ಹೈದರಾಬಾದ್: ಪ್ರೇಯಸಿಯನ್ನು ಕೊಂದು ಮೃತದೇಹವನ್ನು ಮ್ಯಾನ್‌ಹೋಲ್‌ಗೆ ಎಸೆದ ಅರ್ಚಕನ ಬಂಧನ
ಹೈದರಾಬಾದ್: ನಗರದ ಹೊರವಲಯದ ಶಂಶಾಬಾದ್ ಎಂಬಲ್ಲಿಂದ ನಾಪತ್ತೆಯಾಗಿದ್ದ 30 ವರ್ಷದ ಮಹಿಳೆಯೊಬ್ಬರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಜೂನ್ 4ರಂದು ಪತ್ತೆಯಾಗಿದ್ದು ಈ ಸಂಬಂಧ ಪೊಲೀಸರು ದೇವಳದ ಅರ್ಚಕನೊಬ್ಬನನ್ನು ಬಂಧಿಸಿದ್ದಾರೆ.
ಆರೋಪಿ ಅಯ್ಯಗಿರಿ ಸಾಯಿ ಕೃಷ್ಣ (36) ಮಹಿಳೆಯನ್ನು ಕೊಲೆಗೈದು ಮೃತದೇಹವನ್ನು ಮ್ಯಾನ್‌ಹೋಲ್ ಒಂದರೊಳಗೆ ಎಸೆದು ನಂತರ ಠಾಣೆಗೆ ನಾಪತ್ತೆ ದೂರು ದಾಖಲಿಸಲು ತೆರಳಿದ್ದ.
ಮೃತ ಮಹಿಳೆ ಕುರುಗಂಟಿ ಅಪ್ಸರಾ ಎಂಬಾಕೆಗೆ ಸಾಯಿ ಕೃಷ್ಣನನ್ನು ಮದುವೆಯಾಗುವ ಹಂಬಲವಿತ್ತು. ಆರೋಪಿಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ತನ್ನನ್ನು ಮದುವೆಯಾಗುವಂತೆ ಆಕೆ ಆತನ ಮೇಲೆ ದಂಬಾಲು ಬಿದ್ದಿದ್ದಳಲ್ಲದೆ ತನ್ನ ಮಾತು ಕೇಳದೇ ಇದ್ದರೆ ತಮ್ಮ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಬೆದರಿಸಿದ್ದಳೆಂದು ತಿಳಿದು ಬಂದಿದೆ. ಇತ್ತೀಚೆಗೆ ಗರ್ಭಪಾತ ಮಾಡಿಸಿಕೊಂಡಿದ್ದ ಅಪ್ಸರಾ ಆರೋಪಿ ತನ್ನ ಕುಟುಂಬ ತೊರೆದು ತನ್ನನ್ನು ಮದುವೆಯಾಗುವಂತೆ ಬಲವಂತಪಡಿಸಿದ್ದಳು. ಇದೇ ಕಾರಣಕ್ಕೆ ಸಾಯಿ ಕೃಷ್ಣ ಆಕೆಯನ್ನು ಸಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಸರೂರ್ ನಗರ ಎಂಬಲ್ಲಿನ ದೇವಸ್ಥಾನವೊಂದರ ಅರ್ಚಕನಾಗಿರುವ ಸಾಯಿ ಕೃಷ್ಣ, ಜೂನ್ 3ರಂದು ಅಪ್ಸರಾಳನ್ನು ಶಂಶಾಬಾದ್ ಸಮೀಪ ಕರೆದೊಯ್ದಿದ್ದ. ಅಲ್ಲಿ ಅವರಿಬ್ಬರ ನಡುವೆ ಜಗಳವಾಗಿ ಕಲ್ಲಿನಿಂದ ಆತ ಆಕೆಯ ತಲೆಯನ್ನು ಜಜ್ಜಿದ್ದ. ನಂತರ ಸರೂರ್‌ನಗರ್ ಎಂಬಲ್ಲಿ ಮೃತದೇಹವನ್ನು ಮ್ಯಾನ್‌ಹೋಲ್‌ನಲ್ಲಿ ಬಿಸಾಕಿ ನಂತರ ಜೂನ್ 5ರಂದು ಪೊಲೀಸರಿಗೆ ದೂರು ನೀಡಿ ತಾನು ಅಪ್ಸರಾಳನ್ನು ಶಂಶಾಬಾದ್ ತನಕ ಡ್ರಾಪ್ ಮಾಡಿದ್ದಾಗಿ ಹಾಗೂ ಆಕೆ ಸ್ನೇಹಿತೆಯರೊಂದಿಗೆ ಭದ್ರಾಚಲಂಗೆ ತೆರಳಿದ್ದಾಳೆ ಆದರೆ ಜೂನ್ 4ರಿಂದ ಕರೆ ಸ್ವೀಕರಿಸುತ್ತಿಲ್ಲ ಎಂದು ದೂರಿದ್ದ.
ಆದರೆ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರಿಗೆ ಸಾಯಿ ಕೃಷ್ಣ ಸುಳ್ಳು ಹೇಳುತ್ತಿದ್ದಾನೆಂದು ತಿಳಿದು ಆತನನ್ನು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದನನಲ್ಲದೆ ಆಕೆಯ ಮೃತದೇಹ ಬಿಸಾಕಿದ ಮ್ಯಾನ್‌ಹೋಲ್‌ಗೆ ಎರಡು ಟ್ರಕ್ ಲೋಡ್ ಮಣ್ಣು ಹಾಕಿಸಿದ್ದೇ ಅಲ್ಲದೆ ಆಕೆಯ ಬ್ಯಾಗುಗಳಿಗೆ ಬೆಂಕಿ ಹಚ್ಚಿ ನಾಶಗೈದಿರುವುದಾಗಿ ತಿಳಿಸಿದ್ದ. ಮರುದಿನ ಮೃತದೇಹ ಎಸೆದುದ್ದ ಮ್ಯಾನ್‌ಹೋಲ್ ಅನ್ನು ಕಾಂಕ್ರೀಟ್‌ನಿಂದ ಮುಚ್ಚಿದ್ದ ಎಂದು ವರದಿಯಾಗಿದೆ.