ಉಡುಪಿ: ಎರಡು ವಾರದಲ್ಲಿ ಜೂನ್ ತಿಂಗಳ ಶೇ.10ರಷ್ಟು ಮಳೆ ಸುರಿದಿಲ್ಲ

Update: 2023-06-14 15:28 GMT

ಉಡುಪಿ, ಜೂ.14: 2019ರ ಬಳಿಕ ಮೊದಲ ಬಾರಿ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭದಲ್ಲೇ ಕೈಕೊಟ್ಟಿದೆ. ಜೂನ್ ತಿಂಗಳ ಮೊದಲ ದಿನದಿಂದ ಜಿಲ್ಲೆಯಲ್ಲಿ ಆರಂಭಗೊಳ್ಳಬೇಕಿದ್ದ ಮುಂಗಾರು ಎರಡು ವಾರ ಕಳೆದರೂ ಬಿರುಸು ಪಡೆದಿಲ್ಲ. ನಿಜ ಹೇಳಬೇಕೆಂದರೆ ಜೂನ್ ತಿಂಗಳ ಅರ್ಧ ಅವಧಿ ಮುಗಿದರೂ ಇಡೀ ತಿಂಗಳಲ್ಲಿ ಬರಬೇಕಿದ್ದ ವಾಡಿಕೆ ಮಳೆಯ ಶೇ.10ರಷ್ಟು ಇನ್ನು ಸರಿದಿಲ್ಲ.

ಜೂನ್ ಒಂದರಿಂದ ಇಂದಿನವರೆಗೆ (14) ಜಿಲ್ಲೆಯಲ್ಲಿ ಬಿದ್ದಿರುವ ಒಟ್ಟು ಮಳೆ 98ಮಿ.ಮೀ. ಮಾತ್ರ. ಈ ಅವಧಿ ಯಲ್ಲಿ ಸುರಿಯಬೇಕಿದ್ದ ವಾಡಿಕೆ ಮಳೆ 390ಮಿ.ಮೀ. ಅಂದರೆ ಇಂದಿನವರೆಗೆ ವಾಡಿಕೆ ಮಳೆಯಲ್ಲಿ ಶೇ.75ರಷ್ಟು ಕೊರತೆ ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಪರಿಣಿತ ರವಿ ಹೇಳುತ್ತಾರೆ.

ಜೂನ್ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಬರುವ ವಾಡಿಕೆ ಮಳೆಯನ್ನು ಗಣನೆಗೆ ತೆಗೆದುಕೊಂಡಾಗ, ಈಗಾಗಲೇ 14 ದಿನ ಮುಗಿದರೂ, ಇನ್ನೂ ಶೇ.10ರಷ್ಟು ಮಳೆಯೂ ಸುರಿದಿಲ್ಲ. ಜೂನ್ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 1033 ಮಿ.ಮೀ. ಆಗಿದೆ ಎಂದು ಅವರು ವಿವರಿಸಿದರು. 

ಸಹಜವಾಗಿ ಇದು ಈ ಬಾರಿಯ ಮುಂಗಾರು ಭತ್ತದ ಬೆಳೆಯ ಸಿದ್ಧತೆ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ನಾಟಿಗೆ ಸಿದ್ಧತೆಯಲ್ಲಿರಬೇಕಿದ್ದ ರೈತರು ಈ ಬಾರಿ ಗದ್ದೆಯನ್ನು ಬೇಸಾಯಕ್ಕೆ ಅಣಿಗೊಳಸುವಷ್ಟು ಮಳೆ ಇನ್ನೂ ಬಂದಿಲ್ಲ. ಇದು ಸಹಜವಾಗಿ ರೈತರಲ್ಲಿ ಆತಂಕವನ್ನು ಉಂಟುಮಾಡಲಿದೆ.

ಚಂಡಮಾರುತದ ಪರಿಣಾಮ: ಕಳೆದ ವಾರ ಅರಬಿಸಮುದ್ರದಲ್ಲಿ ಎದ್ದಿರುವ ಬಿಪರ್‌ಜಾಯ್ ಚಂಡಮಾರುತದ ಪರಿಣಾಮ ಇದಾಗಿದೆ. ಚಂಡಮಾರುತದಿಂದ ಮುಂಗಾರು ಮೋಡಗಳು ಚದುರಿದ್ದು, ಇದರಿಂದ ಕರಾವಳಿ ಜಿಲ್ಲೆ ಯಲ್ಲಿ ಮಳೆಗಾಲ ಇನ್ನೂ ಪ್ರಾರಂಭಗೊಂಡಿಲ್ಲ. ಹೀಗಾಗಿ ಮತ್ತೆ ಮುಂಗಾರು ಮೋಡಗಳು ದಟ್ಟೈಸುವವರೆಗೂ ರೈತರು ಕಾಯಬೇಕಾಗುತ್ತದೆ. ಇದಕ್ಕೆ ಕೆಲವು ದಿನ ಬೇಕಾಗಬಹುದು ಎಂದು ರವಿ ತಿಳಿಸಿದರು.

ಬುಧವಾರ ಜಿಲ್ಲೆಯಲ್ಲಿ ಬಿದ್ದ ಮಳೆಯ ಸರಾಸರಿ 4.7ಮಿ.ಮೀ. ಆಗಿದೆ. ಕಾಪುವಲ್ಲಿ 11.4ಮಿ.ಮೀ, ಕಾರ್ಕಳದಲ್ಲಿ 6.2, ಉಡುಪಿಯಲ್ಲಿ 5.6, ಕುಂದಾಪುರದಲ್ಲಿ 4.2, ಹೆಬ್ರಿಯಲ್ಲಿ 3.4, ಬ್ರಹ್ಮಾವರ 3.2 ಹಾಗೂ ಬೈಂದೂರಿನಲ್ಲಿ 2.7ಮಿ.ಮೀ. ಮಳೆಯಾಗಿದೆ.

ಹವಾಮಾನ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಜಿಲ್ಲೆಯಲ್ಲಿ ಇಂದಿನ ಗರಿಷ್ಠ ಉಷ್ಣಾಂಶ 33.1ಸೆಲ್ಶಿಯಸ್ ಆಗಿದ್ದರೆ ಕನಿಷ್ಠ ಉಷ್ಣಾಂಶ 25.4ಸೆ. ಆಗಿದೆ.

ಮುಂದಿನ 24 ಗಂಟೆಗಳಲ್ಲಿ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು-ಮಿಂಚಿನ ಸಾಧ್ಯತೆ ಇದ್ದು, ಗಾಳಿ ವೇಗವಾಗಿ ಬೀಸಲಿದೆ. ಇದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಸಮುದ್ರದಲ್ಲಿ ಬೃಹತ್ ಅಲೆಗಳು ಏಳುವ ಸಾಧ್ಯತೆ ಇದೆ.

ಸಿಡಿಲು ಬಡಿದು ಗಾಯ: ನಿನ್ನೆ ಸಂಜೆ ಕುಂದಾಪುರ ತಾಲೂಕು ಕೂರ್ಗಿ ಗ್ರಾಮದ ಬಾಬಿ ಶೆಡ್ತಿ ಎಂಬವರಿಗೆ ಸಿಡಿಲು ಬಡಿದು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅರಬಿಸಮುದ್ರದಲ್ಲಿ ಎದ್ದಿರುವ ಚಂಡಮಾರುತ, ಇದೀಗ ಈಶಾನ್ಯ ಭಾಗದಲ್ಲಿ ಸ್ಥಿರವಾಗಿದ್ದು, ಗುಜರಾತ್‌ನ ಜಖುವ ಬಂದರಿನಿಂದ 280ಕಿ.ಮೀ., ದೇವಭೂಮಿ ದ್ವಾರಕದಿಂದ 290, ನಲಿಯಾದಿಂದ 300, ಪೋರ್‌ಬಂದರಿನಿಂದ 350 ಹಾಗೂ ಪಾಕಿಸ್ತಾನದ ಕರಾಚಿಯಿಂದ 340 ಇ.ಮೀ. ದೂರದಲ್ಲಿ ಆರು ಗಂಟೆಗಳಿಂದ ಸ್ಥಿರವಾಗಿದೆ.

ಚಂಡಮಾರುತವು ಈಶಾನ್ಯ ದಿಕ್ಕಿನಲ್ಲಿ ಮುಂದುವರಿದು ಜೂ.15ರಂದು  ಸೌರಾಷ್ಟ್ರ, ಕಛ್ ಹಾಗೂ ಪಕ್ಕದ ಪಾಕಿಸ್ತಾನ ಕರಾವಳಿಯ ನಡುವೆ ಹಾದು ಹೋಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  

Similar News