ಇದು ನಾಗರಿಕತೆಯನ್ನು ಉಳಿಸುವ ಸವಾಲು

Update: 2023-06-16 08:20 GMT

ಕಾಂಗ್ರೆಸ್‌ನಂತಹ ಕಾಂಗ್ರೆಸೇ ಭಾರತ್ ಜೋಡೊದಂತಹ ಒಂದು ಅಭಿಯಾನ ಮಾಡಿರಬೇಕಿದ್ದರೆ, ಜನರ ಮಧ್ಯೆಯೇ ಇದ್ದು ಹೋರಾಡುವ ಅಜೆಂಡಾ ಹೊಂದಿರುವ ಸಂಘಟನೆ/ಪಕ್ಷಗಳು ಅಪಾಯಕಾರಿ ಆರ್ಥಿಕ ನೀತಿ+ಕೋಮುವಾದದ ಬಗ್ಗೆ ದೊಡ್ಡ ಪ್ರಮಾಣದ ಅಭಿಯಾನ ಸಂಘಟಿಸಬೇಕಿದೆ. ಅದಕ್ಕೂ ಮೊದಲು ತಮ್ಮ ಪರಿಭಾಷೆಗಳು ಜನರನ್ನೇಕೆ ತಟ್ಟುತ್ತಿಲ್ಲ ಎಂಬುದನ್ನೂ ವಿಮರ್ಶಿಸಬೇಕಿದೆ.

ಈಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಾಧನೆ ಅದ್ಭುತ. First past the post ವ್ಯವಸ್ಥೆಯಲ್ಲಿ ಗೆದ್ದು ಅಧಿಕಾರ ಹಿಡಿಯುವ ತನ್ನ ಯೋಜನೆಯನ್ನು meticulous ಆಗಿ ಕಾಂಗ್ರೆಸ್ ಸಾಧಿಸಿದೆ. ಭಾರತ್ ಜೋಡೊ ಯಾತ್ರೆಯಿಂದ ಆರಂಭವಾದ ಈ ಸಿದ್ಧತೆ, ಬಳಿಕ ಬಲು ಅಗ್ರೆಸ್ಸಿವ್ ಆದ ಸಾಮಾಜಿಕ ಮಾಧ್ಯಮದ ಅಭಿಯಾನ, ಭಾಜಪದ ಟೊಂಕ ಮುರಿವಂತಹ ಜಾಹೀರಾತು, ಬಳಿಕ ಗ್ಯಾರಂಟಿಗಳ ಪ್ರಸ್ತುತಿ- ಹೀಗೆ ಕಾಂಗ್ರೆಸ್‌ನ ಮೆಷಿನರಿ ಚೆನ್ನಾಗಿಯೇ ಕೆಲಸ ಮಾಡಿದೆ.

ಕರ್ನಾಟಕದ ಪ್ರಗತಿಪರ ಸಂಘಟನೆಗಳ ಬೇಷರತ್ ಬೆಂಬಲವನ್ನೂ ಪಡೆದದ್ದು ಕಾಂಗ್ರೆಸ್‌ನ ಸಾಧನೆ. ಭಾರತ್ ಜೋಡೊ ಯಾತ್ರೆ ಇದರ ಆರಂಭಿಕ ಪ್ರಕ್ರಿಯೆಯಾಗಿತ್ತು.

ಒಂದರ್ಥದಲ್ಲಿ ಕಾಂಗ್ರೆಸ್ ಬಹುತೇಕ ೩೬೦ ಡಿಗ್ರಿ ಅಭಿಯಾನದಲ್ಲಿ ಯಶಸ್ವಿಯಾಗಿದೆ.

 ಸರಿ. ಆದರೆ ಉಳಿದ ಸಂಘಟನೆಗಳು, ಪಕ್ಷಗಳು ಗೆದ್ದಿವೆಯೇ?

 ಕಾಂಗ್ರೆಸ್ ಗೆಲುವಿನಲ್ಲಿ ತಮ್ಮ ಗೆಲುವನ್ನು ಕಾಣುತ್ತಿವೆಯೇ? ಅಥವಾ  ಕಾಂಗ್ರೆಸ್‌ನ ಗೆಲುವಿನ ಹೊರತಾಗಿಯೂ ಭಾಜಪ ಪಡೆದಿರುವ ಮತ ಪ್ರಮಾಣ ಕಸಿವಿಸಿ ಉಂಟು ಮಾಡಿದೆಯೇ?

ಈ ಬಗ್ಗೆ ಗೆಳೆಯ ಶಿವಸುಂದರ್ ಸತತವಾಗಿ ಕೆಲವು ಒಳನೋಟಗಳನ್ನೂ ನೀಡಿದ್ದಾರೆ. ಮುಂದಿನ ಹೆಜ್ಜೆ ಗತಿಗಳ ಬಗ್ಗೆಯೂ ಬರೆದಿದ್ದಾರೆ.

ಭಾಜಪ ಅರ್ಥಾತ್ ಹಿಂದುತ್ವ ಸೋತಿಲ್ಲ; ಅಷ್ಟೇಕೆ ತನ್ನ ಬಲ ಹೆಚ್ಚಿಸಿಕೊಂಡಿದೆ.

 ವಿರೋಧ ಪಕ್ಷವಾಗಿ ಭಾಜಪದ ಆಕ್ರಮಣ ಶೀಲತೆ ಜಾಸ್ತಿ.

 ಭಾಜಪವನ್ನು ವಿರೋಧ ಪಕ್ಷದ ಸ್ಪೇಸಿನಿಂದಲೂ ದೂರ ಸರಿಸುವ ಬಗೆ ಹೇಗೆ?

ಹೊಸ ಜನನುಡಿಯನ್ನು ಕಟ್ಟುವ ಬಗೆ ಹೇಗೆ?

 ಇತ್ಯಾದಿ ಅಂಶಗಳನ್ನು pointed ಆಗಿ ಶಿವಸುಂದರ್ ಎತ್ತಿದ್ದಾರೆ.

ಇದರೊಂದಿಗೆ ನಮ್ಮ ಮುಖ್ಯ ಪಕ್ಷ/ ಸಂಘಟನೆಗಳ ಸಾಧನೆಯನ್ನು ಪರಿಶೀಲಿಸಿದರೆ ಇನ್ನೂ ದಾರುಣ ಚಿತ್ರ ಗೋಚರಿಸುತ್ತದೆ.

 ಮೇಲುಕೋಟೆಯಲ್ಲಿ ಎಲ್ಲರ ಸಹಕಾರದೊಂದಿಗೆ ದರ್ಶನ್ ಪುಟ್ಟಣ್ಣಯ್ಯ ಗೆದ್ದಿದ್ದಾರೆ. ಆದರೆ ಉಳಿದೆಡೆ ಸರ್ವೋದಯ ಪಕ್ಷ/ರೈತ ಸಂಘ ಸ್ಪರ್ಧಿಸಿತ್ತಲ್ಲ. ಅಲ್ಲಿನ ಮತ ಗಳಿಕೆ ಪ್ರಮಾಣ?

 ಹಾಗೆಯೇ ಎಡ ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಅಲ್ಲೆಲ್ಲಾ ಅವುಗಳ ಮತ ಗಳಿಕೆಯ ಪ್ರಮಾಣ ಶೋಚನೀಯವಾಗಿದೆ. ಅಷ್ಟೇ ಅಲ್ಲ ಈ ಎಡ ಪ್ರಭಾವ/ ನೆಲೆ ಇರುವ ಕ್ಷೇತ್ರಗಳಲ್ಲಿ ಭಾಜಪ ತನ್ನ ನೆಲೆ/ಮತಪ್ರಮಾಣ ತೀವ್ರವಾಗಿ ಹೆಚ್ಚಿಸಿಕೊಂಡಿದೆ.

ಕರ್ನಾಟಕದ ಮಟ್ಟಿಗೆ ಬಿಜೆಪಿಯನ್ನು ಸೋಲಿಸಲು ನವೀನವಾಗಿ  ಸಂಘಟಿತವಾದ ಎದ್ದೇಳು ಕರ್ನಾಟಕದಂತಹ ಪ್ರಗತಿಪರ ನಾಗರಿಕ ಗುಂಪುಗಳ ಒಕ್ಕೂಟ ಮಾತ್ರ ತಾನು ೧೦೦ ಕ್ಷೇತ್ರಗಳಲ್ಲಿ ಮತಹಾಕುವ ಪ್ರಕ್ರಿಯೆಯನ್ನು ಪ್ರಭಾವಿಸಿದ್ದಾಗಿ ಹೇಳಿದೆ. ಅಂಕಿ-ಅಂಶಗಳು; ಸ್ಥಳೀಯ ಚುನಾವಣಾ ವಿವರಗಳು ಈ ಪ್ರಭಾವಿಸಿದ ಸಂಗತಿಯನ್ನು ಪುಷ್ಟೀಕರಿಸಿಲ್ಲ ಎಂಬುದು ನನ್ನ ಅನಿಸಿಕೆ. ಆದರೂ ನಾನೂ ಅದರ ಭಾಗವಾದ ಕಾರಣ ನನಗೆ ಈ ಹೇಳಿಕೆ ಹೆಮ್ಮೆ ತಂದಿದೆ. ಇರಲಿ.

ಈ ಚುನಾವಣೆಯ ಬಳಿಕ ಭಾಜಪ ನೆಲ ಕಚ್ಚಿದೆ ಎಂಬ ಉತ್ಸಾಹ ದೊಡ್ಡ ಮಟ್ಟದಲ್ಲಿ ಪ್ರಗತಿಪರ ವಲಯದಲ್ಲಿ ಆವರಿಸಿದೆ. ಸಾಮಾಜಿಕ ಮಾಧ್ಯಮ ಮತ್ತಿತರ ವೇದಿಕೆಗಳಲ್ಲಿ ಭಾಜಪವನ್ನು ಮಣಿಸಿದೆವು ಎಂಬ ಮಾತುಗಳೇ ಇದಕ್ಕೆ ಸಾಕ್ಷಿ.

ಕೆಲವು ಸಂಘಟನೆಗಳು ಹೇಳಿಕೆಗಳಲ್ಲಿ ಇದನ್ನು ಅನುಷಂಗಿಕವಾಗಿ ಪ್ರಸ್ತಾಪಿಸಿವೆಯೇ ಹೊರತು ಇದು ಮುಖ್ಯ ಧ್ಯಾನವಾಗಿಲ್ಲ. ಬಹುತೇಕ ಪ್ರಗತಿಪರ ಸಂಘಟನೆಗಳಿಗೆ ಕಾಂಗ್ರೆಸ್‌ನ ಗೆಲುವಿನ ಉಲ್ಲಾಸ ಇನ್ನೂ ಇದೆ.

ಶಿವಸುಂದರ್ ಮತ್ತಿತರ ಬೆರಳೆಣಿಕೆಯ ಗೆಳೆಯರು ಮಾತ್ರ ಮುಂದಿನ ಅಪಾಯದ ಬಗ್ಗೆ ಮಾತಾಡಿದ್ದು.

ಈ ಹಂತದಲ್ಲಿ ಅಂದರೆ ಚುನಾವಣೋತ್ತರ ದಿನಗಳಲ್ಲಿ (ಒಂದು ತಿಂಗಳಾಯಿತಲ್ಲ!) ಕಾಂಗ್ರೆಸ್ ಸ್ಪಷ್ಟವಾಗಿ ತನ್ನ ಆಡಳಿತದ ಆದ್ಯತೆಗಳನ್ನು  ಮುನ್ನೆಲೆಗೆ ತರುತ್ತಿದೆ. ಪ್ರಾಯಶಃ ಅದರ ಗ್ಯಾರಂಟಿಗಳು ಚುನಾವಣಾ ರಾಜಕೀಯದಲ್ಲಿ ಭಾಜಪವನ್ನು ಅಡ್ಡಡ್ಡ ಮಲಗಿಸುವ ಸಾಧ್ಯತೆ ಇದೆ. 

 ಆದರೆ ಉಳಿದ ಸಂಘಟನೆಗಳು?

 ದೊಡ್ಡ ಮಟ್ಟದ ಅವಲೋಕನ, ಆತ್ಮಾವಲೋಕನಗಳ ಚರ್ಚೆ, ವಿವರಗಳು ನಮ್ಮ ಚರ್ಚೆಯ ಸ್ಪೇಸನ್ನು ತುಂಬಬಹುದು ಎಂದು ನಾನು ಭಾವಿಸಿದ್ದೆ.

 ಆದರೆ ಅಂತಹದ್ದೇನೂ ಆಗುತ್ತಿರುವ ಲಕ್ಷಣ ಕಂಡಿಲ್ಲ.

 ಇನ್ನು ನಮ್ಮ ಸಾಂಸ್ಕೃತಿಕ ವಲಯ ಅಕಾಡಮಿ ಇತ್ಯಾದಿಗಳಿಗೆ ಟವೆಲ್ ಹಾಕುವಲ್ಲಿ ಬಿಜಿ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಕೊಂಚ unkind remark ಇರಬಹುದು.

ಉಳಿದಂತೆ ರೈತ ಸಂಘ ಮತ್ತು ಎಡಪಕ್ಷಗಳು ಅಳಿವಿನಂಚಿಗೆ ಬಂದಿರುವಂತೆ ಕಾಣಿಸುತ್ತಿದೆ. ಜೆಡಿಎಸ್ ಬಗ್ಗೆ ಲೇವಡಿ ಮಾಡುತ್ತಿರುವಾಗ ಅದಕ್ಕಿಂತ ಘೋರ ದುರಂತ ಕಣ್ಣಿಗೆ ರಾಚುತ್ತಿದೆ.

 ಈ ಎಲ್ಲಾ ಸ್ಪೇಸನ್ನು ಈ ಸಂಘಟನೆಗಳು/ಎಡ ಪಕ್ಷಗಳು  ಕಳೆದುಕೊಳ್ಳುತ್ತಿರುವಾಗ ಭಾಜಪ ಅದನ್ನು ಆಕ್ರಮಿಸಿಕೊಳ್ಳುತ್ತಿರುವ ವಿಪರ್ಯಾಸ ಕಣ್ಣಿಗೆ ಗಿಡಿಯುತ್ತಿದೆ. ೭೦ರ ದಶಕದಲ್ಲಿ ಕಾಂಗ್ರೆಸ್ ಇದೇ ರೀತಿ ಎಡ ಪಕ್ಷಗಳ ಸ್ಪೇಸನ್ನು ಕಬ್ಜಾ ಮಾಡಿ ಅವುಗಳನ್ನು ನಿಶ್ಯೇಷ ಮಾಡಿತ್ತು. ಜನತಾ ದಳವೆಂಬ ಮಿಸಳ ಭಾಜಿಯಲ್ಲಿ ಸಮಾಜವಾದಿ ಚಿಂತನೆಯ ನಾಯಕರು ಆಸರೆ ಪಡೆದು ಬಳಿಕ ಅವರು ಸೃಷ್ಟಿಸಿದ ಪಕ್ಷಗಳೆಲ್ಲಾ ಸ್ಥಳೀಯ ಪಾಳೆಪಟ್ಟುಗಳಾಗಿ ಭಾಜಪಕ್ಕೆ ಸ್ಥಳಾವಕಾಶ ಒದಗಿಸುತ್ತಾ ಇವತ್ತಿಗೂ ಇವೆ. ಎಡಪಕ್ಷಗಳು ಬಂಗಾಳ, ಕೇರಳ, ತ್ರಿಪುರಗಳಲ್ಲಿ ಅಸ್ತಿತ್ವ ಉಳಿಸಿಕೊಂಡು ಉದಾರವಾದಿ ಆರ್ಥಿಕ ನೀತಿ ಮತ್ತು ಕೋಮುವಾದಕ್ಕೆ ಸವಾಲು ಹಾಕಿದ್ದ ದಿನಗಳಿದ್ದವು. ಆದರೆ ಭಾಜಪ ಬಲಾಢ್ಯವಾಗುತ್ತಿದ್ದಂತೆ, ಕಾಂಗ್ರೆಸ್ ನೆಲೆ ಕಳೆದುಕೊಂಡಿದ್ದಷ್ಟೇ ಅಲ್ಲ, ಎಡ ಪಕ್ಷಗಳೂ ನೆಲೆ ಕಳೆದುಕೊಂಡ ರೀತಿ ಆತಂಕ ಹುಟ್ಟಿಸುತ್ತಿದೆ.

ಹಿಂದೊಮ್ಮೆ ಕಾ. ರಾಮಚಂದ್ರ ರಾಯರು ಲೋಕಸಭೆಗೆ ಸ್ಪರ್ಧಿಸಿದ್ದಾಗ ನಮ್ಮೂರಲ್ಲಿ ಅವರಿಗೆ ೨೪ ಮತ ಬಂದಿತ್ತು. ಭಾಜಪಕ್ಕೆ ಸಾವಿರಕ್ಕೂ ಹೆಚ್ಚು ಬಂದಿತ್ತು. ನಮ್ಮೂರಿನ ಭಾಜಪದವರು ನನ್ನಲ್ಲಿ ಬಲು ಮಮತೆಯಿಂದ, ‘‘ಈ ೨೪ ಜನ ಯಾರೂಂತ ಹೇಳ್ತೇವೆ.. ನೀನು, ಹುಕ್ರನ ಕುಟುಂಬ, ಮುದರನ ಕುಟುಂಬ, ಕೃಷ್ಣ ಭಟ್ಟ, ಹರಿಶ್ಚಂದ್ರ, ಶಿವರಾಮ’’ ಅಂತ ನಾಮ ಸ್ಮರಣೆ ಮಾಡಿದ್ದರು! 

ನಾವು ಅವರಿಗೊಂದು ರಾಜಕೀಯ ಥ್ರೆಟ್ ಕೂಡಾ ಅಲ್ಲವೆನ್ನಿಸಿದರೆ?

ಅವಮಾನದಲ್ಲಿ ಕುದ್ದು ನಾವೆಲ್ಲ ದಿನ ದೂಡಿ ಆಶಿಸಿದ್ದಷ್ಟೇ. ಎಂತಹ ಬದಲಾವಣೆಯೂ ಆಗಿಲ್ಲ, ಇಂದಿನ ವರೆಗೆ.

ಈ ಕಸಿವಿಸಿ ರೈತ ಸಂಘ, ಎಡಪಕ್ಷಗಳಿಗೆ ಬಂದಿದೆಯೇ? ಅಥವಾ ಬಹುತೇಕ ಸಾಮಾಜಿಕ ಮಾಧ್ಯಮ/ಮಾಧ್ಯಮಗಳ ಚಿಂತನಾ ಲೋಕದಲ್ಲಿ ಇನ್ನೂ ಪ್ರಾಬಲ್ಯ ಉಳಿಸಿಕೊಂಡಿರುವ ನಮ್ಮ ಪ್ರಗತಿಪರ ಗೆಳೆಯರಿಗೆ ಈ ಕಸಿವಿಸಿ ಇದೆಯೇ?

ಈ ಕಸಿವಿಸಿ ಸರಳವಾದದ್ದು. ಜನರನ್ನು ತಲುಪಲು, ಅವರೊಂದಿಗೆ ಸಂವಾದಿಸಲು, ಅವರ ಮನೋ ಭೌತಿಕ ಲೋಕದಲ್ಲಿ ಸ್ಥಾನ ಪಡೆಯಲು ನಾವೇಕೆ ಸೋತಿದ್ದೇವೆ ಎಂಬ ಸರಳ ಪ್ರಶ್ನೆ ಅದು.

ಅತ್ತ ಬಡವರನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಆರ್ಥಿಕ ನೀತಿ/ ಯೋಜನೆಗಳ ಬಗ್ಗೆಯೂ ಜನರಿಗೆ ಅರಿವು ಮೂಡಿಸಿ ಅವರ ಬೆಂಬಲ ಪಡೆಯಲು ಸಾಧ್ಯವಾಗಿಲ್ಲ. ಇತ್ತ ಸಮಾಜವನ್ನೇ ಒಡೆಯುವ ದ್ವೇಷ ರಾಜಕಾರಣದ ಬಗ್ಗೆಯೂ ಜನ ಮಾನಸದ ಮೇಲೆ ದೊಡ್ಡ ಪ್ರಭಾವ ಬೀರಲು ಸಾಧ್ಯವಾಗಿಲ್ಲ ಎಂಬ ಸತ್ಯ ನಮ್ಮನ್ನು ಅಸಾಧ್ಯ ಹಲ್ಲುನೋವಿನಂತೆ ಕಾಡಬೇಕಿತ್ತು.

 ಕಾಂಗ್ರೆಸ್ ಗೆಲುವು ಚುನಾವಣಾ ರಾಜಕೀಯದಲ್ಲಿ ಭಾಜಪದ ಸ್ಥೈರ್ಯ ಕುಂದಿಸುವ ಒಂದು ಅಂಶ ಅಷ್ಟೆ. ಆದರೆ ಹಿಂದುತ್ವದ ನಂಜು ಹರಡುವುದನ್ನು ಎದುರಿಸುವುದು ಸಾಮುದಾಯಿಕ ಸವಾಲು.

 ಹಾಗೆ ಕಾಡಿದ್ದರೆ ಮೊನ್ನೆಯಿಂದ ಈ ಬಗ್ಗೆ ತೀವ್ರವಾದ ಆತ್ಮ ನಿರೀಕ್ಷಣೆಯ ಚರ್ಚೆಗಳು ನಮ್ಮ ಸ್ಪೇಸನ್ನು ತುಂಬಬೇಕಿತ್ತು.

 ಇದನ್ನು ಸ್ವಯಂ ಸ್ಫೂರ್ತಿಯಿಂದ ರೈತ ಸಂಘದಂತಹ ಸಂಘಟನೆಗಳು, ಎಡಪಕ್ಷಗಳೇ ಆರಂಭಿಸಬೇಕಿತ್ತು.

 ಇಲ್ಲ, ಮುಂದಿನ ದಿನಗಳಲ್ಲಿ ಈ ಬಗ್ಗೆ ಮೊದಲು ಆಂತರಿಕ, ಬಳಿಕ ಬಹಿರಂಗ ಚರ್ಚೆಗಳ ಮೂಲಕ ಒಂದು ನಿರ್ಣಾಯಕ ಹೇಳಿಕೆ ಬರಲಿದೆ ಎಂಬ ಭರವಸೆಯ ಮಾತುಗಳು ನನ್ನ ಕಿವಿಗೂ ಬಿದ್ದಿವೆ.

ಆದರೆ ಸದ್ಯ ನನ್ನ ಕಣ್ಣಿಗೆ ಬಿದ್ದಿದ್ದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸರಕಾರಕ್ಕೆ ಸಲಹೆ/ಸೂಚನೆ/ವಿನಂತಿ ನೀಡುವ ಚಿತ್ರಗಳು. ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಸ್ಪಷ್ಟತೆ ಇದ್ದಂತಿದೆ. ಒತ್ತಡ ಗುಂಪುಗಳಾಗಿ ನಮ್ಮನ್ನು ತಿದ್ದಿ ಎಂದು ಅವರು ಹೇಳಿದ್ದಾರೆ!

ಆದರೆ ಕಾಲೂರುವಷ್ಟೇ ಇರುವ ಅಷ್ಟಿಷ್ಟು ಸ್ಪೇಸನ್ನೂ ಕೋಮು ಪ್ರವಾಹ ಕೊರೆದು ಹಾಕುತ್ತಿರುವ ಬಗ್ಗೆ ಸಿದ್ದರಾಮಯ್ಯನವರೊಂದಿಗೆ ಮಾತಾಡಲು ಸಾಧ್ಯವೇ?

ಅಷ್ಟಕ್ಕೂ ಈ ಸಂಘಟನೆಗಳು/ಎಡಪಕ್ಷಗಳು ಅಸ್ತಿತ್ವ ಕಳಕೊಂಡರೆ ಕಾಂಗ್ರೆಸೇನು ಕಣ್ಣೀರು ಹಾಕಬೇಕಿಲ್ಲ.

ಆದ್ದರಿಂದಲೇ ದೊಡ್ಡ ಮಟ್ಟದ ಪಾರದರ್ಶಕ ಅಂದರೆ ಸಾರ್ವಜನಿಕ ವಿಮರ್ಶೆಗಳಿಗೆ ಒಡ್ಡಿಕೊಂಡು ಒಂದು ಆತ್ಮ ವಿಮರ್ಶೆ ಮಾಡುತ್ತಾ, ಹೊರ ದಾರಿಯನ್ನು ಈ ಸಂಘಟನೆಗಳು ಹುಡುಕಬೇಕಾಗಿದೆ.

ಕಾಂಗ್ರೆಸ್‌ನಂತಹ ಕಾಂಗ್ರೆಸೇ ಭಾರತ್ ಜೋಡೊದಂತಹ ಒಂದು ಅಭಿಯಾನ ಮಾಡಿರಬೇಕಿದ್ದರೆ, ಜನರ ಮಧ್ಯೆಯೇ ಇದ್ದು ಹೋರಾಡುವ ಅಜೆಂಡಾ ಹೊಂದಿರುವ ಸಂಘಟನೆ/ಪಕ್ಷಗಳು ಅಪಾಯಕಾರಿ ಆರ್ಥಿಕ ನೀತಿ+ಕೋಮುವಾದದ ಬಗ್ಗೆ ದೊಡ್ಡ ಪ್ರಮಾಣದ ಅಭಿಯಾನ ಸಂಘಟಿಸಬೇಕಿದೆ. ಅದಕ್ಕೂ ಮೊದಲು ತಮ್ಮ ಪರಿಭಾಷೆಗಳು ಜನರನ್ನೇಕೆ ತಟ್ಟುತ್ತಿಲ್ಲ ಎಂಬುದನ್ನೂ ವಿಮರ್ಶಿಸಬೇಕಿದೆ.

ಲೋಕಸಭಾ ಚುನಾವಣೆ ಒಂದು ದುಸ್ವಪ್ನವಾಗಿ ಕಾಡುತ್ತಿರುವಾಗ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಹೋಗುವುದು ಸದ್ಯದ ಅನಿವಾರ್ಯತೆಯಂತೆ ಕಂಡರೂ, ಭಾಜಪ/ಹಿಂದುತ್ವದ ದೂರಗಾಮಿ ಆಳ ಅಪಾಯದ ವಿರುದ್ಧ ಮತ್ತು ಕಾಂಗ್ರೆಸ್, ಭಾಜಪಗಳೆರಡೂ ಒಪ್ಪಿರುವ ನವ ಉದಾರವಾದಿ ಆರ್ಥಿಕ ನೀತಿಯ ವಿರುದ್ಧ ಜನರನ್ನು ಸಂಘಟಿಸಲು ನಾವೇ ಕ್ರಿಯಾಶೀಲವಾಗಬೇಕಿದೆ.

ಅಂದರೆ ಭಾಜಪದ ದ್ವೇಷ ರಾಜಕಾರಣದ ಪ್ರಚೋದನಾಕಾರಿ  ರಾಜಕೀಯವನ್ನು ನಿಷ್ಫಲಗೊಳಿಸಬೇಕಿದೆ. ಹಾಗೆಯೇ ಜನಪರ, ಕಾರ್ಪೊರೇಟ್+ ಕೋಮು ವಿರೋಧಿ ನಿಲುವನ್ನು ಗಟ್ಟಿಗೊಳಿಸುವಂತೆ ಕಾಂಗ್ರೆಸ್‌ನ ಮೇಲೂ ಒತ್ತಡ ಹೇರಬೇಕಿದೆ.

Similar News