ಕದಂಬ-ಬಣ್ಣದ ನಂಟಿಗೆ ಅರವತ್ತರ ಸಂಭ್ರಮ
ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿಕೊಂಡು ಬಂದಿರುವ ಕದಂಬ ಅವರು ಸಾಕಷ್ಟು ನಷ್ಟ-ಕಷ್ಟ ಗಳನ್ನು, ನೋವು, ಬೇಸರಗಳನ್ನು ಅನುಭವಿಸಿದ್ದಾರೆ. ಆದರೂ ಅವರ ತಂಡದಿಂದ ಅನೇಕ ಪ್ರತಿಭಾವಂತ ರಂಗಕರ್ಮಿಗಳು ಹೊರಹೊಮ್ಮಿದ್ದಾರೆ. ಅವರ ತಂಡದ ಅನೇಕ ಕಲಾವಿದರು ಕಿರುತೆರೆ, ಹಿರಿತೆರೆಗೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ರಂಗ ಪರಂಪರೆಯನ್ನು ಮುಂದು ವರಿಸಿಕೊಂಡು ಹೊರಟಿರುವ ಕದಂಬ ರಂಗ ವೇದಿಕೆಯು ಕನ್ನಡ ಹವ್ಯಾಸಿ ರಂಗ ಚರಿತ್ರೆಯಲ್ಲಿ ಅದರಲ್ಲೂ ಮೈಸೂರಿನ ರಂಗ ಚರಿತ್ರೆಯಲ್ಲಿ ಮಹತ್ವದ ದಾಖಲೆ.
ಅವರಿಗೆ 78 ವರ್ಷ ವಯಸ್ಸು. ಅವರ ರಂಗ ತಂಡಕ್ಕೆ 60 ವರ್ಷ. ಅವರು ನಟರಾದ ಲಾಭವೆಂದರೆ ತಮ್ಮ ತಂಡದ ನಾಟಕಗಳಲ್ಲಿ ಅಭಿನಯಿಸುತ್ತ, ಸಂಘಟಿಸುತ್ತ ಮುನ್ನಡೆದ ಪರಿಣಾಮ ಅರವತ್ತು ವರ್ಷಗಳನ್ನು ಕಾಣಲು ಸಾಧ್ಯವಾಗಿದೆ ತಂಡ. ಅವರು ಮೈಸೂರಿನ ಹವ್ಯಾಸಿ ರಂಗಭೂಮಿಯ ಕಂಬದ ಹಾಗಿರುವವರು ರಾಜಶೇಖರ ಕದಂಬ. ಕದಂಬ ರಂಗ ವೇದಿಕೆಗೆ 60 ವರ್ಷ ತುಂಬಿದ ಹಿನ್ನಲೆಯಲ್ಲಿ ಜೂನ್ 15ರಿಂದ 18ರ ವರೆಗೆ ನಾಟಕೋತ್ಸವವನ್ನು ಮೈಸೂರಿನ ಕಲಾಮಂದಿರದ ಪಕ್ಕದಲ್ಲಿರುವ ಕಿರು ರಂಗಮಂದಿರದಲ್ಲಿ ಅವರು ಆಯೋಜಿಸಿದ್ದಾರೆ.
ರಾಜಶೇಖರ ಕದಂಬ
ಹೊಸ ಹೊಸ ನಾಟಕಗಳನ್ನು ಆಡುವುದರ ಜೊತೆಗೆ ಪ್ರಚಾರದ ಹೊಣೆ ಹೊತ್ತುಕೊಳ್ಳುವ, ಛಾಯಾಚಿತ್ರಗಳನ್ನು ಸಂಗ್ರಹಿಸುವ, ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಸಂಗ್ರಹಿಸುವ, ರಂಗಭೂಮಿ ಕುರಿತು ಲೇಖನಗಳನನ್ನು ಬರೆಯುವ... ಹೀಗೆ ದಾಖಲಾತಿಗೂ ಮುಂದಾಗುವ ಕದಂಬ ಅವರು ಇತರ ರಂಗಕರ್ಮಿಗಳಿಗೆ ಮಾದರಿ.
ಇಂಥ ಕದಂಬ ಅವರು ರಂಗಭೂಮಿಗೆ ಕಾಲಿರಿಸಿದ್ದು ಅರವತ್ತರ ದಶಕದಲ್ಲಿ. ಆಗ ಮೈಸೂರಿನಲ್ಲಿ ಕನ್ನಡ ಕಲಾವಿದರ ಸಂಘ, ಶ್ರೀ ಸುರಭಿ ಕಲಾವಿದರು, ಭರಣಿ ಕಲಾವಿದರು, ಶ್ರೀರಂಗ ಮಿತ್ರ ಮಂಡಲಿ, ಸರಸ್ವತಿ ಯೂನಿಯನ್, ಮಾತಾ ಅಸೋಸಿಯೇಷನ್, ಶ್ರೀ ರೇಣುಕಾ ಕಲಾನಿಕೇತನ, ಅಶ್ವಿನಿ ಕಲಾವಿದರು, ಪ್ರಭುರಾಂ ಕಲಾವಿದರು, ಹೇಮಾ ಕಲಾನಿಕೇತನ, ನವಚೇತನ ಕಲಾವಿದರು, ಶ್ರೀದೇವಿ ಕಲಾನಿಕೇತನ, ಮಿತ್ರಕೂಟ, ಚಂದ್ರ ಆರ್ಟಿಸ್ಟ್, ಸೆಲೆಕ್ಟ್ ಆರ್ಟಿಸ್ಟ್, ಭವಾನಿ ಕಲಾವಿದರು, ನವರಂಗ್ ಕಲಾವಿದರು, ನವೋದಯ ಕಲಾವಿದರು, ಭಾರತ ಸೇವಾದಳ, ಶಿಶು ಸಾಹಿತ್ಯ ಸಂಘ, ಕರ್ನಾಟಕ ಕಲಾಸಂಘ, ಅಮರ ಕಲಾ ಸಂಘ ಮುಂತಾದ ತಂಡಗಳಿದ್ದವು. ಇವುಗಳೊಂದಿಗೆ ರಾಜ್ಯದ ವಿವಿಧ ನಾಟಕ ಕಂಪೆನಿಗಳು ಮೈಸೂರಿಗೆ ಬರುತ್ತಿದ್ದವು. ಹೀಗಿದ್ದಾಗ ಕದಂಬ ಅವರು ನಟ, ನಿರ್ಮಾಪಕ ಎಂ.ಪಿ.ಶಂಕರ್ ಸೋದರ ಎಂ.ಪಿ.ನಾಗರಾಜ್ ನಿರ್ದೇಶನದ ‘ನವರತ್ನ’ ನಾಟಕದಲ್ಲಿ ನಾಯಕಿಯ ತಂದೆಯ ಪಾತ್ರ ನಿರ್ವಹಿಸುವ ಮೂಲಕ ರಂಗಭೂಮಿಗೆ ಕಾಲಿಟ್ಟರು. ನಂತರ ಬೇರೆ ಬೇರೆ ತಂಡಗಳಲ್ಲಿ ಅಭಿನಯಿಸಿದರು. ಜೊತೆಗೆ ಸುಂದರಕೃಷ್ಣ ಅರಸ್, ವರದರಾಜ್ ಹೆಮ್ಮಿಗೆ, ಚಿ.ನಾ.ಹಳ್ಳಿನಾಗೇಶ್, ಗೋಪಾಲಕೃಷ್ಣ, ಬಿ.ಕೆ.ಎನ್. ರಾವ್, ಚಿ.ಗಿ.ಸ.ರಾವ್ ಮೊದಲಾದ ಗೆಳೆಯರೊಂದಿಗೆ ಕದಂಬ ರಂಗ ವೇದಿಕೆ ಕಟ್ಟಿದರು. ತಂಡದಿಂದ ನಾಟಕ ಆಡಬೇಕೆಂದುಕೊಂಡಾಗ ಅವರ ತಂದೆ ದಾಸಪ್ಪರಚಿಸಿದ ‘ಪುರೂರವ’ ಕೈಗೆತ್ತಿಕೊಂಡರು. ತಿಂಗಳ ತಾಲೀಮಿನ ನಂತರ 1963ರ ಸೆಪ್ಟಂಬರ್ 18ರಂದು ಮೈಸೂರಿನ ಪುರಭವನದಲ್ಲಿ ‘ಪುರೂರವ’ ನಾಟಕ ಪ್ರದರ್ಶನಗೊಂಡಿತು. ಯಶಸ್ವಿಯಾಗಿ ನಾಟಕ ಪ್ರದರ್ಶನಗೊಂಡಾಗ ಅನೇಕರು ಬೆನ್ನು ತಟ್ಟಿದರು.
ನಂತರ ಸಿ.ವಿ.ಶಿವಶಂಕರ್ ಹಾಗೂ ಎನ್.ಎಸ್.ರಾವ್ ಅವರ ‘ರಣದುಂದುಭಿ’, ‘ರಣಪ್ರಚಂಡ’, ‘ವಿಷಜ್ವಾಲೆ’ ನಾಟಕಗಳನ್ನು ಸಿದ್ಧಪಡಿಸಿಕೊಂಡು ಗಣೇಶೋತ್ಸವ ಸಂದರ್ಭದಲ್ಲಿ ಮೈಸೂರಿನ ವಿವಿಧ ಬಡಾವಣೆಗಳಲ್ಲಿ, ಚಪ್ಪರದಡಿ ಪ್ರದರ್ಶಿಸಿದರು. ಮೈಸೂರಿನಾಚೆಗೂ ಜಾತ್ರೆಗಳಲ್ಲಿ ನಾಟಕವಾಡಿದರು. ಅವರ ಗೆಳೆಯರಾದ ವರದರಾಜ್ ಹೆಮ್ಮಿಗೆ ರಚಿಸಿದ ‘ರಣಧೀರ ಕಂಠೀರವ’, ‘ಚಾಲುಕ್ಯ ಕೇಸರಿ’, ‘ಸೋಮಾರಿ ಸಂತೆ’, ‘ಶಭಾಶಮೀನ’ ನಾಟಕಗಳನ್ನಾಡಿದರು. ಇವುಗಳಲ್ಲಿ ‘ರಣಧೀರ ಕಂಠೀರವ’ ನಾಟಕವನ್ನು ಕದಂಬ ಅವರು ನಿರ್ದೇಶಿಸಿ, ಕಂಠೀರವನ ಪಾತ್ರ ಪೊರೆದರು. ‘ಶಭಾಶಮೀನ’ ನಾಟಕದಲ್ಲಿ ಮೀನಾಳ ಪಾತ್ರಕ್ಕೆ ಕದಂಬ ಅವರು ಬಣ್ಣ ಹಚ್ಚಿದರು.
ಮುಖ್ಯವಾಗಿ ಅವರು ಆಗ ಐತಿಹಾಸಿಕ ನಾಟಕಗಳನ್ನು ಆಡಲು ಕಾರಣ; ಅವರ ಸೋದರ ಸಿದ್ದಪ್ಪಾಜಿ ಅವರು ಕಟ್ಟಿದ ರೇಣುಕಾ ಕಲಾ ನಿಕೇತನದಲ್ಲಿ ವೇಷಭೂಷಣ, ಪರಿಕರಗಳಿದ್ದವು. ಇದರಿಂದ ಬಾಡಿಗೆಗೆ ಉಡುಪು, ಪರಿಕರಗಳನ್ನು ತರದೆ, ಮೇಕಪ್ ಅನ್ನು ಕಲಾವಿದರೇ ಮಾಡಿಕೊಳ್ಳುತ್ತಿದ್ದುದರಿಂದ ವೆಚ್ಚ ಉಳಿಯಿತು. ಜೊತೆಗೆ ನಾಟಕ ಆಡುವುದು ಕಷ್ಟವಾಗುತ್ತಿರಲಿಲ್ಲ. ಅವರ ತಂಡಕ್ಕೆ ತೂಗುದೀಪ ಶ್ರೀನಿವಾಸ್, ಮೈಸೂರು ಲೋಕೇಶ್ ಸೇರಿಕೊಂಡಿದ್ದರಿಂದ ಹೆಚ್ಚಿನ ಬಲ ಬಂತು. ಇದರಿಂದ ‘ಎಚ್ಚಮ ನಾಯಕ’, ‘ಟಿಪ್ಪು ಸುಲ್ತಾನ್’, ‘ನರಗುಂದ ಬಂಡಾಯ’ ಮೊದಲಾದ ನಾಟಕಗಳನ್ನು ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಪ್ರದರ್ಶಿಸಿದರು. ಅವರ ‘ಸೊಹ್ರಾಬ್ ರುಸ್ತುಂ’ ನಾಟಕವು ಹಾಸನದಲ್ಲಿ ಬಹುಮಾನ ಪಡೆಯಿತು. ಕುಂದಾನಿ ಸತ್ಯನ್ ಅವರ ‘ಶಾಂತವೀರ ಕೆಂಪೇಗೌಡ’ ನಾಟಕದಲ್ಲಿ ಕೆಂಪೇಗೌಡ ಪಾತ್ರ ನಿರ್ವಹಿಸಿದ್ದ ಕದಂಬ ಅವರಿಗೆ ಪ್ರಸಿದ್ಧಿಯನ್ನು ತಂದಿತು. ಆದರೆ ಸುಂದರಕೃಷ್ಣ ಅರಸ್, ತೂಗುದೀಪ ಶ್ರೀನಿವಾಸ್ ಹಾಗೂ ಮೈಸೂರು ಲೋಕೇಶ್ ಅವರು ಸಿನೆಮಾ ರಂಗಕ್ಕೆ ಪ್ರವೇಶಿಸಿದರು. ಬಳಿಕ ಕದಂಬ ಅವರು ಹೊಸ ನಾಟಕಗಳನ್ನು ಆಡಬೇಕೆಂದು ಮೈಸೂರು ಆರ್. ಜಯರಾಂ ಅವರ ‘ಸಂದಿಗ್ಧ’ ನಾಟಕವಾಡಿದಾಗ ಯಶಸ್ಸು ಕಂಡಿತು. 1986ರಲ್ಲಿ ಮೈಸೂರಿನಲ್ಲಿ ಕಲಾಮಂದಿರದ ಉದ್ಘಾಟನೆಗೆ ಕದಂಬ ಅವರಿಗೆ ‘ಎಚ್ಚಮ ನಾಯಕ’ ನಾಟಕವಾಡಲು ಆಹ್ವಾನ ಸಿಕ್ಕಿತು. ಬಳಿಕ ವಾರ್ತಾ ಇಲಾಖೆ ವತಿಯಿಂದ ‘ಸಂಗೊಳ್ಳಿ ರಾಯಣ್ಣ’ ನಾಟಕವಾಡಲು ಆಹ್ವಾನ ಬಂತು. ಜಯರಾಂ ರಚಿಸಿದ ಈ ನಾಟಕವು ಮಂಡ್ಯ ಹಾಗೂ ಮೈಸೂರಿನ ಎಲ್ಲ ತಾಲೂಕುಗಳಲ್ಲಿ ಪ್ರದರ್ಶನಗೊಂಡಿತು.
1990 ವರ್ಷ ಅವರನ್ನು ಎತ್ತರಕ್ಕೆ ಕೊಂಡೊಯ್ಯಿತು. ತರಾಸು ಅವರ ‘ದುರ್ಗಾಸ್ತಮಾನ’ ಕಾದಂಬರಿಯನ್ನು ಬಿ.ಎಸ್. ಕೇಶವರಾವ್ ನಾಟಕಕ್ಕೆ ಅಳವಡಿಸಿ ಎಚ್.ಎಸ್.ಉಮೇಶ್ ಅವರು ನಿರ್ದೇಶಿಸಿದರು. ನಾಟಕಕ್ಕೆ ಹೌಸ್ಫುಲ್ ಫಲಕ ಹಾಕಲಾಯಿತು. ಇದರ ನಂತರ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಎಚ್.ಎನ್.ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.
ದುರ್ಗಾಸ್ತಮಾನ ನಂತರ ಅಶ್ವಥ್ ಅವರ ‘ಧರ್ಮಕೊಂಡದ ಕಥೆ’ ಕಾದಂಬರಿಯನ್ನು ವಿಶ್ವನಾಥ್ ಮಿರ್ಲೆ ಅವರು ನಾಟಕಕ್ಕೆ ಅಳವಡಿಸಿದಾಗ, ಅವರ ಮಗಳು ಗೌರಿ ನಿರ್ದೇಶಿಸಿದರು. ನಂತರ ಚದುರಂಗ ಅವರ ‘ಹೆಜ್ಜಾಲ’ ಕಾದಂಬರಿಯನ್ನು ಮಂಜುನಾಥ ಬೆಳಕೆರೆ ನಾಟಕ ರೂಪಕ್ಕೆ ಇಳಿಸಿದರು. ಇದನ್ನು ಸಿ.ಬಸವಲಿಂಗಯ್ಯ ನಿರ್ದೇಶಿಸಿದರು.
ಹೀಗೆ ಖುಷಿಗೊಂಡ ತಂಡವು ಕುವೆಂಪು ಅವರ ‘ಮಹಾರಾತ್ರಿ’, ‘ಬಿರುಗಾಳಿ’, ಶ್ರೀರಂಗರ ‘ಕೇಳು ಜನಮೇಜಯ’, ಮಂಜುನಾಥ ಬೆಳಕೆರೆ ಅವರ ‘ಇದಿ ಮುಂಡೇ ಮಗಳು’, ಹೂಲಿ ಶೇಖರ್ರ ‘ಗಾಂಧಿನಗರ’, ಗಿರೀಶ್ ಕಾರ್ನಾಡರ ‘ಹಿಟ್ಟಿನ ಹುಂಜ’, ಠಾಕೂರರ ‘ರಕ್ತಕಣಗಿಲೆ’ ನಾಟಕಗಳನ್ನು ಪ್ರದರ್ಶಿಸಿತು. 1992-95ರ ವರೆಗೆ ಕರ್ನಾಟಕ ನಾಟಕ ಅಕಾಡಮಿ ಸದಸ್ಯರಾಗಿದ್ದ ಕದಂಬ ಅವರು, ಮೈಸೂರಿನಲ್ಲಿ ಕುವೆಂಪು ನಾಟಕೋತ್ಸವ ಆಯೋಜಿಸಿದಾಗ ವರನಟ ಡಾ.ರಾಜಕುಮಾರ್ ಭಾಗವಹಿಸಿದ್ದರು. ಕದಂಬ ವೇದಿಕೆ ಪರವಾಗಿ ಡಾ.ರಾಜ್ಕುಮಾರ್ ಅವರು ಕುವೆಂಪು ಅವರನ್ನು ಸನ್ಮಾನಿಸಿದ್ದರು.
2002ರಲ್ಲಿ ಮತ್ತೊಮ್ಮೆ ಬಿ.ಎಸ್.ಕೇಶವರಾವ್ ಅವರ ‘ಕೃಷ್ಣದೇವರಾಯ’ ನಾಟಕವನ್ನು ಕದಂಬ ತಂಡ ಕೈಗೆತ್ತಿಕೊಂಡಿತು. ಎಚ್.ಎಸ್. ಉಮೇಶ್ ನಿರ್ದೇಶಿಸಿದ ಈ ನಾಟಕ ಮೈಸೂರಿನ ದಸರಾ ಮಹೋತ್ಸವ, ಹಂಪಿ ಉತ್ಸವದಲ್ಲೂ ಪ್ರದರ್ಶನಗೊಂಡಿತು. 2013ರಲ್ಲಿ ತಂಡದ ಐವತ್ತನೇ ವರ್ಷದ ಅಂಗವಾಗಿ ‘ಸ್ವರ್ಣ ಕದಂಬ’ ಎಂಬ ನಾಟಕೋತ್ಸವವನ್ನು ಆಯೋಜಿಸಿತು. ಹೀಗೆ ಅವರ ತಂಡದ ಪಯಣ ದೀರ್ಘವಾದುದು. ಇದೇ ವರ್ಷ ಫೆಬ್ರವರಿಯಲ್ಲಿ ಏಕವ್ಯಕ್ತಿ ಮಹಿಳಾ ನಾಟಕೋತ್ಸವ, ಮಾರ್ಚ್ ತಿಂಗಳಲ್ಲಿ ಪೌರಾಣಿಕ ರಂಗ ದೃಶ್ಯಾವಳಿ, ರಂಗಗೀತೆ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಈಗ ತಂಡದ ವಜ್ರಮಹೋತ್ಸವದ ಅಂಗವಾಗಿ ನಾಟಕೋತ್ಸವ, ತಂಡದ ಛಾಯಾಚಿತ್ರಗಳ ಪ್ರದರ್ಶನ, ವಿಚಾರ ಸಂಕಿರಣ ಏರ್ಪಡಿಸಿದೆ.
ಹೀಗೆ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿಕೊಂಡು ಬಂದಿರುವ ಕದಂಬ ಅವರು ಸಾಕಷ್ಟು ನಷ್ಟ-ಕಷ್ಟಗಳನ್ನು, ನೋವು, ಬೇಸರಗಳನ್ನು ಅನುಭವಿಸಿದ್ದಾರೆ. ಆದರೂ ಅವರ ತಂಡದಿಂದ ಅನೇಕ ಪ್ರತಿಭಾವಂತ ರಂಗಕರ್ಮಿಗಳು ಹೊರಹೊಮ್ಮಿದ್ದಾರೆ. ಅವರ ತಂಡದ ಅನೇಕ ಕಲಾವಿದರು ಕಿರುತೆರೆ, ಹಿರಿತೆರೆಗೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ರಂಗ ಪರಂಪರೆಯನ್ನು ಮುಂದುವರಿಸಿ ಕೊಂಡು ಹೊರಟಿರುವ ಕದಂಬ ರಂಗ ವೇದಿಕೆಯು ಕನ್ನಡ ಹವ್ಯಾಸಿ ರಂಗ ಚರಿತ್ರೆಯಲ್ಲಿ ಅದರಲ್ಲೂ ಮೈಸೂರಿನ ರಂಗ ಚರಿತ್ರೆಯಲ್ಲಿ ಮಹತ್ವದ ದಾಖಲೆ.