ಶಾಸನಗಳ ಮರು ಅಧ್ಯಯನ ಅಗತ್ಯ: ಪುಂಡಿಕಾಯ್ ಗಣಪಯ್ಯ ಭಟ್
ಇತಿಹಾಸಜ್ಞನಿಗೆ ಪೊಳಲಿ ಪ್ರಶಸ್ತಿ ಪ್ರದಾನ
ಉಡುಪಿ, ಜೂ.3: ಇತಿಹಾಸಜ್ಞ ಡಾ.ಕೆ.ವಿ.ರಮೇಶ್ ಅವರು ಅಂದು ಲಭ್ಯವಿದ್ದ ಸುಮಾರು 500 ಶಾಸನಗಳ ಆಧಾರದಲ್ಲಿ ತುಳುನಾಡಿನ ಇತಿಹಾಸವನ್ನು ರಚಿಸಿದ್ದಾರೆ. ಆದರೆ ಇಂದು ತುಳುನಾಡಿನಲ್ಲಿ ಸುಮಾರು 2000 ಶಾಸನಗಳು ದೊರಕಿದ್ದು, ಇವುಗಳ ಆಧಾರದಲ್ಲಿ ತುಳುನಾಡಿನ ಸಮಗ್ರ ಇತಿಹಾಸವನ್ನು ರಚಿಸಬೇಕಾಗಿದೆ ಎಂದು ಖ್ಯಾತ ಸಂಶೋಧಕ ಹಾಗೂ ಪುರಾತತ್ವ ತಜ್ಞ ಡಾ.ಪುಂಡಿಕಾಯ್ ಗಣಪಯ್ಯ ಭಟ್ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಇವುಗಳ ಜಂಟಿ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣ ದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆ ಹಾಗೂ ಎಸ್.ಆರ್.ಹೆಗ್ಡೆ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಹಿಂದೆ ಸಿಕ್ಕಿದ ಕೆಲವು ಶಾಸನಗಳಲ್ಲಿ ಕೆಲವನ್ನು ಭಾಷೆ ಮತ್ತು ಲಿಪಿಯ ಕಾರಣ ಮರು ಓದಿನ ಅಗತ್ಯ ಕಂಡುಬಂದಿದೆ ಎಂದ ಅವರು ಕರಾವಳಿಯ ಮೊದಲ ಇತಿಹಾಸಕಾರ ಬಿ.ಎ.ಸಾಲೆತ್ತೂರು ಅವರು ಮಾಡಿದಂತೆ ಸಮಾಜದ ಇತಿಹಾಸ ರಚಿಸುವಾಗ ಪಾಡ್ದನದಂಥ ಮೌಖಿಕ ಪರಂಪರೆಯತ್ತ ಗಮನ ಹರಿಸುವುದು ಸಹ ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ತುಳುನಾಡಿನ ಇತಿಹಾಸದ ಕುರಿತಂತೆ 50ಕ್ಕೂ ಅಧಿಕ ಪಿಎಚ್‌ಡಿ ಪ್ರಬಂಧಗಳು ಮಂಡನೆಯಾಗಿದ್ದು, ಅವುಗಳು ಒಂದೇ ಕಡೆ ಲಭ್ಯವಿರುವಂತೆ ನೋಡಿಕೊಳ್ಳಬೇಕಾಗಿದೆ. ಬಾರಕೂರಿನಲ್ಲಿ ಸಿಕ್ಕಿದ ನೂರಾರು ಶಾಸನಗಳನ್ನು ಮತ್ತೆ ಪತ್ತೆ ಹಚ್ಚಿ ಓದಬೇಕು. ಸಿಕ್ಕ ಶಾಸನಗಳನ್ನು ದಾಖಲಿಸಿಕೊಂಡು ಅವುಗಳನ್ನು ಕೃತಿಯ ರೂಪದಲ್ಲಿ ತರಬೇಕು ಎಂದು ಸಲಹೆ ನೀಡಿದರು.
ಕರಾವಳಿ ಜಿಲ್ಲೆಗಳಲ್ಲಿ ಒಂದು ಕಾಲದಲ್ಲಿ ವಿಪುಲವಾಗಿದ್ದ ಹವ್ಯಾಸಿ ಇತಿಹಾಸಕಾರರ ಪರಂಪರೆಯನ್ನು ನಾವು ಮತ್ತೆ ಕಾಣಬೇಕಾಗಿದೆ. ಪೊಳಲಿ ಶೀನಪ್ಪ ಹೆಗ್ಗಡೆ, ಐಕಳ ಗಣಪತಿ ರಾವ್, ಮಂಜೇಶ್ವರ ಗೋವಿಂದ ಪೈ ಮುಂತಾದವ ರಿಂದ ಪ್ರಾರಂಭಗೊಂಡ ಹವ್ಯಾಸಿ ಇತಿಹಾಸಕಾರರ ಈ ಪರಂಪರೆ ತುಳುನಾಡಿನ ಇತಿಹಾಸದ ಅಧ್ಯಯನಕ್ಕೆ ವೃತ್ತಿಪರ ಇತಿಹಾಸಕಾರ ರ ಅಧ್ಯಯನಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಲ್ಲದೇ ಅವರಿಗೆ ಪ್ರೇರಣೆಯನ್ನು ಸಹ ನೀಡಿತ್ತು ಎಂದು ಡಾ. ಗಣಪಯ್ಯ ಭಟ್ ನುಡಿದರು.
ಎಂ.ಬಾಬು, ಕೇಶವಕೃಷ್ಣ ಕುಡ್ವ, ಮುಕುಂದ ರಾವ್, ನಿತ್ಯಾನಂದ ಪೈ ಮುಂತಾದವರಿಂದ ಮುಂದುವರಿದ ಈ ಪರಂಪರೆ ಕರಾವಳಿಯಲ್ಲಿ ಈಗ ಸಂಪೂರ್ಣ ಕಣ್ಮರೆಯಾಗಿದೆ. ಆದರೆ ಘಟ್ಟದ ಮೇಲೆ ಈ ಪರಂಪರೆ ಸಶಕ್ತವಾಗಿ ಮುಂದುವರಿದಿದೆ ಎಂದವರು ನುಡಿದರು.
ಸಮಾರಂಭದಲ್ಲಿ ಮರುಮುದ್ರಣಗೊಂಡ ‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚಿನ ಇತಿಹಾಸ’ ಕೃತಿಯನ್ನು ಬಿಡುಗಡೆ ಗೊಳಿಸಲಾಯಿತು. ಮಾಹೆಯ ಮಣಿಪಾಲ ಯೂನಿವರ್ಸಲ್ ಪ್ರೆಸ್‌ನ ಮುಖ್ಯ ಸಂಪಾದಕಿ ಹಾಗೂ ಯೂರೋಪಿ ಯನ್ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಪ್ರೊ. ನೀತಾ ಇನಾಂದಾರ್ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಕೃತಿಯ ಸಂಪಾದಕ ಡಾ.ಪಾದೇಕಲ್ಲು ವಿಷ್ಣುಭಟ್ ಅವರು ಕೃತಿ ಪರಿಚಯ ಮಾಡಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅವರು ಅಧ್ಯಕ್ಷತೆ ವಹಿಸಿದ್ದರು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಾತ್ನಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಸುರೇಶ್ ರೈ ಅಭಿನಂದನಾ ಭಾಷಣ ಮಾಡಿದರು. ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿ ಅವರು ಪೊಳಲಿ ಶೀನಪ್ಪ ಹೆಗ್ಗಡೆ ಹಾಗೂ ಎಸ್.ಆರ್.ಹೆಗ್ಡೆ ಅವರ ಕುರಿತು ಮಾತನಾಡಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಚೇಳ್ಯಾರುಗುತ್ತು ಎಸ್.ಆರ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ.ಇಂದಿರಾ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೇಖಕ ರಾಮಾಂಜಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಇತಿಹಾಸಕಾರ ಬಿಎಂಟಿಸಿ ಚಾಲಕ
ಕರಾವಳಿ ಜಿಲ್ಲೆಗಳಲ್ಲಿ ಹವ್ಯಾಸಿ ಇತಿಹಾಸಕಾರರ ಪರಂಪರೆ ಇತ್ತೀಚೆಗೆ ನಶಿಸಿ ಹೋಗುತಿದ್ದರೆ, ಉಳಿದೆಡೆ ಈಗಲೂ ಈ ಪರಂಪರೆ ಮುಂದುವರಿದಿದೆ. ಐಟಿ, ಬಿಟಿಯ ಕೆಲವು ಉತ್ಸಾಹಿ ಯುವಕರು ಇತಿಹಾಸದ ಬಗ್ಗೆ ಆಸಕ್ತಿ ಬೆಳೆಸಿಕೊಂ ಡಿದ್ದಾರೆ. ಬೆಂಗಳೂರಿನ ಬಿಎಂಟಿಸಿಯ ಚಾಲಕ ಧನಪಾಲ್ ಇವರಲ್ಲೊಬ್ಬರು ಎಂದು ಡಾ. ಪುಂಡಿಕಾಯ್ ಗಣಪಯ್ಯ ಭಟ್ ನುಡಿದರು.
ಇತ್ತೀಚೆಗೆ ಚಾಲಕ ವೃತ್ತಿಯಿಂದ ನಿವೃತ್ತರಾದ ಧನಪಾಲ್, ಪೂರ್ಣಕಾಲಿಕ ಇತಿಹಾಸಕಾರನಾಗಿ ಮುಂದುವರಿ ಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆತ ಇದುವರೆಗೆ 100ಕ್ಕೂ ಅಧಿಕ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ. ಅದೇ ರೀತಿ ನಿತಿನ್ ಎಂಬ ಯುವಕನ ಇತಿಹಾಸ ಜ್ಞಾನ ಅದ್ಭುತ ಎಂದು ಡಾ.ಭಟ್ ನುಡಿದರು.