ರಾಹುಲ್ ಗಾಂಧಿಯಿಂದ ಮೋದಿ ಕಲಿಯಬೇಕಿರುವ ಮೂರು ಮುಖ್ಯ ನಾಯಕತ್ವದ ಪಾಠಗಳು

Update: 2023-06-13 09:41 GMT

ಪ್ರಧಾನಮಂತ್ರಿ ನರೇಂದ್ರ ಮೋದಿ ಯಾರಿಂದಲೂ ಏನನ್ನಾದರೂ ಕಲಿಯುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನ. ಅದರಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಂದ ಅವರು ಕಲಿಯಲು ಬಯಸುವುದಂತೂ ದೂರದ ಮಾತು. ಆದರೆ ವಾಸ್ತವವೇನೆಂದರೆ, ಯಾರನ್ನು ರಾಷ್ಟ್ರೀಯ ರಾಜಕೀಯದ ಪಪ್ಪು ಎಂದು ನಿಂದಿಸಲಾಯಿತೊ ಅದೇ ರಾಹುಲ್ ಈಗ ಅಜೇಯ ಎಂಬ ಭ್ರಮೆಯಲ್ಲಿರುವ ವ್ಯಕ್ತಿಯ ಪ್ರಬಲ ಎದುರಾಳಿಯಾಗಿ ಹೊರಹೊಮ್ಮುತ್ತಿದ್ದಾರೆ.

ಸುಮಾರು ಒಂದು ವರ್ಷದ ಹಿಂದೆ, ರಾಹುಲ್ ಗಾಂಧಿ ಕೆಟ್ಟ ನಾಯಕನಲ್ಲ ಎಂದು ಬಲ್ಲವರೂ ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆಯಲಾರದ ಸ್ಥಿತಿಯಲ್ಲಿದ್ದರು. ಅದಕ್ಕೆ ಎಷ್ಟೆಲ್ಲ ಅಪಹಾಸ್ಯಗಳು ಪ್ರತಿಕ್ರಿಯೆಯಾಗಿ ಬರುತ್ತವೆ ಎಂಬುದನ್ನೂ ಅವರು ತಿಳಿದಿದ್ದರು.
ಆದರೆ ಅದೆಲ್ಲವೂ ಈಗ ಬದಲಾಗುತ್ತಿದೆ.

ಭಾರತ್ ಜೋಡೊ ಯಾತ್ರೆಯಿಂದ ಆರಂಭವಾಗಿ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನೊಂದಿಗೆ ಈಗ ‘ಪಪ್ಪು’ ಹಣೆಪಟ್ಟಿ ಕಳಚಿಬಿದ್ದಿದೆ. ಆತ್ಮವಿಶ್ವಾಸ ಮತ್ತು ಕಾಳಜಿಯುಳ್ಳ ನಾಯಕನಾಗಿ ರಾಹುಲ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಪ್ರಧಾನಿಗಿಂತ ಸಮರ್ಥವಾಗಿ ಮಾತನಾಡಬಲ್ಲ ನಾಯಕನಾಗಿಯೂ ಅವರು ಗುರುತಿಸಲ್ಪಡುತ್ತಿದ್ದಾರೆ. ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ಮೋದಿ ಸಿದ್ಧರಿಲ್ಲದಿರುವುದು, ಬೇಟಿ ಬಚಾವೊ ಎಂಬ ಅವರ ಮಾತು ಎಷ್ಟು ಪೊಳ್ಳು ಎಂಬುದನ್ನು ಬಯಲು ಮಾಡಿದೆ. ಮತ್ತೊಂದೆಡೆ, ರಾಹುಲ್ ಗಾಂಧಿ ಭಾರತದಾದ್ಯಂತ ಮಹಿಳೆಯರು ಸತತವಾಗಿ ಎದುರಿಸುತ್ತಿರುವ ಆಕ್ರಮಣ ಮತ್ತು ಶೋಷಣೆಯ ಬಗ್ಗೆ ನಿಖರವಾಗಿ ಮಾತನಾಡುತ್ತಿದ್ದಾರೆ.
ರಾಹುಲ್ ಗಾಂಧಿ ಬಯಸದಿದ್ದರೂ, ಅವರಿಂದ ಈ ಸಮಯದಲ್ಲಿ ಮೋದಿ ಕಲಿಯಲು ಮೂರು ಪ್ರಮುಖ ಪಾಠಗಳಿವೆ.
ಮೊದಲನೆಯದಾಗಿ, ಆಲಿಸುವುದನ್ನು ಕಲಿಯುವುದು. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ, ಭಾರತ್ ಜೋಡೊ ಯಾತ್ರೆಯ ಮೊದಲ ಕೆಲವು ದಿನಗಳಲ್ಲಿ ಕಂಡ ಅನುಭವಗಳ ಕುರಿತು ಹಂಚಿಕೊಂಡರು.
ನಮ್ಮ ದೇಶದ ಆತ್ಮ ಎಂದು ಯಾರನ್ನು ನಾವು ಬಣ್ಣಿಸುತ್ತೇವೆಯೋ ಅವರನ್ನು ನಾವು ಭೇಟಿಯಾದೆವು ಮತ್ತು ಬಹಳ ಬೇಗ, ವಾರದಿಂದ ಹತ್ತು ದಿನಗಳಲ್ಲಿ ನಾವು ಮಾತು ನಿಲ್ಲಿಸಿ ಮೌನವಾಗುವಂತಾಯಿತು.

ನಾವು ಜನರಿಗೆ ವಿಷಯಗಳನ್ನು ವಿವರಿಸಲು ಹೊರಟಿದ್ದೆವು. ಕೃಷಿ ಏಕೆ ನಿರುಪಯುಕ್ತವಾಗುವಂತಾಗಿದೆ, ನೀವು ಶಿಕ್ಷಣದ ಬಗ್ಗೆ ಹೇಗೆ ಯೋಚಿಸಬೇಕು, ಆರೋಗ್ಯ ವ್ಯವಸ್ಥೆ ಹೇಗಿರಬೇಕು ಇತ್ಯಾದಿ ಹೇಳುತ್ತಿದ್ದೆವು. ಆದರೆ ಇದ್ದಕ್ಕಿದ್ದಂತೆ ಮೌನವಾದೆವು. ಬದಲಿಗೆ ಅವರ ಮಾತುಗಳನ್ನು ಕೇಳತೊಡಗಿದೆವು.
ನಾವು ಹಿಂದೆಂದೂ ನೋಡಿರದ ಬುದ್ಧಿವಂತಿಕೆ, ತಿಳುವಳಿಕೆ ನಮಗಲ್ಲಿ ಕಾಣಿಸತೊಡಗಿತು. ನಾವು ಅವಿದ್ಯಾವಂತರು ಎಂದುಕೊಂಡಿರುವ ಅನೇಕ ರೈತರು, ನಾವು ದಿಗ್ಭ್ರಮೆಗೊಳ್ಳುವಂತೆ ವಿಚಾರಗಳನ್ನು ನಮ್ಮ ಮುಂದೆ ಇಡತೊಡಗಿದರು. ನಾವು ಪೂರ್ತಿ ಮೌನ ವಹಿಸಿ ಅವರ ಮಾತು ಆಲಿಸುವಂತೆ ಅವರು ಎಲ್ಲವನ್ನೂ ವಿವರಿಸತೊಡಗಿದರು. ಬಳಿಕ ಇದು ಕೂಲಿಕಾರರು, ಸಣ್ಣ ವ್ಯಾಪಾರಸ್ಥರು ಮೊದಲಾದ ಜನರ ಎದುರಲ್ಲೂ ನಮಗೆ ಮತ್ತೆ ಮತ್ತೆ ಅನುಭವವಾಯಿತು. ನಾವು ಎಲ್ಲವನ್ನೂ ಆಲಿಸಲು ಪ್ರಾರಂಭಿಸಿದೆವು. ಅಪಾರವಾದ ಸಂಕಟದ ಕಥೆಗಳನ್ನು ಕೇಳಿಸಿಕೊಂಡೆವು. ನಮ್ಮ ರಾಜಕೀಯ ಮತ್ತು ನಮ್ಮ ಜನರ ನಡುವೆ ದೊಡ್ಡ ಕಂದಕ ಬಿದ್ದಿದೆ ಎಂಬುದು ಸ್ಪಷ್ಟವಾಗಿ ಕಂಡಿದ್ದು ಆಗಲೇ.

ಬಹುಶಃ ಈ ನೆಲದ ಜನರ ಮನಸ್ಸಿನಲ್ಲೇನಿದೆ ಎಂಬುದನ್ನು ಪ್ರಾಮಾಣಿಕವಾಗಿ ಕೇಳುವ ರಾಹುಲ್ ಗಾಂಧಿಯವರ ಆಳವಾದ ಸಾಮರ್ಥ್ಯವೇ ಕಾಂಗ್ರೆಸ್ ಪಾಲಿಗೆ ಒಂದು ನಿರ್ಣಾಯಕ ಗೆಲುವನ್ನು ತಂದಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಅದು ಮಹತ್ವದ ಪಾತ್ರ ವಹಿಸಿತು. ಮೌನದಲ್ಲಿ ಮತ್ತು ಸಹಾನುಭೂತಿಯಿಂದ ಆಲಿಸುವಲ್ಲಿ ಶಕ್ತಿಯಿದೆ ಎಂಬ ರಾಹುಲ್ ಅಭಿಪ್ರಾಯ ಸರಿಯಾಗಿಯೇ ಇದೆ.
ಮತ್ತೊಂದೆಡೆ, ಮೋದಿ ತನ್ನ ಶಕ್ತಿ ಎಂದುಕೊಂಡಿರುವುದು ಏಕಪಾತ್ರಾಭಿನಯದ ಹಾಗಿದೆ. ಮೋದಿ ಕೂಡ ಮೌನಿಯಾಗಿರುವುದು ಇದೆ. ಆದರೆ ಸಾಮಾನ್ಯವಾಗಿ ಅದು ತಪ್ಪಾದ ಸಮಯದಲ್ಲಿ ಮತ್ತು ತಪ್ಪುಕಾರಣಗಳಿಗಾಗಿ.
ರಾಹುಲ್ ಅವರಿಂದ ಮೋದಿ ಕಲಿಯಬೇಕಾದ ಎರಡನೇ ಪಾಠ, ನಮ್ರತೆ. ಡ್ಯಾರಿಲ್ ವ್ಯಾನ್ ಟೊಂಗೆರೆನ್ ಹೇಳುತ್ತಾರೆ, ನಮ್ರತೆಯು ನಮ್ಮನ್ನು, ಇತರ ಜನರನ್ನು ಮತ್ತು ನಮ್ಮ ಸುತ್ತಲಿನ ಪ್ರಪಂಚವನ್ನು ಸಾಕಷ್ಟು ಆಪ್ತವಾಗಿ ಸಮೀಪಿಸುವ ಒಂದು ಮಾರ್ಗ. ಅದು ನಮ್ಮನ್ನು ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ.

ಆದರೂ, ಪ್ರಧಾನಿಯ ವಿಚಾರದಲ್ಲಿ ನೋಡಿದರೆ ಅವರಿಗೆ ಪ್ರತಿಷ್ಠೆಯೇ ದೊಡ್ಡದು. ಅವರೆಷ್ಟು ಬಾರಿ ಸಾರ್ವಜನಿಕರ ಕ್ಷಮೆಯಾಚಿಸಿದ್ದಾರೆ ಎಂಬುದನ್ನು ನಾವು ಬೆರಳೆಣಿಕೆಯಲ್ಲಿಯೇ ಹೇಳಬಹುದು. ಪ್ರಾಸಂಗಿಕವಾಗಿ ಹೇಳುವುದಾದರೆ, humility(ನಮ್ರತೆ) ಎಂಬ ಪದವು ಲ್ಯಾಟಿನ್ ಪದ humusನಿಂದ ಬಂದಿದೆ. ಇದು ಅಕ್ಷರಶಃ ಭೂಮಿ ಅಥವಾ ನೆಲ ಎಂಬರ್ಥವನ್ನು ಹೊಂದಿದೆ. ಒಬ್ಬ ವ್ಯಕ್ತಿ ವಿನಮ್ರನಾಗಿರುವುದು ಎಂದರೆ, ಡೌನು ಟು ಅರ್ಥ್ ಆಗಿರುವವನು. ನಿರಹಂಕಾರಿ. ಆದರೆ, ಮೋದಿಯಲ್ಲಿ ನಾವು ಕಾಣುತ್ತಿರುವುದು ಏನೆಂಬುದು ಈಗ ಎಲ್ಲರಿಗೂ ಗೊತ್ತಿದೆ.

ನಮ್ಮ ಪ್ರಧಾನಿಯ ಬಗ್ಗೆ ಯೋಚಿಸುವಾಗ ಬ್ರಾಂಟ್ ಪಾರ್ಕರ್ ಮತ್ತು ಜಾನಿ ಹಾರ್ಟ್ ಅವರ ಕಾರ್ಟೂನ್ ಸ್ಟ್ರಿಪ್ ‘ದಿ ವಿಝಾರ್ಡ್ ಆಫ್ ಐಡಿ’ ನೆನಪಿಗೆ ಬರುತ್ತದೆ. ಒಂದರಲ್ಲಿ, ದೂರದರ್ಶಕದ ಮೂಲಕ ಬಾಹ್ಯಾಕಾಶದ ವಿಶಾಲತೆಯನ್ನು ಮಾಂತ್ರಿಕ ಇಣುಕಿ ನೋಡುತ್ತಿದ್ದಾನೆ. ಏನನ್ನು ಹುಡುಕುತ್ತಿರುವೆ ಎಂದು ರಾಜ ಕೇಳುತ್ತಾನೆ.
ಅದಕ್ಕೆ ಮಾಂತ್ರಿಕ, ಬ್ರಹ್ಮಾಂಡದ ಕೇಂದ್ರವನ್ನು ಹುಡುಕುತ್ತಿರುವುದಾಗಿ ಹೇಳಿದಾಗ, ಮಾತನಾಡುವುದೇ ಬ್ರಹ್ಮಾಂಡದ ಕೇಂದ್ರ ಎಂದು ರಾಜ ಉತ್ತರಿಸುತ್ತಾನೆ.
ಇದಕ್ಕೆ ತದ್ವಿರುದ್ಧವಾಗಿ ರಾಹುಲ್ ಗಾಂಧಿಯವರು ಹೆಚ್ಚು ಹೆಚ್ಚು ವಿನಮ್ರತೆಯುಳ್ಳವರಾಗಿ ಮತ್ತು ಜನರನ್ನು ಸಮೀಪಿಸಬಲ್ಲ ನಾಯಕರಾಗಿ ಕಾಣುತ್ತಿದ್ದಾರೆ. ಅವರು ತಮಗೆ ಎಲ್ಲವೂ ಗೊತ್ತಿದೆ ಎಂದು ತೋರಿಸಿಕೊಳ್ಳುವುದಿಲ್ಲ. ಗೊತ್ತಿರದ ವಿಚಾರವನ್ನು ಒಪ್ಪಿಕೊಳ್ಳಲು ಅವರು ಯಾವತ್ತೂ ಹಿಂದೆಮುಂದೆ ನೋಡಿದ್ದಿಲ್ಲ.
ಮೋದಿ ಕಲಿಯಬೇಕಾದ ಮೂರನೇ ಪಾಠ, ಅಧಿಕೃತ ಸಂವಹನ. ಮೋದಿ ಇಲ್ಲಿಯವರೆಗೆ ಉತ್ತಮ ಸಂವಹನಕಾರ ಎಂದು ತಿಳಿಯಲಾಗಿರುವ ಹಿನ್ನೆಲೆಯಲ್ಲಿ ಇದು ಬಹಳ ಮಹತ್ವಪೂರ್ಣ ಎಂದು ತೋರುತ್ತದೆ. ವಾಸ್ತವವಾಗಿ ಪ್ರಧಾನಿ ಉತ್ತಮ ವಾಗ್ಮಿಯಾಗಿದ್ದರೂ, ಅವರ ಭಾಷಣಗಳಲ್ಲಿ ನಿಜವಾಗಿಯೂ ಯಾವುದು ಇರಬೇಕಾಗಿತ್ತೋ ಅದು ಇರುವುದಿಲ್ಲ. ಬದಲಾಗಿ ಅವರ ಭಾಷಣಗಳು ಸ್ವಯಂ ಪ್ರಚಾರ, ಎದೆ ತಟ್ಟಿಕೊಳ್ಳುವಿಕೆ ಮತ್ತು ಯಾರ ಬಗೆಗಾದರೂ ತಿರಸ್ಕಾರ ತೋರಿಸುವುದಕ್ಕಾಗಿ ಸೀಮಿತವಾಗಿರುತ್ತವೆ.
ರಾಹುಲ್ ಮಾತಿನಲ್ಲಿ ನಮಗೆ ಹೆಚ್ಚು ನಿರರ್ಗಳತೆ ಕಾಣದೇ ಇರಬಹುದು. ವಾಕ್ಚಾತುರ್ಯ ತೋರುವುದು ಅವರಿಗೆ ಬೇಕಾಗಿಯೂ ಇಲ್ಲ. ಆದರೆ ಅವರು ಆಡುವ ವಿಚಾರ ಮನುಷ್ಯ ಹೇಗೆ ಇರಬೇಕಾಗಿದೆ ಎಂಬುದನ್ನು ಹೇಳುತ್ತದೆ. ಮನುಷ್ಯ ಹೊಂದಿರಬೇಕಾದ ಪ್ರೀತಿ, ಒಗ್ಗಟ್ಟು, ನ್ಯಾಯ ಮತ್ತು ಸಮತಾವಾದದ ಕುರಿತು ಅವರು ಹೇಳುತ್ತಾರೆ.
ಒಂದು ವರ್ಷದ ಹಿಂದಿನವರೆಗೂ ಮೋದಿಯವರ ಮೇಲೆ ಭಾರೀ ನಂಬಿಕೆ ಇಟ್ಟಿದ್ದವರೆಲ್ಲ ಇದ್ದಕ್ಕಿದ್ದಂತೆ ತಮ್ಮ ವಿಶ್ವಗುರುವಿನ ವಿಚಾರದಲ್ಲಿ ಈಗ ಪೂರ್ಣ ಮನಸ್ಸಿನಿಂದ ಮೆಚ್ಚುಗೆ ವ್ಯಕ್ತಪಡಿಸಲಾರದ ಹಂತ ಮುಟ್ಟಿದ್ದಾರೆ. ಇದ್ದ ಉದ್ಯೋಗಗಳೂ ಇಲ್ಲವಾಗಿರುವುದು, ನಿರುದ್ಯೋಗ ಹೆಚ್ಚಿರುವುದು ಮತ್ತು ಪ್ರಜಾಪ್ರಭುತ್ವದ ಧ್ವನಿಗಳ ಕ್ರೂರ ನಿಗ್ರಹ ಎಲ್ಲವೂ ಅವರಿಗೆ ಗೊತ್ತಾಗುತ್ತಿದೆ. ಇವೆಲ್ಲವೂ ಪ್ರಧಾನಿ ಮೋದಿಯ ವಾಕ್ಚಾತುರ್ಯಕ್ಕೆ ವಿರುದ್ಧ ಇವೆಯೆಂಬುದು ಅವರಿಗೆ ಗೊತ್ತಾಗಿಬಿಟ್ಟಿದೆ. ಹಳೆಯದನ್ನೇ ಮತ್ತೆ ಮತ್ತೆ ಹೇಳುತ್ತಿರುವುದೂ ಜನರಿಗೆ ತಿಳಿದುಹೋಗಿದೆ. ಇನ್ನು ಸ್ವಲ್ಪ ಕಾಲ ಬೇಕಾಗಬಹುದು. ಮಾತಿನಲ್ಲಿನ ಚಾತುರ್ಯಕ್ಕಿಂತ ಕಡೆಗೂ ಗೆಲ್ಲಲಿರುವುದು ಸತ್ಯವೇ.
ಮೋದಿ ಬಹುಶಃ ಯಾರಿಂದಲೂ ಏನನ್ನೂ ಕಲಿಯಲಾರರು. ಆದರೆ ಕಡೇ ಪಕ್ಷ ಇತರರಾದರೂ ಕಳೆದ ಒಂಭತ್ತು ವರ್ಷಗಳು ಕಲಿಸಲು ಪ್ರಯತ್ನಿಸಿರುವ ಪಾಠಗಳನ್ನು ಕಲಿಯುವುದು ಒಳ್ಳೆಯದು.

(ಕೃಪೆ: thewire.in)

Similar News