2,000 ರೂ.ನೋಟು ವಿನಿಮಯ ಪ್ರಶ್ನಿಸಿರುವ ಅರ್ಜಿಯ ತುರ್ತು ವಿಚಾರಣೆ: ರಿಜಿಸ್ಟ್ರಿಯಿಂದ ವರದಿ ಕೇಳಿದ ಸುಪ್ರೀಂ
ಹೊಸದಿಲ್ಲಿ: ಯಾವುದೇ ಕೋರಿಕೆ ಸ್ಲಿಪ್ ಅಥವಾ ಗುರುತು ಪುರಾವೆಯಿಲ್ಲದೆ 2,000 ರೂ.ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವ ಆರ್‌ಬಿಐ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ತುರ್ತು ವಿಚಾರಣೆ ಕುರಿತಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ತನ್ನ ರಿಜಿಸ್ಟ್ರಿಯಿಂದ ವರದಿಯನ್ನು ಕೇಳಿದೆ.
ಅರ್ಜಿದಾರರಾಗಿರುವ ವಕೀಲ ಅಶ್ವಿನಿ ಉಪಾಧ್ಯಾಯ ಅವರು ತುರ್ತು ವಿಚಾರಣೆಯನ್ನು ಕೋರಿ ವಿಷಯವನ್ನು ಉಲ್ಲೇಖಿಸಿದ ಬಳಿಕ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ರಾಜೇಶ ಬಿಂದಾಲ್ ಅವರ ರಜಾಕಾಲ ಪೀಠವು ಈ ಆದೇಶವನ್ನು ಹೊರಡಿಸಿತು.
ಉಪಾಧ್ಯಾಯರ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಜೂ.1ರಂದು ನಿರಾಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು, ಬೇಸಿಗೆ ರಜೆಯಲ್ಲಿ ಇಂತಹ ಅರ್ಜಿಗಳನ್ನು ತಾನು ಕೈಗೆತ್ತಿಕೊಳ್ಳುವುದಿಲ್ಲ ಎಂದು ತಿಳಿಸಿತ್ತು.
ಮಾವೋವಾದಿಗಳು,ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳು ನೋಟುಗಳನ್ನು ವಿನಿಮಯಿಸಿಕೊಳ್ಳುತ್ತಿದ್ದಾರೆ. 80,000 ಕೋ.ರೂ.ವೌಲ್ಯದ ನೋಟುಗಳನ್ನು ವಿನಿಮಯಿಸಿಕೊಳ್ಳಲಾಗಿದೆ ಎಂದು ಮಾಧ್ಯಮ ವರದಿಗಳು ಸೂಚಿಸಿವೆ. ಹೀಗಾಗಿ ಇದು ಬಹಳ ಮುಖ್ಯವಾದ ವಿಷಯವಾಗಿದೆ ಎಂದು ಉಪಾಧ್ಯಾಯ ಬುಧವಾರ ನ್ಯಾಯಾಲಯಕ್ಕೆ ತಿಳಿಸಿದರು.
‘ನಾವು ಮಾಧ್ಯಮ ವರದಿಗಳನ್ನು ಅನುಸರಿಸಲು ಸಾಧ್ಯವಿಲ್ಲ. ನೀವು ಶುಕ್ರವಾರ ತುರ್ತು ವಿಚಾರಣೆ ಕೋರಿದ್ದೀರಿ,ಅಷ್ಟರೊಳಗೆ ನಾವು ರಿಜಿಸ್ಟ್ರಿ ವರದಿಯನ್ನು ಪರಿಶೀಲಿಸುತ್ತೇವೆ ’ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ವಿಷಯವನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ. ಹೀಗಿರುವಾಗ ಮತ್ತೊಮ್ಮೆ ಪ್ರಕರಣವನ್ನು ಪ್ರಸ್ತಾಪಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು.
ಕೋರಿಕೆ ಸ್ಲಿಪ್ ಅಥವಾ ಗುರುತು ಪುರಾವೆಯಂತಹ ಯಾವುದೇ ದಾಖಲೆಗಳಿಲ್ಲದೆ 2,000 ರೂ.ನೋಟುಗಳ ವಿನಿಮಯಕ್ಕೆ ಅವಕಾಶ ಕಲ್ಪಿಸಿರುವ ಆರ್ಬಿಐ ಮತ್ತು ಎಸ್ಬಿಐ ಅಧಿಸೂಚನೆಗಳನ್ನು ಪ್ರಶ್ನಿಸಿ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಮೇ 29ರಂದು ವಜಾಗೊಳಿಸಿದ್ದು,ಅದನ್ನು ಪ್ರಶ್ನಿಸಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ.