ಕುಸ್ತಿಪಟುಗಳ ಪ್ರತಿಭಟನೆ: ಕ್ರೀಡಾ ಐಕಾನ್‌ಗಳ ಮೌನ ಏನನ್ನು ಹೇಳುತ್ತದೆ?

Update: 2023-06-15 06:10 GMT

ಕ್ರೀಡೆಯಲ್ಲಿಯೂ ರಾಜಕೀಯದ್ದೇ ಆಟವೆಂಬುದು ಎಲ್ಲರಿಗೂ ಗೊತ್ತಿದೆ. ಕ್ರೀಡಾ ಸಂಸ್ಥೆಗಳ ಮೇಲೆ ರಾಜಕಾರಣಿಗಳ ಅಥವಾ ಅವರ ಪ್ರತಿನಿಧಿಗಳ ಹಿಡಿತವಿದೆ. ಕ್ರೀಡಾಪಟುಗಳಲ್ಲಿ ಹೆಚ್ಚಿನವರು ಆ ಪ್ರಭಾವಿಗಳೊಡನೆ ಗುರುತಿಸಿಕೊಳ್ಳಲು ಬಯಸುವವರು.

ಇವೆಲ್ಲಕ್ಕಿಂತ ಕೆಡುಕೆನ್ನಿಸುವುದು ತಮ್ಮದೇ ಕ್ಷೇತ್ರದ ಪ್ರತಿಭೆಗಳಿಗೆ ಅನ್ಯಾಯವಾಗಿದೆ ಎಂಬ ಅರಿವಿನಲ್ಲೂ ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ಭಾರತೀಯ ಕ್ರೀಡಾಪಟುಗಳು, ವಿಶೇಷವಾಗಿ ಭಾರತದ ಸ್ಟಾರ್ ಕ್ರಿಕೆಟಿಗರಲ್ಲಿ ಹೆಚ್ಚಿನವರು ಮೌನವಾಗಿರುವ ಸಂಗತಿ. ಇಲ್ಲಿ ಮೊದಲಿಗೆ, ಕ್ರೀಡೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ನಿರಂತರ ಮಿಥ್ ಇಲ್ಲವಾಗಬೇಕಿದೆ. ಯಾವುದೇ ಚಟುವಟಿಕೆಯಂತೆ, ಕ್ರೀಡೆಯನ್ನು ಹೆಚ್ಚಾಗಿ ರಾಜಕೀಯಕ್ಕೋಸ್ಕರವೇ ಬಳಸಲಾಗುತ್ತದೆ ಎಂಬುದು ರಹಸ್ಯವೇನಲ್ಲ.

ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಕುಸ್ತಿ ಫೆಡರೇಶನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಸಿರುವ ಪ್ರತಿಭಟನೆ ಭಾರತೀಯ ರಾಜಕೀಯ, ಕಾನೂನು ಮತ್ತು ಸಮಾಜಕ್ಕೆ ಕನ್ನಡಿಯೊಡ್ಡಿದೆ.

ಕಣ್ಣೀರಿಡುತ್ತಿರುವ ಆ ಹೆಣ್ಣುಮಕ್ಕಳ ನೋವು, ಹತಾಶೆಯ ಹೊರತಾಗಿಯೂ ಅವರ ಪಾಲಿಗೆ ನ್ಯಾಯ ಮರೀಚಿಕೆಯ ಹಾಗೆ ಆಗುತ್ತಿರುವುದು ಕಾಣಿಸುತ್ತಿದೆ. ಕಾನೂನು ಎಲ್ಲಾ ನಾಗರಿಕರಿಗೆ ಸಮಾನವಾಗಿ ಅನ್ವಯಿಸುವುದಿಲ್ಲ ಎಂಬುದು ಮತ್ತೊಮ್ಮೆ ಈ ಪ್ರಕರಣದಿಂದ ತಿಳಿಯುತ್ತಿದೆ. ದೇಶಕ್ಕಾಗಿ ಹಲವಾರು ಪದಕಗಳನ್ನು ಗೆದ್ದಿರುವ ಕುಸ್ತಿಪಟುಗಳ ಸಾರ್ವಜನಿಕ ಪ್ರತಿಭಟನೆಗಳು ಮತ್ತು ಆರೋಪಗಳ ನಡುವೆಯೂ ಆರೋಪಿ ಸ್ಥಾನದಲ್ಲಿರುವ ಬಿಜೆಪಿ ಸಂಸದ ರಾಜಾರೋಷವಾಗಿಯೇ ಓಡಾಡಿಕೊಂಡಿರುವುದು, ಸಾಕ್ಷ್ಯ ತೋರಿಸಿ ಎಂದು ಸವಾಲು ಹಾಕುವುದು, ಶಕ್ತಿಪ್ರದರ್ಶನದ ಸಮಾವೇಶ ನಡೆಸಿಕೊಳ್ಳುವುದು ಎಲ್ಲವೂ ಯಾವ ಅಡ್ಡಿಯಿಲ್ಲದೆ ಸಾಗಿದೆ.

ತೀರಾ ಕಡಿಮೆ ಗಂಭೀರ ಅಥವಾ ಕ್ಷುಲ್ಲಕ ಆರೋಪಗಳ ಮೇಲೆ ಜೈಲು ಶಿಕ್ಷೆಗೆ ಗುರಿಯಾದ ಅನೇಕರಿದ್ದಾರೆ. ಆದರೆ ಬ್ರಿಜ್ ಭೂಷಣ್ ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು.

ಈ ಬಿಜೆಪಿ ಸಂಸದನಿಗೆ ಇಷ್ಟೊಂದು ಬಗೆಯಲ್ಲಿ ಕಾನೂನಿನಿಂದ ವಿನಾಯತಿಯೇಕೆ ಮತ್ತು ಹೇಗೆ? ಬಿಜೆಪಿಯ ಮುಂದಿರುವುದು ಚುನಾವಣಾ ರಾಜಕಾರಣವೇ ಹೊರತು ಕುಸ್ತಿಪಟುಗಳಿಗೆ ಅನ್ಯಾಯವಾಗಿದೆ ಎಂಬುದು ಮುಖ್ಯವಲ್ಲವೆ? ಪೂರ್ವ ಉತ್ತರ ಪ್ರದೇಶದಲ್ಲಿ ಗಣನೀಯ ಪ್ರಭಾವ ಹೊಂದಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಿಜೆಪಿಗೆ ಅಷ್ಟು ಮಟ್ಟಿಗೆ ಅನಿವಾರ್ಯವೆ? ಇದು ಶ್ರೀಮಂತಿಕೆ ಮಾತ್ರವಲ್ಲದೆ ಕ್ರಿಮಿನಲ್ ಆರೋಪಗಳನ್ನೂ ಹೊಂದಿರುವ ಸಂಸದೀಯ ಪ್ರತಿನಿಧಿಗಳ ಪ್ರಭಾವ ಎಂಥದು ಎಂಬುದನ್ನೇ ಹೇಳುತ್ತದೆ.

ಆದರೂ, ವಿಶ್ಲೇಷಕ ಮುಕುಲ್ ಕೇಶವನ್ ಗಮನಿಸುವಂತೆ, ರಾಜಕೀಯ ಪ್ರಭಾವ ಮಾತ್ರವೇ ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣವಲ್ಲ. ಬದಲಾಗಿ ಸಂಘಪರಿವಾರದೊಳಗೆ ಆಳವಾಗಿ ಬೇರೂರಿರುವ ಪಿತೃಪ್ರಭುತ್ವ ಮತ್ತು ಸ್ತ್ರೀದ್ವೇಷದ ಪಾಲೂ ಆ ಸಂಸದನಿಗೆ ವಿನಾಯಿತಿ ನೀಡುತ್ತಿರುವಲ್ಲಿ ನೆರವಾಗಿರಬಹುದು.

ಇನ್ನು ವ್ಯಾಪಕ ಟೀಕೆಗಳು ಮತ್ತು ಪ್ರತಿಭಟನೆಗಳು ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳ ಪಾತ್ರವನ್ನು ಎತ್ತಿ ತೋರಿಸುತ್ತಲೇ, ಸರಕಾರದ ಚಿಯರ್‌ಲೀಡರ್‌ಗಳಂತೆ ಕೆಲಸ ಮಾಡುವ ಗೋದಿ ಮೀಡಿಯಾಗಳ ಬಣ್ಣವನ್ನೂ ಬಯಲು ಮಾಡಿವೆ. ಕುಸ್ತಿಪಟುಗಳನ್ನೇ ನಿಜವಾದ ಖಳನಾಯಕರನ್ನಾಗಿ ಚಿತ್ರಿಸುವ ಕೆಲಸವೂ ಆಗಿದೆ. ಅವರ ಮೇಲೆ ಖರ್ಚು ಮಾಡಿದ ರಾಜ್ಯ ಸಂಪನ್ಮೂಲಗಳ ಬಗ್ಗೆ ಭಾರೀ ದೊಡ್ಡದೇನನ್ನೋ ಹೇಳುತ್ತಿರುವಂತೆ ಮಾತನಾಡುವ ಮಾಧ್ಯಮಗಳಿಗೆ, ಹೆಣ್ಣುಮಕ್ಕಳಿಗೆ ಈ ಸರಕಾರದಲ್ಲಿ ಆಗುತ್ತಿರುವುದು ಅನ್ಯಾಯ ಎಂದೆನಿಸುತ್ತಲೇ ಇಲ್ಲ. ಒಟ್ಟು ವಿಚಾರವನ್ನೇ ಅವರ ವಿರುದ್ಧವಾಗಿ ತಿರುಗಿಸುವ ಪ್ರಯತ್ನವನ್ನೂ ಮಾಧ್ಯಮದವರು ಮಾಡಿದ್ದಾರೆ.

ಕುಸ್ತಿಪಟುಗಳ ಪ್ರತಿಭಟನೆಯನ್ನು ತಡೆಯಲು ದಿಲ್ಲಿ ಪೊಲೀಸರು ನಡೆಸಿದ ಹಠಾತ್ ಪ್ರಯತ್ನಗಳು ಮತ್ತು ಮೇ ೨೮ರಂದು ಕುಸ್ತಿಪಟುಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ವಿಚಾರವನ್ನು ಅನೇಕ ವಾಹಿನಿಗಳು ಸರಿಯಾಗಿ ತೋರಿಸಲೇ ಇಲ್ಲ.

ಇವೆಲ್ಲಕ್ಕಿಂತ ಕೆಡುಕೆನ್ನಿಸುವುದು ತಮ್ಮದೇ ಕ್ಷೇತ್ರದ ಪ್ರತಿಭೆಗಳಿಗೆ ಅನ್ಯಾಯವಾಗಿದೆ ಎಂಬ ಅರಿವಿನಲ್ಲೂ ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ಭಾರತೀಯ ಕ್ರೀಡಾಪಟುಗಳು, ವಿಶೇಷವಾಗಿ ಭಾರತದ ಸ್ಟಾರ್ ಕ್ರಿಕೆಟಿಗರಲ್ಲಿ ಹೆಚ್ಚಿನವರು ಮೌನವಾಗಿರುವ ಸಂಗತಿ. ಇಲ್ಲಿ ಮೊದಲಿಗೆ, ಕ್ರೀಡೆಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ನಿರಂತರ ಮಿಥ್ ಇಲ್ಲವಾಗಬೇಕಿದೆ. ಯಾವುದೇ ಚಟುವಟಿಕೆಯಂತೆ, ಕ್ರೀಡೆಯನ್ನು ಹೆಚ್ಚಾಗಿ ರಾಜಕೀಯಕ್ಕೋಸ್ಕರವೇ ಬಳಸಲಾಗುತ್ತದೆ ಎಂಬುದು ರಹಸ್ಯವೇನಲ್ಲ.

ಕ್ರೀಡೆ ಮತ್ತು ರಾಷ್ಟ್ರೀಯತೆಯ ನಡುವಿನ ಸಂಬಂಧವನ್ನು ಅನೇಕರು ಗಮನಿಸಿದ್ದಾರೆ. ಇತಿಹಾಸಕಾರ ಎರಿಕ್ ಹಾಬ್ಸ್ಬಾಮ್ ಹೇಳಿಕೆಯಂತೆ ರಾಷ್ಟ್ರೀಯ ಭಾವನೆಗಳನ್ನು ಹುಟ್ಟುಹಾಕುವ ಮಾಧ್ಯಮವಾಗಿ ಕ್ರೀಡೆ ಅನನ್ಯವಾಗಿ ಪರಿಣಾಮಕಾರಿ. ಅದು ಭಾರತ-ಪಾಕಿಸ್ತಾನ ಕ್ರೀಡಾ ಸ್ಪರ್ಧೆಗಳಲ್ಲಿರಲಿ ಅಥವಾ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಗೆ ಸವಾಲು ಹಾಕಿದ ಭಾರತೀಯ ತಂಡಗಳಾಗಿರಲಿ.

ಕ್ರೀಡಾ ಸಾಧನೆ ಮತ್ತು ರಾಷ್ಟ್ರೀಯತೆಯ ನಡುವಿನ ಸಂಬಂಧವೇ ಕುಸ್ತಿಪಟುಗಳ ಪ್ರತಿಭಟನೆಯನ್ನು ಸರಕಾರ ತೀರಾ ನಿರ್ಲಕ್ಷಿಸದಂತೆ ಮಾಡಿರುವುದು. ಆದರೂ ಕುಸ್ತಿಪಟುಗಳಿಗಾದ ಅನ್ಯಾಯ ಸರಿಪಡಿಸುವ ಬದಲು ಸರಕಾರ ರಾಜಕೀಯ ಕಾರಣಗಳಿಗಾಗಿ ಕಾದು ನೋಡುವ ತಂತ್ರದ ಮೊರೆಹೋಗಿದೆ. ಪ್ರತಿಭಟನೆಗಳು ಕ್ರಮೇಣ ದುರ್ಬಲಗೊಳ್ಳುತ್ತವೆ ಎಂದು ಅದು ನಿರೀಕ್ಷಿಸಿದ್ದರೂ, ಕುಸ್ತಿಪಟುಗಳ ದೃಢತೆಯನ್ನು ಮಣಿಸುವ ತೆರೆಮರೆಯ ಯತ್ನಗಳೂ ಇನ್ನೊಂದೆಡೆಯಿಂದ ಆಗಿರುವುದು ನಿಜ.

ಕುಸ್ತಿಪಟುಗಳಿಗೆ ಪ್ರಸಕ್ತ ಮತ್ತು ಹಿಂದಿನ ಹೆಚ್ಚಿನ ಕ್ರೀಡಾಪಟುಗಳಿಂದ ಬೆಂಬಲ ಸಿಗದೇ ಇದ್ದುದು ಕೂಡ ಸರಕಾರಕ್ಕೆ ವರವಾಗಿ ಪರಿಣಮಿಸಿತು. ಒಲಿಂಪಿಕ್ ಚಿನ್ನದ ಪದಕ ವಿಜೇತರಾದ ನೀರಜ್ ಚೋಪ್ರಾ ಮತ್ತು ಅಭಿನವ್ ಬಿಂದ್ರಾ, ಫುಟ್ಬಾಲ್ ತಾರೆ ಸುನೀಲ್ ಛೆಟ್ರಿ ಮತ್ತು ಬಾಕ್ಸರ್ ನಿಖತ್ ಜರೀನ್ ಮುಂತಾದವರಷ್ಟೇ ಅಪವಾದ. ಅವರೆಲ್ಲ ಕುಸ್ತಿಪಟುಗಳ ದುಃಸ್ಥಿತಿ ಮತ್ತು ಅವರ ಪ್ರತಿಭಟನೆಗಳಿಗೆ ಸರಕಾರ ಸೂಕ್ತವಾಗಿ ಸ್ಪಂದಿಸದಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

ಆದರೆ ಈ ದೇಶದ ಮಹಾನ್ ಸೆಲೆಬ್ರಿಟಿಗಳು ಎನ್ನಲಾಗುವ ಕ್ರಿಕೆಟಿಗರು ಮಾತ್ರ - ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಅವರಂತಹ ಬೆರಳೆಣಿಕೆಯ ಮಾಜಿ ಆಟಗಾರರನ್ನು ಹೊರತುಪಡಿಸಿ  ಭಾರೀ ಮೌನ ವಹಿಸಿರುವುದು ಅಚ್ಚರಿ ಮೂಡಿಸುತ್ತದೆ. ಕುಸ್ತಿಪಟುಗಳನ್ನು ಆನಂತರ ಕಪಿಲ್ ದೇವ್ ಮತ್ತು ೧೯೮೩ರ ವಿಶ್ವಕಪ್ ವಿಜೇತ ತಂಡ ಬೆಂಬಲಿಸಿದರೂ, ಒಬ್ಬ ಸದಸ್ಯ ರೋಜರ್ ಬಿನ್ನಿ ಈ ಬೆಂಬಲದಲ್ಲಿ ಪಾಲು ವಹಿಸದೆ ಉಳಿದರು. ಅವರು ಪ್ರಸಕ್ತ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ. ಈಗ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆಯಾಗಿರುವ ಪಿ.ಟಿ. ಉಷಾ ಕೂಡ ಕುಸ್ತಿಪಟುಗಳನ್ನು ಟೀಕಿಸಿದರು. ಅವರು ತಮ್ಮ ನಕಾರಾತ್ಮಕ ವಿಧಾನದಿಂದ ದೇಶದ ಇಮೇಜ್‌ಗೆ ಕಳಂಕ ತಂದಿದ್ದಾರೆ ಎಂದರು.

ಬಹುಪಾಲು ಕ್ರೀಡಾ ಪ್ರಪಂಚದ ಮೌನವನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪಕಷ್ಟ. ಆದರೂ, ರಾಜಕಾರಣಿಗಳು, ರಾಜಕೀಯ ವಿವಾದಗಳು ಮತ್ತು ಸರಕಾರದ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಪಟುಗಳ ಪ್ರತಿಕ್ರಿಯೆಗಳನ್ನು ನೋಡುವ ಮೂಲಕ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಬಹುದು. ಭಾರತೀಯ ಕ್ರೀಡಾಪಟುಗಳು ಆಗಾಗ ರಾಜಕಾರಣಿಗಳಿಗೆ ಅವರ ಜನ್ಮದಿನದ ಶುಭಾಶಯಗಳನ್ನು ತಿಳಿಸಿ ಟ್ವೀಟ್ ಮಾಡುವುದನ್ನು ನಾವು ನೋಡಿದ್ದೇವೆ. ಅವರು ಹ್ಯಾಶ್‌ಟ್ಯಾಗ್‌ಗಳಾದ ‘‘ಇಂಡಿಯಾಫೈಟ್ಸ್ ಕೊರೋನ’’ ಮತ್ತು ‘‘ಫಿಟ್‌ಇಂಡಿಯಾ ಮೂವ್‌ಮೆಂಟ್’’ನಂತಹ ಸರಕಾರದ ಅಭಿಯಾನಕ್ಕೆ ಪ್ರಚಾರ ಕೊಡುವಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಇದು ಇತರೆಡೆಗಳಲ್ಲಿ ವಿಶೇಷವಾಗಿ ಅಮೆರಿಕದಲ್ಲಿನ ಕ್ರೀಡಾಪಟುಗಳ ರೀತಿಗೆ ವ್ಯತಿರಿಕ್ತವಾಗಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು ಅಥವಾ ರೈತರ ಆಂದೋಲನದಂತಹ ವಿವಾದಾತ್ಮಕ ವಿಷಯಗಳ ಬಗ್ಗೆ, ಬಜರಂಗ್ ಪುನಿಯಾ ಅಥವಾ ಸಾಕ್ಷಿ ಮಲಿಕ್ ಅವರಂತಹ ಕೆಲವರನ್ನು ಹೊರತುಪಡಿಸಿ, ಹೆಚ್ಚಿನ ಕ್ರೀಡಾಪಟುಗಳು ಮೌನವಾಗಿದ್ದರು. ಜಾತಿ ಅಥವಾ ಜಾತಿ ಹಿಂಸಾಚಾರದಂತಹ ಸೂಕ್ಷ್ಮ ವಿಷಯಗಳಲ್ಲೂ ಅವರ ಪ್ರತಿಕ್ರಿಯೆ ಇರುತ್ತಿರಲಿಲ್ಲ. ಆದರೆ ಇದೇ ಕ್ರಿಕೆಟಿಗರು ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಬಹುತೇಕ ಸಂಘಟಿತ ರೀತಿಯಲ್ಲಿ, ಭಾರತದ ವಿರುದ್ಧ ಪ್ರಚಾರ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಸರಕಾರದ ದೃಷ್ಟಿಕೋನವನ್ನು ಬೆಂಬಲಿಸಿದರು. ಅವರಲ್ಲಿ ಅನೇಕರು ತಮ್ಮ ಟ್ವೀಟ್‌ಗಳಲ್ಲಿ ಅದೇ ಪದವನ್ನು ಅಕ್ಷರಶಃ ಬಳಸಿದ್ದರು.

ಇಂತಹ ಬೆನ್ನೆಲುಬಿಲ್ಲದ ನಡವಳಿಕೆಯುಳ್ಳವರ ಒಂದು ಗುಂಪು ಸರಕಾರದ ಪರ ನಿಲ್ಲುತ್ತದೆ. ಕ್ರೀಡಾ ಸಂಸ್ಥೆಗಳ ಮೇಲೆ ರಾಜಕಾರಣಿಗಳ ಅಥವಾ ಅವರ ಪ್ರತಿನಿಧಿಗಳ ಹಿಡಿತವಿದೆ. ಕ್ರೀಡಾಪಟುಗಳಲ್ಲಿ ಹೆಚ್ಚಿನವರು ಆ ಪ್ರಭಾವಿಗಳೊಡನೆ ಗುರುತಿಸಿಕೊಳ್ಳಲು ಬಯಸುವವರು. ಯಾವುದೇ ವಿವಾದಾತ್ಮಕ ಅಥವಾ ಸರಕಾರದ ವಿರೋಧಿ ಹೇಳಿಕೆಗಳಿಗೆ ತುಂಬ ಬೆಲೆ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಯಿಂದ, ಲೆಕ್ಕಾಚಾರದಿಂದ ಹೆಜ್ಜೆ ಹಾಕುವವರು ಅವರು. ಆದ್ದರಿಂದ, ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ತಮ್ಮ ಬೆಂಬಲವನ್ನು ನೀಡುವಲ್ಲಿ ಮೊದಲಿಗರಾಗಿ ಇರಬೇಕಾಗಿದ್ದ ಹೆಚ್ಚಿನ ಕ್ರೀಡಾಪಟುಗಳು ಜಾಣ ಕಿವುಡರೂ ಜಾಣ ಮೌನಿಗಳೂ ಆಗಿ ಕೂತಿದ್ದಾರೆ.

(ಕೃಪೆ: scroll.in)

Similar News