ಇದೆಂತಹ ಕ್ರೂರ ವ್ಯಂಗ್ಯ

Update: 2023-05-30 18:35 GMT

ಮಾನ್ಯರೇ,

ಪುರುಷಾಧಿಕಾರಿಯಿಂದ ತಮಗಾದ ನೀಚ ದೌರ್ಜನ್ಯಕ್ಕೆ ನ್ಯಾಯ ಒದಗಿಸಿಕೊಡಿ ಎಂದು ತಿಂಗಳಿಗೂ ಮಿಗಿಲಾಗಿ ಸತ್ಯಾಗ್ರಹ ನಡೆಸುತ್ತಿರುವ ಹೆಣ್ಣುಮಕ್ಕಳನ್ನು ಸೌಜನ್ಯದಿಂದ ಮಾತನಾಡುವವರು ಯಾರೂ ಇಲ್ಲ ಈ ಪುಣ್ಯಭೂಮಿಯಲ್ಲಿ! ಸಂತ್ರಸ್ತರು ಬೀದಿಯಲ್ಲಿ ಎಳೆದಾಡಲ್ಪಟ್ಟು ಬಂಧನಕ್ಕೆ ಗುರಿಯಾಗಿದ್ದಾರೆ. ಕೆಲವು ಪ್ರತಿಭಟನಾಕಾರರ ಮೇಲೆ ಎಫ್‌ಐಆರ್ ದಾಖಲಿಸಲ್ಪಟ್ಟಿದೆ. ಈಗ ನೂತನ ಸಂಸತ್ ಭವನದ ಲೋಕಾರ್ಪಣೆಯಾಗಿದೆೆ! ಅಲ್ಲಿ ‘‘ಅದು ಜಾಗತಿಕ ಪ್ರಜಾಪ್ರಭುತ್ವದ ಬುನಾದಿಯೂ ಆಗಿದೆ’ ಎಂಬ ಭ್ರಮೆಯೂ ಬಿತ್ತನೆಯಾಗಿದೆ! ಇನ್ನೂ ಕ್ರೂರ ವ್ಯಂಗ್ಯ ಎಂದರೆ ಈ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿರುವರೆಂದು ಆರೋಪಕ್ಕೆ ಒಳಗಾಗಿರುವ ಪುರುಷ ಸಿಂಹರು ನೂತನ ಸಂಸತ್ ಭವನದಲ್ಲಿ ವಿರಾಜಮಾನರಾಗಿದ್ದಾರೆ. ಒಳಗಡೆ ವೇದಘೋಷ, ರಾಜದಂಡಕ್ಕೆ ದೀರ್ಘದಂಡ ನಮಸ್ಕಾರ, ದೈವಿಕ ಆಶೀರ್ವಾದ, ನಾದಸ್ವರಗಳೊಂದಿಗೆ ‘ಜ್ಞಾನ ದ್ವಾರ’, ‘ಶಕ್ತಿ ದ್ವಾರ’, ‘ಕರ್ಮ ದ್ವಾರ’ಗಳು ತೆರೆದುಕೊಂಡಿವೆ. ರಾಜಪ್ರಭುತ್ವದ ಕಾಲದಲ್ಲಿ ಪಟ್ಟಾಭಿಷೇಕದ ಸಂದರ್ಭದಲ್ಲಿನ ಹಾಗೆ ಪುರೋಹಿತರ ದಂಡು ನೆರೆದಿದೆ. ಚೋಳ ಸಾಮ್ರಾಜ್ಯದ ಸೆಂಗೋಲ್‌ಗೆ ‘ಇದೀಗ ಗೌರವ ಪ್ರಾಪ್ತವಾಗಿದೆ’ಯಂತೆ! ‘ಮೇಲೆಲ್ಲ ಥಳುಕು ಒಳಗೆಲ್ಲ ಹುಳುಕು’ ಎಂಬ ಗಾದೆ ನೆನಪಾಗುತ್ತಿದೆ. ಎಂತಹ ಬೃಹನ್ನಾಟಕ! ಅದೇ ಮನುಸ್ಮತಿಯ ಪ್ರಸಿದ್ಧ ವಾಕ್ಯ, ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ (ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ) ಎಂಬ ಮಾತು ಇಂದಿಗೂ ಜಾರಿಯಲ್ಲಿದೆ ಎಂದರೆ ತಪ್ಪಾಗಲಾರದು.
 

Similar News