ಮಹಾರಾಷ್ಟ್ರದಲ್ಲಿ ಮತ್ತೆ ಅದೇ ಅಪಾಯಕಾರಿ ಆಟ

Update: 2023-06-13 04:16 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶ ಯಾವ ಸಂದೇಶ ನೀಡಿದೆ ಎಂಬುದು ಇಡೀ ಭಾರತಕ್ಕೆ ಮಾತ್ರವಲ್ಲ ವಿಶ್ವದ ಆಸಕ್ತ ದೇಶಗಳಿಗೂ ಗೊತ್ತಿದೆ. ಬಹಮತವಿಲ್ಲದೆ ರೆಸಾರ್ಟ್ ರಾಜಕೀಯದಿಂದ ಪಡೆದ ಅಧಿಕಾರವನ್ನಾದರೂ ಸದ್ಬಳಕೆ ಮಾಡಿಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.ರಾಜ್ಯದ ಆರೂವರೆ ಕೋಟಿ ಜನರ ಹಿತಾಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸದೆ ಅತ್ಯಂತ ಅಸಹ್ಯದ ಹಗರಣಗಳನ್ನು ಮಾಡಿದ್ದಲ್ಲದೆ ಮತ್ತೆ ಅಧಿಕಾರಕ್ಕೆ ಬರಲು ಕನ್ನಡಿಗರನ್ನು ಕೋಮು ಆಧಾರದಲ್ಲಿ ವಿಭಜಿಸುವ ಯತ್ನ ನಡೆಸಿ ಮುಖಭಂಗಕ್ಕೆ ಒಳಗಾದವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಅವರು ಈ ಸೋಲಿನ ನಂತರವೂ ಪಾಠ ಕಲಿತಿಲ್ಲ ಎಂಬುದಕ್ಕೆ ಮಹಾರಾಷ್ಟ್ರದ ಇತ್ತೀಚಿನ ಗಲಭೆ ಮತ್ತು ಹಿಂಸಾಚಾರಗಳೇ ಸಾಕ್ಷಿಯಾಗಿವೆ.

 ಮಹಾರಾಷ್ಟ್ರದ ಕೊಲ್ಹಾಪುರ ಕಳೆದ ವಾರ ಕೋಮು ಹಿಂಸಾಚಾರದಿಂದ ತತ್ತರಿಸಿತು. ಕೊಲ್ಹಾಪುರ ಮಾತ್ರವಲ್ಲ ಮಹಾರಾಷ್ಟ್ರದ ಇತರ ಕೆಲವು ನಗರಗಳಲ್ಲಿ ಕೋಮು ಪ್ರಚೋದಕ ಘಟನೆಗಳು ವ್ಯಾಪಕವಾಗಿ ನಡೆದವು. ಇವು ಆಕಸ್ಮಿಕ ಘಟನೆಗಳಲ್ಲ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕೋಮು ಆಧಾರದಲ್ಲಿ ಜನಸಾಮಾನ್ಯರನ್ನು ವಿಭಜಿಸಿ ವೋಟಿನ ಬೆಳೆ ತೆಗೆಯುವ ರಾಜಕೀಯ ಅತ್ಯಂತ ವ್ಯವಸ್ಥಿತವಾಗಿ ನಡೆದಿರುವುದು ಈ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ. ಈ ಹಿಂಸಾಚಾರ ಘಟನೆಗಳಿಗೆ ಅತ್ಯಂತ ಕ್ಷುಲ್ಲಕ ಕಾರಣಗಳೆಂಬುದು ಅಲ್ಲಿಂದ ಬಂದ ವರದಿಗಳಿಂದ ಸ್ಪಷ್ಟವಾಗುತ್ತದೆ. ಮೊಗಲ್ ದೊರೆ ಔರಂಗಜೇಬ್ ಮತ್ತು ಹದಿನೆಂಟನೇ ಶತಮಾನದ ಮೈಸೂರು ರಾಜ ಟಿಪ್ಪುಸುಲ್ತಾನ್ ಅವರನ್ನು ವೈಭವೀಕರಿಸಿ ಯಾರೋ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದರೆಂದು ನೆಪ ಮಾಡಿಕೊಂಡು ಕೊಲ್ಹಾಪುರ ನಗರದಲ್ಲಿ ಹಿಂಸಾಚಾರ ನಡೆದಿದೆ. ಜನಸಾಮಾನ್ಯರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ. ಇಂಥ ಸಂದರ್ಭದಲ್ಲಿ ಸಂಯಮ ಕಾಯ್ದುಕೊಳ್ಳಲು ಜನರಿಗೆ ಮನವಿ ಮಾಡಬೇಕಾಗಿದ್ದ ರಾಜ್ಯದ ಗೃಹ ಸಚಿವ ಫಡ್ನವೀಸ್ ‘‘ಔರಂಗಜೇಬ್, ಟಿಪ್ಪುವೈಭವೀಕರಣವನ್ನು ಸಹಿಸುವುದಿಲ್ಲ’’ ಎಂದು ಬಹಿರಂಗವಾಗಿ ಹೇಳಿದ್ದಾರೆ. ‘‘ಕ್ಷುಲ್ಲಕ ಕಾರಣಕ್ಕಾಗಿ ಕೋಮು ಹಿಂಸಾಚಾರ ಮಹಾರಾಷ್ಟ್ರದ ಸೌಹಾರ್ದ ಪರಂಪರೆಗೆ ಕಪ್ಪು ಚುಕ್ಕೆ’’ ಎಂದು ಹೇಳಿರುವ ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ಶರದ್ ಪವಾರ್‌ರಂಥವರಿಗೆ ಪ್ರಾಣ ಬೆದರಿಕೆ ಬಂದಿದೆ.

ಮಹಾರಾಷ್ಟ್ರದಲ್ಲಿ ಶರದ್ ಪವಾರ್‌ರ ರಾಷ್ಟ್ರವಾದಿ ಕಾಂಗ್ರೆಸ್ ಮತ್ತು ಶಿವಸೇನೆಯ ಮೈತ್ರಿ ಸರಕಾರವನ್ನು ಉರುಳಿಸಲು ಶಿವಸೇನೆಯನ್ನೇ ಇಬ್ಭಾಗ ಮಾಡಿ ಏಕನಾಥ ಶಿಂದೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದವರಿಗೆ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿದೆ. ಹಾಗಾಗಿಯೇ ಕೊಲ್ಹಾಪುರ ಮಾತ್ರವಲ್ಲ ಸಣ್ಣಪುಟ್ಟ ನೆಪಗಳನ್ನು ಮುಂದೆ ಮಾಡಿಕೊಂಡು ಬೀಡ್, ಔರಂಗಾಬಾದ್, ಮಲಾಡ್ ಮುಂತಾದ ಕಡೆ ಹಿಂಸಾಚಾರದ ಘಟನೆಗಳು ನಡೆದಿವೆ. ಕಳೆದ ಫೆಬ್ರವರಿ ತಿಂಗಳಲ್ಲಿ ಔರಂಗಾಬಾದ್ ನಗರಕ್ಕೆ ‘ಸಂಭಾಜಿ ನಗರ’ ಎಂದು ಮರು ನಾಮಕರಣ ಮಾಡಿದ ರಾಜ್ಯ ಬಿಜೆಪಿ ಮತ್ತು ಶಿವಸೇನೆಯ ಏಕನಾಥ ಶಿಂದೆ ಬಣದ ಸರಕಾರದ ಉದ್ದೇಶ ಪ್ರಾಮಾಣಿಕವಾಗಿರಲಿಲ್ಲ ಎಂಬುದು ನಂತರ ನಡೆದ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ.

ಕೋಮುವಾದಿ ಸಿದ್ಧಾಂತದ ಆಧಾರದಲ್ಲಿ ರಾಷ್ಟ್ರವನ್ನು ನಿರ್ಮಿಸುವ ಕಾರ್ಯಸೂಚಿಯನ್ನು ಹೊಂದಿರುವ ಪಕ್ಷಗಳಿಗೆ ಜನ ಸಾಮಾನ್ಯರ ಏಳಿಗೆಯ, ನಾಡಿನ ಹಿತಾಭಿವೃದ್ಧಿಯ ಕಣ್ಣೋಟ ಇರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾದ ಆರ್ಥಿಕ, ಸಾಮಾಜಿಕ ಕಾರ್ಯಕ್ರಮಗಳಿರುವುದಿಲ್ಲ. ಇಂಥ ಪಕ್ಷಗಳು ಜನರನ್ನು, ಧರ್ಮದ ಆಧಾರದಲ್ಲಿ, ಜಾತಿಯ ಆಧಾರದಲ್ಲಿ ಮತ್ತು ಭಾಷೆಯ ಆಧಾರದಲ್ಲಿ ವಿಭಜಿಸಿ ಬಹುಸಂಖ್ಯಾತರ ವೋಟ್ ಬ್ಯಾಂಕ್ ನಿರ್ಮಿಸಿ ಅಧಿಕಾರಕ್ಕೆ ಬರುವ ಷಡ್ಯಂತ್ರ ರೂಪಿಸುತ್ತವೆ. ಮಹಾರಾಷ್ಟ್ರದಲ್ಲಿ ಒಂದಾದ ಮೇಲೆ ಒಂದರಂತೆ ನಡೆಯುತ್ತಿರುವ ಘಟನೆಗಳಿಗೆ ಇಂಥ ಕೋಮುವಾದಿ ಪಕ್ಷಗಳೇ ಕಾರಣವಲ್ಲದೆ ಬೇರಾರೂ ಅಲ್ಲ.
ಕೊಲ್ಹಾಪುರದಲ್ಲಿ ಮಾತ್ರವಲ್ಲ, ಅಕೋಲಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿಯವರ ಬಗ್ಗೆ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದರಿಂದ ಮೇ 13ರಂದು ದೊಡ್ಡ ಹಿಂಸಾಚಾರ ನಡೆಯಿತು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾದ.ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಇಬ್ಬರು ಪೊಲೀಸರು ಸೇರಿದಂತೆ ನೂರಾರು ಜನ ಗಾಯಗೊಂಡರು.

ಅಕೋಲಾ ಹಿಂಸಾಚಾರದ ಘಟನೆ ನಡೆದ ಮರುದಿನ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕೋಮು ಹಿಂಸಾಚಾರ ನಡೆಯಿತು.ಇದರ ಮರುದಿನ ಅಹ್ಮದ್‌ನಗರ ಜಿಲ್ಲೆಯ ಶೇಗಾಂವ್‌ನಲ್ಲಿ ಸಂಭಾಜಿ ಮಹಾರಾಜರ ಹೆಸರಿನಲ್ಲಿ ಮೆರವಣಿಗೆ ನಡೆದು ಹಿಂಸಾಚಾರ ನಡೆಯಿತು. ಇಷ್ಟೆಲ್ಲಾ ಅತ್ಯಂತ ವ್ಯವಸ್ಥಿತವಾಗಿ ಒಂದಾದಮೇಲೆ ಒಂದರಂತೆ ನಡೆದರೂ ಇವುಗಳನ್ನು ತಡೆಯಲು ಯಾವ ಕ್ರಮ ಕೈಗೊಳ್ಳದ ಅಲ್ಲಿನ ರಾಜ್ಯ ಸರಕಾರ ಜನರು ಕೋಮು ಆಧಾರದಲ್ಲಿ ಧ್ರುವೀಕರಣಗೊಳ್ಳಲು ಪರೋಕ್ಷವಾಗಿ ಕಾರಣವಾಯಿತು.

ಕೇಂದ್ರ ಗೃಹ ಸಚಿವ ಅಮಿತ್‌ಶಾ ಮಹಾರಾಷ್ಟ್ರದಲ್ಲಿ ಕೆಲವೆಡೆ ಭಾಷಣ ಮಾಡಿ ಮುಸ್ಲಿಮರಿಗೆ ಮೀಸಲು ನೀಡುವುದು ಸಂವಿಧಾನ ವಿರೋಧಿ ಎಂದು ಅನವಶ್ಯಕವಾಗಿ ಮಾತಾಡಿದರು. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದವರೇ ಉರಿಯುವ ಬೆಂಕಿಗೆ ತುಪ್ಪವನ್ನು ಸುರಿಯತೊಡಗಿದ್ದರಿಂದ ಮಹಾರಾಷ್ಟ್ರದ ಪರಿಸ್ಥಿತಿ ಈಗಲೂ ಪ್ರಕ್ಷುಬ್ಧವಾಗಿದೆ. ಜನಸಾಮಾನ್ಯರಲ್ಲಿ ಕೋಮು ದ್ವೇಷದ ವಿಷ ಬೀಜ ಬಿತ್ತಲು ಹೊರಟವರಿಗೆ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಬೇಕಾಗಿರುವುದಿಲ್ಲ.

ಹಿಂದೆ 2014ರ ಲೋಕಸಭಾ ಚುನಾವಣೆ ಮತ್ತು 2017ರ ಕೆಲ ರಾಜ್ಯ ಗಳ ವಿಧಾನಸಭಾ ಚುನಾವಣೆಯ ಮುನ್ನ ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಇದೇ ಮಾದರಿಯ ಅತ್ಯಂತ ವ್ಯವಸ್ಥಿತವಾದ ಕೋಮು ಹಿಂಸಾಚಾರ ನಡೆದಿತ್ತೆಂಬುದನ್ನು ಇಲ್ಲಿ ನೆನಪಿಸಬಹುದು. ಈಗ ಮಹಾರಾಷ್ಟ್ರದಲ್ಲಿ ಅದೇ ಮಾದರಿಯ ಕೋಮು ಹಿಂಸಾಚಾರದ ಘಟನೆಗಳು ನಡೆಯುತ್ತಿವೆ. ಶರದ್ ಪವಾರ್ ಅವರ ರಾಷ್ಟ್ರವಾದಿ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆಯವರ ಶಿವಸೇನಾ ಬಣದ ಸವಾಲನ್ನು ಎದುರಿಸಲಾಗದ ರಾಜ್ಯದ ಬಿಜೆಪಿ ಮತ್ತು ಶಿವಸೇನೆಯ ಏಕನಾಥ ಶಿಂದೆ ಬಣ ಕೋಮು ವಿಭಜನೆ ಮತ್ತು ಧ್ರುವೀಕರಣದ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಕೋಮು ಬೆಂಕಿಯನ್ನು ಹಚ್ಚುವುದು ಸುಲಭ, ಆದರೆ ನಂದಿಸುವುದು ಕಷ್ಟ. ಹಾಗಾಗಿ ಮಹಾರಾಷ್ಟ್ರ ಸರಕಾರ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ನೆನಪಿಸಿಕೊಂಡು ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಲು ಕಾರ್ಯೋನ್ಮುಖವಾಗಲಿ.

Similar News