23ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ದಾಖಲೆ ಸೃಷ್ಟಿಸಿದ ಜೊಕೊವಿಕ್

Update: 2023-06-12 03:30 GMT

ಪ್ಯಾರೀಸ್: ಫ್ರೆಚ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಮುಕ್ತ ಟೆನಿಸ್ ಯುಗದಲ್ಲಿ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊಟ್ಟಮೊದಲ ಆಟಗಾರ ಎಂಬ ವಿಶ್ವದಾಖಲೆಗೆ ನೊವಾಕ್ ಜೊಕೊವಿಕ್ ಪಾತ್ರರಾಗಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‍ನಲ್ಲಿ ಜೊಕೊವಿಕ್ ಅವರು ನಾಲ್ಕನೇ ಶ್ರೇಯಾಂಕದ ನಾರ್ವೆ ಆಟಗಾರ ಕ್ಯಾಸ್ಪರ್ ರೂಡ್ ಅವರನ್ನು 7-6 (7-1), 6-3, 7-5 ನೇರ ಸೆಟ್ಟ್‍ಗಳಿಂದ ಸೋಲಿಸಿ ಪ್ರಶಸ್ತಿಗೆ ಭಾಜನರಾದರು. ಫಿಲಿಪ್-ಚಾಟ್ರಿಯರ್ ಕೋರ್ಟ್‍ನಲ್ಲಿ ನಡೆದ ಫೈನಲ್ ಹೋರಾಟ ಮೂರು ಗಂಟೆಗಳಲ್ಲಿ ಕೊನೆಗೊಂಡಿತು. ಇದಕ್ಕೂ ಮೊದಲು 22 ಗ್ರ್ಯಾಂಡ್ ಸ್ಲಾಮ್ ಗಳನ್ನು ಗೆದ್ದ ದಾಖಲೆ ನಡಾಲ್ ಹೆಸರಿನಲ್ಲಿತ್ತು. ನಡಾಲ್ ದಾಖಲೆಯನ್ನು ಕಳೆದ ವರ್ಷ ಸರಿಗಟ್ಟಿದ್ದ ಜೊಕೊವಿಕ್, ಇದೀಗ ಮುಕ್ತ ಟೆನಿಸ್ ಯುಗದಲ್ಲಿ ಅತಿಹೆಚ್ಚು ಪ್ರಮುಖ ಟೂರ್ನಿಗಳನ್ನು ಗೆದ್ದ ಸೆರೇನಾ ವಿನಿಯಮ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ.

34ನೇ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಡಿದ ಜೊಕೊವಿಕ್, ಈ ಗೆಲುವಿನೊಂದಿಗೆ ವಿಶ್ವ ರ್ಯಾಂಕಿಂಗ್‍ನ ಅಗ್ರಸ್ಥಾನಕ್ಕೆ ಮರಳಲಿದ್ದಾರೆ. ಪ್ರತಿ ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲಿ ಕನಿಷ್ಠ ಮೂರು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ. ಅವರು ಗೆದ್ದ 22 ಗ್ರ್ಯಾಂಡ್‍ಸ್ಲಾಂಗಳ ಪೈಕಿ 10 ಪ್ರಶಸ್ತಿಗಳು 30ನೇ ವರ್ಷ ದಾಟಿದ ಬಳಿಕ ಬಂದಿದ್ದವು ಎನ್ನುವುದು ಗಮನಾರ್ಹ. ಎಲ್ಲ ನಾಲ್ಕು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಕನಿಷ್ಠ ಮೂರು ಬಾರಿ ಗೆದ್ದ ದಾಖಲೆಗೆ ಈ ಸೆರ್ಬಿಯನ್ ಆಟಗಾರ ಪಾತ್ರರಾಗಿದ್ದಾರೆ.

ರೊಲಾಂಡ್ ಗಾರೋಸ್‍ನ ಅತ್ಯಂತ ಹಿರಿಯ ಚಾಂಪಿಯನ್ ಎಂಬ ಹೆಗ್ಗಳಿಕೆಯೂ ಅವರದ್ದು. 36 ವರ್ಷ 19 ದಿನದ ಜೊಕೊವಿಕ್, ಈ ಹಿಂದೆ ನಡಾಲ್ ಹೆಸರಿನಲ್ಲಿದ್ದ ದಾಖಲೆ ಅಳಿಸಿದ್ದಾರೆ. ನಡಾಲ್ 35 ವರ್ಷ 11 ತಿಂಗಳು 19 ದಿನಗಳಾಗಿದ್ದಾಗ ಇಲ್ಲಿ ಪ್ರಶಸ್ತಿ ಜಯಿಸಿ ದಾಖಲೆ ಸ್ಥಾಪಿಸಿದ್ದರು.

Similar News