ಕೃಷಿ ಉತ್ಪನ್ನಗಳ ಖರೀದಿಗೆ ರೈತ ಉತ್ಪಾದನಾ ಕೇಂದ್ರ ತೆರೆಯಲು ಯೋಜನೆ: ಡಾ.ಆರ್.ಸಿ.ಜಗದೀಶ್

Update: 2023-06-10 15:34 GMT

ಬ್ರಹ್ಮಾವರ, ಜೂ.10: ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆ ಬಗ್ಗೆ ಎಲ್ಲ ಪ್ರಯತ್ನಗಳು ನಡೆಯುತ್ತಿದ್ದು, ರೈತರು ಬೆಳೆದ ಉತ್ಪನ್ನಗಳ ಖರೀದಿಗೆ ರೈತ ಉತ್ಪಾದನಾ ಕೇಂದ್ರ ತೆರೆಯಲು ಕೃಷಿ ವಿಜ್ಞಾನ ಕೇಂದ್ರ ಯೋಜನೆ ರೂಪಿಸಿದೆ  ಎಂದು ಶಿವಮೊಗ್ಗ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟ ಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಆರ್.ಸಿ.ಜಗದೀಶ ಹೇಳಿದ್ದಾರೆ.

ಬ್ರಹ್ಮಾವರ ರೋಟರಿ ಕ್ಲಬ್, ಶಿವಮೊಗ್ಗ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ಗಳ ವಿಶ್ವವಿದ್ಯಾನಿಲಯ, ಬ್ರಹ್ಮಾವರ ಕೃಷಿ  ವಿಜ್ಞಾನ ಕೇಂದ್ರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಮತ್ತು ಮಂಗಳೂರಿನ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಟಾನ, ಉಡುಪಿಯ ಬ್ಯಾಂಕ್ ಆಫ್ ಬರೋಡಾ  ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದ ಎಸ್‌ಎಂಎಸ್ ಸಮುದಾಯ ಭವನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ಹಲಸು ಹಣ್ಣು ಮೇಳದಲ್ಲಿ ಶನಿವಾರ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಹಲಸು ಹಣ್ಣು ಮೇಳವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ವರ್ಷದ ಎಲ್ಲ ದಿನಗಳಲ್ಲಿಯೂ ವಿವಿಧ ಬೆಳೆಗಳು ಮತ್ತು ವಿವಿಧ ತಳಿಯ ಹಣ್ಣು ಹಂಪಲುಗಳನ್ನು ಬೆಳೆಸುವ ಅವಕಾಶವಿದ್ದು, ಇಲ್ಲಿ ಬೆಳೆದ ಉತ್ಪನ್ನಗಳಿಗೆ ಇತರೆ ಜಿಲ್ಲೆಗಳಿಗೆ ಸಿಗುವಂತೆ ಬೆಂಬಲ ಬೆಲೆ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ದಿನೇಶ್ ನಾಯರಿ ವಹಿಸಿದ್ದರು. ಬ್ರಹ್ಮಾವರ ಎಸ್‌ಎಂಎಸ್ ಚರ್ಚಿನ ವಿಕಾರ್ ಜನರಲ್ ಫಾ.ಎಂ.ಸಿ ಮಥಾಯಿಸ್ ತಾಂತ್ರಿಕ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭ ದಲ್ಲಿ ಹಲಸಿನ ಕೃಷಿ ಮತ್ತು ಉತ್ಪನ್ನಗಳ ತಯಾರಿಕೆಯಲ್ಲಿ ಸಾಧನೆ ಮಾಡಿದ ಶ್ವೇತ ಎಸ್.ನಾಯಕ್, ಮುದ್ದೂರಿನ ಲಲಿತಾ ನಾಯಕ್, ನೀಲಾವರದ ವೈ. ಗಣೇಶ ಭಟ್, ಪೆರ್ಡೂರಿನ ಗುರುರಾಜ್ ಬಾಳ್ತಿಲ್ಲಾಯ ಮತ್ತು ಮಂಗಳೂರು ಮೂಡುಶೆಡ್ಡೆಯ ಲಕ್ಷ್ಮೀ ಚಿದಾನಂದ ಆಚಾರ್ಯ ಅವರನ್ನು ಗೌರವಿಸಲಾಯಿತು.

ಶಿವಮೊಗ್ಗ ಕೃಷಿ ವಿ.ವಿಯ ವಿಸ್ತರಣಾ ನಿರ್ದೇಶಕ ಡಾ.ಕೆ.ಟಿ.ಗುರುಮೂರ್ತಿ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಹಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ್, ಕೃಷಿ ಡಿಪ್ಲೊಮಾ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಸುಧೀರ ಕಾಮತ್, ಬ್ಯಾಂಕ್ ಆಫ್ ಬರೋಡಾದ ಹರ್ಷ ಟಿ.ಕೆ, ಮಂಗಳೂರಿನ ವಿ.ಆರ್.ಡಿ.ಎಫ್‌ನ ಆಡಳಿತ ಮಂಡಳಿಯ ಸದಸ್ಯ ಸತೀಶ ಕುಮಾರ್ ಶೆಟ್ಟಿ ಯಡ್ತಾಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ, ರೋಟರಿ ವಲಯ 3ರ ವಲಯ ಸೇನಾನಿ ಪ್ರಾಣೇಶ್ ಎಸ್.ಕೆ ಉಪಸ್ಥಿತರಿದ್ದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ದರು, ಬ್ರಹ್ಮಾವರ ರೋಟರಿ ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು.  

Similar News