ಹನಿ ಕವಿತೆಗಳ ‘ದೀವಟಿಗೆ’

Update: 2023-06-30 10:48 GMT

ಸಾಮಾಜಿಕ ಮಾಧ್ಯಮಗಳು ಎಲ್ಲರ ಬೆರಳೆಟುಕಿನಲ್ಲಿರುವ ಇಂದಿನ ಸಂದರ್ಭದಲ್ಲಿ ಅವುಗಳ ಮೂಲಕ ಸುಲಭವಾಗಿ ಹಂಚಿಕೊಳ್ಳಬಹುದಾದ ಹನಿಗವನಗಳ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಉತ್ಸಾಹವನ್ನಷ್ಟೆ ಬಂಡವಾಳವಾಗಿಟ್ಟುಕೊಂಡು ಬರೆಯುತ್ತಿರುವ ಹೊಸಬರಲ್ಲಿ ಅಧ್ಯಯನದ ಕೊರತೆ ಎದ್ದು ತೋರುತ್ತಿದೆ. ಇಂಥ ಹೊತ್ತಿನಲ್ಲಿ ರಜಿಯಾರಂಥ ಅನುಭವಿಗಳು ಹನಿಗವನಗಳ ಸಂಗ್ರಹ ಪ್ರಕಟಿಸುತ್ತಿರುವುದು ಅಪೇಕ್ಷಣೀಯ ಅನ್ನಬಹುದು.

ಕನ್ನಡದಲ್ಲಿ ಪ್ರಕಟವಾಗಿರುವ ಹನಿಗವನಗಳನ್ನು ಅವುಗಳ ಪರಿಣಾಮದ ದೃಷ್ಟಿಯಿಂದ ಮೂರು ಮಾದರಿಗಳಾಗಿ ವಿಂಗಡಿಸಬಹುದು.
1. ಹಾಸ್ಯ, ವಿಡಂಬನೆ, ಚಮತ್ಕಾರ ಹಾಗೂ ಹೊಸದೆನ್ನಿಸುವ ಕಲ್ಪನೆಗಳ ಮೂಲಕ ಓದುಗರನ್ನು ಖುಷಿಗೊಳಿಸುವ ಬುದ್ಧಿ ಪ್ರಧಾನವಾದ ರಚನೆಗಳು.
2. ಭಾವನೆಗಳ ಲೋಕದಲ್ಲಿ ವಿಹರಿಸುವ, ಆನು ಒಲಿದಂತೆ ಹಾಡುವ ವಿಷಾದವನ್ನು ಧ್ವನಿಸುವ, ಬೌದ್ಧಿಕ ಕಸರತ್ತುಗಳನ್ನು ಆಶ್ರಯಿಸಿದ ರಚನೆಗಳು.
3 ರಂಜನೆಯ ಜತೆಗೆ ಚಿಂತನೆಯನ್ನೂ ಪ್ರಚೋದಿಸುವ, ಬುದ್ಧಿಭಾವಗಳ ಸಂಮಿಲನ ಸಾಧಿಸಿದವುಗಳು.
ರಜಿಯಾರವರ ಪ್ರಸಕ್ತ ಸಂಕಲನದ ಕವನಗಳಲ್ಲಿ ಮೇಲಿನ ಮೂರು ಮಾದರಿಗೆ ಸೇರಿದ ಹನಿಗವನಗಳಿವೆ. ಆದರೆ ಬಹುಪಾಲು ಹನಿಗವನಗಳು ಭಾವಪ್ರಧಾನವಾದ ಅಂದರೆ ಎರಡನೇ ಗುಂಪಿಗೆ ಸೇರುವಂಥವು. ಇವುಗಳಲ್ಲಿ ಸಂತೋಷ ಮತ್ತು ವಿಷಾದ ಎರಡನ್ನೂ ಅಭಿವ್ಯಕ್ತಿಸುವ ಕವನಗಳಿವೆ.
ಉದಾಹರಣೆಗೆ:

ನಿಪುಣ:
ಕಬ್ಬಿಣದಂಥ ಮನಸ್ಸಿಗೆ
ಪ್ರೀತಿಯ ಕುಲುಮೆಯಲ್ಲಿ ಆಕಾರ ಕೊಟ್ಟ
ನಿನ್ನ ಚಮತ್ಕಾರಕ್ಕೆ ನಾ-ಚಿರಋಣಿ

ಒಂದು ಹೋಲಿಕೆಯ ಮೂಲಕ ಪ್ರೀತಿಯ ಶಕ್ತಿಯನ್ನು ಈ ಹನಿಗವನ ಕಟ್ಟಿಕೊಡುತ್ತದೆ. ಸಮೀಕರಣ, ಸಂವಾದ, ಪಾತ್ರ, ದೀವಟಿಗೆ ಮುಂತಾದವುಗಳು ಇದೇ ಬಗೆಯ ಸಂತಸದ ಭಾವನೆಗಳನ್ನು ಹೊಮ್ಮಿಸುತ್ತವೆ. 
ಭಾವನಾತ್ಮಕ ಕವನಗಳಲ್ಲಿ ತೀವ್ರವಾದ ವಿಷಾದ, ಹತಾಶೆ, ಬೇಸರವನ್ನು ಹೇಳಿಕೊಳ್ಳುವ ರಚನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ.

ಸೆರೆ:
ಮನವ ಸೂರೆಗೊಂಡು
ಹೋದನಲ್ಲ
ಸೊರಗಿಸಿ ಬಿಟ್ಟೆಯಲ್ಲಾ
ತಿಂಗಳ ಚಂದ್ರನಂತಿದ್ದವಳ
ಸರಳ ರೇಖೆಯಾಗಿಸಿ

ವಿರಹದ ನೋವನ್ನು ಐದೇ ಸಾಲುಗಳಲ್ಲಿ ಮನಮುಟ್ಟುವಂತೆ ಹೇಳುವ ಇಂಥ, ವೈಯಕ್ತಿಕ ಅನ್ನಿಸಬಹುದಾದ ಹನಿಗವನಗಳ ಜತೆಗೆ ವಿಡಂಬನಾತ್ಮಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಹೊಂದಿದ ಹನಿಗವನಗಳೂ ಈ ಸಂಗ್ರಹದಲ್ಲಿವೆ.
ಗೋಷ್ಠಿ, ವೈರುಧ್ಯ, ಅಮಲು, ಆಹುತಿ, (ಅ)ಧರ್ಮ, ಕಪಟ, ಪಥ, ಪ್ರಕ್ರಿಯೆ, ಮೋಡಿ, ಪಲ್ಲಟ ಈ ರೀತಿಯ ಹನಿಗವನಗಳು.

ನನಗೆ ತುಂಬ ಇಷ್ಟವಾದ ಈ ಹನಿಗವನಗವನ್ನು ಉಲ್ಲೇಖಿಸಲೇ ಬೇಕು.

ಸ್ತಬ್ಧ:
ಇಲ್ಲಿ ಕುಕ್ಕರ್ ಕೂಗುತ್ತೆ
ಮಿಕ್ಸಿ ಮಾತಾಡುತ್ತೆ
ಫ್ಯಾನೂ ತಿರುಗುತ್ತಿದೆ
‘‘ಚಲಾವಣೆಯಿರದ ನಾಣ್ಯದಂತೆ
ನಾವಿದ್ದೇವೆ’’
ನಾಲ್ಕು ಗೋಡೆಗಳಡಿ

ರಜಿಯಾ ಅವರದು ಒತ್ತಾಯಕ್ಕೆ ಕಟ್ಟಿದ, ನೀಟಾಗಿ ಇಸ್ತ್ರಿ ಮಾಡಿದಂಥ ಕವನಗಳಲ್ಲ. ಸಹಜವಾಗಿ ಹುಟ್ಟಿದ, ಸರಳ, ನೇರವಾಗಿ ಹೃದಯಕ್ಕೆ ತಾಕುವ, ಆಪ್ತ ಅನ್ನಿಸುವ ಹೇಳಿಕೆಗಳು. ‘‘ಮತ್ತೆ ಮತ್ತೆ ತಿದ್ದಿ ಬರೆಯುವುದು ನನಗೆ ಇಷ್ಟವಿಲ್ಲ’’ ಎಂದು ‘ಪರದೆ ಸರಿದಂತೆ’ ಸಂಕಲನದ ಲೇಖಕಿಯ ಮಾತುಗಳಲ್ಲಿ ಅವರೇ ಹೇಳಿದ್ದಾರೆ. ಹೀಗಾಗಿ ಇಲ್ಲಿನ ಹನಿಗವನಗಳಲ್ಲಿ ಶಬ್ದಾಡಂಬರ, ಪ್ರಾಸಗಳ ಚಕಮಕಿ, ಪದಗಳಾಟ ಮುಂತಾದ ಕುಸುರಿ ಕೆಲಸವನ್ನು ಹುಡುಕಬಾರದು. ಮೊದಲಿನಿಂದಲೂ ಅದು ರಜಿಯಾ ಅವರ ಶೈಲಿಯಲ್ಲ. ಅವರು ಕವಿತೆಗಳನ್ನು ಬರೆಯಲು ಶುರುಮಾಡಿದಾಗ ಕನ್ನಡದಲ್ಲಿ ಬಂಡಾಯ ಕಾವ್ಯದ ಅಬ್ಬರ ಜೋರಾಗಿತ್ತು. ಆ ಗದ್ದಲದಲ್ಲೂ ತನ್ನ ಮೆಲುದನಿಯ ಕವಿತೆಗಳನ್ನು ಕಾವ್ಯ ಪ್ರಿಯರು ಕೇಳುವಂತೆ ಮಾಡಿದ್ದು ರಜಿಯಾ ಅವರ ಸಾಧನೆ. ಹನಿಗವಿತೆಗಳನ್ನು ಬರೆಯುವ ಕೆಲವೇ ಮಹಿಳೆಯಲ್ಲಿ ರಜಿಯಾ ಕೂಡಾ ಒಬ್ಬರು. ಅವರು ಇನ್ನಷ್ಟು ಹನಿಗವನಗಳನ್ನು ಬರೆದು ಕನ್ನಡದ ಹನಿಗವನ ಪ್ರಕಾರವನ್ನು ಶ್ರೀಮಂತಗೊಳಿಸಲಿ.


ಕೃತಿ: ದೀವಟಿಗೆ
(ಈವರೆಗಿನ ಹನಿ ಕವಿತೆಗಳು)
ಲೇಖಕರು: ಡಿ.ಬಿ. ರಜಿಯಾ
ಮುಖಬೆಲೆ: 60 ರೂ. 
ಪ್ರಕಾಶಕರು: ಗೀತಾಂಜಲಿ ಪುಸ್ತಕ ಪ್ರಕಾಶನ
ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರನಗರ,
ಶಿವಮೊಗ್ಗ-577204

Similar News