ಗ್ಯಾರಂಟಿಗಳ ಜಾರಿ: ನೋಟು ನಿಷೇಧ, ಲಾಕ್‌ಡೌನ್ ಗಾಯಗಳಿಗೆ ಹಚ್ಚಿದ ಮುಲಾಮು

Update: 2023-06-05 04:31 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ನೋಟು ನಿಷೇಧ, ಲಾಕ್‌ಡೌನ್ ಮೊದಲಾದ ಕೇಂದ್ರ ಸರಕಾರದ ತಪ್ಪು ನಿರ್ಧಾರಗಳಿಂದ ಗಾಯಗೊಂಡು ಬಿದ್ದಿರುವ ಭಾರತಕ್ಕೆ ಕರ್ನಾಟಕ ರಾಜ್ಯ ಮುಲಾಮು ಹಚ್ಚುವ ಪ್ರಯತ್ನ ನಡೆಸಿದೆ. ಜೂನ್ 2ರಂದು ರಾಜ್ಯದ ನೂತನ ಸರಕಾರ ಘೋಷಿಸಿರುವ ಚಾರಿತ್ರಿಕ ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾದರೆ, ಅದು ಭವಿಷ್ಯದಲ್ಲಿ ಇಡೀ ಭಾರತಕ್ಕೆ ಮಾದರಿಯಾಗಲಿದೆ. ಆದುದರಿಂದಲೇ, ಕರ್ನಾಟಕದಲ್ಲಿ ಪ್ರಕಟಗೊಂಡ ಐದು ಗ್ಯಾರಂಟಿಗಳನ್ನು ಭಾರತದ ಇತರ ರಾಜ್ಯಗಳು ಕುತೂಹಲದಿಂದ ಗಮನಿಸುತ್ತಿವೆ.ಕರ್ನಾಟಕದ ಈ ನಿರ್ಧಾರವನ್ನು ಅಭಿನಂದಿಸಬೇಕಾದ ಪ್ರಧಾನಿ ಮೋದಿಯವರು ಮಾತ್ರ, 'ಜನಸಾಮಾನ್ಯರಿಗೆ ಉಚಿತವಾಗಿ ನೀಡುವುದರಿಂದ ದೇಶ ದಿವಾಳಿಯಾಗಲಿದೆ' ಎಂದು ಜನವಿರೋಧಿ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುತ್ತಿದ್ದಾರೆ. 2014ರಿಂದ ಕೇಂದ್ರ ಸರಕಾರ ಯಾವುದೇ ಉಚಿತಗಳನ್ನು ಜನರಿಗಾಗಿ ನೀಡಿಲ್ಲ. ಬದಲಿಗೆ ಸಾಮಾಜಿಕ ವಲಯಗಳಿಗೆ ನೀಡುತ್ತಿದ್ದ ಅನುದಾನಗಳನ್ನು ಹಂತ ಹಂತವಾಗಿ ಕಡಿತಗೊಳಿಸುತ್ತಾ ಬಂತು. ಅಡುಗೆ ಅನಿಲಗಳಿಗೆ ನೀಡುತ್ತಿದ್ದ ಸಬ್ಸಿಡಿಗಳಿಗೂ ಕತ್ತರಿ ಬಿತ್ತು. ಇಂದು ಅಡುಗೆ ಅನಿಲ ಸಿಲಿಂಡರ್ ಬೆಲೆ ಒಂದು ಸಾವಿರ ರೂ. ದಾಟಿದೆ.

ಉಚಿತಗಳನ್ನು ಕಡಿತಗೊಳಿಸಿ, ಹೆಚ್ಚು ತೆರಿಗೆಗಳನ್ನು ವಿಧಿಸಿದ ಕಾರಣದಿಂದ ಪ್ರಧಾನಿಯ ಪ್ರಕಾರ ದೇಶವಿಂದು ಸಂಪತ್ತಿನಿಂದ ತುಂಬಿ ತುಳುಕಬೇಕಾಗಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2014ರಿಂದ ದೇಶದ ಆರ್ಥಿಕತೆಯಲ್ಲಿ ಭಾರೀ ಹಿಂಜರಿಕೆ ಕಂಡಿದೆ. ದೇಶ ಹಂತ ಹಂತವಾಗಿ ದಿವಾಳಿಯಾಗುತ್ತಾ ಬಂದಿದೆ. ಯಾವುದೇ 'ಉಚಿತ'ಯೋಜನೆಗಳನ್ನು ಘೋಷಣೆ ಮಾಡದೇ ಇದ್ದರೂ ದೇಶ ಯಾಕೆ ಆರ್ಥಿಕವಾಗಿ ಬಿಕ್ಕಟ್ಟನ್ನು ಎದುರಿಸುತ್ತಿದೆ? ಇದಕ್ಕೆ ತಕ್ಷಣ ಸರಕಾರ ನೀಡುವ ನೆಪ 'ಕೊರೋನ' ಮತ್ತು 'ಲಾಕ್‌ಡೌನ್'. ಆದರೆ ದೇಶದ ಆರ್ಥಿಕತೆಯ ಮೇಲೆ ಭಾರೀ ಆಘಾತ ನೀಡಿರುವುದು ಸರಕಾರದ ನೋಟು ನಿಷೇಧ ನಿರ್ಧಾರ. ನೋಟು ನಿಷೇಧಗೊಂಡ ಬರೇ ಎರಡು ವರ್ಷಗಳೊಳಗೆ ಈ ದೇಶದ 50 ಲಕ್ಷ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎನ್ನುವುದನ್ನು ವರದಿ ಹೇಳುತ್ತದೆ. ಈ ಉದ್ಯೋಗ ನಷ್ಟ 40 ವರ್ಷಗಳಲ್ಲೇ ಅತ್ಯಧಿಕ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉದ್ಯೋಗಕಳೆದುಕೊಂಡ ಬಹುತೇಕರು 20-24 ವರ್ಷದ ಒಳಗಿನ ಯುವಕರು ಎನ್ನುವ ಅಂಶವನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಸಂಶೋಧಕರು ತಮ್ಮ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಅವಧಿಯಲ್ಲಿ ಮುಚ್ಚಲ್ಪಟ್ಟ ಸಣ್ಣ ಉದ್ದಿಮೆಗಳ ಸಂಖ್ಯೆಯೂ ಬಹುದೊಡ್ಡದು. ದೇಶದಲ್ಲಿ ಬಡತನ, ಅಪೌಷ್ಟಿಕತೆ ಹೆಚ್ಚುವುದಕ್ಕೆ ಇದು ಕಾರಣವಾಯಿತು. ನೋಟು ನಿಷೇಧದಿಂದಾಗಿ ಕಪ್ಪು ಹಣ ಬೆಳಕಿಗೆ ಬರಲಿಲ್ಲ. ದೇಶಕ್ಕೆ ನಷ್ಟವನ್ನು ಹೊರತು ಪಡಿಸಿ ಯಾವ ಲಾಭವೂ ಆಗಲಿಲ್ಲ. ಸರಕಾರ ಆತುರಾತುರವಾಗಿ ಮುದ್ರಿಸಿದ 2000 ರೂ. ಮುಖಬೆಲೆಯ ನೋಟಿನಿಂದಾಗಿ ನಕಲಿ ನೋಟುಗಳ ಸಂಖ್ಯೆ ಏಕಾಏಕಿ ಹೆಚ್ಚಿತು.

ಸರಕಾರದ ನೋಟು ನಿಷೇಧ ನಿರ್ಧಾರಕ್ಕಾಗಿ ಈ ದೇಶದಲ್ಲಿ ಲಕ್ಷಾಂತರಜನರು ಬೇರೆ ಬೇರೆ ರೀತಿಯಲ್ಲಿ ಬಲಿದಾನಗಳನ್ನು ಗೈದರು. ಆದರೆ ಅದರಿಂದ ದೇಶಕ್ಕಾದ ಲಾಭವೇನು ಎನ್ನುವುದು ಯಾರಿಗೂ ಸ್ಪಷ್ಟವಿಲ್ಲ. ಆನಂತರ ಕೊರೋನ, ಲಾಕ್‌ಡೌನ್‌ನಲ್ಲಿ ಸರಕಾರ ಬೇಜವಾಬ್ದಾರಿಯನ್ನು ಮೆರೆಯಿತು. ಒಂದೆಡೆ ಕೊರೋನದ ಹೆಸರಿನಲ್ಲಿ ಬಡವರು, ಕಾರ್ಮಿಕರು ಬೀದಿಗಿಳಿಯದ ಸ್ಥಿತಿ ನಿರ್ಮಾಣವಾಗಿದ್ದರೆ, ಇನ್ನೊಂದೆಡೆ ಸರಕಾರದ ನೇತೃತ್ವದಲ್ಲೇ ಚುನಾವಣೆಯ ಬೃಹತ್ ಸಮಾವೇಶಗಳು ನಡೆಯುತ್ತಿದ್ದವು. ಲಾಕ್‌ಡೌನ್‌ನಿಂದಾಗಿ ಈ ದೇಶದ ಬಡತನ ಇಂದು ಭೀಕರ ಸ್ಥಿತಿಯನ್ನು ತಲುಪಿದೆ. ಭಾರತ ಇಂದು ಹಸಿವಿನ ಸೂಚ್ಯಂಕದಲ್ಲಿ 107ನೇ ಸ್ಥಾನವನ್ನು ತಲುಪಿದೆ. 2021ರಲ್ಲಿ 101ನೇ ಸ್ಥಾನದಲ್ಲಿತ್ತು. ಕೇವಲ ಒಂದು ವರ್ಷದಲ್ಲಿ 6 ಅಂಕಗಳಿಗಿಂತ ಕೆಳಗಿದೆ. ಲಾಕ್‌ಡೌನ್‌ನಿಂದ ಅತ್ಯಧಿಕ ಮಹಿಳೆಯರು ಅತಂತ್ರರಾದರು. ಸಣ್ಣ ಪುಟ್ಟ ಉದ್ಯೋಗಗಳನ್ನು ಮಾಡಿ ಬದುಕುಕಟ್ಟಿಕೊಂಡಿದ್ದ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡರು. ನೋಟು ನಿಷೇಧದಿಂದಾದ ಅನಾಹುತಗಳನ್ನೆಲ್ಲ ಕೊರೋನ, ಲಾಕ್‌ಡೌನ್ ತಲೆಗೆ ಕಟ್ಟಲಾಯಿತು. ಒಂದು ವೇಳೆ ನೋಟು ನಿಷೇಧ ಆಗದೇ ಇದ್ದಿದರೆ, ಕೊರೋನಾ ಹಾನಿಯನ್ನು ತಾಳಿಕೊಳ್ಳುವ ಶಕ್ತಿ ಭಾರತಕ್ಕಿರುತ್ತಿತ್ತು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಕೇಂದ್ರ ಸರಕಾರದ ಆಡಳಿತ ವೈಫಲ್ಯಗಳ ಕಾರಣದಿಂದ ಈ ದೇಶ ದಿವಾಳಿಯಾಗಿದೆಯೇ ಹೊರತು, ಯಾವುದೇ ಉಚಿತಗಳನ್ನು ನೀಡುವ ಮೂಲಕ ಅಲ್ಲ ಎನ್ನುವುದು ದೇಶದ ಜನರಿಗೆ ಈಗಾಗಲೇ ಸ್ಪಷ್ಟವಾಗಿದೆ.

ಈ ದೇಶದ ಬಡವರಿಗೆ, ಆರ್ಥಿಕ ದುರ್ಬಲರಿಗೆ ಯಾವುದೇ ಸವಲತ್ತುಗಳನ್ನು ಪ್ರಧಾನಿ ಮೋದಿ ತನ್ನ ಸ್ವಂತ ತಿಜೋರಿಯಿಂದ ನೀಡುತ್ತಿಲ್ಲ. ಇಲ್ಲಿರುವ ಪ್ರತೀ ಬಡವರೂ ತೆರಿಗೆಗಳನ್ನು ಕಟ್ಟುತ್ತಿದ್ದಾರೆ. ಅವರು ಕಟ್ಟಿದ ತೆರಿಗೆಗಳನ್ನು ಅವರಿಗೆ ಯೋಗ್ಯ ರೀತಿಯಲ್ಲಿ ಮರಳಿಸುವುದು ಸರಕಾರದ ಹೊಣೆಗಾರಿಕೆ. ತೆರಿಗೆ ಕಟ್ಟುತ್ತಿರುವ ಜನರಿಗೆ ಉದ್ಯೋಗ, ಶಿಕ್ಷಣ, ಆರೋಗ್ಯ ಮೊದಲಾದ ಸೇವೆಗಳನ್ನು ಒದಗಿಸುವುದು ಸರಕಾರದ ಕರ್ತವ್ಯ. ಅದರಲ್ಲಿ ವಿಫಲವಾದಾಗ ಅಥವಾ ತನ್ನ ಆಡಳಿತದ ಕಾರಣದಿಂದಲೇ ಜನರು ಬಡತನಕ್ಕೆ ತಳ್ಳಲ್ಪಟ್ಟಾಗ ಅವರಿಗೆ ಉಚಿತ ಅಥವಾ ಸಬ್ಸಿಡಿಗಳ ಅಗತ್ಯಗಳನ್ನು ಪೂರೈಸಬೇಕು. ಇದು ಆಡಳಿತದ ಭಾಗವೇ ಹೊರತು, ಜನರಿಗೆ ತೋರಿಸುವ ಯಾವುದೇ ವಿಶೇಷ ಔದಾರ್ಯವಲ್ಲ. ಈ ದೇಶದಲ್ಲಿ ಪ್ರತಿಮೆಗಳನ್ನು ನಿರ್ಮಿಸಲು ಸಾವಿರಾರು ಕೋಟಿ ರೂ. ಸರಕಾರದ ಬಳಿಯಿದೆ. ಕೊರೋನ, ಲಾಕ್‌ಡೌನ್‌ಗಳಿಂದ ದೇಶ ತತ್ತರಿಸುತ್ತಿರುವ ಸಂದರ್ಭದಲ್ಲಿ ಅತ್ಯಾಧುನಿಕ ಸಂಸತ್ ಭವನ ನಿರ್ಮಾಣಕ್ಕೆ ಸರಕಾರದ ಬಳಿ ಹಣವಿದೆ. ಶಿವಾಜಿ ಪ್ರತಿಮೆ, ಅಂಬೇಡ್ಕರ್ ಪ್ರತಿಮೆ, ಪಟೇಲ್ ಪ್ರತಿಮೆ ಎಂದು ಕೋಟ್ಯಂತರ ರೂ. ವ್ಯಯವಾಗುವುದರಿಂದ ದೇಶ ದಿವಾಳಿಯಾಗುವುದಿಲ್ಲ. ಆದರೆ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಹಂಚುವಾಗ ಮಾತ್ರ ಹೇಗೆ ದೇಶ ದಿವಾಳಿಯಾಗುತ್ತದೆ? ಗುಜರಾತ್‌ನ ಹಲವು 'ಮೋದಿ'ಗಳು ಬ್ಯಾಂಕುಗಳಿಗೆ ವಂಚಿಸಿದಾಗ ದೇಶ ದಿವಾಳಿಯಾಗುವುದಿಲ್ಲ. ಅದಾನಿಗೆ ಈ ದೇಶದ ಸಾರ್ವಜನಿಕ ಸೊತ್ತುಗಳನ್ನು ಸಾಲು ಸಾಲಾಗಿ ಮಾರಾಟ ಮಾಡುವಾಗಲೂ ದೇಶ ದಿವಾಳಿಯಾಗುವುದಿಲ್ಲ. ಆದರೆ ಜನಸಾಮಾನ್ಯರಿಗೆ ಅವರ ಮೂಲಭೂತ ಅಗತ್ಯಗಳನ್ನು ಈಡೇರಿಸುವಾಗ ಮಾತ್ರ ದೇಶ ದಿವಾಳಿಯಾಗುತ್ತದೆ ಎಂದು ಭಾವಿಸುವ ನಾಯಕನನ್ನು ನಾವು ಜನದ್ರೋಹಿ ನಾಯಕನೆಂದು ಕರೆಯಬೇಕಾಗುತ್ತದೆ.

ದೇಶ ಸಂಕಟದಲ್ಲಿದ್ದಾಗ ಪ್ರತಿಮೆಗಳು, ಪಾರ್ಕ್‌ಗಳು, ಅನಗತ್ಯ ಬುಲೆಟ್ ಟ್ರೈನ್‌ಗಳಿಗೆ ವ್ಯಯ ಮಾಡುವ ಹಣವನ್ನು ಬಡಜನರ ಕಡೆಗೆ ವರ್ಗಾಯಿಸಬೇಕು. ಜನಸಾಮಾನ್ಯರು ಆರ್ಥಿಕವಾಗಿ ಚೇತರಿಕೆಯಾದಾಗ ಮಾತ್ರ ನಮ್ಮ ಮಾರುಕಟ್ಟೆಗಳು ಚೇತರಿಸಲು ಸಾಧ್ಯ. ಅವರ ಆರೋಗ್ಯ, ಶಿಕ್ಷಣದಲ್ಲಿ ಧನಾತ್ಮಕ ಬದಲಾವಣೆಯಾದಾಗ ಮಾತ್ರ ದೇಶ ಬದಲಾವಣೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮೋದಿಯ ನಿರ್ಧಾರಗಳಿಂದ ಈ ದೇಶಕ್ಕಾದ ಗಾಯಗಳಿಗೆ ಕರ್ನಾಟಕ ಔಷಧಿಯನ್ನು ಹಚ್ಚುವ ಪ್ರಯತ್ನ ನಡೆಸುತ್ತಿದೆ. ಇದನ್ನು ಪ್ರಧಾನಿಯವರು ಮೆಚ್ಚಬೇಕು ಮಾತ್ರವಲ್ಲ, ಗ್ಯಾರಂಟಿಗಳ ಅನುಷ್ಠಾನಕ್ಕೆ ಕರ್ನಾಟಕಕ್ಕೆ ಬೇಕಾದ ಸಕಲ ಸವಲತ್ತುಗಳನ್ನು ಒದಗಿಸಿಕೊಡಬೇಕು. ಕರ್ನಾಟಕದ ಜನರು ಕಟ್ಟಿದ ತೆರಿಗೆಯ ಅರ್ಧಾಂಶವನ್ನು ಅವರಿಗೆ ಮರಳಿಸಿದರೂ ಸಾಕು, ಗ್ಯಾರಂಟಿಗಳು ಯಶಸ್ವಿಯಾಗಿ ಜಾರಿಯಾಗಲಿವೆ.

Similar News