ಆನ್‌ಲೈನ್ ನಲ್ಲಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಜೂ.2: ಮಹಿಳೆಯಿಂದ ಆಕೆಯ ಪತಿಯ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು 1.21 ಲ.ರೂ. ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.11ರಂದು ಮಹಿಳೆಗೆ ಅಪರಿಚಿತ ವ್ಯಕ್ತಿಯು ಬ್ಯಾಂಕ್ ಖಾತೆ ಸ್ಥಗಿತದ ಬಗ್ಗೆ ಸಂದೇಶ ಕಳುಹಿಸಿದ್ದ. ಅದರ ಬಗ್ಗೆ ವಿಚಾರಿಸಿದಾಗ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು ಅದನ್ನು ಸರಿಪಡಿಸಲು ಡೆಬಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರ ನೀಡುವಂತೆ ತಿಳಿಸಿದ. ಮಹಿಳೆ ಅದನ್ನು ನಿಜವೆಂದು ನಂಬಿ ತನ್ನ ಪತಿಯ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದರು. ಅನಂತರ ಅವರ ಮೊಬೈಲ್‌ಗೆ ಬಂದಿದ್ದ ಒಟಿಪಿಯನ್ನು ಕೂಡ ನೀಡಿದ್ದರು. ಅದೇ ರೀತಿ ಇನ್ನೊಂದು ಬ್ಯಾಂಕ್‌ನ ಖಾತೆಯ ಮಾಹಿತಿಯನ್ನು ಕೂಡ ಆರೋಪಿ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಕೆಲವು ಸಮಯದ ಬಳಿಕ ಅವರ ಪತಿಯ ಖಾತೆಯೊಂದರಿಂದ 71,400 ರೂ. ಮತ್ತು ಇನ್ನೊಂದು ಖಾತೆಯಿಂದ 50,000 ರೂ. ಸಹಿತ 1, 21,400 ರೂ.ಗಳನ್ನು ಅಪರಿಚಿತ ಮೋಸದಿಂದ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
*ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಕೋಟೆಕಾರಿನ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು ಅವರಿಗೆ ಮೇ 28ರಂದು ಎರಡು ಮೊಬೈಲ್ ಸಂಖ್ಯೆಗಳಿಂದ ಸಂದೇಶ ಬಂದಿತ್ತು. ಅದರಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಖಾತೆ ಈ ದಿನ ಸ್ಥಗಿತವಾಗಿದ್ದು ಅದನ್ನು ತಡೆಯಲು ಪಾನ್ ಕಾರ್ಡ್ ಮಾಹಿತಿ ಅಪ್‌ಡೇಟ್ ಮಾಡಬೇಕು ಎಂಬುದಾಗಿ ತಿಳಿಸಲಾಗಿತ್ತು. ಅದರ ಜತೆ ಲಿಂಕ್ ಕೂಡ ಕಳುಹಿಸಲಾಗಿತ್ತು.
ದೂರುದಾರರು ಮೇ 30ರಂದು ಆ ಲಿಂಕ್‌ನ್ನು ಕ್ಲಿಕ್ ಮಾಡಿದ್ದು, ಅದರಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಪೋರ್ಟಲ್ ರೂಪದ ಒಂದು ಪೇಜ್ ತೆರೆದಿದ್ದು ಅದರಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆಗಳನ್ನು ನಮೂದಿಸಿದ್ದಾರೆ. ಬಳಿಕ ಅವರ ಮೊಬೈಲ್‌ಗೆ ಒಟಿಪಿ ಬಂದಿತ್ತು. ಅವರು ಒಟಿಪಿಯನ್ನು ಅದೇ ಪೇಜ್‌ನಲ್ಲಿ ನಮೂದಿಸಿದ್ದಾರೆ ಎನ್ನಲಾಗಿದೆ. ಬಳಿಕ ಹಂತ ಹಂತವಾಗಿ 43,551 ರೂ. ಕಡಿತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.