ಲಿ ಯಾಕೆ ಹಿನ್ನಡೆ ಅನುಭವಿಸುತ್ತಿದೆ ಎನ್ನುವುದಕ್ಕೆ ಉತ್ತರವನ್ನು ಹೇಳುತ್ತಿದೆ ಜಂತರ್ ಮಂತರ್.
'ಭೇಟಿ ಬಚಾವೋ' ಮೋದಿ ಘೋಷಣೆಯ ಅತ್ಯಂತ ಕ್ರೂರ ಅಣಕವಿದು. ಕುಸ್ತಿ ಪುರುಷರ ಕ್ರೀಡೆ ಎನ್ನುವ ನಂಬಿಕೆ ಭಾರತದಲ್ಲಿತ್ತು. ಮಹಿಳೆಯರು ಅತ್ಲಿಟ್‌ನಲ್ಲಿ ಭಾಗವಹಿಸುವುದು, ಅಲ್ಲಿ ಸಾಧನೆಗೈಯುವುದೇ ಕಷ್ಟ ಎನ್ನುವ ದೇಶದಲ್ಲಿ ಪುರುಷರ ಪಾರಮ್ಯವಿರುವ ಕುಸ್ತಿಯಲ್ಲಿ ಅವಕಾಶವನ್ನು ಸಂಪಾದಿಸಿ, ಅಂತರ್‌ರಾಷ್ಟ್ರೀಯಮಟ್ಟದ ಸಾಧನೆ ಮಾಡಿ ಗೌರವ ತಂದುಕೊಟ್ಟ ಮಹಿಳೆಯರು ಇಂದು ಬೀದಿಯಲ್ಲಿ ನಿಂತು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಯನ್ನು ಬಂಧಿಸಿ ಎಂದು ಆಗ್ರಹಿಸುತ್ತಿದ್ದಾರೆ. ಆರೋಪ ಹೊತ್ತಿರುವ ಸಂಸದ ಈ ದೇಶಕ್ಕೆ ನೀಡಿರುವ ಕೊಡುಗೆಯಾದರೂ ಏನು? ದೇಶಕ್ಕೆ ಗೌರವ ತಂದುಕೊಟ್ಟ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಸರಕಾರ ಯಾಕೆ ರಕ್ಷಿಸಲು ನೋಡುತ್ತಿದೆ? ಇದು ಸರಕಾರವೊಂದು ಕ್ರೀಡಾಳುಗಳನ್ನು ಪೋಷಿಸುವ ಬಗೆಯೆ? ಮಹಿಳೆಯರನ್ನು ಸಬಲೀಕರಿಸುವ ರೀತಿಯೆ? ಈ ದೇಶದ ಮಹಿಳೆಯರ ಮಾನ ಸರಕಾರದ ಪಾಲಿಗೆ ಇಷ್ಟೊಂದು ಅಗ್ಗವಾಗಿ ಹೋಯಿತೆ? ಮೊದಲಾದ ಪ್ರಶ್ನೆಗಳನ್ನು ಇಂದು ದೇಶ ಸರಕಾರದ ಬಳಿ ಕೇಳುತ್ತಿದೆ. ಉತ್ತರಿಸಲಾಗದ ಪ್ರಧಾನಿ ಮೋದಿ, ನೂತನ ಸಂಸತ್‌ಭವನದ ಉದ್ಘಾಟನಾ ಸಮಾರಂಭದ ಬ್ರಾಹ್ಮಣರ ವೇದ ಘೋಷಗಳ ಮರೆಯಲ್ಲಿ ಅವಿತುಕೊಂಡಿದ್ದಾರೆ. ಆದರೆ ಈ ವೇದ ಮಂತ್ರ ಘೋಷಗಳ ಗದ್ದಲಗಳಲ್ಲಿ ಮಹಿಳಾ ಕ್ರೀಡಾಳುಗಳ ಅಳಲನ್ನು ಮುಚ್ಚಿಡುವುದಕ್ಕಾಗುವುದಿಲ್ಲ ಎನ್ನುವ ವಾಸ್ತವವನ್ನು ಪ್ರಧಾನಿ ಮೋದಿ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದೇ ಇದ್ದರೆ, ಅದಕ್ಕಾಗಿ ಅವರು ಭಾರೀ ಬೆಲೆಯನ್ನು ತೆರಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ಯಾಕೆಂದರೆ, ಹೆಣ್ಣಿನ ಸೆರಗಿಗೆ ಕೈ ಹಾಕಿದ ರಾಜರೆಲ್ಲರೂ ಸರ್ವನಾಶವಾದ ಕತೆಗಳನ್ನೇ ಭಾರತದಲ್ಲಿ ನಾವು 'ಪುರಾಣ'ಗಳೆಂದು ಗೌರವಿಸುತ್ತಾ ಬಂದಿದ್ದೇವೆ.
ಕೀಡಾಳುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನೇ ಕುಸ್ತಿ ಫೆಡರೇಶನ್‌ನಲ್ಲಿ ಮುಂದುವರಿಸಿದ್ದೇ ಆದರೆ, ಮುಂದಿನ ದಿನಗಳಲ್ಲಿ ಮಹಿಳೆಯರು ಆತ್ಮವಿಶ್ವಾಸದಿಂದ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸುವುದಾದರೂ ಹೇಗೆ ಸಾಧ್ಯ? ಇದು ಕ್ರೀಡಾಳುಗಳ ಸಾಮರ್ಥ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವುದಿಲ್ಲವೆ? ಅಷ್ಟೇ ಅಲ್ಲ, ಆರೋಪಿಗೆ ಇನ್ನಷ್ಟು ದೌರ್ಜನ್ಯಗಳನ್ನು ಎಸಗಲು, ಮಹಿಳಾ ಕ್ರೀಡಾಳುಗಳನ್ನು ಶೋಷಿಸಲು ಕುಮ್ಮಕ್ಕು ಸಿಕ್ಕಂತಾಗುವುದಿಲ್ಲವೆ? ಸರಕಾರ ನ್ಯಾಯ ಕೇಳಿದ ಸಂತ್ರಸ್ತೆಯರ ಮನವಿಗೆ ಸ್ಪಂದಿಸುವುದಿರಲಿ, ತನ್ನ ನಕಲಿ ಬೆಂಬಲಿಗರ ಮೂಲಕ ಅವರನ್ನು ಅವಮಾನಿಸುವ, ಅವರ ವಿರುದ್ಧ ಅಪಪ್ರಚಾರ ನಡೆಸುವ ಕಾರ್ಯದಲ್ಲಿ ತೊಡಗಿರುವುದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ.
ಈ ದೇಶದ ಕೆಲವು ಅವಿವೇಕಿಗಳು ವಿಚಾರ, ವಿಜ್ಞಾನ, ಶಿಕ್ಷಣ, ಕ್ರೀಡೆ, ಆರೋಗ್ಯ ಎಲ್ಲವನ್ನೂ ತನ್ನ ಮೋದಿ ಸರಕಾರದ ಮೇಲಿನ ಭಕ್ತಿಗೆ ಬಲಿಕೊಡಲು ಮುಂದಾಗಿರುವುದನ್ನು ಇದು ಹೇಳುತ್ತಿದೆ. ಗಂಗಾನದಿ ಮೃತದೇಹಗಳನ್ನು ಎಸೆಯುವುದಕ್ಕೆ ಈಗಾಗಲೇ ಕುಖ್ಯಾತಿಯನ್ನು ಪಡೆದಿದೆ. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಅರ್ಧ ಬೆಂದ ಮೃತದೇಹಗಳನ್ನು ಗಂಗೆಗೆ ಎಸೆಯುವ ಪರಿಪಾಠ ಉತ್ತರ ಭಾರತದಲ್ಲಿದೆ. ಈ ಮೃತದೇಹಗಳಿಂದ ಕಲುಷಿತಗೊಂಡ ಗಂಗೆಯನ್ನು ಶುಚೀಕರಿಸಲು ಸಾವಿರಾರು ಕೋಟಿ ರೂ. ವ್ಯಯ ಮಾಡಿಯೂ ಸರಕಾರ ವಿಫಲವಾಗಿದೆ. ನಮ್ಮ ದೇಶದ ಹೆಮ್ಮೆಯ ಮಹಿಳಾ ಕುಸ್ತಿ ಪಟುಗಳ ಪದಕಗಳು ಗಂಗಾನದಿಯ ಪಾಲಾದರೆ, ಈ ದೇಶದ ಹೆಣ್ಣಿನ ಮಾನ ಪ್ರಾಣವೂ ಗಂಗೆಯ ಪಾಲಾದಂತೆ. ಅದರಿಂದ ಕಲುಷಿತಗೊಂಡ ಗಂಗೆಯನ್ನು ಶುಚಿಗೊಳಿಸುವುದು ಎಂದೆದಿಗೂ ಸಾಧ್ಯವಿಲ್ಲ ಎನ್ನುವ ಸತ್ಯ ಕೇಂದ್ರ ಸರಕಾರಕ್ಕೆ ಆದಷ್ಟು ಬೇಗ ಮನವರಿಕೆಯಾಗುತ್ತದೆ ಎಂದು ಆಶಿಸೋಣ.