ಬ್ರಿಜ್ ಭೂಷಣ್ ನಿವಾಸಕ್ಕೆ ದಿಲ್ಲಿ ಪೊಲೀಸ್ ಭೇಟಿ: ಸಹವರ್ತಿ, ಕೆಲಸಗಾರರ ಹೇಳಿಕೆ ದಾಖಲು
ಲಕ್ನೊ: ಲೈಂಗಿಕ ಕಿರುಕುಳ ಆರೋಪದ ತನಿಖೆಯ ಭಾಗವಾಗಿ ದಿಲ್ಲಿ ಪೊಲೀಸರು ಮಂಗಳವಾರ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಉತ್ತರಪ್ರದೇಶದ ಗೋಂಡಾದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಅವರ ಸಹವರ್ತಿ ಹಾಗೂ ಕೆಲಸಗಾರರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ. ಅವರು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ದಿಲ್ಲಿ ಪೊಲೀಸರ ತಂಡ ಗೋಂಡಾದಲ್ಲಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿದ್ದಾರೆ ಹಾಗೂ ಮನೆಯಲ್ಲಿದ್ದ ಅವರ ಸಹವರ್ತಿಗಳು, ಕೆಲಸಗಾರರು ಹಾಗೂ ಚಾಲಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ತನಿಖೆಯ ಭಾಗವಾಗಿ ಪುರಾವೆಗಳನ್ನು ಸಂಗ್ರಹಿಸಲು ಹಾಗೂ ಪ್ರಕರಣದಲ್ಲಿ ಸಿಂಗ್ ಹಾಗೂ ದೂರುದಾರರ ಆರೋಪವನ್ನು ಸಾಕ್ಷಿಗಳ ಮೂಲಕ ದೃಡಪಡಿಸಲು ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣ ತುಂಬಾ ಸೂಕ್ಷ್ಮವಾಗಿರುವುದರಿಂದ ನಾವು ಇದಕ್ಕೆ ಸಂಬಂಧಿಸಿ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಹೇಳಿಕೆಗಳನ್ನು ದಾಖಲಿಸಿಕೊಳ್ಳುವಾಗ ಪೊಲೀಸರ ತಂಡ ಅವರ ಗುರುತು ಚೀಟಿಯನ್ನು ಪರಿಶೀಲಿಸಿದೆ ಹಾಗೂ ಅವರ ವಿಳಾಸವನ್ನು ದಾಖಲಿಸಿಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.